ಮೋದಿ ಸರ್ಕಾರವು ಚುನಾವಣಾ ಬಾಂಡ್‌ಗಳ ಮೂಲಕ ತನ್ನ ಸಂಶಯಾಸ್ಪದ ವ್ಯವಹಾರಗಳನ್ನು ಮರೆಮಾಡಲು ನಮ್ಮ ದೇಶದ ಅತಿದೊಡ್ಡ ಬ್ಯಾಂಕ್ ಅನ್ನು ಗುರಾಣಿಯಾಗಿ ಬಳಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಖರ್ಗೆ ಅವರು, ಸುಪ್ರೀಂ ಕೋರ್ಟ್ ಮೋದಿ ಸರ್ಕಾರದ ಚುನಾವಣಾ ಬಾಂಡ್‌ಗಳನ್ನು ‘ಕಪ್ಪು ಹಣದ ಪರಿವರ್ತನೆ ಯೋಜನೆ” “ಅಸಂವಿಧಾನಿಕ”, “ಆರ್‌ಟಿಐ ಉಲ್ಲಂಘನೆ” ಮತ್ತು “ಕಾನೂನುಬಾಹಿರ” ಎಂದು ಪರಿಗಣಿಸಿ ರದ್ದುಗೊಳಿಸಿದೆ. ಅಲ್ಲದೆ ಮಾರ್ಚ್ 6 ರೊಳಗೆ ದಾನಿಗಳ ವಿವರಗಳನ್ನು ಒದಗಿಸುವಂತೆ ಎಸ್‌ಬಿಐಗೆ ಕೇಳಿದೆ ಎಂದು ಹೇಳಿದ್ದಾರೆ.
“ಆದರೆ ಲೋಕಸಭೆ ಚುನಾವಣೆ ನಂತರ ಕೆಲವೊಂದು ಅನೀತಿಗಳನ್ನು ಮಾಡಬೇಕೆಂದು ಬಿಜೆಪಿ ಬಯಸುತ್ತದೆ. ಈ ಲೋಕಸಭೆಯ ಅಧಿಕಾರಾವಧಿಯು ಜೂನ್ 16 ರಂದು ಕೊನೆಗೊಳ್ಳಲಿದೆ ಮತ್ತು ಎಸ್‌ಬಿಐ ಜೂನ್ 30 ರೊಳಗೆ ಅಂಕಿಅಂಶವನ್ನು ಹಂಚಿಕೊಳ್ಳಲು ಬಯಸುತ್ತದೆ. ಈ ಮೋಸದ ಯೋಜನೆಯ ಪ್ರಮುಖ ಫಲಾನುಭವಿ ಬಿಜೆಪಿಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸುಳ್ಳು ಸೃಷ್ಟಿಸಿ, ಬೆಂಕಿ ಹಚ್ಚಿ, ಭಯ ಬಿತ್ತುವವರು ಯಾರು?
“ಈ ಅಪಾರದರ್ಶಕ ಚುನಾವಣಾ ಬಾಂಡ್‌ಗಳಿಗೆ ಬದಲಾಗಿ ಹೆದ್ದಾರಿಗಳು, ಬಂದರುಗಳು, ವಿಮಾನ ನಿಲ್ದಾಣಗಳು, ವಿದ್ಯುತ್ ಸ್ಥಾವರಗಳು ಇತ್ಯಾದಿಗಳ ಗುತ್ತಿಗೆಗಳನ್ನು ಮೋದಿ ಅವರ ಆಪ್ತರಿಗೆ ಹಸ್ತಾಂತರಿಸಿದ ಬಿಜೆಪಿಯ ಕರಾಳ ವ್ಯವಹಾರಗಳನ್ನು ಮೋದಿ ಸರ್ಕಾರವು ಅನುಕೂಲಕರವಾಗಿ ಮರೆಮಾಡುತ್ತಿಲ್ಲವೇ? ತಜ್ಞರು ಹೇಳುವಂತೆ ದಾನಿಗಳ 44,434 ಸ್ವಯಂಚಾಲಿತ ಅಂಕಿಅಂಶಗಳನ್ನು ಕೇವಲ 24 ಗಂಟೆಗಳಲ್ಲಿ ಬಹಿರಂಗಪಡಿಸಬಹುದು. ಈ ಮಾಹಿತಿಯನ್ನು ಒಟ್ಟುಗೂಡಿಸಲು ಎಸ್‌ಬಿಐಗೆ ಇನ್ನೂ 4 ತಿಂಗಳು ಏಕೆ ಬೇಕು?” ಎಂದು ಖರ್ಗೆ ಪ್ರಶ್ನಿಸಿದ್ದಾರೆ.
“ಚುನಾವಣಾ ಬಾಂಡ್‌ಗಳ ಯೋಜನೆಯು ಅಪಾರದರ್ಶಕ, ಪ್ರಜಾಪ್ರಭುತ್ವ ವಿರೋಧಿ ಮತ್ತು ವ್ಯವಸ್ಥೆಯನ್ನು ಹಾಳುಮಾಡುವ ವಿಧಾನವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಸ್ಪಷ್ಟ ನಿಲುವಾಗಿದೆ. ಆದರೆ ಮೋದಿ ಸರ್ಕಾರ ಬಿಜೆಪಿಯ ಬೊಕ್ಕಸ ತುಂಬಲು ಪ್ರಧಾನ ಮಂತ್ರಿ ಸಚಿವಾಲಯ, ಹಣಕಾಸು ಸಚಿವಾಲಯ, ಆರ್‌ಬಿಐ, ಚುನಾವಣಾ ಆಯೋಗ, ಸಂಸತ್ತು ಮತ್ತು ಪ್ರತಿಪಕ್ಷಗಳನ್ನು ಸದೆಬಡಿಯುತ್ತಿದೆ. ಈಗ ಹತಾಶ ಮೋದಿ ಸರ್ಕಾರ, ಸುಪ್ರೀಂ ಕೋರ್ಟ್ ತೀರ್ಪನ್ನು ಹತ್ತಿಕ್ಕಲು ಎಸ್‌ಬಿಐ ಅನ್ನು ಬಳಸಲು ಪ್ರಯತ್ನಿಸುತ್ತಿದೆ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
