15 ತಿಂಗಳನ್ನು (2018ರ ಡಿಸೆಂಬರ್ – 2020ರ ಮಾರ್ಚ್) ಹೊರತುಪಡಿಸಿ ಕಳೆದ 22 ವರ್ಷಗಳಿಂದ ಬಿಜೆಪಿಯೇ ಅಧಿಕಾರದಲ್ಲಿರುವ ಮಧ್ಯಪ್ರದೇಶದಲ್ಲಿ ಜನರ ಬದುಕು ಹೇಳತೀರಲಾಗಿದೆ. ಸರಿಯಾದ ರಸ್ತೆಗಳಿಲ್ಲದೆ ಬೈಕ್ ಸವಾರರು ಚಂಬಲ್ ಕಾಲುವೆಯ ಮೇಲೆ ನಿರ್ಮಿಸಲಾದ ರೈಲ್ವೇ ಹಳಿಗಳ ಮೇಲೆ ಕಾಲುವೆಯನ್ನು ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹತ್ತಾರು ಬೈಕ್ ಸವಾರರು ಕಾಲುವೆ ಮೇಲಿರುವ ರೈಲ್ವೇ ಹಳಿಗಳಲ್ಲಿ ತಮ್ಮ ಬೈಕ್‌ಗಳನ್ನು ತಳ್ಳಿಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯಲ್ಲಿ ಚಂಬಲ್ ಕಾಲುವೆಯ ಮೇಲೆ ನ್ಯಾರೋ ಗೇಜ್ ರೈಲ್ವೇ ಹಳಿಗಳನ್ನು ನಿರ್ಮಿಸಲಾಗಿದೆ. ಆದರೆ, ಇದೇ ರೈಲ್ವೇ ಹಳಿಯು ಶಿಯೋಪುರ ಮತ್ತು ಸಲಾಪುರ ನಡುವೆ ಪ್ರಯಾಣಿಸುವ ಹಲವಾರು ಗ್ರಾಮಗಳ ಬೈಕ್ ಸವಾರರಿಗೆ ಕಿರಿದಾದ ರಸ್ತೆಯ ರೀತಿಯಲ್ಲಿ ನೆರವಾಗುತ್ತಿದೆ.
ಕಾಲುವೆಯಿಂದ ಕೆಲವು ಕಿ.ಮೀ ದೂರದಲ್ಲಿ ಶಿಯೋಪುರ-ಮಾಧೋಪುರ್ ಹೆದ್ದಾರಿಯಿದೆ. ಆ ಹೆದ್ದಾರಿಯನ್ನು ಹೊರತುಪಡಿಸಿದರೆ ಸಲಾಪುರ ಪ್ರದೇಶದಲ್ಲಿ ಕಾಲುವೆ ಮೇಲೆ ಬೇರಾವುದೇ ರಸ್ತೆ ಅಥವಾ ಸೇತುವೆ ಇಲ್ಲ ಎಂದು ಹೇಳಲಾಗಿದೆ. ಇತ್ತೀಚೆಗೆ, ಹೆದ್ದಾರಿಯಲ್ಲಿ ಸಂಪೂರ್ಣ ಸಂಚಾರ ದಟ್ಟಣೆ ಉಂಟಾಗಿದ್ದರಿಂದ, ಸ್ಥಳೀಯ ಗ್ರಾಮಗಳ ಗ್ರಾಮಸ್ಥರು ಕಾಲುವೆ ದಾಟಲು ರೈಲ್ವೇ ಹಳಿಯನ್ನೇ ಆಶ್ರಯಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ; ದ್ವಿಚಕ್ರ ವಾಹನ ಸವಾರರು ಚಂಬಲ್ ಕಾಲುವೆಯ ಮೇಲಿನ ರೈಲ್ವೆ ಹಳಿಯಲ್ಲಿ ತಮ್ಮ ಬೈಕ್‌ಗಳನ್ನು ನಿಧಾನವಾಗಿ ಚಲಾಯಿಸುತ್ತಿರುವುದು ಕಾಣಿಸುತ್ತದೆ. ರೈಲ್ವೇ ಹಳಿಗಳ ಮೇಲೆ ಕಾಲುವೆ ಕಾಟುವುದು ಅತ್ಯಂತ ಅಪಾಯಕಾರಿಯಾಗಿದೆ. ಯಾವುದೇ ಸುರಕ್ಷತಾ ವ್ಯವಸ್ಥೆ ಹಳಿಗಳ ಬದಿಯಲ್ಲಿಲ್ಲ. ಆದರೂ, ಜನರು ಆ ಹಳಿಗಳ ಮೇಲೆಯೇ ಬೈಕ್ ಚಲಾಯಿಸಿಕೊಂಡು ಕಾಲುವೆ ದಾಟುತಿದ್ದಾರೆ. ಇದು ಅವರ ಬಹುತೇಕ ದೈನಂದಿನ ಪರಿಪಾಠವಾಗಿಹೋಗಿದೆ.
ये अमृतकाल है या मौत का जाल?
— Uday Bhanu Chib (@UdayBhanuIYC) July 1, 2025
श्योपुर, मध्य प्रदेश के चंबल नहर पर पुल नहीं, लोग नैरोगेज रेलवे लाइन से जान जोखिम में डालकर बाइक निकाल रहे हैं।
ये है BJP का विकास मॉडल: न सड़क, न पुल, बस जुमले! pic.twitter.com/3kKYdEviCC
“ಈ ಪ್ರದೇಶದಲ್ಲಿ ಸೂಕ್ತ ರಸ್ತೆಗಳು ಮತ್ತು ಸೇತುವೆಗಳು ಇಲ್ಲದ ಕಾರಣ, ಜನರು ಚಂಬಲ್ ಕಾಲುವೆಯನ್ನು ದಾಟಲು ಈ ರೈಲ್ವೇ ಹಳಿಯನ್ನೇ ಆಶ್ರಯಿಸಿದ್ದಾರೆ” ಎಂದು ಸ್ಥಳೀಯರು ಹೇಳಿದ್ದಾರೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನೆಟ್ಟಿಗರು, ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಇದೇ ಬಿಜೆಪಿಯ ಅಮೃತಕಾಲ. ರಸ್ತೆ ಮತ್ತು ಸೇತುವೆಯಂತಹ ಮೂಲ ಸೌಕರ್ಯಗಳನ್ನೇ ಒದಗಿಸದ ಬಿಜೆಪಿ ಸರ್ಕಾರ ‘ಜುಮ್ಲಾ’ ಸುಳ್ಳು ಆಶ್ವಾಸನೆ ನೀಡುತ್ತಲೇ ಅಧಿಕಾರ ನಡೆಸುತ್ತಿದೆ’ ಎಂದು ಕಿಡಿಕಾರಿದ್ದಾರೆ.
ರೈಲ್ವೇ ಹಳಿಯ ಮೇಲೆ ಬೈಕ್ ಚಲಾಯಿಸುವುದು ಕಾನೂನುಬಾಹಿರವಾಗಿದೆ. ಆದರೆ, ರಸ್ತೆಗಳೇ ಇಲ್ಲದೆ ಜನರು ಅಪಾಯಕಾರಿ ಹಳಿಗಳ ಮೇಲೆ ಚಲಿಸುವಂತಾಗಿದೆ. ಆದಾಗ್ಯೂ, ಶಿಯೋಪುರ ಜಿಲ್ಲಾಡಳಿತ ಅಥವಾ ರೈಲ್ವೆ ಇಲಾಖೆ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.