ಭಾರತದ ಗಡಿ ಭಾಗಗಳಲ್ಲಿ ಸೌರ ವಿದ್ಯುತ್ ಸ್ಥಾವರ ಮತ್ತು ನವೀಕರಿಸಬಹುದಾದ ಇಂಧನ ಪಾರ್ಕ್ ಸ್ಥಾಪಿಸಲು ಅದಾನಿ ಸಮೂಹಕ್ಕೆ ಅನುಕೂಲ ಮಾಡಿಕೊಡಲು ಭಾರತ-ಪಾಕಿಸ್ತಾನ ಗಡಿ ಭದ್ರತಾ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಕೆ ಮಾಡಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪ್ರಧಾನಿ ಮೋದಿ ಸ್ಪಷ್ಟನೆ ನೀಡಬೇಕೆಂದು ಕಾಂಗ್ರಸ್ ಆಗ್ರಹಿಸಿದೆ.
ಗಡಿ ಭದ್ರತಾ ನಿಮಯಗಳ ಸಡಿಲಿಕೆ ಬಗ್ಗೆ ವರದಿ ಮಾಡಿರುವ ‘ದಿ ಗಾರ್ಡಿಯನ್’ ಸುದ್ದಿಸಂಸ್ಥೆ, “ಅದಾನಿ ಸಮೂಹ ಪಾಕಿಸ್ತಾನದ ಗಡಿಯಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಕಚ್‌ನ ಖಾವ್ಡಾ ಪ್ರದೇಶದಲ್ಲಿ ಸೌರ ವಿದ್ಯುತ್ ಸ್ಥಾವರ ಮತ್ತು ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಪಾರ್ಕ್ ನಿರ್ಮಿಸುತ್ತಿದೆ. ಈ ಹಿಂದಿನ ಗಡಿ ಭದ್ರತಾ ನಿಯಮಗಳ ಪ್ರಕಾರ ಈ ಪ್ರದೇಶದಲ್ಲಿ ಯಾವುದೇ ನಿರ್ಮಾಣ ಕಾರ್ಯಕ್ಕೆ ಅವಕಾಶ ಇರಲಿಲ್ಲ. ಆದರೆ, ಗುಜರಾತ್ ಸರ್ಕಾರ ಏಪ್ರಿಲ್ 2023ರಲ್ಲಿ ಪ್ರಧಾನ ಮಂತ್ರಿ ಕಚೇರಿಗೆ (ಪಿಎಂಒ) ಪತ್ರವೊಂದನ್ನು ಬರೆದು, ಗಡಿ ಸಮೀಪದ ಜಾಗದಲ್ಲಿ ಮೂಲಸೌಕರ್ಯ ಯೋಜನೆಗಳನ್ನು ನಿರ್ಮಿಸಲು ಅನುಮತಿ ಕೋರಿತ್ತು. ಆ ಕುರಿತು 2023ರ ಏಪ್ರಿಲ್ 21ರಂದು ಕೇಂದ್ರ ಸರ್ಕಾರ ದೆಹಲಿಯಲ್ಲಿ ಗೌಪ್ಯ ಸಭೆ ಕರೆದಿತ್ತು. ಆ ಸಮಯದಲ್ಲಿ, ಗುಜರಾತ್ ಸರ್ಕಾರ ಗುತ್ತಿಗೆಗೆ ನೀಡಿದ್ದ ಭೂಮಿಯನ್ನು ಭಾರತೀಯ ಸೌರಶಕ್ತಿ ನಿಗಮ (SECI) ತನ್ನ ವಶಕ್ಕೆ ಪಡೆದುಕೊಂಡಿತ್ತು. 2023ರ ಮೇ 8, 2023ರ ವೇಳೆಗೆ ಮೂಲಸೌಕರ್ಯ ಯೋಜನೆಗಳಿಗೆ ಅವಕಾಶ ನೀಡಲು ಕೇಂದ್ರವು ನಿಯಮಗಳನ್ನು ಬದಲಾಯಿಸಿದೆ. ಆಗಸ್ಟ್ ವೇಳೆಗೆ, ಅದಾನಿ ಗ್ರೂಪ್ ಕಚ್ ಬಳಿಯ ರನ್ ಪ್ರದೇಶದ ಭೂಮಿಯಯನ್ನು ತನ್ನ ವಶಕ್ಕೆ ಪಡೆದಿದೆ” ಎಂದು ವಿವರಿಸಿದೆ.
