ಬರಗಾಲವು ಕೇವಲ ಒಂದು ಋತುವಿನ ಸಮಸ್ಯೆಯಲ್ಲ. ಹಾಗಾಗಿ ಜಲ ಸಂರಕ್ಷಣೆ, ಕೆರೆ ಪುನರುಜ್ಜೀವನ, ಮಳೆ ನೀರು ಸಂಗ್ರಹಣೆ ಮತ್ತು ಸಮರ್ಪಕ ನೀರಾವರಿ ಯೋಜನೆಗಳನ್ನು ದೀರ್ಘಕಾಲಿಕ ಯೋಜನೆ ಕೈಗೊಳ್ಳುವಂತಹ ಅಗತ್ಯವನ್ನು ಎತ್ತಿ ತೋರಿಸುತ್ತಿದೆ. ಈ ಹಿನ್ನೆಲೆ 'ನೀರು ಉಳಿಸಿದರೆ ಜೀವ ಉಳಿಸಿದಂತೆ' ಎನ್ನುವ ಈ ಸಂದೇಶವನ್ನು ಪ್ರತಿ ಗ್ರಾಮ, ಪಟ್ಟಣ ಮತ್ತು ನಗರಕ್ಕೆ ತಲುಪಿಸುವ ಅಭಿಯಾನ ಅಗತ್ಯ.
ಜುಲೈ ತಿಂಗಳು ಅಂತ್ಯಕ್ಕೆ ಬರುತ್ತಿದ್ದರೂ ಕರ್ನಾಟಕದ ಹಲವೆಡೆ ನೈರುತ್ಯ ಮುಂಗಾರು ಇನ್ನೂ ಚುರುಕುಗೊಳ್ಳದೆ ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಲಾಶಯಗಳು, ಕೆರೆ-ಕಟ್ಟೆಗಳು ಖಾಲಿ ಖಾಲಿಯಾಗುತ್ತಿವೆ. ಕೃಷಿ ಚಟುವಟಿಕೆಗಳು ಭಾಗಶಃ ಕುಂಠಿತಗೊಂಡಿವೆ. ಇಂತಹ ಸಂದರ್ಭಗಳು ಕುಡಿಯುವ ನೀರಿನ ಸಮಸ್ಯೆಯೊಂದಿಗೆ ರೈತರ ಜೀವನವನ್ನೂ ತತ್ತರಗೊಳಿಸುತ್ತಿವೆ.
ಈ ಬಾರಿ ಮುಂಗಾರು ಆರಂಭದಿಂದಲೇ ನಿರೀಕ್ಷಿತ ಮಳೆಯಲ್ಲಿ ಗಣನೀಯ ಕೊರತೆ ಕಂಡುಬಂದಿದ್ದು, ಜೂನ್ನಲ್ಲಿ ರಾಜ್ಯಾದ್ಯಂತ ಸರಾಸರಿ ಶೇ.40ರಿಂದ ಶೇ.42ರಷ್ಟು ಮಳೆ ಕೊರತೆ ದಾಖಲಾಗಿದೆ. ಅಂತೆಯೇ ‘ಎಲ್ ನಿನೋ’ ಪರಿಣಾಮ ಮತ್ತು ಜಾಗತಿಕ ತಾಪಮಾನ ಏರಿಕೆಯಿಂದ ಮಳೆ ಕೊರತೆಯಾಗಿದೆ. ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲೂ ಮಳೆ ಕೊರತೆಯಿಂದಾಗಿ ಸಾಂಪ್ರದಾಯಿಕ ಮಳೆ ಅವಲಂಬಿ ಕೃಷಿ ಪ್ರದೇಶಗಳು ತತ್ತರಿಸಿವೆ ಎಂಬುದು ಹವಾಮಾನ ತಜ್ಞರ ಅಭಿಪ್ರಾಯವಾಗಿದೆ.
ರಾಜ್ಯದ ಪ್ರಮುಖ ಜಲಾಶಯಗಳಾದ ಕೃಷ್ಣರಾಜ ಸಾಗರ, ತುಂಗಭದ್ರಾ, ಹೇಮಾವತಿ, ಕಬಿನಿ ಸೇರಿದಂತೆ ಹಲವು ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ. ಅನೇಕ ಕೆರೆ-ಕಟ್ಟೆಗಳು ಪೂರ್ಣ ಖಾಲಿಯಾಗುವ ಸ್ಥಿತಿಗೆ ಬಂದಿವೆ. ಇದರಿಂದಾಗಿ ಕುಡಿಯುವ ನೀರಿನ ಜತೆಗೆ ನೀರಾವರಿ ಅವಲಂಬಿ ಬೆಳೆಗಳಿಗೂ ತೀವ್ರ ಬೆದರಿಕೆಯಾಗಿದೆ.
