ನಟ ಸಲ್ಮಾನ್ ಖಾನ್ ಅವರ ಆಪ್ತ, ಮಹಾರಾಷ್ಟ್ರ ಮಾಜಿ ಸಚಿವ, ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಅವರನ್ನು ತಾವೇ ಹತ್ಯೆ ಮಾಡಿದ್ದೇವೆಂದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೇಳಿಕೊಂಡಿದೆ. ಈ ಗ್ಯಾಂಗ್‌ನ ಕೃತ್ಯಗಳಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಕೆನಡಾ ಆರೋಪಿಸಿದೆ. ಈ ನಡುವೆ, ಪಾತಕಿ ಲಾರೆನ್ಸ್ ತಮ್ಮ ಹೀರೋ ಎಂದು ಬಿಜೆಪಿ ಅರ್ಥಾತ್ ಪ್ರಧಾನಿ ಮೋದಿ ಅಭಿಮಾನಿಗಳು, ಬೆಂಬಲಿಗರು ಹೇಳಿಕೊಳ್ಳುತ್ತಿದ್ದಾರೆ. ಲಾರೆನ್ಸ್ ಬಿಷ್ಣೋಯ್‌ನ ಕೃತ್ಯಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಅಂದಹಾಗೆ, 25 ವರ್ಷಗಳ ಹಿಂದೆ ಕೃಷ್ಣಮೃಗವನ್ನು ಕೊಂದಿದ್ದಕ್ಕಾಗಿ ನಟ ಸಲ್ಮಾನ್ ಖಾನ್ ಅವರನ್ನೂ ಕೊಲ್ಲುತ್ತೇವೆಂದು ಈ ಲಾರೆನ್ಸ್ ಗ್ಯಾಂಗ್ ಹೇಳಿಕೊಂಡಿದೆ. ಸಲ್ಮಾನ್ ಖಾನ್ ಜೊತೆಗೆ ನಿಕಟ ಆಪ್ತತೆ ಹೊಂದಿವವರನ್ನೂ ಬಿಡುವುದಿಲ್ಲವೆಂದು ಬೆದರಿಕೆ ಹಾಕಿದೆ. ಸಲ್ಮಾನ್ ಖಾನ್ ಮಾತ್ರವಲ್ಲದೆ, ಇನ್ನೂ ಹಲವರು ತಮ್ಮ ಹಿಟ್‌ಲಿಸ್ಟ್‌ನಲ್ಲಿ ಇರುವುದಾಗಿ ಲಾರೆನ್ಸ್ ಗ್ಯಾಂಗ್ ಹೇಳಿದೆ.
ಪಾತಕಿ ಕೃತ್ಯ, ಹತ್ಯೆಗಳನ್ನು ನಡೆಸುತ್ತಿರುವ ಲಾರೆನ್ಸ್‌ನನ್ನು ಮೋದಿ ಭಕ್ತರ ಪಡೆ ಬೆಂಬಲಿಸುತ್ತಿದೆ. ಸಮರ್ಥಿಸಿಕೊಳ್ಳುತ್ತಿದೆ. ಆತನೇ ನಮ್ಮ ಹೀರೋ ಎಂದೂ ಹೇಳಿಕೊಳ್ಳುತ್ತಿದೆ. ಹತ್ತಾರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಕುಖ್ಯಾತ ಪಾತಕಿಯನ್ನು ತಮ್ಮ ಹೀರೋ ಎಂದು ಹೇಳಿಕೊಳ್ಳುವುದು ಭಾರತದ ವ್ಯವಸ್ಥೆ ಹೇಗೆ ಮುನ್ನಡೆಯುತ್ತಿದೆ ಎಂಬುದಕ್ಕೆ ಕನ್ನಡಿ ಹಿಡಿಯುತ್ತಿದೆ.
ಲಾರೆನ್ಸ್‌ನ ಫೋಟೋವನ್ನು ಹಂಚಿಕೊಂಡಿರುವ ಬಿಜೆಪಿ ಬೆಂಬಲಿಗ ಮುತ್ತು ಕರಮುಡಿ ಎಂಬಾತ, “ಅವರು ಅಫ್ಜಲ್ ನನ್ನು ತಮ್ಮ ‘ನಾಯಕ’ ಎನ್ನುತ್ತಾರೆ. ನಾವ್ಯಾಕೆ ಬಿಷ್ಣೋಯಿಯನ್ನು ನಮ್ಮ ‘ಹೀರೋ’ ಎಂದು ಪರಿಗಣಿಸಬಾರದು…!! ಜೈ ಶ್ರೀ ರಾಮ್” ಎಂದು ಪೋಸ್ಟ್ ಮಾಡಿದ್ದಾರೆ.
“ಲಾರೆನ್ಸ್ ಬಿಷ್ಣೋಯ್ ಅವರು ನಮ್ಮ ಹೀರೋ ಮತ್ತು ನಾವು ಯಾವಾಗಲೂ ಅವರನ್ನು ಬೆಂಬಲಿಸುತ್ತೇವೆ” ಎಂದು ಮತ್ತೊಮ್ಮ ಹಿಂದುತ್ವವಾದಿ, ಮೋದಿ ಬೆಂಬಲಿಗ ರಿಗ್ತಿಸ್ಟ್ ಸಿಂಗ್ ಪೋಸ್ಟ್ ಮಾಡಿದ್ದಾರೆ.