ವರದಿಯಲ್ಲಿ ಮಾಡಲಾಗಿರುವ ಆರೋಪಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವಾಗಲೀ, ಅದಾನಿ ಸಮೂಹವಾಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವರದಿಯ ಪ್ರಕಟವಾದ ಬಳಿಕ, ಕಾಂಗ್ರೆಸ್ ನಾಯಕರು ಮತ್ತು ಸಂಸದರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಕೇಂದ್ರ ಸರ್ಕಾರದ ನಡೆಯು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡಿದೆ. ನಮ್ಮ ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಏಕೆ ರಾಜಿ ಮಾಡಿಕೊಳ್ಳಲಾಗಿದೆ ಎಂಬುವುದರ ಬಗ್ಗೆ ಪ್ರಧಾನಿ ಮತ್ತು ರಕ್ಷಣಾ ಸಚಿವರು ಉತ್ತರ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
“ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಹುಸಿ ರಾಷ್ಟ್ರೀಯತಾವಾದಿ ಮುಖ ಮತ್ತೊಮ್ಮೆ ಬಯಲಾಗಿದೆ. ನರೇಂದ್ರ ಮೋದಿಯವರೇ ಖಾಸಗಿ ಕೋಟ್ಯಾಧಿಪತಿಗಳಿಗೆ ಲಾಭ ಮಾಡಿಕೊಡುವ ಸಲುವಾಗಿ ನೀವು ನಮ್ಮ ಗಡಿಗಳಲ್ಲಿ ರಾಷ್ಟ್ರೀಯ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸಿದ್ದೀರಿ. ಗಡಿ ಭದ್ರತಾ ನಿಯಮಗಳನ್ನು ಸಡಿಲಿಸುವ ಮೂಲಕ ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿಯ ಬಳಿ ಕೇವಲ 1 ಕಿ.ಮೀ ದೂರದಲ್ಲಿರುವ ಅಮೂಲ್ಯವಾದ ಆಯಕಟ್ಟಿನ ಭೂಮಿಯನ್ನು ನಿಮ್ಮ ‘ಆತ್ಮೀಯ ಸ್ನೇಹಿತ’ನಿಗೆ ಉಡುಗೊರೆಯಾಗಿ ನೀಡಿದ್ದೀರಿ ಎಂಬುವುದು ನಿಜವೇ?” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
PM Modi’s priority:
— K C Venugopal (@kcvenugopalmp) February 12, 2025
Securing India’s borders ❌
Filling Adani’s coffers ✅
Are we trying to make our energy system a sitting duck against our adversaries? Are military experts who have spent decades protecting our nation mere puppets who can be sidelined?
The Modi… pic.twitter.com/iMfwXQj8Rr
“ನಿಮ್ಮ ಸರ್ಕಾರ ಭಾರತ-ಪಾಕಿಸ್ತಾನ ಗಡಿಯಲ್ಲಿ ಮಾತ್ರವಲ್ಲದೆ ಬಾಂಗ್ಲಾದೇಶ, ಚೀನಾ, ಮ್ಯಾನ್ಮಾರ್ ಮತ್ತು ನೇಪಾಳಕ್ಕೆ ಹೊಂದಿಕೊಂಡಿರುವ ಭೂಮಿಯಲ್ಲಿಯೂ ನಿಯಮಗಳನ್ನು ಸಡಿಲಗೊಳಿಸಿದೆ. ಇದರಿಂದಾಗಿ ನಮ್ಮ ಕಾರ್ಯತಂತ್ರ ಮತ್ತು ಗಡಿ ಭದ್ರತೆಗೆ ಅಪಾಯವಿದೆ ಎಂಬುವುದು ನಿಜವಲ್ಲವೇ?” ಎಂದು ಖರ್ಗೆ ಕೇಳಿದ್ದಾರೆ.
