ಸುಮಾರು 17 ವರ್ಷದ ಬಾಲಕಿ ಮೇಲೆ 29 ವರ್ಷದ ಯುವಕ ಅತ್ಯಾಚಾರ ಎಸಗಿದ್ದು, ಆಕೆ ಗರ್ಭಿಣಿಯಾದಾಗ ಬಲವಂತವಾಗಿ ಗರ್ಭಪಾತ ಮಾಡಿಸಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಆರೋಪಿಯು ನಕಲಿ ದಾಖಲೆಗಳನ್ನು ಬಳಸಿ ಗರ್ಭಪಾತ ಮಾಡಿಸಿದ್ದಾನೆ ಎಂದು ಭಾನುವಾರ ಮುಂಬೈ ಪೊಲೀಸರು ತಿಳಿಸಿದ್ದಾರೆ.
ಉಲ್ಲಾಸನಗರದಲ್ಲಿ ಸ್ಮಶಾನದಲ್ಲಿ ಮಣ್ಣು ಮಾಡಿದ್ದ ಭ್ರೂಣವನ್ನು ಸದ್ಯ ಪರೀಕ್ಷಿಸಲಾಗುತ್ತಿದೆ. ಹಾಗೆಯೇ ಅಪ್ರಾಪ್ತೆಗೆ ಗರ್ಭಪಾತ ಮಾಡಿಸಲು ಔಷಧಿಯನ್ನು ನೀಡಿದ ವೈದ್ಯರನ್ನು ಕೂಡಾ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಧಾರವಾಡ | ಅಪ್ರಾಪ್ತೆಯ ಅತ್ಯಾಚಾರ ಅಪರಾಧಿಗೆ 11 ವರ್ಷ ಜೈಲು, ₹55,000 ದಂಡ
ಈ ಬಗ್ಗೆ ಮಾಹಿತಿ ನೀಡಿದ ಉಲ್ಲಾಸನಗರದ ಕೇಂದ್ರ ಪೊಲೀಸ್ ಠಾಣೆಯ ಹಿರಿಯ ಇನ್‌ಸ್ಪೆಕ್ಟರ್ ಶಂಕರ್ ಅಥ್ವಾಡೆ, “ಆರೋಪಿ ಮತ್ತು ಸಂತ್ರಸ್ತೆಯು ಉಲ್ಲಾಸನಗರದಲ್ಲಿ ನೆರೆಹೊರೆ ಮನೆಯವರಾಗಿದ್ದರು. ಆರೋಪಿಯು ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಜೊತೆಗೆ ಊಟ ಮಾಡುವ ನೆಪದಲ್ಲಿ ಅಪ್ರಾಪ್ತೆಯನ್ನು ಮನೆಗೆ ಕರೆದಿದ್ದಾನೆ. ಆತನ ಪತ್ನಿ, ಮಕ್ಕಳು, ಪೋಷಕರು ಮನೆಯಲ್ಲಿ ಇಲ್ಲದ ಸಂದರ್ಭವನ್ನು ನೋಡಿಕೊಂಡು ಆಕೆಯನ್ನು ಕರೆದಿದ್ದಾನೆ. ಬಳಿಕ ಹಲವು ಬಾರಿ ಅತ್ಯಾಚಾರ ಎಸಗಿದ್ದು, ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ” ಎಂದು ತಿಳಿಸಿದ್ದಾರೆ.
“ಸಂತ್ರಸ್ತೆಗೆ ಬಳಿಕ ತಾನು ಗರ್ಭಿಣಿಯಾಗಿರುವುದು ತಿಳಿದುಬಂದಿದ್ದು, ಆರೋಪಿಗೆ ಈ ಬಗ್ಗೆ ತಿಳಿಸಿದ್ದಾಳೆ. ಆರೋಪಿ ಖಾಸಗಿ ವೈದ್ಯರಿಂದ ಗರ್ಭಪಾತದ ಔಷಧಿ ಪಡೆದು ಆಕೆಗೆ ನೀಡಿದ್ದಾನೆ. ಆದರೆ ಗರ್ಭಪಾತವಾಗಿಲ್ಲ. ಅದಾದ ಬಳಿಕ ಬಾಲಕಿ ಏಳು ತಿಂಗಳ ಗರ್ಭಿಣಿಯಾಗಿದ್ದಾಗ ಆರೋಪಿಯ ಪತ್ನಿ, ತಾಯಿ, ಅತ್ತೆ ಗರ್ಭಪಾತ ಮಾಡಿಸಲು ಒತ್ತಡ ಹೇರಿದ್ದಾರೆ” ಎಂದು ವರದಿಯಾಗಿದೆ.
