ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸದಲ್ಲಿದ್ದಾರೆ. ಗುರುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿದ್ದು, ಮಾತುಕತೆ ನಡೆಸಿದ್ದಾರೆ. ಮೋದಿ-ಟ್ರಂಪ್ ಭೇಟಿ ವೇಳೆ, ವಲಸಿಗರನ್ನು ಹೊರಗಟ್ಟುವಿಕೆ, ತೆರಿಗೆ ಹೆಚ್ಚಳ ಸೇರಿದಂತೆ ಗಂಭೀರ ವಿಚಾರಗಳನ್ನು ಟ್ಂಪ್ ಎದುರು ಮೋದಿ ಪ್ರಸ್ತಾಪಿಸದಿದ್ದರೂ, ತಮ್ಮ ಅತ್ಯಾಪ್ತ ಅದಾನಿ ಪ್ರಕರಣದ ವಿಚಾರವನ್ನು ಪ್ರಸ್ತಾಪಿಸುತ್ತಾರೆ ಎಂಬ ನಿರೀಕ್ಷೆಯಿತ್ತು. ರಾಜಕೀಯ ವಿಮರ್ಶಕರೂ ಅಂತಹ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಮೋದಿ ಅವರು ಅದಾನಿ ವಿಚಾರ ಪ್ರಸ್ತಾಪಿಸಿಲ್ಲ ಎಂದು ಹೇಳಿಕೊಂಡಿದ್ದಾರೆ.
ಟ್ರಂಪ್ ಜೊತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ, “ಅದಾನಿ ವಿರುದ್ಧದ ಆರೋಪಗಳು ವೈಯಕ್ತಿಕ ವಿಷಯಗಳಾಗಿವೆ. ಅಂತಹ ವೈಯಕ್ತಿಕ ವಿಷಯವನ್ನು ಟ್ರಂಪ್ ಜೊತೆಗಿನ ಚರ್ಚೆಯಲ್ಲಿ ವೇಳೆ ಪ್ರಸ್ತಾಪಿಸಿಲ್ಲ” ಎಂದು ಹೇಳಿದ್ದಾರೆ.
ಸದ್ಯ, ಟ್ರಂಪ್ 2ನೇ ಅವಧಿಗೆ ಅಧ್ಯಕ್ಷರಾದ ಬಳಿಕ ಅಮೆರಿಕಗೆ ತೆರಳಿರುವ, ಟ್ರಂಪ್ ಅವರನ್ನು ಭೇಟಿ ಮಾಡಿರುವ ವಿವಿಧ ರಾಷ್ಟ್ರಗಳ -ಪ್ರಧಾನಿಗಳ ಪೈಕಿ ಮೋದಿ 3ನೇಯವರು. ಮೋದಿ ಅವರಿಗೂ ಮುನ್ನ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರು ಟ್ರಂಪ್ ಅವರನ್ನು ಭೇಟಿ ಮಾಡಿದ್ದಾರೆ. ನೆತನ್ಯಾಹು ಗಾಜಾ ಪಟ್ಟಿಯನ್ನು ವಶಕ್ಕೆ ಪಡೆದು, ಇಸ್ರೇಲ್-ಅಮೆರಿಕ ಲಾಭ ಮಾಡಿಕೊಳ್ಳುವ ಬಗ್ಗೆ ಚರ್ಚಿಸಿದ್ದಾರೆ. ಇಶಿಬಾ ಅವರು ಜಪಾನ್‌ನಲ್ಲಿ ತಮ್ಮ ವಿರುದ್ಧದ ಆಡಳಿತ ವಿರೋಧಿ ಅಲೆ ಮತ್ತು ಪ್ರಧಾನಿ ಹುದ್ದೆ ಉಳಿಸಿಕೊಳ್ಳಲು ನೆರವು ಕೇಳಿದ್ದಾರೆ ಎಂದು ವರದಿಯಾಗಿದೆ.
ಇದೀಗ, ಮೋದಿ ಅವರು ಟ್ರಂಪ್ ಅವರನ್ನು ಭೇಟಿ ಮಾಡಿದ್ದಾರೆ. ಟ್ರಂಪ್ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ ಹಲವಾರು ಭಾರತ ವಿರೋಧಿ ನಿಲುವುಗಳನ್ನು ತೆಗೆದುಕೊಂಡಿದ್ದಾರೆ. ಭಾರತದಿಂದ ಅಮೆರಿಕಗೆ ರಫ್ತಾಗುವ ಸರಕುಗಳ ಮೇಲೆ ಆಮದು ಸುಂಕವನ್ನು ಹೆಚ್ಚಿಸಿದ್ದಾರೆ. ಭಾರತದ ಅಕ್ರಮ ವಲಸಿಗರು ಅಪರಾಧಿಗಳಂತೆ ಕೋಳಗಳಲ್ಲಿ ಬಂಧಿಸಿ ಭಾರತಕ್ಕೆ ಕಳಿಸುತ್ತಿದ್ದಾರೆ. ಆದರೂ, ಟ್ರಂಪ್ ನಡೆಯನ್ನು ಮೋದಿ ಪ್ರಶ್ನಿಸಿಲ್ಲ. ವಿರೋಧಿಸಿಲ್ಲ.
