ರಾಜಸ್ತಾನದ ಬಿಕಾನೇರ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮೋದಿ ‘ನನ್ನ ಮನಸ್ಸು ತಂಪಾಗಿರುತ್ತದೆ. ಆದರೆ, ರಕ್ತ ಮಾತ್ರ ಕುದಿಯುತ್ತದೆ. ಈಗ ಅದು ರಕ್ತವಲ್ಲ, ಕುದಿಯುತ್ತಿರುವ ಸಿಂಧೂರ” ಎಂದು ಹೇಳಿಕೊಂಡಿದ್ದಾರೆ. ಮೋದಿ ಅವರ ಹೇಳಿಕೆಯನ್ನು ಟೀಕಿಸಿರುವ ವಿಧಾನ ಪರಿಷತ್ ಸದಸ್ಯ ಸುಧಾಮ್ ದಾಸ್, “ಮೋದಿ ಅವರ ಹೇಳಿಕೆ ವಿಷಾಧನಿಯ. ಅವರು ಭಾರತದ ಪ್ರತಿಯೊಬ್ಬ ಪ್ರಜೆಯ ಘನತೆ ಮತ್ತು ಗೌರವವನ್ನು ಪಾಕಿಸ್ತಾನ, ಜಗತ್ತು ಹಾಗೂ ಅವರ ಪ್ರೀತಿಯ ಸ್ನೇಹಿತ ಡೊನಾಲ್ಡ್ ಟ್ರಂಪ್ ಎದುರು ಅಡಮಾನಕ್ಕಿಟ್ಟಿದ್ದಾರೆ” ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಹಾಕಿರುವ ಸುಧಾಮ್ ದಾಸ್, “ಪ್ರಧಾನ ಮಂತ್ರಿ ಮೋದಿಯವರೆ, ಯಾಕೆ ನಿಮಗೆ ಪ್ರಚಾರ ಪಡೆಯುವಂತಹ ಸಂದರ್ಭದಲ್ಲಿ, ಸಾರ್ವಜನಿಕ ಭಾಷಣಗಳಲ್ಲಿ ಹಾಗೂ ಮುಖ್ಯವಾಗಿ ಚುನಾವಣಾ ಪ್ರಚಾರಗಳಲ್ಲಿ ಮಾತ್ರವೇ ರಕ್ತ ಕುದಿಯುತ್ತದೆ” ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಮೋದಿ ಅವರಿಗೆ 10 ಪ್ರಶ್ನೆಗಳನ್ನು ಕೇಳಿದ್ದಾರೆ. ಅವರ ಪ್ರಶ್ನೆಗಳು ಹೀಗಿವೆ;
- ಡೊನಾಲ್ಡ್ ಟ್ರಂಪ್ 11 ದಿನಗಳಲ್ಲಿ ಎಂಟು ಬಾರಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ನಾನೇ ವ್ಯಾಪಾರ ವಹಿವಾಟಿನ ವಿಚಾರಗಳನ್ನು ಇಟ್ಟುಕೊಂಡು ನಿಲ್ಲಿಸಿದೆ ಎಂದಾಗ ನಿಮಗೆ ರಕ್ತ ಕುದಿಯಲಿಲ್ಲವೇ?
- ಪಹಲ್ಗಾಮ್ ದಾಳಿಯಲ್ಲಿ ಸಾವನಪ್ಪಿದ ಮಂಜುನಾಥ್ ರವರ ಪತ್ನಿ ಪಲ್ಲವಿಯವರ ಮೇಲೆ ನಿಮ್ಮದೇ ಅನುಯಾಯಿಗಳು ಸಾಮಾಜಿಕ ಜಾಲತಾದಲ್ಲಿ ಹುಚ್ಚರಂತೆ ದಾಳಿ ಮಾಡಿದಾಗ ನಿಮಗೆ ರಕ್ತ ಕುದಿಯಲಿಲ್ಲವೇ?
