ಮಹಿಳಾ ಮೀಸಲಾತಿ ಮಸೂದೆ 2023ರಲ್ಲೇ ಸಂಸತ್ತಿನ ಎರಡೂ ಸದನಗಳಲ್ಲಿ ಪಾಸ್ ಆಗಿ ಕಾಯ್ದೆಯೂ ಆಗಿದೆ. ಅದು ಜಾರಿಗೆ ಬರುವುದು 2026ರ ತರುವಾಯ ಜನಗಣತಿ ನಡೆದು ಕ್ಷೇತ್ರ ಪುನರ್ ವಿಂಗಡಣೆ ಮುುಗಿದ ಮೇಲೆ ಎಂಬುದನ್ನೂ ಮೋದಿ ಸರ್ಕಾರ ಸ್ಪಷ್ಟವಾಗಿ ಹೇಳಿತ್ತು. ಈಗ ಆ ಕಾಯ್ದೆಗೆ ತಿದ್ದುಪಡಿ ತಂದು 2011ರ ಜನಗಣತಿ ಆಧರಿಸಿ ಕ್ಷೇತ್ರ ಪುನರ್ ವಿಂಗಡಣೆ ಮಾಡಿ ಮಹಿಳಾ ಮೀಸಲಾತಿ ನೀಡುವ ವಿಧೇಯಕ ಮಂಡನೆ ಮಾಡಿದೆ. ಆ ಮೂಲಕ ಲೋಕಸಭಾ ಕ್ಷೇತ್ರಗಳನ್ನು ಹೆಚ್ಚಿಸಿಕೊಂಡು 2029ರ ಲೋಕಸಭೆ ಚುನಾವಣೆ ಗೆಲ್ಲುವ ತಂತ್ರ ಹೂಡಿದ್ದಾರೆ ಮೋದಿ.
ಪಂಚರಾಜ್ಯಗಳ ಚುನಾವಣೆಯ ಮಧ್ಯೆ ಮೋದಿ ಸರ್ಕಾರ ತರಾತುರಿಯಲ್ಲಿ ವಿಶೇಷ ಅಧಿವೇಶನ ಕರೆದು ʼನಾರೀಶಕ್ತಿ ವಂದನೆʼಯ ಹೆಸರಿನಲ್ಲಿ ವಿಪಕ್ಷಗಳನ್ನು ಇಕ್ಕಟ್ಟಿಗೆ ಸಿಕ್ಕಿಸುವ ವ್ಯೂಹ ಹಣೆದಿದೆ. ಲೋಕಸಭಾ ಕ್ಷೇತ್ರ ಪುನರ್ ವಿಂಗಡನೆ ಮತ್ತು ಮಹಿಳಾ ಮೀಸಲಾತಿ ಮಸೂದೆಯನ್ನು ಒಟ್ಟಿಗೆ ಬೆಸೆದು ವಿಶೇಷ ಅಧಿವೇಶನದಲ್ಲಿ ಮಂಡಿಸಲಾಗಿದೆ. ಕ್ಷೇತ್ರ ಪುನರ್ ವಿಂಗಡಣೆಯನ್ನು 2011ರ ಜನಗಣತಿಯ ಆಧಾರದಲ್ಲಿ ಮಾಡಲು ಮೋದಿ ಸರ್ಕಾರ ನಿರ್ಧರಿಸಿದೆ. ನಿಯಮದಂತೆ ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿ ನಡೆಸಬೇಕಿದೆ. ಆ ಪ್ರಕಾರವಾಗಿ 2021ರಲ್ಲಿ ದೇಶದಲ್ಲಿ ಜನಗಣತಿ ನಡೆಸಬೇಕಿತ್ತು. ಆದರೆ ಕೊರೋನಾ ಕಾರಣ ಹೇಳಿ ಜನಗಣತಿ ನಡೆಸುವುದನ್ನು ಮುಂದಕ್ಕೆ ಹಾಕಿದ್ದು, ಇದೀಗ ಜನಗಣತಿಗೆ ಚಾಲನೆ ನೀಡಲಾಗಿದೆ. 