“ಸಂತ್ರಸ್ತೆಯ ಪೋಷಕರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಆಕೆಯನ್ನು ಆರೋಪಿ ಆಸ್ಪತ್ರೆಗೆ ಕರೆದೊಯ್ದಿದ್ದು, ನಕಲಿ ದಾಖಲೆಗಳನ್ನು ಸಲ್ಲಿಸಿ ಗರ್ಭಪಾತ ಮಾಡಿಸುವಂತೆ ಹೇಳಿದ್ದಾನೆ. ಅದಾದ ಬಳಿಕ ಕಲ್ಯಾಣದಲ್ಲಿರುವ ಆಸ್ಪತ್ರೆಯೊಂದರಲ್ಲಿ ಗರ್ಭಪಾತ ಮಾಡಿಸಲಾಗಿದೆ. ಗರ್ಭಪಾತವಾಗುತ್ತಿದ್ದಂತೆ ಆರೋಪಿಯ ಪತ್ನಿ, ತಾಯಿ ಉಲ್ಲಾಸನಗರದಲ್ಲಿರುವ ಸ್ಮಶಾನದಲ್ಲಿ ಭ್ರೂಣವನ್ನು ಹೂತಿದ್ದಾರೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಶಂಕರ್ ಅಥ್ವಾಡೆ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಪುಣೆ ಅತ್ಯಾಚಾರ ಪ್ರಕರಣ: ಪ್ರಮುಖ ಆರೋಪಿ ಬಂಧನ
ಈ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಪೊಲೀಸರು ಫೆಬ್ರವರಿ 25ರಂದು ಆರೋಪಿಯನ್ನು ಬಂಧಿಸಿದ್ದಾರೆ. ಆರಂಭದಲ್ಲಿ ಗರ್ಭಪಾತ ಮಾಡಿಸಲು ಔಷಧಿ ನೀಡಿದ ಖಾಸಗಿ ಆಸ್ಪತ್ರೆಯ ವೈದ್ಯರನ್ನು ಶನಿವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಇನ್ನು ಈ ಕೃತ್ಯದಲ್ಲಿ ಭಾಗಿಯಾದ ಇತರೆ ನಾಲ್ವರು ಮಹಿಳಾ ಆರೋಪಿಗಳ ಬಂಧನವಾಗಿಲ್ಲ.
ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಅತ್ಯಾಚಾರ, ಒತ್ತಾಯಪೂರ್ವಕ ಗರ್ಭಪಾತ, ಸಾಕ್ಷಿ ಮುಚ್ಚಿಟ್ಟ ಆರೋಪ ಮತ್ತು ಪೋಕ್ಸೋ ಪ್ರಕರಣದಲ್ಲಿ ದೂರು ದಾಖಲಾಗಿದೆ.
ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು
2016ರಿಂದ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಅಧಿಕವಾಗಿದೆ. ಅದರಲ್ಲಿಯೂ ಪ್ರಮುಖವಾಗಿ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಗರ್ಭಪಾತ, ಅತ್ಯಾಚಾರ-ಕೊಲೆ – ಇಂತಹ ಅಪರಾಧಗಳು ಹೆಚ್ಚಾಗುತ್ತಿದೆ. ಎನ್‌ಜಿಒ ಸಿಆರ್‌ವೈ ವರದಿಯ ಪ್ರಕಾರ ದೇಶದಲ್ಲಿ 2016ರಿಂದ 2022ರ ನಡುವೆ ಅಪ್ರಾಪ್ತರ ಮೇಲೆ ಅತ್ಯಾಚಾರ ಪ್ರಕರಣಗಳು ಸುಮಾರು ಶೇಕಡ 96ರಷ್ಟು ಏರಿಕೆಯಾಗಿದೆ. 2020 ಹೊರತುಪಡಿಸಿ 2016ರಿಂದ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. 2021ರಿಂದ 2022ರ ನಡುವೆ ಶೇಕಡ 6.9ರಷ್ಟು ಪ್ರಕರಣಗಳು ಅಧಿಕವಾಗಿದೆ.
ಇವು ವರದಿಯಾದ ಪ್ರಕರಣಗಳಾದರೆ, ಇನ್ನೂ ಅದೆಷ್ಟೋ ಪ್ರಕರಣಗಳು ಮುನ್ನೆಲೆಗೆ ಬಂದಿಲ್ಲ. ಸಂತ್ರಸ್ತೆ/ ಸಂತ್ರಸ್ತ ಅಥವಾ ಆಕೆ/ ಆತನ ಕುಟುಂಬಸ್ಥರು ಮರ್ಯಾದೆಗೆ ಅಂಜಿ ಅತ್ಯಾಚಾರಿಗಳ ವಿರುದ್ದ ದೂರು ದಾಖಲಿಸುವುದೇ ಇಲ್ಲ. ಇನ್ನೊಂದೆಡೆ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಅತ್ಯಾಚಾರಿಗಳಿಗೆ ಭಯಪಟ್ಟು ಸಂತ್ರಸ್ತರು ದೂರು ದಾಖಲಿಸುವುದಿಲ್ಲ.