ರಾಜ್ಯದ ಕಾವೇರಿ ಜಲಾನಯನ ಪ್ರದೇಶದ ಗ್ರಾಮ, ಪಟ್ಟಣಗಳಲ್ಲಿಯೂ ಮಳೆಯ ಕೊರತೆಯನ್ನು ಎದುರಿಸುತ್ತಿದ್ದು, ಇಡೀ ರಾಜ್ಯವು ಸುಮಾರು ಶೇ.35ರಷ್ಟು ಮಳೆಯ ಕೊರತೆಯನ್ನು ಎದುರಿಸುತ್ತಿದ್ದರೆ, ಕಾವೇರಿ ನದಿಯ ಉಗಮ ಸ್ಥಾನದ ಜತೆಗೆ ಅದರ ಅತಿದೊಡ್ಡ ಜಲಾನಯನ ಪ್ರದೇಶವಾಗಿರುವ ಕೊಡಗು ಭಾಗದಲ್ಲಿ ಶೇ.45ರಷ್ಟು ಕೊರತೆಯಾಗಿರುವುದು ವರದಿಯಾಗಿದೆ. ಇದರಿಂದಾಗಿ ಕಾವೇರಿ ನೀರನ್ನು ಅವಲಂಬಿಸಿರುವ ರಾಜ್ಯದ ದಕ್ಷಿಣ ಭಾಗದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ಪ್ರಸ್ತುತ ಸಂಗ್ರಹ
ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಜಲಾಶಯಗಳಾದ ಹಾರಂಗಿ, ಹೇಮಾವತಿ, ಕೆಆರ್ಎಸ್ ಮತ್ತು ಕಬಿನಿಗಳಲ್ಲಿನ ಪ್ರಸ್ತುತ ಸಂಗ್ರಹವು ಅವುಗಳ ಪೂರ್ಣ ಸಂಗ್ರಹ ಸಾಮರ್ಥ್ಯದ ಕೇವಲ ಶೇ.52ರಷ್ಟು ನೀರು ಸಂಗ್ರಹವಾಗಿದೆ. ಇದರಲ್ಲಿ, ವಿಶೇಷವಾಗಿ ಕೆಆರ್ಎಸ್ನ ನೀರು ಸಂಗ್ರಹ ಕಳಪೆಯಾಗಿದೆ. ಏಕೆಂದರೆ ಅದು ಅದರ ಪೂರ್ಣ ಸಾಮರ್ಥ್ಯದ ಕೇವಲ ಶೇ.35ರಷ್ಟಿದೆ. ಜುಲೈ 21ರಂದು ಕೆಆರ್ಎಸ್ 775 ಕ್ಯೂಸೆಕ್ಗಳ ಒಳಹರಿವು ವರದಿ ಮಾಡಿದ್ದು, ಈಗ ಒಳಹರಿವು ಕೂಡ ಕಳಪೆಯಾಗಿದೆ.
ರಾಜ್ಯ ಸರ್ಕಾರವು ನೀರಾವರಿ ಉದ್ದೇಶಗಳಿಗಾಗಿ ನೀರನ್ನು ಬಿಡುಗಡೆ ಮಾಡುವುದಿಲ್ಲ ಮತ್ತು ಜಲಾಶಯಗಳಲ್ಲಿ ಯಾವುದೇ ಸಂಗ್ರಹವಿದ್ದರೂ ಅದನ್ನು ಕುಡಿಯುವ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕೆಂದು ಈಗಾಗಲೇ ಘೋಷಿಸಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವ ನಿಗದಿತ ಕೋಟಾವನ್ನು ಪಾಲಿಸುವುದಕ್ಕೂ ಸಾಕಷ್ಟು ನೀರು ಸಂಗ್ರಹವಿಲ್ಲ. ಬಿಳಿಗುಂಡ್ಲು ಅಳತೆ ಮಾಪಕ(ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿ (ಕೃಷ್ಣಗಿರಿ ಜಿಲ್ಲೆಯ ತಳ್ಳಿ ಬ್ಲಾಕ್ ಬಳಿ) ಇರುವ ಪ್ರಮುಖ ಕಾವೇರಿ ಜಲ ಮಾಪನ ಕೇಂದ್ರ)ದಲ್ಲಿ ನಡೆಸಿದ ಅಳತೆ ಪ್ರಕಾರ ರಾಜ್ಯವು ಜೂನ್ 1ರಿಂದ ಜುಲೈ 1 ರವರೆಗೆ ತಮಿಳುನಾಡಿಗೆ 28.3 ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡಬೇಕಾಗಿತ್ತು. ಆದರೆ ಕೇವಲ 3.4 ಟಿಎಂಸಿ ಅಡಿ ಮಾತ್ರ ಬಿಡುಗಡೆ ಮಾಡಿದೆ ಎಂದು ಹೇಳಲಾಗುತ್ತಿದೆ.