2027ರಲ್ಲಿ ಜನಗಣತಿ ನಡೆಸುವುದಾಗಿ ತಿಳಿಸಿತ್ತು. ಈಗ ಜನಗಣತಿ ನಡೆಸದೇ ಕ್ಷೇತ್ರ ಪುನರ್ ವಿಂಗಡಣೆ ನಡೆಸಲು ಮಹಿಳಾ ಮೀಸಲಾತಿ ಎಂಬ ಗುರಾಣಿಯನ್ನು ಮುಂದೆ ಮಾಡಿದೆ. ಮಹಿಳಾ ಮೀಸಲಾತಿಗೆ ಮತ ಹಾಕಿದರೆ ಕ್ಷೇತ್ರ ಪುನರ್ ವಿಂಗಡಣೆಗೂ ಮತ ಹಾಕಿದಂತಾಗುತ್ತದೆ. ಮತ ಹಾಕದಿದ್ದರೆ ಮಹಿಳಾ ವಿರೋಧಿ ಎಂಬ ಪಟ್ಟ ವಿಪಕ್ಷಗಳಿಗೆ ಕಟ್ಟಲಾಗುತ್ತದೆ. ಅಪಪ್ರಚಾರ ಮಾಡಿ ವಿಪಕ್ಷಗಳ ವಿರುದ್ಧ ಮಹಿಳೆಯರನ್ನು ಎತ್ತಿಕಟ್ಟಲಾಗುತ್ತದೆ. ಹೇಗೂ ತಮಿಳುನಾಡು ಮತ್ತು ಪಶ್ಚಿಮಬಂಗಾಳ ಮತದಾನ ಬಾಕಿ ಇದೆ. ಮತದಾನಕ್ಕೆ ಕೆಲವೇ ದಿನ ಬಾಕಿ ಇರುವಾಗ ಇದು ಬಿಜೆಪಿಗೆ ಪ್ರಚಾರದ ಪ್ರಬಲ ಅಸ್ತ್ರವಾಗಲಿದೆ.
ಕ್ಷೇತ್ರ ಮರುವಿಂಗಡಣೆ ವಿಧೇಯಕವನ್ನು ಇಂಡಿಯಾ ಮೈತ್ರಿ ಕೂಟ ಬಲವಾಗಿ ವಿರೋಧಿಸಿದೆ. ಆದರೆ ಮಹಿಳಾ ಮೀಸಲಾತಿ ಮಸೂದೆಗೆ 2023ರಲ್ಲಿಯೇ ವಿಪಕ್ಷಗಳು ಬೆಂಬಲ ಸೂಚಿಸಿವೆ. ಮಹಿಳಾ ಮೀಸಲಾತಿ ಮಸೂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಬಿಜೆಪಿ ಸೇರಿದಂತೆ ಹಲವು ಪಕ್ಷಗಳು ಒಪ್ಪದ ಕಾರಣ ದಶಕಗಳ ಕಾಲ ನನೆಗುದಿಗೆ ಬಿದ್ದಿತ್ತು. ಕೆಲವು ತಿದ್ದುಪಡಿ ಮಾಡಿ ಮೋದಿ ಸರ್ಕಾರ ಎರಡನೇ ಅವಧಿ ಮುಗಿಯಲು ಕೆಲ ತಿಂಗಳಿರುವಾಗ ಸಂಸತ್ತಿನಲ್ಲಿ ಮಂಡಿಸಿ ರಾಷ್ಟ್ರಪತಿಗಳ ಅಂಕಿತ ಪಡೆದಿತ್ತು. ಆ ಸಮಯದಲ್ಲಿಯೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬರಲಿರುವ 2024ರ ಲೋಕಸಭಾ ಚುನಾವಣೆಯಲ್ಲಿಯೇ ಮೀಸಲಾತಿ ಜಾರಿಗೆ ತರುವಂತೆ ಒತ್ತಾಯಿಸಿದ್ದರು. ಅದಕ್ಕೆ ಸೊಪ್ಪು ಹಾಕದ ಮೋದಿ ಸರ್ಕಾರ ಈಗ ದಿಢೀರ್ ಆಗಿ ಕರೆದಿರುವ ಅಧಿವೇಶನದ ಅಸಲಿ ಕಾರ್ಯಸೂಚಿಯು ಕ್ಷೇತ್ರ ಮರುವಿಂಗಡಣೆಯೇ ಆಗಿದೆ. ಮಹಿಳಾ ಮೀಸಲಾತಿಯನ್ನು ಮರುವಿಂಗಡಣೆಯ ಗೂಟಕ್ಕೆ ಬಿಗಿಯಲಾಗಿದೆ.
