ಅದಾನಿಗೆ ಲಾಭ ಮಾಡಿಕೊಡಲು ಬಾಂಗ್ಲಾ ನಷ್ಟ ಅನುಭವಿಸುತ್ತಿದೆ. ಅದಕ್ಕಾಗಿ, ಒಪ್ಪಂದವನ್ನು ಮರುಪರಿಶೀಲನೆ ಮಾಡಲು ಬಾಂಗ್ಲಾ ಕೇಳಿಕೊಂಡಿದೆ. ಬಾಂಗ್ಲಾಗೆ ನಷ್ಟ ತಂದೊಡ್ಡುವ ಈ ಒಪ್ಪಂದದ ವಿರುದ್ಧ ಆಕ್ರೋಶ, ವಿರೋಧ ವ್ಯಕ್ತವಾಗುತ್ತಿವೆ. ಆದರೆ, ಅದಾನಿ ಈಗಾಗಲೇ ತನ್ನ ಕಲ್ಲಿದ್ದಲು ಸಾಮ್ರಾಜ್ಯವನ್ನು ಸುರಕ್ಷಿತವಾಗಿ ಗಟ್ಟಿಗೊಳಿಸಿಕೊಂಡಿದ್ದಾರೆ. ಅದಾನಿ ಸಾಮ್ರಾಜ್ಯ ಭದ್ರವಾಗಿರಲು ಮೋದಿ ಬುನಾದಿ ಹಾಕಿ ಹಲವು ವರ್ಷಗಳೇ ಆಗಿವೆ...
ಜಾರ್ಖಂಡ್‌ನ ಗೊಡ್ಡಾದಲ್ಲಿರುವ ಅದಾನಿ ಗ್ರೂಪ್‌ನ ಕಲ್ಲಿದ್ದಲು ಆಧಾರಿತ ಬೃಹತ್ ವಿದ್ಯುತ್ ಸ್ಥಾವರದ ವಿಚಿತ್ರ ಕತೆಯಿದು. ಮೊದಲನೆಯದಾಗಿ, ಈ ಘಟಕವು ಆರಂಭವಾಗುವಾಗಲೇ ಸ್ಥಳೀಯ ರೈತರು ಮತ್ತು ಜನರಿಂದ ಸಾಮೂಹಿಕ ಪ್ರತಿಭಟನೆಗಳು ಮತ್ತು ಆಕ್ಷೇಪಣೆಗಳಿಗೆ ತುತ್ತಾಗಿತ್ತು. ಕಲ್ಲಿದ್ದಲು ವಿದ್ಯುತ್ ಘಟಕ ಸ್ಥಾಪಿಸುವುದರಿಂದ ಪರಿಸರದ ಮೇಲೆ ಭಾರೀ ಪರಿಣಾಮ ಬೀರುತ್ತದೆ ಎಂದು ಹಲವಾರು ಪ್ರತಿಭಟನೆಗಳು ನಡೆದಿದ್ದವು. ಆದಾಗ್ಯೂ, ಕೇಂದ್ರ ಸರ್ಕಾರವೇ ಅದಾನಿಯ ಬೆನ್ನಿಗೆ ನಿಂತಿದ್ದರಿಂದ ಅದಾನಿಯವರ ವಿದ್ಯುತ್ ಸ್ಥಾವರ ತಲೆ ಎತ್ತಿತು.
