ದೇಶಾದ್ಯಂತ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯ ನಡುವೆಯೇ, ಯುವಕನೊಬ್ಬ SIR ಫಾರಂ ಮೇಲೆ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಲ್ಲಿ ನಡೆದಿದೆ. ಮೃತ ಯುವಕ ಡೆತ್‌ನೋಟ್‌ನಲ್ಲಿ ‘ ನನ್ನ ಸಾವಿಗೆ ಪ್ರಧಾನಿ ನರೇಂದ್ರ ಮೋದಿಯೇ ಕಾರಣ’ ಎಂದು ಬರೆದಿದ್ದಾರೆ.
ಮೃತನನ್ನು ಸಿರ್ಸಿಲ್ಲಾ ಜಿಲ್ಲೆಯ ಗೊಲ್ಲಪಲ್ಲಿ ಗ್ರಾಮದ ಪಿ. ವಂಶಿ (25) ಎಂದು ಗುರುತಿಸಲಾಗಿದೆ. ಅವರು ಪೇಂಟರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಘಟನೆಯ ನಂತರ ಯುವಕನ ಕೊಠಡಿಯಿಂದ ಅವರ ಸಹಿಯಿದ್ದ ಎಸ್‌ಐಆರ್ ನಮೂನೆ ಪತ್ತೆಯಾಗಿದೆ. ಅದರಲ್ಲಿ, “ಗೌರವಾನ್ವಿತ ಪೊಲೀಸರೇ, ನನ್ನ ನೋವನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ. ನನ್ನ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಕಾರಣ. ನನ್ನ ಕುಟುಂಬಕ್ಕೆ ಯಾವುದೇ ತೊಂದರೆ ನೀಡಬೇಡಿ” ಎಂದು ತೆಲುಗಿನಲ್ಲಿ ಬರೆಯಲಾಗಿದೆ. ಇದೇ ಪತ್ರದ ಚಿತ್ರವನ್ನು ಅವರು ತಮ್ಮ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲೂ ಹಂಚಿಕೊಂಡಿದ್ದರು ಎನ್ನಲಾಗಿದೆ.
ಸಿರ್ಸಿಲ್ಲಾ ಡಿಎಸ್‌ಪಿ ಕೆ. ನಾಗೇಂದ್ರ ಚಾರಿ ಅವರ ಪ್ರಕಾರ, ಮೃತ ಯುವಕ ಕೌಟುಂಬಿಕ ವಿಷಯವಾಗಿ ತಾಯಿಯೊಂದಿಗೆ ವಾಗ್ವಾದ ನಡೆಸಿದ್ದರು. ಬಳಿಕ ಸ್ನೇಹಿತನೊಂದಿಗೆ ಮದ್ಯ ಸೇವಿಸಿದ್ದರೆಂಬ ಮಾಹಿತಿ ತನಿಖೆಯಲ್ಲಿ ಲಭ್ಯವಾಗಿದೆ. ಪ್ರಾಥಮಿಕ ತನಿಖೆಯ ಆಧಾರದಲ್ಲಿ ಕೌಟುಂಬಿಕ ಸಮಸ್ಯೆಗಳೇ ಈ ಘಟನೆಯ ಹಿಂದಿನ ಕಾರಣವೆಂದು ಶಂಕಿಸಲಾಗಿದೆ.
“ಎಸ್‌ಐಆರ್ ನಮೂನೆಯಲ್ಲಿ ಈ ರೀತಿಯ ಪತ್ರವನ್ನು ಅವರು ಏಕೆ ಬರೆದಿದ್ದಾರೆ ಎಂಬುದು ಕುಟುಂಬದ ಸದಸ್ಯರಿಗೂ ಸ್ಪಷ್ಟವಾಗಿಲ್ಲ. ಮೃತರು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿರಲಿಲ್ಲ,” ಎಂದು ಡಿಎಸ್‌ಪಿ ತಿಳಿಸಿದ್ದಾರೆ.
ಆತನ ಸಾವಿಗೆ ಸಂಬಂಧಿಸಿದಂತೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 194ರ ಅಡಿಯಲ್ಲಿ ಅನುಮಾನಾಸ್ಪದ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.




