ಪಾಟ್ನಾದಲ್ಲಿರುವ ಬಿಹಾರ ಮುಖ್ಯಮಂತ್ರಿ ನಿವಾಸದ ಬಳಿಯಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸಿದ್ದಕ್ಕಾಗಿ ಮಾಜಿ ಆರೋಗ್ಯ ಸಚಿವ ಮತ್ತು ಆರ್‌ಜೆಡಿ ಶಾಸಕ ತೇಜ್ ಪ್ರತಾಪ್ ಯಾದವ್ ಅವರಿಗೆ ಬಿಹಾರ ಸಂಚಾರ ಪೊಲೀಸರು 4,000 ರೂಪಾಯಿ ದಂಡ ವಿಧಿಸಿದ್ದಾರೆ.
ಸ್ಕೂಟರ್‌ನ ವಿಮೆ ಮತ್ತು ಮಾಲಿನ್ಯ ಪ್ರಮಾಣಪತ್ರದ ಅವಧಿ ಮುಗಿದಿರುವುದು ಕೂಡಾ ಪೊಲೀಸರ ಗಮನಕ್ಕೆ ಬಂದಿದೆ ಎಂದು ವರದಿಯಾಗಿದೆ. ಬಿಹಾರ ಮುಖ್ಯಮಂತ್ರಿ ನಿವಾಸದ ಹೊರ ಭಾಗದಲ್ಲಿ ಹೋಳಿ ಆಚರಿಸುವ ಸಂದರ್ಭದಲ್ಲಿ ತೇಜ್ ಪ್ರತಾಪ್ ಹೆಲ್ಮೆಟ್ ಧರಿಸದೆ ಸ್ಕೂಟರ್‌ನಲ್ಲಿ ಸವಾರಿ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಶಾಸಕ ತೇಜ್ ಪ್ರತಾಪ್ ಯಾದವ್ ಆಜ್ಞೆಯಂತೆ ಕುಣಿದ ಕಾನ್‌ಸ್ಟೆಬಲ್ ಅಮಾನತು
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಸಂಚಾರ ಪೊಲೀಸ್ ಎಸ್‌ಎಚ್‌ಒ ಬ್ರಜೇಶ್ ಕುಮಾರ್ ಚೌಹಾಣ್, “ಶಾಸಕ ಯಾದವ್ ಅವರಿಗೆ ಒಟ್ಟು ನಾಲ್ಕು ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗಿದೆ” ಎಂದು ಹೇಳಿದ್ದಾರೆ.
“ತೇಜ್ ಪ್ರತಾಪ್ ಅವರು ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಸವಾರಿ ಮಾಡುತ್ತಿದ್ದರು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಮೆ ಮತ್ತು ಮಾಲಿನ್ಯ ಪ್ರಮಾಣಪತ್ರದ ಅವಧಿಯೂ ಕೂಡಾ ಮುಗಿದಿದೆ. ಒಟ್ಟು ನಾಲ್ಕು ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ” ಎಂದು ಹೇಳಿದ್ದಾರೆ.
ಇದಲ್ಲದೆ ತೇಜ್ ಪ್ರತಾಪ್ ಅವರಿಗೆ ಸಂಬಂಧಿಸಿದ ಇನ್ನೊಂದು ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಾಸಕ ತನ್ನ ನಿವಾಸದ ಬಳಿ ಹೋಳಿ ಆಚರಣೆ ನಡೆಯುತ್ತಿದ್ದ ವೇಳೆ ತನ್ನ ಭದ್ರತಾ ಸಿಬ್ಬಂದಿಯಾಗಿರುವ ಕಾನ್‌ಸ್ಟೆಬಲ್ ದೀಪಕ್ ಕುಮಾರ್ ಅವರಿಗೆ ಕುಣಿಯುವಂತೆ ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ನೃತ್ಯ ಮಾಡದಿದ್ದರೆ ಅಮಾನತು ಮಾಡಿಸುತ್ತೇನೆ: ಪೊಲೀಸ್ ಅಧಿಕಾರಿಯನ್ನು ಕುಣಿಸಿದ ತೇಜ್ ಪ್ರತಾಪ್ ಯಾದವ್
“ಹೆ ಸಿಪಾಯಿ ನಾನು ಹಾಡುತ್ತೇನೆ, ನೀವು ಕುಣಿಯಬೇಕು. ಕುಣಿಯದಿದ್ದರೆ ಅಮಾನತು ಮಾಡಿಸುವೆ. ತಪ್ಪು ತಿಳಿಯಬೇಡಿ ಇದು ಹೋಳಿ ಸಂಭ್ರಮ” ಎಂದು ತೇಜ್ ಪ್ರತಾಪ್ ಹೇಳಿದ್ದಾರೆ. ಶಾಸಕರ ಆಜ್ಞೆಯಂತೆ ಪೊಲೀಸ್ ಸಮವಸ್ತ್ರದಲ್ಲಿದ್ದ ಕಾನ್‌ಸ್ಟೆಬಲ್ ದೀಪಕ್ ಕುಣಿದಿದ್ದಾರೆ. ಆದರೆ ಸಮವಸ್ತ್ರದಲ್ಲಿ ಕುಣಿದ ಕಾರಣಕ್ಕೆ ತೇಜ್ ಭದ್ರತಾ ಸಿಬ್ಬಂದಿ ಸೇವೆಯಿಂದ ದೀಪಕ್ ಅವರನ್ನು ಅಮಾನತು ಮಾಡಲಾಗಿದೆ.
ತೇಜ್ ಪ್ರತಾಪ್ ಯಾದವ್ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಶಾಸಕರ ದರ್ಪ ಎಂದು ಕೆಲವರು ಹೇಳಿದರೆ, ಹೋಳಿ ಸಂದರ್ಭದಲ್ಲಿ ಇದೆಲ್ಲಾ ತಮಾಷೆ ಎಂದೂ ಕೆಲವು ನೆಟ್ಟಿಗರು ಹೇಳಿದ್ದಾರೆ. ಆದರೆ ಬಿಜೆಪಿ, ಕಾಂಗ್ರೆಸ್ ತೇಜ್ ಪ್ರತಾಪ್ ವರ್ತನೆಯನ್ನು ಖಂಡಿಸಿದೆ. ಹಾಗೆಯೇ ಕಾನ್‌ಸ್ಟೆಬಲ್ ಅಮಾನತು ಮಾಡಿರುವುದನ್ನು ಕೂಡಾ ಹಲವು ಮಂದಿ ಖಂಡಿಸಿದ್ದಾರೆ. ಈ ರೀತಿ ಬೆದರಿಸಿ ಕುಣಿಸಿದ ಶಾಸಕರ ಮೇಲೂ ಕ್ರಮವಾಗಬೇಕು ಎಂಬ ಆಗ್ರಹ ಕೇಳಿಬಂದಿದೆ.