“ನಮ್ಮ ಸಶಸ್ತ್ರ ಪಡೆಗಳ ರಕ್ಷಣಾ ಜವಾಬ್ದಾರಿಗಳನ್ನು ಹೆಚ್ಚಿಸುವ ಮತ್ತು ಅವುಗಳ ಕಾರ್ಯತಂತ್ರದ ಅನುಕೂಲಗಳನ್ನು ಕಡಿಮೆ ಮಾಡುವ ಮೂಲಕ ಭಾರತ-ಪಾಕಿಸ್ತಾನ ಗಡಿಯ ಸುಲಭವಾದ ರೀತಿಯಲ್ಲಿ ಬೃಹತ್ ಖಾಸಗಿ ಯೋಜನೆಗೆ ನೀವು ಅನುಮತಿ ನೀಡಿದ್ದು ಏಕೆ?” ಎಂದಿದ್ದಾರೆ.
ಗಡಿ ನಿಯಮಗಳಲ್ಲಿನ ಬದಲಾವಣೆಯ ಅಗತ್ಯವನ್ನು ವಿವರಿಸುವಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಪ್ರಧಾನಿ ಮತ್ತು ರಕ್ಷಣಾ ಸಚಿವರಿಗೆ ಆಗ್ರಹಿಸಿದ್ದಾರೆ.
“ನಮ್ಮ ಇಂಧನ ವ್ಯವಸ್ಥೆಯನ್ನು ನಮ್ಮ ವಿರೋಧಿಗಳ ವಿರುದ್ಧ ಕುಳಿತುಕೊಳ್ಳುವ ಬಾತುಕೋಳಿಯನ್ನಾಗಿ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆಯೇ? ನಮ್ಮ ರಾಷ್ಟ್ರವನ್ನು ರಕ್ಷಿಸಲು ದಶಕಗಳ ಕಾಲ ಶ್ರಮಿಸಿದ ಮಿಲಿಟರಿ ತಜ್ಞರು ಕೇವಲ ಕೈಗೊಂಬೆಗಳೇ? ಅವರನ್ನು ಬದಿಗೆ ತಳ್ಳಬಹುದಾ? ಮೋದಿ ಸರ್ಕಾರದ ಸ್ವಜನಪಕ್ಷಪಾತ ನಮ್ಮ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದೆ. ಭಾರತದ ಅತಿದೊಡ್ಡ ಸೌರ ಯೋಜನೆಯನ್ನು ಪಾಕಿಸ್ತಾನ ಗಡಿಯಿಂದ ಕೇವಲ 1 ಕಿ.ಮೀ ದೂರದಲ್ಲಿ ನಿರ್ಮಿಸಲು ಅವಕಾಶ ನೀಡಿರುವುದು ಅತ್ಯಂತ ಅಪಾಯಕಾರಿ ನಡೆ ಮತ್ತು ಎಲ್ಲಾ ಸ್ಥಾಪಿತ ಮಿಲಿಟರಿ ಮಾನದಂಡಗಳಿಗೆ ವಿರುದ್ಧವಾಗಿದೆ” ಎಂದು ವೇಣುಗೋಪಾಲ್ ಎಕ್ಸ್ ಪೋಸ್ಟ್‌ನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
“ದೇಶದ ಎಲ್ಲಾ ಸಂಪನ್ಮೂಲಗಳನ್ನು ಪ್ರಧಾನ ಮಂತ್ರಿಯವರ ‘ಸ್ನೇಹಿತ’ನಿಗೆ ಹಸ್ತಾಂತರಿಸುವ ಪ್ರಕ್ರಿಯೆ ಗಡಿ ಭದ್ರತಾ ನಿಯಮಗಳನ್ನು ಕೂಡ ಬದಲಾಯಿಸುವ ಹಂತಕ್ಕೆ ತಲುಪಿದೆಯೇ?” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹಿಂದಿಯಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.