ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಶಾಸಕ ಪಿವಿ ಅನ್ವರ್ ಅವರು ತನ್ನ ಹೇಳಿಕೆ ವಿವಾದಕ್ಕೆ ತಿರುಗುತ್ತಿದ್ದಂತೆ ಕ್ಷಮೆಯಾಚಿಸಿದ್ದಾರೆ. ತಪ್ಪಿ ಈ ರೀತಿ ಹೇಳಿಕೆ ನೀಡಿದ್ದೇನೆ ಎಂದು ಬುಧವಾರದ ವಿಧಾನಸಭೆ ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುತ್ತಾ ಹೇಳಿದ್ದಾರೆ.
ಇತ್ತೀಚೆಗೆ ಸಿಪಿಎಂ ನೇತೃತ್ವದ ಎಲ್‌ಡಿಎಫ್ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಪಿವಿ ಅನ್ವರ್ ಅವರು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮುಖ್ಯಮಂತ್ರಿ ಮತ್ತು ಅವರ ಕುಟುಂಬ ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಲು ಯೋಜಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಇದನ್ನು ಓದಿದ್ದೀರಾ? ಕೇರಳ | ಹೊಸ ರಾಜಕೀಯ ಪಕ್ಷ ಕಟ್ಟಲು ಮುಂದಾದ ಸಿಪಿಐಎಂ ಬಂಡಾಯ ಶಾಸಕ ಪಿ ವಿ ಅನ್ವರ್
ಈಗ ಅಮೆರಿಕದಲ್ಲಿ ನೆಲೆಸಲು ಬೇಕಾದ ವ್ಯವಸ್ಥೆ ನೋಡಿಕೊಳ್ಳಲು ಅಮೆರಿಕಕ್ಕೆ ಪ್ರವಾಸ ಮಾಡುತ್ತಿದ್ದಾರೆ. ಇದಕ್ಕೆ ಬೇಕಾದರ ಪ್ರಯಾಣದ ವಿವರಗಳನ್ನು ಬೇಕಾದರೆ ನಾನು ಬಹಿರಂಗ ಮಾಡುತ್ತೇನೆ ಎಂದು ಸಿಪಿಐಎಂನ ಬಂಡಾಯ ಶಾಸಕ ಹೇಳಿದ್ದರು. ಮುಖ್ಯಮಂತ್ರಿಗಳು ತಮ್ಮನ್ನು ಕಳ್ಳ ಎಂದು ಬಿಂಬಿಸಿದ್ದಾರೆ. ಹಾಗೆಯೇ ಮುಖ್ಯಮಂತ್ರಿ ಮಾತ್ರವಲ್ಲ ಅವರ ಅಪ್ಪನ ಅಪ್ಪನಾದರೂ ನಾನು ಭಯಪಡುವುದಿಲ್ಲ ಎಂದಿದ್ದರು.
ಈ ಬಗ್ಗೆ ಸ್ಪಷ್ಟನೆ ನೀಡಿದ ಅನ್ವರ್, “ಮಾಧ್ಯಮದವರೊಂದಿಗೆ ಮಾತನಾಡುವಾಗ ನಾನು ತಪ್ಪಿ ಮಾತನಾಡಿದ್ದೇನೆ. ನನ್ನ ಹೇಳಿಕೆಯಲ್ಲಿ ನನ್ನ ಮಾತಿನ ಅರ್ಥ ಏನೆಂದರೆ, ಯಾರೇ ಆಗಲಿ ಅವರು ಎಷ್ಟೇ ಹಿರಿಯರಾದರೂ, ಸಿಎಂಗಿಂತ ಮೇಲಿದ್ದರೂ ನಾನು ಪ್ರತಿಕ್ರಿಯಿಸುತ್ತೇನೆ ಎಂದಾಗಿದೆ” ಎಂದು ಹೇಳಿಕೊಂಡಿದ್ದಾರೆ.
“ನನ್ನ ಮಾತುಗಳಿಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ನಾನು ಮುಖ್ಯಮಂತ್ರಿ, ಅವರ ಕುಟುಂಬ ಮತ್ತು ಎಲ್ಲರಿಗೂ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ನಾನು ನನ್ನ ವಿಷಾದವನ್ನು ವ್ಯಕ್ತಪಡಿಸುತ್ತೇನೆ ಮತ್ತು ನಿಜವಾದ ಕ್ಷಮೆಯನ್ನು ಕೇಳುತ್ತೇನೆ” ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಕಳೆದ ಶುಕ್ರವಾರ ವಿಧಾನಸಭೆ ಅಧಿವೇಶನ ಆರಂಭವಾಗಿದ್ದರೂ, ಬುಧವಾರ ಮೊದಲ ಬಾರಿಗೆ ಅನ್ವರ್ ಅಧಿವೇಶನಕ್ಕೆ ಹಾಜರಾಗಿದ್ದರು. ತಮಿಳುನಾಡಿನ ಆಡಳಿತಾರೂಢ ಡಿಎಂಕೆ ನಾಯಕರು ಸಾಮಾನ್ಯವಾಗಿ ಧರಿಸುವ ಶಾಲನ್ನು ಧರಿಸಿದ್ದ ಅನ್ವರ್ ಅವರು, ಸಾಮಾನ್ಯವಾಗಿ ಕಮ್ಯೂನಿಸ್ಟ್ ಕಾರ್ಯಕರ್ತರು ಧರಿಸುವ ಕೆಂಪು ಶಾಲನ್ನು ಕೂಡಾ ಕೈಯಲ್ಲಿ ಹಿಡಿದಿದ್ದರು ಎಂದು ವರದಿಯಾಗಿದೆ.
