ಮಾಡು ಇಲ್ಲವೇ ಮಡಿ ಪಂದ್ಯವೆಂದೇ ಪರಿಗಣಿಸಲಾಗಿದ್ದ ಐಪಿಎಲ್‌ನ ‘ಎಲಿಮಿನೇಟರ್’ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗೆದ್ದು ಬೀಗಿದೆ. ದಿಟ್ಟ ಹೋರಾಟ ನಡೆಸಿದ ಹೊರತಾಗಿಯೂ ಐಪಿಎಲ್ 2025 ಟೂರ್ನಿಯಿಂದ ಗುಜರಾತ್ ಟೈಟಾನ್ಸ್ ತಂಡ ಹೊರಬಿದ್ದಿದೆ. ಪಂದ್ಯದಲ್ಲಿ ಗೆದ್ದ ಮುಂಬೈ ತಂಡವು ಪಂಜಾಬ್ ತಂಡದ ಜೊತೆ ಭಾನುವಾರ ನಡೆಯಲಿರುವ ‘ಕ್ವಾಲಿಫೈಯರ್-2’ ಪಂದ್ಯದಲ್ಲಿ ಫೈನಲ್‌ಗಾಗಿ ಸೆಣೆಸಾಟ ನಡೆಸಲಿದೆ.
ಶುಕ್ರವಾರ, ಪಂಜಾಬ್‌ನ ನ್ಯೂ ಚಂಡೀಗಢದಲ್ಲಿರುವ ‘ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣ’ದಲ್ಲಿ ಮುಂಬೈ ಮತ್ತು ಗುಜರಾತ್ ನಡುವೆ ಭಾರೀ ಹಣಾಹಣಿ ನಡೆಯಿತು. ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಬರೋಬ್ಬರಿ 229 ರನ್‌ಗಳಿಸಿತ್ತು. ಬೃಹತ್ ಮೊತ್ತದ ಬೆನ್ನತ್ತಿದ ಗುಜರಾತ್ 8 ವಿಕೆಟ್ ನಷ್ಟದೊಂದಿಗೆ 208 ರನ್‌ಗಳನ್ನಷ್ಟೇ ಕಲೆಹಾಕಿ, ಸೋಲುಂಡಿತು.
ಗುಜರಾತ್ ತಂಡದಲ್ಲಿ ಸಾಯಿ ಸುದರ್ಶನ್ ಮತ್ತು ವಾಷಿಂಗ್ಟನ್ ಸುಂದರ್ ಅತ್ಯುತ್ತಮ ಆಟ ಪ್ರದರ್ಶಿಸಿದರು. ಸಾಯಿ ಸುದರ್ಶನ್ 49 ಎಸೆತಗಳನ್ನು ಎದುರಿಸಿ 80 ರನ್‌ಗಳಿಸಿದರೆ, ಸುಂದರ್ 24 ಎಸೆತಗಳನ್ನು ಎದುರಿಸಿ 48 ಕಲೆಹಾಕಿದರು. ಈ ಇಬ್ಬರೂ ಜೊತೆಯಾಟದಲ್ಲಿ 84 ರನ್ ಬಾರಿಸಿದರು. ಆದಾಗ್ಯೂ, ವಾಷಿಂಗ್ಟನ್ ಸುಂದರ್ ಅವರು ಜಸ್‌ಪ್ರೀತ್ ಬೂಮ್ರಾ ಅವರ ಅಬ್ಬರದ ಬೌಲಿಂಗ್‌ಗೆ ವಿಕೆಟ್ ಒಪ್ಪಿಸಿದರು. ಅಂತೆಯೇ, ಸಾಯಿ ಸುದರ್ಶನ್ ಕೂಡ ರಿಚರ್ಡ್ ಗ್ಲೀಸನ್ ಅವರ ಬೌಲಿಂಗ್‌ಗೆ ವಿಕೆಟ್ ಒಪ್ಪಿಸಿ, ಪೆವಿಲಿಯನ್‌ಗೆ ಮರಳಿದರು. ಇನ್ನು, ಉಳಿದ ಆಟಗಾರರು ಮುಂಬೈ ತಂಡದ ಬೌಲರ್‌ಗಳನ್ನು ಎದುರಿಸುವಲ್ಲಿ ವಿಫಲರಾದರು.
ತ್ರಾಸದಾಯಕ ಸೆಣೆಸಾಟದ ನಡುವೆ 208 ರನ್ ಗಳಿಸಿದ ಗುಜರಾತ್, ಸೋಲುಂಡು ಟೂರ್ನಿಯಿಂದ ಹೊರನಡೆಯಿತು.
ಇನ್ನು, ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಕ್ವಾಲಿಫಯರ್-2’ ಪಂದ್ಯ ನಡೆಯಲಿದೆ. ಪಂದ್ಯದಲ್ಲಿ ಫೈನಲ್ ಪ್ರವೇಶಕ್ಕಾಗಿ ಮುಂಬೈ ಮತ್ತು ಪಂಜಾಬ್ ತಂಡಗಳ ನಡುವೆ ಹಣಾಹಣಿ ನಡೆಯಲಿದೆ. ಪಂದ್ಯದಲ್ಲಿ ಗೆದ್ದವರು. ಅದೇ ಸ್ಟೇಡಿಯಂನಲ್ಲಿ ಜೂನ್ 3ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಆಟವಾಡಲಿದ್ದಾರೆ. ಬಹುತೇಕ ಕ್ರಿಕೆಟ್ ಅಭಿಮಾನಿಗಳು ‘ಕ್ವಾಲಿಫಯರ್-2’ನಲ್ಲಿ ಪಂಜಾಬ್ ತಂಡ ಗೆಲ್ಲಬೇಕು. ಆರ್‌ಸಿಬಿ ಮತ್ತು ಪಂಜಾಬ್ ಫೈನಲ್ ಪಂದ್ಯ ನಡೆಯಬೇಕು. ಈ ಬಾರಿ, ಐಪಿಎಲ್ ಕಪ್ ಹೊಸ ವಿನ್ನರ್‌ಗಳ ಕೈಸೇರಬೇಕು ಎಂದು ಆಶಿಸುತ್ತಿದ್ದಾರೆ.