ಮೊಬೈಲ್ ಫೋನ್‌ಗಳ ಆಗಮನ/ಬಳಕೆಯಿಂದಾಗಿ ಕುಟುಂಬ ಸದಸ್ಯರ ನಡುವಿನ ಸಂವಹನ ಕೊನೆಗೊಂಡಿದೆ. ಒಂಟಿತನಕ್ಕೆ ಕಾರಣವಾಗಿದೆ. ಮಾತ್ರವಲ್ಲದೆ, ಜನರು ಆತ್ಮಹತ್ಯೆಯಂತಹ ಆಘಾತಕಾರಿ ಹೆಜ್ಜೆ ಇಡುವುದಕ್ಕೂ ಪ್ರೇರಕವಾಗುತ್ತಿವೆ ಎಂದು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಶೇಖರ್ ಯಾದವ್ ಹೇಳಿದ್ದಾರೆ.
‘ಆತ್ಮಹತ್ಯೆಯನ್ನು ತಡೆಗಟ್ಟುವಲ್ಲಿ ಸಮಾಜದ ಪಾತ್ರ’ ವಿಷಯದ ಕುರಿತು ಪ್ರಯಾಜ್‌ರಾಜ್‌ನಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಪೋಷಕರು ತಮ್ಮ ಮಕ್ಕಳಿಗೆ ಯಾವುದೇ ಹೊರೆ ಹಾಕಬಾರದು. ಮಕ್ಕಳಿಗೆ ‘ನೀವು ವೈದ್ಯನಾಗಬೇಕು, ನೀವು ಎಂಜಿನಿಯರ್’ ಆಗಬೇಕು ಎಂದು ಒತ್ತಾಯಿಸಬಾರದು. ಮತ್ತೊಂದು ಮಗುವಿನೊಂದಿಗೆ ಹೇಲಿಸಬಾರದು. ಮಗು ತನಗೆ ಬೇಕಾದ ದಿಕ್ಕಿನಲ್ಲಿ ವೃತ್ತಿಜೀವನವನ್ನು ಆಯ್ಕೆ ಮಾಡಿಕೊಳ್ಳಲಿ” ಎಂದು ಅವರು ಹೇಳಿದರು.
“ಮಕ್ಕಳು ಎಂದಿಗೂ ತಾವು ಇತರರಿಗಿಂತ ದುರ್ಬಲರೆಂದು ಅಥವಾ ಕೀಳರಿಮೆ ಹೊಂದುವಂತೆ ಮಾಡಬಾರದು. ಪೋಷಕರು ಮಕ್ಕಳನ್ನು ನೈತಿಕವಾಗಿ ಕುಗ್ಗಿಸಿದರೆ, ಅವರು ಖಿನ್ನತೆಗೆ ಒಳಗಾಗಬಹುದು. ಅಂತಿಮವಾಗಿ ಆತ್ಮಹತ್ಯೆಯತ್ತ ಹೆಜ್ಜೆ ಹಾಕಬಹುದು” ಎಂದರು.
“ಮಕ್ಕಳ ನಡುವೆ ಸಂವಹನದ ಕೊರತೆ ಉಂಟಾಗಲು ಬಿಡಬೇಡಿ. ಅದೇ ರೀತಿ, ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಅಸಹಜವಾಗಿ ವರ್ತಿಸುತ್ತಿದ್ದರೆ, ಅದನ್ನು ಹಗುರವಾಗಿ ಪರಿಗಣಿಸಬೇಡಿ. ಅವರೊಂದಿಗೆ ಸಮಾಲೋಚನೆ ನಡೆಸಿ. ಆಪ್ತತೆಯಿಂದಿರಿ. ಇಲ್ಲದಿದ್ದರೆ, ನಾಳೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ನಿಮ್ಮಲ್ಲಿಗೆ ಬರುತ್ತದೆ” ಎಂದು ಎಚ್ಚರಿಸಿದರು.