ಇನ್ನೂ ವಿಚಿತ್ರವೆಂದರೆ, ಈ ಸ್ಥಾವರದಲ್ಲಿ ಉತ್ಪಾದಿಸುವ ವಿದ್ಯುತ್ ಜಾರ್ಖಂಡ್ ಅಥವಾ ಭಾರತದ ಬಳಕೆಗೆ ದೊರೆಯುತ್ತಿಲ್ಲ. ಇಲ್ಲಿನ ಸಂಪೂರ್ಣ ವಿದ್ಯುತ್ಅನ್ನು ಬಾಂಗ್ಲಾದೇಶಕ್ಕೆ ರಫ್ತು ಮಾಡಲಾಗುತ್ತಿದೆ. ವಿದ್ಯುತ್ ಉತ್ಪಾದಿಸಲು ಬಳಸುವ ಕಲ್ಲಿದ್ದಲು ಕೂಡ ಭಾರತದ್ದಲ್ಲ. ಅದನ್ನೂ, ಹೆಚ್ಚಾಗಿ ಆಸ್ಟ್ರೇಲಿಯಾದಲ್ಲಿರುವ ಅದಾನಿ ಒಡೆತನದ ಕಲ್ಲಿದ್ದಲು ಗಣಿಗಳಿಂದ ತರಲಾಗುತ್ತಿದೆ.
ಇದು, ನಿಜಕ್ಕೂ ಜಾರ್ಖಂಡ್ ಜನರ ಪಾಲಿಗೆ ವಿಪರ್ಯಾಸವಲ್ಲದೆ, ಬೇರೇನೂ ಅಲ್ಲ. ಜಾರ್ಖಂಡ್ ಒಂದು ಸಂಪನ್ಮೂಲಭರಿತ ಸಮೃದ್ಧ ರಾಜ್ಯ. ಭಾರತದ ಖನಿಜ ಸಂಪನ್ಮೂಲಗಳಲ್ಲಿ 40%ಕ್ಕಿಂತ ಹೆಚ್ಚು ಸಂಪನ್ಮೂಲವು ಜಾರ್ಖಂಡ್‌ನಲ್ಲೇ ಇದೆ. ಇಲ್ಲಿ, ರಾಷ್ಟ್ರದ ಕೆಲವು ಶ್ರೀಮಂತ ಕಲ್ಲಿದ್ದಲು ನಿಕ್ಷೇಪಗಳಿವೆ. ಇದರೊಳಗೆ ಅದಾನಿ ತಮ್ಮ ಸ್ಥಾವರವನ್ನು ಸ್ಥಾಪಿಸಿಕೊಂಡಿದ್ದಾರೆ.
ಅಂದಹಾಗೆ, 2015ರ ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶ ಪ್ರವಾಸಕ್ಕೆ ಹೋಗಿದ್ದರು. ಬಾಂಗ್ಲಾದೇಶದ ಪ್ರಧಾನ ಮಂತ್ರಿಯೊಂದಿಗಿನ ಜಂಟಿ ಘೋಷಣೆ ಮಾಡಿದ ಅವರು, ‘ವಿದ್ಯುತ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಾಂಗ್ಲಾ ಮತ್ತು ಭಾರತದಲ್ಲಿ ನಾವು ಒಟ್ಟಾಗಿ ಹೆಚ್ಚಿನ ಕೆಲಸಗಳನ್ನು ಮಾಡುತ್ತೇವೆ’ ಎಂದು ಹೇಳಿದ್ದರು.
ಅದಾದ ಕೇವಲ ಎರಡು ತಿಂಗಳ ನಂತರ, 2015ರ ಆಗಸ್ಟ್ 11 ರಂದು, ಬಾಂಗ್ಲಾದೇಶಕ್ಕೆ ವಿದ್ಯುಚ್ಛಕ್ತಿಯನ್ನು ಪೂರೈಸಲು ಭಾರತದಲ್ಲಿನ ಸೂಕ್ತವಾದ ಸ್ಥಳದಲ್ಲಿ 1600 ಮೆಘಾವ್ಯಾಟ್ (MW) ಕಲ್ಲಿದ್ದಲು-ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಅದಾನಿ ಪವರ್ ಲಿಮಿಟೆಡ್ (ಎಪಿಎಲ್) ಮತ್ತು ಬಾಂಗ್ಲಾದೇಶ ಪವರ್ ಡೆವಲಪ್ಮೆಂಟ್ ಬೋರ್ಡ್ ನಡುವೆ ಒಪ್ಪಂದವಾಯಿತು.