ಲೋಕಸಭೆಯಲ್ಲಿ ಅಂಗೀಕಾರ ಪಡೆಯಲು 543 ಸಂಖ್ಯಾಬಲದಲ್ಲಿ ಮೂರನೇ ಎರಡರಷ್ಟು ಅಂದರೆ 360 ಮತ ಬೇಕಿದೆ. ಆದರೆ ಎನ್ಡಿಎ ಬಲ 293 ಅಷ್ಟೇ ಇದೆ. 67 ಮತಗಳ ಕೊರತೆ ಇದೆ. ರಾಜ್ಯಸಭೆಯಲ್ಲಿ 163 ಮತಗಳ ಬೆಂಬಲದ ಅಗತ್ಯವಿದೆ. ಎನ್ಡಿಎ ಬಲ 142, 21 ಸ್ಥಾನಗಳ ಕೊರತೆ ಇದೆ. ಈ ಕಾರಣದಿಂದಲೇ ಮಹಿಳಾ ಮೀಸಲಾತಿ ಜಾರಿಯ ಹೆಸರಿನಲ್ಲಿ ವಿಪಕ್ಷಗಳಿಗೆ ಭಾರೀ ಒತ್ತಡ ಹೇರಲಾಗಿದೆ.
ಗುರುವಾರ ಮಹಿಳಾ ಮೀಸಲಾತಿ ವಿಧೇಯಕ ಮಂಡನೆಯ ನಂತರ ಮಾತನಾಡಿದ ಪ್ರಧಾನಿ ಮೋದಿ, “ಮಸೂದೆ ಪಾಸು ಮಾಡದಿದ್ದರೆ ಮಹಿಳೆಯರು ನಿಮ್ಮನ್ನು ಕ್ಷಮಿಸರು” ಎಂದ ಮೋದಿ ಬ್ಲ್ಯಾಕ್ ಮೇಲ್ಗೆ ಇಳಿದಿದ್ದಾರೆ. ಬಿಜೆಪಿಗೆ ಟಾಂಗ್ ಕೊಟ್ಟಿರುವ ಪ್ರಿಯಾಂಕಾ ಗಾಂಧಿ, “ಮಹಿಳಾ ಮೀಸಲಾತಿ ಮಸೂದೆಯನ್ನು ಕಾಂಗ್ರೆಸ್ ಮಂಡಿಸಿದಾಗ ವಿರೋಧಿಸಿದವರು ನೀವೇ ಸ್ವಾಮಿ” ಎಂದು ಕುಟುಕಿದ್ದಾರೆ.
ವಿಧೇಯಕ ಗೆದ್ದರೂ, ಸೋತರೂ ಚುನಾವಣಾ ಅಪಪ್ರಚಾರಕ್ಕೆ ಬಳಕೆ
ಇದೇ 23 ಮತ್ತು 27 ರಂದು ಪಶ್ಚಿಮ ಬಂಗಾಳದಲ್ಲಿ ಎರಡು ಸುತ್ತಿನ ಮತದಾನ ನಡೆಯಲಿದೆ. ತಮಿಳುನಾಡಿನಲ್ಲಿ 23ರಂದು ಒಂದೇ ಸುತ್ತಿನಲ್ಲಿ ಮತದಾನ ನಡೆಯಲಿದೆ. ಪಶ್ಚಿಮ ಬಂಗಾಳವನ್ನು ಕೈವಶ ಮಾಡಿಕೊಳ್ಳಲು ಕಳೆದ ಚುನಾವಣೆಯಲ್ಲಿ ಮೋದಿ ಅಮಿತ್ ಶಾ ಜೋಡಿ ಹರ ಸಾಹಸ ಮಾಡಿತ್ತು. ಕೊರೋನಾ ಎರಡನೇ ಅಲೆ ಇಡೀ ದೇಶವನ್ನು ಬಾಧಿಸುತ್ತಿದ್ದಾಗ ಮೋದಿ ಪಶ್ಚಿಮ ಬಂಗಾಳದಲ್ಲಿ ಮೊಕ್ಕಾಂ ಹೂಡಿದ್ದರು. ವಿಪಕ್ಷಗಳು ಚುನಾವಣಾ ಪ್ರಚಾರ ನಿಲ್ಲಿಸಿದ ನಂತರ ಮೋದಿ ಪ್ರಚಾರ ಕಾರ್ಯ ಕೈಬಿಟ್ಟಿದ್ದರು. ಆದರೆ, ಬಂಗಾಳದಲ್ಲಿ ಮೋದಿಯ ಮೋಡಿ ನಡೆಯಲಿಲ್ಲ. ಈ ಬಾರಿಯಾದರೂ ಗೆದ್ದೇ ಗೆಲ್ಲಬೇಕು ಎಂಬ ಹಟಕ್ಕೆ ಬಿದ್ದಿರುವ ಮೋದಿ ನೇತೃತ್ವದ ಬಿಜೆಪಿ ಕೊನೆಯ ಅಸ್ತ್ರವಾಗಿ ಮಹಿಳಾ ಮೀಸಲಾತಿ ವಿಧೇಯಕವನ್ನು ಬಳಸುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗಿದೆ.
