ಪತ್ನಿಯನ್ನು ಎಷ್ಟು ಸಮಯ ನೋಡುತ್ತೀರಿ. ಭಾನುವಾರವೂ ಸೇರಿದಂತೆ 90 ಗಂಟೆ ಕೆಲಸ ಮಾಡಿ ಎಂದಿದ್ದ ಉದ್ಯಮಿ, ಲಾರ್ಸೆನ್ & ಟೂಬ್ರೊ(ಎಲ್ & ಟಿ) ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್ ವಿರುದ್ಧ ನಟಿ ದೀಪಿಕಾ ಪಡುಕೋಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಆಘಾತಕಾರಿ ಮತ್ತು ಮಾನಸಿಕ ಆರೋಗ್ಯದ ವಿಷಯ ಎಂದಿದ್ದಾರೆ.
ಸುಬ್ರಹ್ಮಣ್ಯನ್ ಅವರು ಮಾತನಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, “ಎಷ್ಟು ಕಾಲ ನೀವು ನಿಮ್ಮ ಪತ್ನಿಯ ಮುಖವನ್ನೇ ದಿಟ್ಟಿಸುತ್ತಾ ಕೂರುತ್ತೀರಿ? ಭಾನುವಾರಗಳಲ್ಲೂ ನಾನು ನಿಮ್ಮನ್ನು ಕೆಲಸ ಮಾಡುವಂತೆ ಮಾಡಲು ಸಾಧ್ಯವಾದರೆ, ನಾನು ಹೆಚ್ಚು ಸಂತೋಷಪಡುತ್ತೇನೆ. ನೀವು ಮನೆಯಲ್ಲಿ ಕಡಿಮೆ ಸಮಯ ಕಳೆದು, ಕಚೇರಿಯಲ್ಲಿ ಹೆಚ್ಚು ಸಮಯ ವ್ಯಯಿಸಿ” ಎಂದು ತಮ್ಮ ಉದ್ಯೋಗಿಗಳಿಗೆ ಹೇಳುತ್ತಿರುವುದು ಸೆರೆಯಾಗಿದೆ.
ಅವರ ಹೇಳಿಕೆ ಭಾರೀ ಚರ್ಚೆ ಮತ್ತು ವಿರೋಧಕ್ಕೆ ಗುರಿಯಾಗಿದೆ. ಸುಬ್ರಹ್ಮಣ್ಯನ್ ಹೇಳಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನಟಿ ದೀಪಿಕಾ ಪಡುಕೋಣೆ, “ಕೆಲಸ-ಜೀವನ ಸಮತೋಲನ ಮತ್ತು ಮಾನಸಿಕ ಆರೋಗ್ಯದ ಮಹತ್ವದ ಅರಿವು ಇರಬೇಕು. ಇಂತಹ ಹಿರಿಯ ಹುದ್ದೆಗಳಲ್ಲಿರುವ ಜನರು ಇಂತಹ ಹೇಳಿಕೆಗಳನ್ನು ನೀಡುವುದನ್ನು ನೋಡುವುದು ಆಘಾತಕಾರಿಯಾಗಿದೆ. ಇದು, ಮಾನಸಿಕ ಆರೋಗ್ಯದ ವಿಷಯ” ಎಂದಿದ್ದಾರೆ.

ಈ ವರದಿ ಓದಿದ್ದೀರಾ?: ಸಾರಿಗೆ ದರ ಏರಿಕೆ ಖಂಡನೀಯ, ಜೀವ ಹಿಂಡುವ ಜಿಎಸ್‌ಟಿ ಬಗ್ಗೆ ಬಿಜೆಪಿ ಏಕೆ ಬಾಯಿ ಬಿಡುತ್ತಿಲ್ಲ?
ಇತ್ತೀಚೆಗೆ, ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು ವಾರದಲ್ಲಿ 70 ಗಂಟೆಗಳ ಕೆಲಸದ ಬಗ್ಗೆ ಪ್ರಸ್ತಾಪಿಸಿದ್ದರು. ಇದೀಗ, ಅವರ ಸಾಲಿಗೆ ಸುಬ್ರಹ್ಮಣ್ಯನ್ ಸೇರಿಕೊಂಡಿದ್ದಾರೆ. ಆದಾಗ್ಯೂ, 70 ಗಂಟೆ ಕೆಲಸ ಮಾಡುವ ವಿಚಾರವನ್ನು ಹಲವರು ಉದ್ಯಮಿಗಳು ತಿರಸ್ಕರಿಸಿದ್ದಾರೆ. ಉದ್ಯೋಗಿಗಳಿಗೆ ವಿಶ್ರಾಂತಿ ಬೇಕು. ವಿಶ್ರಾಂತಿ ಇಲ್ಲದೆ ಉತ್ತಮವಾದ ಕೆಲಸವನ್ನು ಮಾಡಲು ಮತ್ತು ಪಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.