ಅದೇ ವರ್ಷದ ಡಿಸೆಂಬರ್ 18ರ ಹೊತ್ತಿಗೆ, ಅದಾನಿ ಪವರ್ (ಜಾರ್ಖಂಡ್) ಲಿಮಿಟೆಡ್ ಅನ್ನು ಹುಟ್ಟುಹಾಕಲಾಯಿತು. ಬಾಂಗ್ಲಾದೇಶಕ್ಕೆ ವಿದ್ಯುತ್ ಸರಬರಾಜು ಮಾಡುವ ಸ್ಥಾವರ ಸ್ಥಾಪಿಸಲು ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಸುಮಾರು 1,000 ಹೆಕ್ಟೇರ್ ಭೂಮಿಯನ್ನು ಮಂಜೂರು ಮಾಡುವಂತೆ 2016ರ ಮಾರ್ಚ್‌ನಲ್ಲಿ ಅದಾನಿಯ ಎಪಿಎಲ್ ಸಂಸ್ಥೆಯು ಸರ್ಕಾರಕ್ಕೆ ಮನವಿ ಸಲ್ಲಿಸಿತು. ಅದರಂತೆ, ಜಾರ್ಖಂಡ್‌ನ ಬಿಜೆಪಿ ಸರ್ಕಾರವು 917 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಆರಂಭಿಸಿತು. 2017ರ ಮಾರ್ಚ್‌ನಲ್ಲಿ ನಾನಾ ತಂತ್ರಗಳನ್ನು ಬಳಸಿ ಸ್ಥಳೀಯ ಬುಡಕಟ್ಟುಗಳು ಮತ್ತು ಸ್ಥಳೀಯ ಗ್ರಾಮಸ್ಥರನ್ನು ಅವರದ್ದೇ ಭೂಮಿಯಿಂದ ಬಲವಂತದಿಂದ ಹೊರಹಾಕಲಾಯಿತು. ಅವರ ಭೂಮಿಯನ್ನು ಕಸಿದುಕೊಳ್ಳಲಾಯಿತು.
ಇದೆಲ್ಲವೂ ನಡೆಯುತ್ತಿರುವ ಸಮಯದಲ್ಲೇ 2016ರ ಅಕ್ಟೋಬರ್ ವೇಳೆಗೆ, ಸರ್ಕಾರವು ದೀರ್ಘಕಾಲೀನ ಇಂಧನ ನೀತಿಯನ್ನೂ ಬದಲಿಸಿತ್ತು. ಹೊಸ ನೀತಿಯ ಪ್ರಕಾರ, ಜಾರ್ಖಂಡ್‌ನಲ್ಲಿ ನೆಲೆಗೊಂಡಿರುವ ವಿದ್ಯುತ್ ಉತ್ಪಾದಕರು ತಮ್ಮ ಸ್ಥಾವರಗಳಲ್ಲಿ ಉತ್ಪಾದಿಸುವ ವಿದ್ಯುತ್‌ನ ಕನಿಷ್ಠ 25%ರಷ್ಟು ವಿದ್ಯುತ್‌ಅನ್ನು ರಾಜ್ಯಕ್ಕೆ ರಿಯಾಯಿತಿ ದರದಲ್ಲಿ ಸರಬರಾಜು ಮಾಡಬೇಕಾಗಿತ್ತು. ಅದರಂತೆ, ಅದಾನಿ ಕೂಡ ತಮ್ಮ ಸ್ಥಾವರದಿಂದ 25% ವಿದ್ಯುತ್‌ಅನ್ನು ಜಾರ್ಖಂಡ್‌ಗೆ ಒದಗಿಸಬೇಕಿತ್ತು. ಆದರೆ, ಪರ್ಯಾಯ ವಿದ್ಯುತ್ ಪೂರೈಕೆಯ ಭರವಸೆ ನೀಡಿದ ಅದಾನಿ, ತಾವು ಉತ್ಪಾದಿಸುವ 100% ವಿದ್ಯುತ್‌ಅನ್ನು ಬಾಂಗ್ಲಾದೇಶಕ್ಕೆ ರಫ್ತು ಮಾಡಲು ಅನುಮತಿ ಪಡೆದುಕೊಂಡರು.
