ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿಯಿಂದ ಮೂರನೇ ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಮೋದಿ ಅವರು ಕಾಂಗ್ರೆಸ್‌ನ ಅಜಯ್ ರಾಯ್ ಅವರನ್ನು 1,52,513 ಮತಗಳ ಅಂತರದಿಂದ ಸೋಲಿಸಿದ್ದಾರೆ.
ನರೇಂದ್ರ ಮೋದಿ 6,129,70 ಮತಗಳನ್ನು ಪಡೆದರೆ, ಅಜಯ್ ರಾಯ್ 4,604,57 ಮತಗಳನ್ನು ಪಡೆದಿದ್ದಾರೆ ಎಂದು ಚುನಾವಣಾ ಆಯೋಗದ ಅಂಕಿಅಂಶಗಳಿಂದ ತಿಳಿದುಬಂದಿದೆ. ನರೇಂದ್ರ ಮೋದಿ ಗೆಲುವು ಪಡೆದರೂ ಕಳೆದ ಎರಡು ಚುನಾವಣೆಗಳಲ್ಲಿ ಪಡೆದ ಮತಗಳಿಗೆ ಹೋಲಿಸಿದರೆ ಭಾರಿ ಅಂತರದಲ್ಲಿ ಇಳಿಕೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಇಂಡಿಯಾ ಒಕ್ಕೂಟದ ಬಹುಮತ ಸಂಖ್ಯೆಗೆ ತೊಡಕಾದ ಕರ್ನಾಟಕ, ದೆಹಲಿ
ನರೇಂದ್ರ ಮೋದಿ 2019ರ ಚುನಾವಣೆಯಲ್ಲಿ 6,74,664 ಮತಗಳನ್ನು ಪಡೆದು ಸಮಾಜವಾದಿ ಪಕ್ಷದ ಅಭ್ಯರ್ಥಿಯ ವಿರುದ್ಧ 4,79,505 ಮತಗಳ ಅಂತರದಿಂದ ಜಯಗಳಿಸಿದ್ದರು. 2014ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಚುನಾವಣೆಯಲ್ಲಿ 5,81,022 ಮತಗಳನ್ನು ಪಡೆದು 3,71, 784 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದರು.
ಈ ಬಾರಿ ಒಂದೂವರೆ ಲಕ್ಷ ಮತಗಳ ಅಂತರದಿಂದ ಮಾತ್ರ ಗೆಲುವು ಗಳಿಸಿರುವುದು ಮೋದಿ ಜನಪ್ರಿಯತೆ ಕಡಿಮೆಯಾಗಿರುವ ಸೂಚಕವಾಗಿದೆ. ಅದಲ್ಲದೆ ಮೊದಲ ಆರಂಭಿಕ ಹಂತದ ಕೆಲವು ಸುತ್ತುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದರು.
ಬಿಜೆಪಿ ಉತ್ತರ ಪ್ರದೇಶದಲ್ಲಿ 80 ಸದಸ್ಯ ಸಂಖ್ಯೆಯಲ್ಲಿ ಭಾರಿ ಹಿನ್ನಡೆಯಲ್ಲಿದೆ.2019ರಲ್ಲಿ 62 ಹಾಗೂ 2014ರಲ್ಲಿ 71 ಸ್ಥಾನಗಳನ್ನು ಪಡೆದಿತ್ತು. ಈ ಬಾರಿ 35 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಹಲವರು ಪರಾಭವಗೊಂಡಿದ್ದಾರೆ.