“ಹಿಂದುಗಳು ಲಾರೆನ್ಸ್ ಬಿಷ್ಣೋಯಿ ಅವರೊಂದಿಗೆ ದೃಢವಾಗಿ ನಿಲ್ಲಬೇಕು. ಸಲ್ಮಾನ್‌ಖಾನ್ ತನ್ನ ಕೃತ್ಯದ ಪರಿಣಾಮಗಳನ್ನು ಎದುರಿಸಬೇಕು ಅಥವಾ ಬಿಷ್ಣೋಯಿ ಸಮುದಾಯದ ಬಳಿ ಕ್ಷಮೆಯಾಚಿಸಬೇಕು” ಎಂದು ಎಂದು ಸಂಜಯ್ ಯಾದವ್ ಎಂಬಾತ ಟ್ವೀಟ್ ಮಾಡಿದ್ದಾರೆ.
“ಲಾರೆನ್ಸ್ ಬಿಷ್ಣೋಯ್‌ಗೆ ಸಲ್ಮಾನ್ ಖಾನ್ ಸೂಪರ್ ಕೌಂಟರ್ ಬೆದರಿಕೆ ಹಾಕಬೇಕು. ಇಲ್ಲದಿದ್ದರೆ ಅವರು ಹೇಡಿಯಂತೆ ಕಾಣಿಸುತ್ತಾರೆ. ಬಿಷ್ಣೋಯ್ ನೋಡಲು ಸುಂದರವಾಗಿದ್ದಾನೆ. ಅವನ ಮುಂದೆ ಚೆಂದವಾಗಿ ಕಾಣುವ ಯಾವ ಬಾಲಿವುಡ್ ನಟರೂ ನನಗೆ ನೆನಪಾಗುತ್ತಿಲ್ಲ” ಎಂದು ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.
ಈ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಇತ್ತೀಚೆಗೆ, ಕೆನಡಾದಲ್ಲಿದ್ದ ಖಲಿಸ್ತಾನಿ ಹೋರಾಟಗಾರ ಹರ್ದೀಪ್ ಸಿಂಗ್ ನಿಜ್ಜಾರ್ ಎಂಬಾತನನ್ನು ಹತ್ಯೆಗೈದಿತ್ತು. “ಈ ಹತ್ಯೆಯ ಹಿಂದೆ ಭಾರತದ ಕೇಂದ್ರ ಸರ್ಕಾರ ಕುಮ್ಮಕ್ಕು ಇದೆ. ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅನುಮತಿ ನೀಡಿದ ನಂತರವೇ ನಿಜ್ಜಾರ್ ಹತ್ಯೆ ಮಾಡಲಾಗಿದೆ. ನಿಜ್ಜಾರ್ ಹತ್ಯೆಗೈಯಲು ಲಾರೆನ್ಸ್ ಗ್ಯಾಂಗ್‌ಗೆ ಭಾರತೀಯ ರಾಯಭಾರಿಯೇ ಎಲ್ಲ ರೀತಿಯಲ್ಲೂ ನೆರವು ನೀಡಿದ್ದಾರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ತನ್ನ ವಿರೋಧಿಗಳು, ಪ್ರಭಾವಿ ವಿಮರ್ಶಕರು, ಎದುರಾಳಿಗಳನ್ನು ಹತ್ತಿಕ್ಕಲು, ಕೊಲ್ಲಲು, ಬೆದರಿಕೆ ಹುಟ್ಟು ಹಾಕಲು ಲಾರೆನ್ಸ್ ಗ್ಯಾಂಗ್‌ಅನ್ನು ಬಳಸಿಕೊಳ್ಳುತ್ತಿದೆ” ಎಂದು ಕೆನಡಾ ಆರೋಪಿಸಿದೆ. ಈ ಆರೋಪಗಳ ಬೆನ್ನಲ್ಲೇ, ಕೆನಡಾದ ರಾಜತಾಂತ್ರಿಕರನ್ನು ಭಾರತ ಹೊರಗಟ್ಟಿದೆ.
ಈ ವರದಿ ಓದಿದ್ದೀರಾ?: ಪಾತಕಿ ಲಾರೆನ್ಸ್ ಗ್ಯಾಂಗ್ ಜೊತೆ ಬಿಜೆಪಿ ನಂಟು?
ಇದೀಗ, ಕೆನಡಾ ಆರೋಪವನ್ನು ಅಲ್ಲಗಳೆದಿರುವ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಕೆನಡಾದ ಆರೋಪಕ್ಕೆ ಸಂಬಂಧಿಸಿದಂತೆ ನಾವು ನಿರಂತರವಾಗಿ ಸಾಕ್ಷ್ಯಗಳನ್ನು ಕೇಳುತ್ತಿದ್ದೆವು. ನಮಗೆ ಇಂದು ಉತ್ತರ ಸಿಕ್ಕಿದೆ. ಕೆನಡಾವು ಭಾರತ ಮತ್ತು ಭಾರತೀಯರ ವಿರುದ್ಧ ಮಾಡಿದ ಗಂಭೀರ ಆರೋಪಗಳಿಗೆ ಗುಪ್ತಚರ ಇಲಾಖೆಗೆ ವರದಿಯಲ್ಲದೆ ಬೇರಾವುದೇ ಪುರಾವೆಗಳನ್ನು ಕೆನಡಾ ನಮಗೆ ಒದಗಿಸಿಲ್ಲ. ಭಾರತ-ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧಗಳಿಗೆ ಉಂಟಾದ ಹಾನಿಗೆ ಸಂಪೂರ್ಣವಾಗಿ ಕೆನಡಾ ಪ್ರಧಾನಿ ಟ್ರುಡೋ ಅವರೇ ಜವಾಬ್ದಾರಿ” ಎಂದಿದ್ದಾರೆ.