ತಮಿಳುನಾಡು, ಬಂಗಾಳದ ಮತದಾನ ಬಾಕಿ ಇರುವಾಗ ವಿಶೇಷ ಅಧಿವೇಶನ ನಡೆಸಿ ಅದರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯ ತಮ್ಮ ಹುನ್ನಾರವನ್ನು ಮಹಿಳಾ ಮೀಸಲಾತಿಯ ಮೂಲಕ ಆಗು ಮಾಡಿ ನಂತರ ಎರಡು ರಾಜ್ಯಗಳಲ್ಲಿ ಪ್ರಚಾರಕ್ಕೆ ಹೋಗಿ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವುದು, ವಿಪಕ್ಷಗಳು ಮತ ಹಾಕದೇ ವಿಧೇಯಕ ಪಾಸು ಆಗದಿದ್ದರೆ ಅದನ್ನೂ ವಿಪಕ್ಷಗಳ ವಿರುದ್ಧದ ಅಪಪ್ರಚಾರಕ್ಕೆ ಬಳಸುವುದು. ಹೀಗೆ ಏನೇ ಆದರೂ ಅದರ ಲಾಭ ಬಿಜೆಪಿಗೆ ಸಿಗಲಿದೆ.
2023 ಡಿಸೆಂಬರ್ನಲ್ಲಿ ಮಹಿಳಾ ಮೀಸಲಾತಿ (ತಿದ್ದುಪಡಿ) ಮಸೂದೆ ಲೋಕಸಭೆಯಲ್ಲಿ ಮಂಡಿಸಿದ ಸಂದರ್ಭವೂ ಹೀಗೆಯೇ ಇತ್ತು. ಮೋದಿ ಅವರ ಎರಡನೇ ಅವಧಿ ಮುಗಿಯುವುದಕ್ಕೆ ಅಂದ್ರೆ ಲೋಕಸಭಾ ಚುನಾವಣೆಗೆ ವರ್ಷ ಇರುವಾಗ ಏಕಾಏಕಿ ವಿಶೇಷ ಅಧಿವೇಶನ ಕರೆದು ಮಸೂದೆ ಮಂಡಿಸಲಾಗಿತ್ತು. ಆಗ ಬೇಕಷ್ಟು ಬಹುಮತ ಇತ್ತು. ಆದರೆ, ಈಗ ಎನ್ಡಿಎ ಬಲ ಕುಗ್ಗಿದೆ. ವಿಪಕ್ಷಗಳ ಬೆಂಬಲ ಬೇಕೇ ಬೇಕು. ಅದಕ್ಕಾಗಿ ಕ್ಷೇತ್ರ ಪುನರ್ ವಿಂಗಡಣೆಗೆ ಮಹಿಳಾ ಮೀಸಲಾತಿ ವಿಧೇಯಕ ಸೇರಿಸಿ ವಿಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಮೋದಿ ಅಮಿತ್ ಶಾ ಜೋಡಿ. ಆದರೆ, ಈ ಕುತಂತ್ರಕ್ಕೆ ಸೋಲಾಗಲಿ ಎಂದು ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಸವಾಲು ಹಾಕಿದ್ದಾರೆ. ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಕೂಡ ವಿರುದ್ಧ ಮತ ಚಲಾಯಿಸುವ ಹೇಳಿಕೆ ನೀಡಿದ್ದಾರೆ. ಇನ್ನು ಒಂದು ಗಂಟೆಯಲ್ಲಿ ಎಲ್ಲವೂ ನಿರ್ಧಾರವಾಗಲಿದೆ.