ಹೀಗಾಗಿ, ಈ ವಿಚಾರಗಳಲ್ಲಿ ಟ್ರಂಪ್ ಜೊತೆ ಮೋದಿ ಮಾತುಕತೆ ನಡೆಸುತ್ತಾರೆ. ಟ್ರಂಪ್ ಅವರ ನಡೆಯನ್ನು ಖಂಡಿಸುತ್ತಾರೆ ಎಂಬ ಯಾವುದೇ ನಿರೀಕ್ಷೆಯೂ ಇರಲಿಲ್ಲ. ಆದರೆ, ವಂಚನೆ ಮತ್ತು ಲಂಚ ಪ್ರಕರಣದಲ್ಲಿ ಅದಾನಿ ವಿರುದ್ಧ ನ್ಯೂಯಾರ್ಕ್ ಪ್ರಾಸಿಕ್ಯೂಷನ್ ಚಾರ್ಜ್‌ಶೀಟ್ ಸಲ್ಲಿಸಿದೆ. ಈ ಬಗ್ಗೆ ಟ್ರಂಪ್ ಜೊತೆ ಮೋದಿ ಚರ್ಚಿಸಬಹುದು ಎಂದು ಹೇಳಲಾಗಿತ್ತು. ಆದರೆ, ಆ ವಿಚಾರವನ್ನೂ ಮಾತನಾಡಿಲ್ಲವೆಂದು ಮೋದಿ ಹೇಳಿಕೊಂಡಿದ್ದಾರೆ.
ಈ ವರದಿ ಓದಿದ್ಧೀರಾ?: ಟ್ರಂಪ್ ಮೇಲಿನ ಮೋದಿ ಪ್ರೀತಿ: ಭಾರತದ ಜಾಗತಿಕ ಸ್ಥಾನಮಾನ ಕುಸಿತಕ್ಕೆ ನಾಂದಿ?
ಸದ್ಯ, ವಿದೇಶಿ ಸರ್ಕಾರಿ ಅಧಿಕಾರಿಗಳಿಗೆ ಅಮೆರಿಕ ಕಂಪನಿಗಳು ಲಂಚ ನೀಡುವುದನ್ನು ನಿರ್ಬಂಧಿಸುವ ಮತ್ತು ಲಂಚ ನೀಡಿದ ಆರೋಪ ಎದುರಿಸುತ್ತಿರುವ ಅಮೆರಿಕನ್ನರ ವಿರುದ್ಧ ಕಾನೂನು ಕ್ರಮ ಜರುಗಿಸುವ ಕಾಯ್ದೆಯನ್ನು ಟ್ರಂಪ್ ರದ್ದುಗೊಳಿಸಿದ್ದಾರೆ. ಇದರಿಂದಾಗಿ, ಅದಾನಿ ಪಾರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿಯೇ, ಅದಾನಿ ಬಗ್ಗೆ ಮೋದಿ ಪ್ರಸ್ತಾಪಿಸಿಲ್ಲ ಎಂಬ ಅಭಿಪ್ರಾಯಗಳೂ ಇವೆ.
ಅದಾನಿ ವಿರುದ್ಧದ ಪ್ರಕರಣವೇನು?
ಭಾರತದ ಹಲವಾರು ರಾಜ್ಯಗಳಲ್ಲಿ ‘ಸೌರ ವಿದ್ಯುತ್ ಒಪ್ಪಂದ’ಗಳನ್ನು ಪಡೆಯಲು ಅದಾನಿ ಗ್ರೂಪ್ ಭಾರತೀಯ ಅಧಿಕಾರಿಗಳಿಗೆ ಬರೋಬ್ಬರು 2,029 ಕೋಟಿ ರೂ.ಗಳನ್ನು ಲಂಚ ನೀಡಿದೆ. ಒಡಿಶಾ, ತಮಿಳುನಾಡು, ಛತ್ತೀಸ್‌ಗಢ, ಆಂಧ್ರಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಸೌರ ವಿದ್ಯುತ್ ಪೂರೈಕೆಗಾಗಿ ಅದಾನಿ ಗ್ರೂಪ್‌ನ ಭಾಗವಾಗಿರುವ ‘ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್’ಗೆ ಗುತ್ತಿಗೆ ಪಡೆಯಲು 2021 ಮತ್ತು 2022ರ ನಡುವೆ ಈ ಭಾರೀ ಮೊತ್ತದ ಲಂಚ ನೀಡಲಾಗಿದೆ. ಲಂಚ ಪ್ರಕರಣದಲ್ಲಿ ಗೌತನ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಹಾಗೂ ಇತರ ಆರು ಮಂದಿ ಭಾಗಿಯಾಗಿದ್ದಾರೆ. ಅಲ್ಲದೆ, ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಲು ಅಮೆರಿಕ ಉದ್ಯಮಗಳಿಗೆ ಸುಳ್ಳು ಹೇಳಿ ಹಣ ಪಡೆಯಲಾಗಿದೆ ಎಂದು ಅಮೆರಿಕದ ಪ್ರಾಸಿಕ್ಯೂಷನ್ ಆರೋಪಿಸಿದೆ. ಅಲ್ಲದೆ, ಈ ಎಂಟು ಮಂದಿ ಆರೋಪಿಗಳ ವಿರುದ್ಧವೂ ವಂಚನೆ ಮತ್ತು ಲಂಚ ಪ್ರಕರಣ ದಾಖಲಿಸಿ, ಪೂರ್ವ ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್‌ಅನ್ನೂ ಸಲ್ಲಿಸಲಾಗಿತ್ತು.