ಪರಿಷ್ಕೃತ ಹೊಸ ನಿಯಮದ ಅನ್ವಯ ಅದಾನಿ ಕಂಪನಿಯು ಪ್ರತಿ ವರ್ಷ ಜಾರ್ಖಂಡ್‌ಗೆ 296.40 ಕೋಟಿ ರೂ.ಗಳಷ್ಟು ಮೊತ್ತದ ವಿದ್ಯುತ್ ಪೂರೈಸಬೇಕಿತ್ತು ಅಥವಾ ಪರ್ಯಾಯ ವ್ಯವಸ್ಥೆಯಂತೆ ಅಷ್ಟು ಹಣವನ್ನು ಸರ್ಕಾರಕ್ಕೆ ಪಾವತಿಸಬೇಕಿತ್ತು ಎಂದು ರಾಜ್ಯ ಲೆಕ್ಕ ಪರಿಶೋಧನೆ ಹೇಳಿದೆ. ಅದರಂತೆ, 25 ವರ್ಷಗಳ ಅವಧಿಯಲ್ಲಿ ಅದಾನಿ ಕಂಪನಿಯು ರಾಜ್ಯಕ್ಕೆ 7,410 ಕೋಟಿ ರೂಪಾಯಿಗಳನ್ನು ಪಾವತಿಸಬೇಕಿತ್ತು.
ಆದರೆ, ಅದಾನಿಗಾಗಿ ಬಿಜೆಪಿ ಸರ್ಕಾರವು ಮತ್ತೆ ತನ್ನ ನಿಯಮಗಳನ್ನು ಬದಲಿಸಿತು. ಅದಾನಿಗೆ ಅನುಕೂಲವಾಗುವಂತೆ ತಿದ್ದುಪಡಿಗಳನ್ನು ಮಾಡಲಾಯಿತು. ಜೊತೆಗೆ, 2018ರ ಫೆಬ್ರವರಿಯಲ್ಲಿ ಅದಾನಿಯ ಎಪಿಎಲ್ ಕಂಪನಿಯು ಗೊಡ್ಡಾದಲ್ಲಿ ವಿಶೇಷ ಕೈಗಾರಿಕಾ ವಲಯ (ಎಸ್‌ಇಝಡ್) ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿತು. ಆದಾಗ್ಯೂ, 2016ರಲ್ಲಿ ವಾಣಿಜ್ಯ ಸಚಿವಾಲಯವು ಒಂದು ವಿದ್ಯುತ್ ಸ್ಥಾವರದ ಸುತ್ತಲೂ SEZ ನಿರ್ಮಾಣವನ್ನು ನಿಷೇಧಿಸಿದ್ದರಿಂದ, ಅವರ ಅರ್ಜಿ ತಿರಸ್ಕಾರಗೊಂಡಿತು.
ಆದರೇನು ಬಂತು, ಇದೇ ವಾಣಿಜ್ಯ ಸಚಿವಾಲಯವು 2019ರ ಫೆಬ್ರವರಿ ವೇಳೆಗೆ ಎಸ್‌ಇಝಡ್ ನಿಯಮಗಳನ್ನು ಬದಲಿಸಿತು. ಅದಾದ ಒಂದೇ ತಿಂಗಳಲ್ಲಿ, ಅದಾನಿ ಮತ್ತೆ ಎಸ್‌ಇಝಡ್‌ಗಾಗಿ ಅರ್ಜಿ ಸಲ್ಲಿಸಿದರು. ಅವರ ಅರ್ಜಿ ಅಂಗೀಕೃತಗೊಂಡಿತು. ಮಾತ್ರವಲ್ಲದೆ, ಅವರ ಸ್ಥಾವರವು ಎಸ್‌ಇಝಡ್ ಸ್ಥಾನಮಾನ ಮತ್ತು ಪ್ರಯೋಜನಗಳನ್ನು ಪಡೆದ ಭಾರತದ ಮೊದಲ ಸ್ವತಂತ್ರ ವಿದ್ಯುತ್ ಯೋಜನೆಯೂ ಆಯಿತು. ಈ ಎಸ್‌ಇಝಡ್ ಅವಕಾಶವು ಅದಾನಿಗೆ ಭಾರೀ ಮೊತ್ತದ ತೆರಿಗೆ ಉಳಿತಾಯದ ಪ್ರಯೋಜನವನ್ನು ನೀಡುತ್ತಿದೆ.
ವಿಪಯಾರ್ಸವೆಂದರೆ, ಭಾರತದ ಗೊಡ್ಡಾ ನೆಲೆದಲ್ಲಿ ಉತ್ಪಾದನೆಯಾಗುತ್ತಿರುವ ಸಂಪೂರ್ಣ ವಿದ್ಯುತ್ ಬಾಂಗ್ಲಾದೇಶಕ್ಕೆ ರಫ್ತಾಗುತ್ತಿದೆ. ಗಮನಾರ್ಹವಾಗಿ, ಬಾಂಗ್ಲಾದೇಶ ಹೆಚ್ಚು ವಿದ್ಯುತ್ ಸೌಲಭ್ಯ ಹೊಂದಿರುವ ದೇಶ. ಆದಾಗ್ಯೂ, ಬಾಂಗ್ಲಾಗೆ ಹೆಚ್ಚು ವಿದ್ಯುತ್‌ಅನ್ನು ಒದಗಿಸಲಾಗುತ್ತಿದೆ.
ಕಾರಣ, ಅದಾನಿ ಜೊತೆಗೆ ವಿದ್ಯುತ್ ಒಪ್ಪಂದ ಮಾಡಿಕೊಳ್ಳುವಂತೆ ಬಾಂಗ್ಲಾದೇಶದ ಮೇಲೆ ಒತ್ತಡ ಹೇರಲಾಗಿತ್ತು ಎಂದು ಆರೋಪಿಸಲಾಗಿದೆ. ಮೋದಿ ಸರ್ಕಾರದ ಒತ್ತಡಕ್ಕೆ ಮಣಿದು ಬಾಂಗ್ಲಾ ವಿದ್ಯುತ್ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಹೇಳಲಾಗಿದೆ. ಏಕೆಂದರೆ, ಆಗಿನ ಬಾಂಗ್ಲಾ ಸರ್ಕಾರವು ಮೋದಿಯನ್ನು ಬದಿಗೊತ್ತಲು ಬಯಸಿರಲಿಲ್ಲ. ಹೀಗಾಗಿ, ಒಪ್ಪಂದಕ್ಕೆ ಸಹಿ ಹಾಕಿತ್ತು. ಆ ಕಾರಣಕ್ಕಾಗಿ, ಬಾಂಗ್ಲಾದೇಶವು ವಿದ್ಯುತ್ ಉತ್ಪಾದನೆಯನ್ನು ಲೆಕ್ಕಿಸದೆ, ಅದಾನಿಗೆ ವರ್ಷಕ್ಕೆ ಸುಮಾರು 3.8 ಸಾವಿರ ಕೋಟಿ ರೂ. ನಿರ್ವಹಣಾ ಶುಲ್ಕ ಪಾವತಿಸಬೇಕಾಗಿದೆ. ಜೊತೆಗೆ, ಅದಾನಿ ಆಮದು ಮಾಡಿಕೊಂಡ ಕಲ್ಲಿದ್ದಲು ಸಾಗಣೆ/ಶಿಪ್ಪಿಂಗ್ ವೆಚ್ಚಗಳು ಮತ್ತು ಗಡಿಯುದ್ದಕ್ಕೂ ಅದಾನಿ ನಿರ್ಮಿಸಿದ ಹೈ-ವೋಲ್ಟೇಜ್ ಲೈನ್‌ನ ಪ್ರಸರಣ ವೆಚ್ಚಗಳ ಭಾರವನ್ನು ಬಾಂಗ್ಲಾದೇಶದ ಮೇಲೆ ಹೊರಿಸಲಾಗಿದೆ. ಈ ಎಲ್ಲ ಕಾರಣಗಳಿಂದಾಗಿ, ಅದಾನಿ ವಿದ್ಯುತ್‌ಗೆ ಬಾಂಗ್ಲಾದೇಶದ ಬೃಹತ್ ವಿದ್ಯುತ್ ಮಾರುಕಟ್ಟೆ ಬೆಲೆಗಿಂತ ಐದು ಪಟ್ಟು ಹೆಚ್ಚು ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಈ ವರದಿ ಓದಿದ್ದೀರಾ?: ಮೋದಾನಿ ಫೈಲ್ಸ್ | ಹೊಂದಾಣಿಕೆ-ಭ್ರಷ್ಟಾಚಾರದ ಬಗ್ಗೆ ದೇಶ ಮಾತನಾಡುವುದು ಯಾವಾಗ?
ಅದಾನಿಗೆ ಲಾಭ ಮಾಡಿಕೊಡಲು ಬಾಂಗ್ಲಾ ನಷ್ಟ ಅನುಭವಿಸುತ್ತಿದೆ. ಅದಕ್ಕಾಗಿ, ಒಪ್ಪಂದವನ್ನು ಮರುಪರಿಶೀಲನೆ ಮಾಡಲು ಬಾಂಗ್ಲಾ ಕೇಳಿಕೊಂಡಿದೆ. ಬಾಂಗ್ಲಾಗೆ ನಷ್ಟ ತಂದೊಡ್ಡುವ ಈ ಒಪ್ಪಂದದ ವಿರುದ್ಧ ಆಕ್ರೋಶ, ವಿರೋಧ ವ್ಯಕ್ತವಾಗುತ್ತಿವೆ. ಆದರೆ, ಅದಾನಿ ಈಗಾಗಲೇ ತನ್ನ ಕಲ್ಲಿದ್ದಲು ಸಾಮ್ರಾಜ್ಯವನ್ನು ಸುರಕ್ಷಿತವಾಗಿ ಗಟ್ಟಿಗೊಳಿಸಿಕೊಂಡಿದ್ದಾರೆ. ಅದಾನಿ ಸಾಮ್ರಾಜ್ಯ ಭದ್ರವಾಗಿರಲು ಮೋದಿ ಬುನಾದಿ ಹಾಕುತ್ತಿದ್ದಾರೆ. ಅದಾನಿ-ಬಾಂಗ್ಲಾ ವಿದ್ಯುತ್ ಒಪ್ಪಂದದ ವಿರುದ್ಧ ಕಳೆದ ಒಂದು ವರ್ಷಗಳಿಂದ ವಿರೋಧ ವ್ಯಕ್ತವಾಗುತ್ತಿದ್ದರೂ, ಅದಾನಿಯ ರಫ್ತಿಗೆ ಕಡಿವಾಣವಾಗಲೀ, ಒಪ್ಪಂದದ ಮರುಪರಿಶೀಲನೆಯಾಗಲೀ ನಡೆದಿಲ್ಲ. ಬಾಂಗ್ಲಾ ಈಗಲೂ ನಷ್ಟ ಅನುಭವಿಸುತ್ತಿದೆ. ಅದಾನಿಗೆ ಲಾಭ ಕೊಡುತ್ತಿದೆ. ಮೇಣದ ಬತ್ತಿಯಂತೆ ತಾನೇ ಉರಿದು, ಅದಾನಿಗೆ ಬೆಳಕು ನೀಡುತ್ತಿದೆ.
Why bangala cannot have their own power plant?? How much investment is done on any Indian industrialists? If they loose will the government will give back the money