- ಪಹಲ್ಗಾಮ್ ದಾಳಿಯಲ್ಲಿ ಹುತಾತ್ಮರಾದ ನೇವಿ ಆಫಿಸರ್ ವಿನಯ್ ನರವಾಲ್ ರವರ ಪತ್ನಿಯು ‘ಕಾಶ್ಮಿರಿ ಮುಸ್ಲಿಮರ ಮೇಲೆ ದ್ವೇಷ ಹರಡಿಸಬೇಡಿ, ಅವರೇ ನಮ್ಮನ್ನು ಕಾಪಾಡಿದ್ದು’ ಎಂದ ಕೂಡಲೇ, ನಿಮ್ಮ ಕೆಲವು ಅನುಯಾಯಿಗಳು ಅವರನ್ನು ಅವಾಚ್ಯಾವಾಗಿ ನಿಂದಿಸಿದಾಗ ನಿಮಗೆ ರಕ್ತ ಕುದಿಯಲಿಲ್ಲವೇ?
- ಕಾಶ್ಮೀರದ ವಿಚಾರದಲ್ಲಿ ನಾನು ಮಧ್ಯಸ್ಥಿಕೆ ವಹಿಸಲೇ ಎಂದ ಟ್ರಂಪ್ ವಿರುದ್ಧ ನಿಮ್ಮ ರಕ್ತ ಕುದಿಯಲಿಲ್ಲವೇ?
- ಈಗ ಪಾಕಿಸ್ತಾನದ ಇಂಟರ್-ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್ ಅಧಿಕಾರಿ ಅಹಮದ್ ಷರೀಫ್ ಚೌದ್ರಿ ‘ನೀವು ನೀರು ನಿಲ್ಲಿಸಿದರೆ ನಾವು ನಿಮ್ಮ ಉಸಿರು ನಿಲ್ಲಿಸುತ್ತೇವೆ’ ಎಂದು ಹೇಳಿದ್ದಾರೆ. ಈ ಹೇಳಿಕೆ ನಿಮ್ಮ ರಕ್ತ ಕುದಿಯುವಂತೆ ಮಾಡುತ್ತಿಲ್ಲವೇ?
- ಪಹಲ್ಗಾಮ್‌ನಲ್ಲಿ ದಾಳಿ ಮಾಡಿದಂತಹ ಭಯೋತ್ಪಾದಕರನ್ನು ಇನ್ನೂ ಕೂಡ ಬಂಧಿಸಿಲ್ಲವೆಂದು ನಿಮ್ಮ ರಕ್ತ ಕುದಿಯುವುದಿಲ್ಲವೇ?
- ಚೀನಾ ನಮ್ಮ ದೇಶದ ಗಡಿಯೊಳಗೆ ನುಗ್ಗಿ ಸುಮಾರು 2000 ಚ.ಕಿ.ಮೀ ಆಕ್ರಿಸಿಕೊಂಡಿದೆಯಲ್ಲಾ, ಇದು ನಿಮಗೆ ರಕ್ತ ಕುದಿಯುಂತೆ ಮಾಡುತ್ತಿಲ್ಲವೇ?
- ನಿಮ್ಮದೆ ಕೇರಳ ಸಂಸದ ಸುಬ್ರಹ್ಮಣ್ಯಂ ಸ್ವಾಮಿ ರವರು 2023ರಲ್ಲಿ 4016 ಚ.ಕಿ.ಮೀ.ಅನ್ನು ಚೀನಾದವರು ಆಕ್ರಮಿಸಿದ್ದಾರೆ ಎಂದು ಹೇಳಿದಾಗ ನಿಮಗೆ ರಕ್ತ ಕುದಿಯಲಿಲ್ಲವೇ?
- ನಮ್ಮ ಭಾರತಿಯ ಸೈನ್ಯದ ಹೆಮ್ಮೆಯ ಮಹಿಳೆ ಸುಫಿಯಾ ಖುರೇಶಿ ಅವರನ್ನು ʼಭಯೋತ್ಪಾದಕರ ಸೋದರಿʼ ಎಂದು ಹೀಯಾಳಿಸಿ ನಿಮ್ಮದೇ ಪಕ್ಷದ, ಮಧ್ಯಪ್ರದೇಶದ ಸಚಿವ ವಿಜಯ್ ಶಾ ಹೇಳಿದಾಗ ನಿಮ್ಮ ರಕ್ತ ಕುದಿಯಲಿಲ್ಲವೇ? ಅಷ್ಟಕ್ಕೂ ಆತನ ವಿರುದ್ಧ ಯಾವ ಕ್ರಮ ಕೈಗೊಂಡಿರಿ?
- ಮಧ್ಯಪ್ರದೇಶದ ಉಪಮುಖ್ಯಮಂತ್ರಿ ಜಗದೀಶ್ ದೇವಡಾ ʼಇಡಿ ಭಾರತಿಯ ಸೈನ್ಯ ಪ್ರಧಾನಮಂತ್ರಿ ಕಾಲಿಗೆ ಬಾಗುತ್ತಾರೆʼ ಎಂದು ದೇಶ ಕಾಯುವ ಸೈನಿಕರನ್ನು ನಿಮ್ಮ ಕಾಲಿನಡಿ ಇರಿಸುವ ಕೆಲಸ ಮಾಡಿದರಲ್ಲ, ಆಗ ನಿಮ್ಮ ರಕ್ತ ಕುದಿಯಲಿಲ್ಲವೇ?
“ನಿಮ್ಮೆಲ್ಲ ಹೇಳಿಕೆಗಳು, ರಕ್ತ ಕುದಿಯುವಂತಹ ವಿಚಾರಗಳು ಬರೀ ಚುನಾವಣಾ ಸಮಯದಲ್ಲಷ್ಟೇ ಆಗುತ್ತಿರುವುದನ್ನು ನೋಡಿದರೆ ನಿಮಗೆ ದೇಶದ ಮೇಲೆ ಮತ್ತು ಇಲ್ಲಿನ ಜನರ ಮೇಲೆ ಇರುವಂತಹ ದೇಶಭಕ್ತಿಯ ನಾಟಕದ ಡಾಂಭಿಕತೆಯನ್ನು ಪ್ರತ್ಯಕ್ಷವಾಗಿಯೇ ತೋರುತ್ತಿದೆ” ಎಂದು ಕಿಡಿಕಾರಿದ್ದಾರೆ.
“ಇನ್ನೆಷ್ಟು ದಿನಗಳು ನೀವು ದೇಶದ ಜನರಿಗೆ ಸುಳ್ಳುಗಳನ್ನೇ ಹೇಳಿಕೊಂಡು ಮತ್ತು ಚುನಾವಣಾ ಪ್ರಚಾರಗಳಿದ್ದಾಗಷ್ಟೆ ಉದ್ರೇಕದ ಮಾತುಗಳನ್ನು ಮಾತನಾಡಿಕೊಂಡು ಇರುತ್ತೀರಿ.! ದೇಶದ ಜನತೆಯ ಗೌರವ ಮತ್ತು ಘನತೆಯ ಉಳಿಸುವ ಸಲುವಾಗಿ ಟ್ರಂಪ್ ಹೇಳಿಕೆಯನ್ನು ಖಂಡಿಸಿ ಮತ್ತು ಪಾಕಸ್ತಾನ-ಚೀನಾ ದೇಶಗಳು ಮಾಡುತ್ತಿರುವ ಕುಕೃತ್ಯದ ವಿಚಾರವಾಗಿ ಈಗಲಾದರೂ ಮಾಧ್ಯಮಗಳ ಮುಂದೆ ಬಂದು ಮಾತನಾಡಿ” ಎಂದು ಆಗ್ರಹಿಸಿದ್ದಾರೆ.