“ಈ ಹಿನ್ನೆಲೆಯಲ್ಲಿ ʼಬರಗಾಲದ ಸ್ಥಿತಿʼ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರನ್ನು ಕುಡಿಯುವ ನೀರಿನ ಅಗತ್ಯಗಳಿಗೆ ಮಾತ್ರ ಬಳಸಲು ನಿರ್ಧರಿಸಿದ್ದೇವೆ” ಎಂದು ಕರ್ನಾಟಕದ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಮಾಧ್ಯಮವೊದಕ್ಕೆ ತಿಳಿಸಿದ್ದಾರೆ.
ರೈತರ ಮೇಲಿನ ಪರಿಣಾಮ
ಮಳೆ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳು ಭಾಗಶಃ ಕುಂಠಿತಗೊಂಡಿರುವುದರಿಂದ ರೈತರು ತೀವ್ರ ಆತಂಕದಲ್ಲಿದ್ದಾರೆ. ಜೋಳ, ರಾಗಿ, ಭತ್ತ, ದ್ವಿದಳ ಧಾನ್ಯ ಬೆಳೆಗಳನ್ನು ಬೆಳೆಯುವುದೂ ಕೂಡ ಕಷ್ಟವಾಗುತ್ತಿದೆ. ಬಿತ್ತನೆ ಸಮಯ ಈಗಾಗಲೇ ಮುಗಿದಿರುವುದರಿಂದ ಇಳುವರಿ ಕುಂಠಿತ, ಕೀಟಬಾಧೆ, ತೀವ್ರ ಬರದಂತಹ ಸಮಸ್ಯೆಗಳು ಎದುರಾಗಬಹುದೆಂದು ಉತ್ತರ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು, ವಿಜಯಪುರ ಸೇರಿದಂತೆ ದಾವಣಗೆರೆ, ಚಿತ್ರದುರ್ಗ ಹಾಗೂ ಹಲವು ಜಿಲ್ಲೆಗಳಲ್ಲಿ ರೈತರು ಬರಗಾಲ ಘೋಷಣೆ ಮತ್ತು ಪರಿಹಾರದ ಬೇಡಿಕೆಯೊಂದಿಗೆ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.
ಹಾಸನದ ರೈತ ನಂಜೇಗೌಡ ಈ ದಿನ.ಕಾಮ್ನೊಂದಿಗೆ “ಮೋಡ ಕವಿದಿರುವುದನ್ನು ನೋಡಿ ಮಳೆ ಬರುತ್ತದೆಂದು ನಂಬಿ ಬಿತ್ತನೆ ಮಾಡಿದ್ದೆವು. ಆದರೆ ಮಳೆ ಕೈಕೊಟ್ಟಿದೆ. ಹೊಲದಲ್ಲಿನ ಬೆಳೆಗಳು ಕಣ್ಣೆದುರೇ ಒಣಗಿ ಕರಟಿ ಹೋಗುತ್ತಿವೆ. ಹಾಕಿದ ಬಂಡವಾಳವೂ ಕೈಸೇರಲಿಲ್ಲ. ಸಾಲ ಮಾಡಿ ಬಿತ್ತನೆ ಬೀಜ, ಗೊಬ್ಬರ ತಂದಿದ್ದೆವು. ಈಗ ಬೆಳೆಯೂ ಇಲ್ಲ, ಕೈಯಲ್ಲಿ ಹಣವೂ ಇಲ್ಲ. ಬ್ಯಾಂಕ್ ಮತ್ತು ಬಡ್ಡಿದಾರರ ಸಾಲ ತೀರಿಸುವುದು ಹೇಗೆ? ಎನ್ನುವ ಚಿಂತೆಯಾಗಿದೆ” ಎಂದು ಕಣ್ಣೀರು ಹಾಕಿದರು.
ಚನ್ನರಾಯಪಟ್ಟಣದ ರೈತ ಗಣೇಶ್ ಮಾತನಾಡಿ, “ಜಾನುವಾರುಗಳ ಕುಡಿಯುವ ನೀರು ಮತ್ತು ಮೇವಿಗೆ ಸಮಸ್ಯೆಯಾಗಿದೆ. ಹೊಲದ ಕೊಳವೆ ಬಾವಿಗಳಲ್ಲಿ ಅಂತರ್ಜಲ ಸಂಪೂರ್ಣ ಕುಸಿದಿದೆ. ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಹೊಟ್ಟೆಪಾಡಿಗಾಗಿ ಸಾಕಿದ ದನ-ಕರುಗಳಿಗೆ ಮೇವಿಲ್ಲದೆ, ಅವುಗಳನ್ನು ಕಸಾಯಿಖಾನೆಗೆ ಕಳುಹಿಸುವ ಪರಿಸ್ಥಿತಿ ಬಂದಿದೆ. ಆದರೆ ಅವುಗಳನ್ನೂ ಕೊಳ್ಳುವವರು ಇಲ್ಲದಂತಾಗಿದೆ” ಎಂದು ನೊಂದುಕೊಂಡರು.
ಕಲಬುರಗಿ ಕೆಪಿಆರ್ಎಸ್ ಮುಖಂಡ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, “ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿರುವುದರಿಂದ ಯಾವುದೇ ಬೆಳೆಗಳು ಸಮರ್ಪಕವಾಗಿ ಬಿತ್ತನೆಯಾಗಿಲ್ಲ. ಬಿತ್ತನೆಯಾಗಿರುವ ಬೆಳೆಗಳೂ ಉಸಿರುಗಟ್ಟುತ್ತಿವೆ. ಸಾಲ ಮಾಡಿ ಬಿತ್ತನೆ ಬೀಜ, ಗೊಬ್ಬರ ತಂದಿಟ್ಟುಕೊಂಡು ಕಾಯುತ್ತಿದ್ದ ರೈತರಿಗೆ ನಿರಾಸೆಯ ಜತೆಗೆ ಆರ್ಥಿಕ ನಷ್ಟವೂ ಉಂಟಾಗಿದೆ. ಹಾಗಾಗಿ ಸರ್ಕಾರ ಕೂಡಲೇ ಬರಗಾಲ ಘೋಷಣೆ ಮಾಡಿ, ಎಕರೆಗೆ ಸೂಕ್ತ ಪರಿಹಾರ ನೀಡಬೇಕು. ರೈತರ ಕೃಷಿ ಸಾಲಗಳನ್ನು ಮನ್ನಾ ಮಾಡಿ, ನಮಗೆ ಬದುಕಲು ದಾರಿ ತೋರಿಸಬೇಕು” ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
“ತೊಗರಿ ನಾಡು ಎಂದೇ ಕರೆಸಿಕೊಳ್ಳುವ ಕಲಬುರಗಿ ಜಿಲ್ಲೆಯಲ್ಲಿ ಕಳೆದ ವರ್ಷ ಬೆಳೆದ ತೊಗರಿಗೆ ಬೆಲೆ ಇಲ್ಲದೆ ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದೆವು. ಈ ಬಾರಿ ಬಿತ್ತನೆ ವೇಳೆ ಮಳೆ ಕೈಕೊಟ್ಟ ಕಾರಣ ಬಿತ್ತನೆ ಕಾರ್ಯ ನಡೆದಿಲ್ಲ….. ಕಳೆದ ವರ್ಷ ಬೆಲೆ ಇರಲಿಲ್ಲ; ಈ ವರ್ಷ ಬೆಳೆಯೇ ಇಲ್ಲ. ರೈತನ ಬದುಕು ಒಂದು ರೀತಿಯ ಪಣಕ್ಕಿಡುವ ಜೂಜಿನಂತಾಗಿದೆ” ಎಂದು ಆತಂಕ ವ್ಯಕ್ತ ಪಡಿಸಿದರು.
ಬಳ್ಳಾರಿಯ ಗ್ರಾಕೂಸ ಕಾರ್ಯಕರ್ತೆ ಮರೆಮ್ಮ ಮಾತನಾಡಿ, “ಮಳೆ ಇಲ್ಲದಿರುವುದರಿಂದ ಬೆಳೆ ಬಿತ್ತನೆಯಾಗಿಲ್ಲ. ಹಾಗಾಗಿ ಗ್ರಾಮದಲ್ಲಿ ಕೆಲಸವೂ ಇಲ್ಲ. ಜೀವನ ನಿರ್ವಹಣೆಗೆ ತುಂಬಾ ತೊಂದರೆಯಾಗುತ್ತಿರುವುದರಿಂದ ಯುವಜನರು ಪಟ್ಟಣಗಳತ್ತ ಹೋಗುತ್ತಿದ್ದಾರೆ. ಕುಟುಂಬಗಳೂ ಕೂಡ ಪಟ್ಟಣದತ್ತ ಗುಳೆ ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಏತನ್ಮಧ್ಯೆ, ರಾಜ್ಯದಲ್ಲಿ ಮುಂಗಾರು ವಿಳಂಬದಿಂದ ಮಳೆ ಕೊರತೆಯ ಬಗ್ಗೆ ಹವಾಮಾನ ತಜ್ಞರು ಕಳವಳ ವ್ಯಕ್ತಪಡಿಸಿದ್ದು, “ಮುಂಗಾರು ರಾಜ್ಯದ ಹವಾಮಾನ ವ್ಯವಸ್ಥೆಯ ಮುಖ್ಯ ಆಧಾರವಾಗಿದೆ. ವಾರ್ಷಿಕ ಮಳೆಯ ಸುಮಾರು ಶೇ.75ರಷ್ಟು ಭಾಗವನ್ನು ಮುಂಗಾರು ಮಳೆ ಒಳಗೊಂಡಿದೆ. ಜೂನ್ನಿಂದ ಸೆಪ್ಟೆಂಬರ್ ನಡುವೆ ಬೀಳುವ ಈ ಮಳೆಯು ರಾಜ್ಯದ ಕೃಷಿ ಕ್ಷೇತ್ರ ಮತ್ತು ಆರ್ಥಿಕತೆಗೆ ಅತ್ಯಂತ ಪ್ರಮುಖ ಜೀವನಾಡಿಯಾಗಿದೆ. ಆದರೆ ಪ್ರಸ್ತುತ ಮುಂಗಾರು ಕಳಪೆಯಾಗಿ ಮುಂದುವರಿದರೆ, ರಾಜ್ಯವು ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿಯಾಗಿ, ಬರಗಾಲವು ರೈತರನ್ನು ಆರ್ಥಿಕ ಮತ್ತು ಮಾನಸಿಕವಾಗಿ ಕುಗ್ಗಿಸುತ್ತಿದೆ.
ಇದರ ಬೆನ್ನಲ್ಲೇ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ಕರ್ನಾಟಕ ಸಚಿವ ಸಂಪುಟವು ʼಬರಗಾಲ ಘೋಷಣೆʼ ಕೋರಿ 15ದಿನಗಳಲ್ಲಿ ಕೇಂದ್ರಕ್ಕೆ ಜ್ಞಾಪಕ ಪತ್ರವನ್ನು ಸಲ್ಲಿಸಲು ನಿರ್ಧರಿಸಿದೆ.
ಸರ್ಕಾರದ ಕರ್ತವ್ಯಗಳು
ರಾಜ್ಯ ಸರ್ಕಾರವು ಈಗಾಗಲೇ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ. ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಎಲ್ಲ ಜಿಲ್ಲಾಧಿಕಾರಿಗಳಿಗೆ ಬರ ಪರಿಸ್ಥಿತಿ ಪರಿಶೀಲನೆಗೆ ಸೂಚನೆ ನೀಡಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆಗೆ 5 ಕೋಟಿ ರೂಪಾಯಿ ಮತ್ತು ಬರಗಾಲ ನಿರ್ವಹಣೆಗೆ 1 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಈ ಕಷ್ಟದ ಸಮಯದಲ್ಲಿ ರಾಜಕೀಯ, ಸಾಮಾಜಿಕ, ಸರ್ಕಾರಿ ಮತ್ತು ಸಾರ್ವಜನಿಕ ಎಲ್ಲ ವರ್ಗಗಳು ʼಟೀಮ್ ಕರ್ನಾಟಕʼ ಆಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ. ನೀರು ಸಂರಕ್ಷಣೆಯಲ್ಲಿ ಪ್ರತಿ ನಾಗರಿಕರ ಪಾತ್ರ ಮುಖ್ಯವಾಗಿದೆ. ಒಂದು ಹನಿ ನೀರು ಸಹ ವ್ಯರ್ಥವಾಗದಂತೆ ನೋಡಿಕೊಳ್ಳೋಣ ಎಂದು ಸಿಎಂ ಡಿ ಕೆ ಶಿವಕುಮಾರ್ ಕರೆ ನೀಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಸರ್ಕಾರದಿಂದ ಮತ್ತಷ್ಟು ಸಕ್ರಿಯ ಕ್ರಮಗಳ ಅಗತ್ಯವಿದೆ.
ಇದನ್ನೂ ಓದಿದ್ದೀರಾ?ವಿಜಯಪುರ | ಬಾಡುತ್ತಿದ್ದ ಬೆಳೆಗಳಿಗೆ ಜೀವಕಳೆ, ಬಿತ್ತನೆಗೆ ಮತ್ತೆ ಚೈತನ್ಯ: ನಿರಂತರ ಮಳೆಯ ನಿರೀಕ್ಷೆಯಲ್ಲಿ ರೈತ
- ಕುಡಿಯುವ ನೀರಿನ ಸಂರಕ್ಷಣೆ: ಜನರಲ್ಲಿ ನೀರಿನ ಸರಿಯಾದ ಬಳಕೆಯ ಬಗ್ಗೆ ತೀವ್ರ ಜಾಗೃತಿ ಅಭಿಯಾನ ನಡೆಸಬೇಕು. ವ್ಯರ್ಥ ಬಳಕೆ ತಡೆಯಲು ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ನೀಡಬೇಕು.
- ರೈತರಿಗೆ ಮಾರ್ಗದರ್ಶನ: ತುಸು ನೀರಿನಲ್ಲಿ ಬೆಳೆಯುವ ಬದಲಿ ಬೆಳೆಗಳು, ಡ್ರಿಪ್ ಮತ್ತು ಸ್ಪ್ರಿಂಕ್ಲರ್ ನೀರಾವರಿ, ಮಣ್ಣಿನ ತೇವಾಂಶ ಸಂರಕ್ಷಣೆ ತಂತ್ರಗಳ ಬಗ್ಗೆ ರೈತರಿಗಾಗಿ ಕ್ಷೇತ್ರ ಮಟ್ಟದಲ್ಲಿ ಚಟುವಟಿಕೆಗಳನ್ನು ಕೈಗೊಳ್ಳಬೇಕು.
- ಬರ ನಿರ್ವಹಣಾ ಯೋಜನೆ: ತ್ವರಿತ ಪರಿಹಾರ ಪ್ಯಾಕೇಜ್, ಬೆಳೆವಿಮೆ ಬಿಡುಗಡೆ, ಜಾನುವಾರುಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆಯನ್ನು ಮಾಡಬೇಕು.
ಬರಗಾಲವು ಕೇವಲ ಒಂದು ಋತುವಿನ ಸಮಸ್ಯೆಯಲ್ಲ. ಹಾಗಾಗಿ ಜಲ ಸಂರಕ್ಷಣೆ, ಕೆರೆ ಪುನರುಜ್ಜೀವನ, ಮಳೆ ನೀರು ಸಂಗ್ರಹಣೆ ಮತ್ತು ಸಮರ್ಪಕ ನೀರಾವರಿ ಯೋಜನೆಗಳನ್ನು ದೀರ್ಘಕಾಲಿಕ ಯೋಜನೆ ಕೈಗೊಳ್ಳುವಂತಹ ಅಗತ್ಯವನ್ನು ಎತ್ತಿ ತೋರಿಸುತ್ತಿದೆ. ಈ ಹಿನ್ನೆಲೆ ‘ನೀರು ಉಳಿಸಿದರೆ ಜೀವ ಉಳಿಸಿದಂತೆ’ ಎನ್ನುವ ಈ ಸಂದೇಶವನ್ನು ಪ್ರತಿ ಗ್ರಾಮ, ಪಟ್ಟಣ ಮತ್ತು ನಗರಕ್ಕೆ ತಲುಪಿಸುವ ಅಭಿಯಾನ ಅಗತ್ಯ.




