ಖಾಸಗಿ ಕಂಪನಿಯೊಂದರ ಉದ್ಯೋಗಿಗಳನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್‌ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ನಾಲ್ವರು ಜೀವಂತವಾಗಿ ಸುಟ್ಟುಹೋಗಿರುವ ದುರ್ಘಟನೆ ಮಹಾರಾಷ್ಟ್ರದ ಪುಣೆ ಬಳಿ ನಡೆದಿದೆ.
ಪಿಂಪ್ರಿ ಚಿಂಚ್‌ವಾಡ್ ಪ್ರದೇಶದ ಹಿಂಜೇವಾಡಿಯಲ್ಲಿ ಬುಧವಾರ ಬೆಳಗ್ಗೆ 7:30ರ ಸುಮಾರಿಗೆ ಘಟನೆ ನಡೆದಿದೆ. ಸಾವನ್ನಪ್ಪಿದ ಉದ್ಯೋಗಿಗಳು ‘ವ್ಯೋಮಾ ಗ್ರಾಫಿಕ್ಸ್’ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಕಂಪನಿಗೆ ಸೇರಿದ ಮಿನಿ ಬಸ್ ಕಂಪನಿಯ 12 ಉದ್ಯೋಗಿಗಳನ್ನು ವಾರ್ಜೆಯಿಂದ ಹಿಂಜೆವಾಡಿ ಕರೆದೊಯ್ಯುತ್ತಿತ್ತು. ಈ ವೇಳೆ, ಚಾಲಕನ ಪಾದದ ಬಳಿ ಬೆಂಕಿ ಕಾಣಿಸಿಕೊಂಡಿದೆ. ಅದನ್ನು ಗಮನಿಸಿದ ಚಾಲಕ ಕೂಡಲೇ ವಾಹನವನ್ನು ನಿಲ್ಲಿಸಿದ್ದಾರೆ. ವಾಹನದಲ್ಲಿದ್ದ ಕೆಲವರು ಮುಂಭಾಗದ ಬಾಗಿಲಿನಿಂದ ತಕ್ಷಣ ಇಳಿದಿದ್ದಾರೆ. ಆದರೆ, ಹಿಂಭಾಗದಲ್ಲಿ ಕುಳಿತಿದ್ದವರು ತುರ್ತು ಬಾಗಿಲನ್ನು ತೆರೆಯಲು ಯತ್ನಿಸಿದ್ದಾರೆ. ಆದರೆ, ಬಾಗಿಲು ತೆರೆದುಕೊಂಡಿಲ್ಲ ಎಂದು ವರದಿಯಾಗಿದೆ.
ತುರ್ತು ಬಾಗಿಲು ತೆರೆದುಕೊಳ್ಳಲ ಕಾರಣ, ವಾಹನದಲ್ಲಿದ್ದ ಉದ್ಯೋಗಿಗಳಿಗೆ ಬೆಂಕಿ ತಗುಲಿದೆ. ನಾಲ್ವರು ಜೀವಂತವಾಗಿ ಸುಟ್ಟುಹೋಗಿದ್ದಾರೆ. ಉಳಿದ ಐವರಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸಿದ್ದಾರೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಬೀದರ್‌ನಲ್ಲೂ ಮತ್ತೊಂದು ಘಟನೆ
ತಾಪಮಾನದ ಕಾರಣಕ್ಕೆ ಬೆಂಕಿ ಹೊತ್ತಿಕೊಂಡು ಕೆಎಸ್‌ಆರ್‌ಟಿಸಿ ಬಸ್ ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ ಬೀದರ್ ಜಿಲ್ಲೆಯ ಔರಾದ ತಾಲೂಕಿನಲ್ಲಿ ನಡೆದಿದೆ. ಬೀದರ್‌ನಿಂದ ಔರಾದ್‌ಗೆ ಪ್ರಯಾಣಿಸುತ್ತಿದ್ದ ಬಸ್, ಔರಾದ್ ತಾಲೂಕಿನ ಕಪ್ಪಿಕೆರೆ ಗ್ರಾಮದ ಬಳಿ ತೆರಳುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಮೊದಲಿಗೆ ಎಂಜಿನ್‌ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಬಳಿಕ ಇಡೀ ಬಸ್‌ಗೆ ಬೆಂಕಿ ವ್ಯಾಪಿಸಿದೆ. ಬಸ್ ಸಂಪೂರ್ಣವಾಗಿ ಸುಟ್ಟುಹೋಗಿದೆ.
ಬಸ್‌ನಲ್ಲಿ ಸುಮಾರು 25 ಮಂದಿ ಪ್ರಯಾಣಿಕರಿದ್ದರು. ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಚಾಲಕ ಬಸ್ ನಲ್ಲಿಸಿದ್ದು, ಪ್ರಯಾಣಿಕರನ್ನು ಬಸ್‌ನಿಂದ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಬಸ್‌ನಲ್ಲಿದ್‌ದ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ.