ಮೊಬೈಲ್ ಲೋನ್ ಆ್ಯಪ್ ಮೂಲಕ ಪಡೆದುಕೊಂಡ ಎರಡು ಸಾವಿರ ರೂಪಾಯಿ ಮೊತ್ತದ ಸಾಲ, ಪ್ರೀತಿಸಿ ಮದುವೆಯಾಗಿದ್ದ ಯುವ ದಂಪತಿಯ ಪೈಕಿ ಪತಿಯ ಬಲಿ ಪಡೆದಿದೆ. ಆಂಧ್ರಪ್ರದೇಶದಲ್ಲಿ ನಡೆದಿರುವ ದಾರುಣ ಪ್ರಕರಣವಿದು.
21 ವರ್ಷದ ನರೇಂದ್ರ ಮತ್ತು 24 ವರ್ಷ ವಯಸ್ಸಿನ ಅಖಿಲಾ ಮದುವೆಯಾಗಿ ಎರಡು ತಿಂಗಳೂ ಕಳೆದಿಲ್ಲ. ಮದುವೆಗೆ ಮುನ್ನ ಪಡೆದಿದ್ದ 2,000 ರೂಪಾಯಿ ಮೊಬೈಲ್ ಆ್ಯಪ್ ಸಾಲದ ವಸೂಲಿಗಾಗಿ ಲೋನ್ ಏಜೆಂಟರು ನರೇಂದ್ರನ ಹಿಂದೆ ಬಿದ್ದಿದ್ದರು. ನರೇಂದ್ರನ ಪತ್ನಿ ಅಖಿಲಾ ಫೋಟೋ ಸಂಪಾದಿಸಿ, ಅದನ್ನು ನಗ್ನಚಿತ್ರವಾಗಿ ಬದಲಾಯಿಸಿದರು. ಫೋಟೋದ ಕೆಳಗೆ ‘ರೇಟು’ ಅಂತ ಮೊತ್ತವೊಂದನ್ನು ನಮೂದಿಸಿದರು.
ನರೇಂದ್ರನ ಫೋನಿನಲ್ಲಿದ್ದ ಎಲ್ಲ ನಂಬರುಗಳಿಗೂ ಕಳಿಸಿದರು. ಅಖಿಲಾಗೆ ಕರೆಗಳು ಬರತೊಡಗಿದವು. ನಡೆದದ್ದೇನೆಂದು ಆಕೆಗೆ ತಿಳಿಯಿತು. 2,000 ರೂಪಾಯಿ ಸಾಲವನ್ನು ಮರಳಿಸಿದರು. ಆದರೂ ಆಕೆಯ ಫೋಟೋ ಹಂಚುವುದನ್ನು ನಿಲ್ಲಿಸಲಿಲ್ಲ ಏಜೆಂಟರು. ಪತ್ನಿಯನ್ನು ಬಹುವಾಗಿ ಪ್ರೀತಿಸುತ್ತಿದ್ದ ನರೇಂದ್ರ, ಸೂಕ್ಷ್ಮ ಸ್ವಭಾವದವ. ಅಪಮಾನ ತಾಳಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಹಾಯಕ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಅಖಿಲಾ ಮನೆಗೆ ಧಾವಿಸುವ ವೇಳೆಗೆ ತಡವಾಗಿತ್ತು. ಪೊಲೀಸರು ಲೋನ್ ಆ್ಯಪ್ ಮತ್ತು ಏಜೆಂಟರ ಪತ್ತೆಯಲ್ಲಿ ತೊಡಗಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಇಂತಹುದೇ ಸಾಲ (15 ಸಾವಿರ ರೂಪಾಯಿ) ಪಡೆದಿದ್ದ ಆಂಧ್ರದ ಯುವತಿಯೊಬ್ಬಳು ಆತ್ಮಹತ್ಯೆಗೆ ಮುಂದಾಗಿದ್ದಳು. ಶ್ರೀಶೈಲಂ ಜಲಾಶಯಕ್ಕೆ ಧುಮುಕಿದ್ದಳು. ಜಲಾಶಯಕ್ಕೆ ಕಾವಲಿದ್ದ ಪೊಲೀಸರು ಆಕೆಯನ್ನು ರಕ್ಷಿಸಿ ಚಿಕಿತ್ಸೆ ಕೊಡಿಸಿ ಕಾಪಾಡಿದ್ದಾರೆ. 15 ಸಾವಿರ ಸಾಲಕ್ಕೆ ಪ್ರತಿಯಾಗಿ 60 ಸಾವಿರ ರೂಪಾಯಿಯನ್ನು ಪಾವತಿಸಿದ್ದರೂ, ಏಜೆಂಟರ ಕಾಟ ನಿಂತಿರಲಿಲ್ಲ. ಆಕೆಯ ಫೋಟೋವನ್ನು ನಗ್ನವಾಗಿಸಿ ವೈರಲ್ ಮಾಡುವ ಬೆದರಿಕೆ ಹಾಕಿದ್ದರು.
ಇದನ್ನು ಓದಿದ್ದೀರಾ? ಗದಗ | ಅಧಿಕಾರಿಗಳ ನಿರ್ಲಕ್ಷ್ಯ: ಉಳ್ಳಾಗಡ್ಡಿ ಕಣವಾಗಿ ಮಾರ್ಪಟ್ಟ ಇಟಗಿ ಬಸ್ ನಿಲ್ದಾಣ!
ಮೊಬೈಲ್ ಆ್ಯಪ್ ಲೋನ್‌ಗಳ ಜಾಲಕ್ಕೆ ಬೀಳದಿರಿ, ಖಾಸಗಿ ಮಾಹಿತಿಯನ್ನು ಅವುಗಳೊಂದಿಗೆ ಹಂಚಿಕೊಳ್ಳಬೇಡಿ. ಬೆದರಿಕೆ ಬಂದರೆ ಪೊಲೀಸರನ್ನು ಸಂಪರ್ಕಿಸಿ ಎಂದು ಆಂಧ್ರ ಪೊಲೀಸರು ಸಾರ್ವಜನಿಕರನ್ನು ಎಚ್ಚರಿಸಿದ್ದಾರೆ.
