ನಕಲಿ ಫೋಟೋ ಮತ್ತು ವಿಡಿಯೊಗಳ ಬೃಹತ್ ಜಾಲವೇ ಹಬ್ಬುತ್ತಿದ್ದಾಗ ಒನ್ ಮ್ಯಾನ್ ಆರ್ಮಿಯಂತೆ ಸಕ್ರಿಯರಾದ ಮೊಹಮ್ಮದ್ ಝುಬೇರ್, ಸರಣಿ ಸತ್ಯಗಳನ್ನು ಬಯಲಿಗೆಳೆದಿದ್ದಾರೆ
ಭಾರತ ಮತ್ತು ಪಾಕಿಸ್ತಾನ ನಡುವೆ ಏರ್ಪಟ್ಟಿದ್ದ ಸಂಘರ್ಷವು ಕದನ ವಿರಾಮದಿಂದಾಗಿ ತಿಳಿಯಾಗುವ ಸೂಚನೆಗಳು ದೊರೆತಿವೆ. ಯುದ್ಧದ ಸನ್ನಿವೇಶ ನಿರ್ಮಾಣವಾಗಿದ್ದ ಹೊತ್ತಿನಲ್ಲಿ ಎರಡು ದೇಶಗಳು ಹಿಂದೆ ಸರಿದಿರುವುದು ಆಶಾದಾಯಕ ಬೆಳವಣಿಗೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ. ಆದರೆ ದೇಶಗಳ ನಡುವೆ ಉದ್ವಿಗ್ನತೆಯನ್ನು ಹೆಚ್ಚಿಸಲು ಕೆಲವು ದುಷ್ಕರ್ಮಿಗಳು ಯತ್ನಿಸಿರುವುದರ ಕುರಿತು ಗಂಭೀರವಾಗಿ ಯೋಚಿಸಬೇಕಾಗಿದೆ.
ಉಭಯ ದೇಶಗಳ ನಡುವಿನ ತಿಕ್ಕಾಟವನ್ನು ದ್ವಿಗುಣಗೊಳಿಸಲು ಪಾಕಿಸ್ತಾನಿ ಫೇಕ್ ಅಕೌಂಟ್‌ಗಳು ಹೇಗೆ ಕೆಲಸ ನಿರ್ವಹಿಸಿದವು ಮತ್ತು ಅವುಗಳನ್ನು ಫ್ಯಾಕ್ಟ್ ಚೆಕ್ಕರ್ ಮೊಹಮ್ಮದ್ ಝುಬೇರ್ ಹೇಗೆ ಬಯಲಿಗೆಳೆದರು ಎಂಬ ಸ್ವಾರಸ್ಯಕರ ಸಂಗತಿಯನ್ನು ಗಮನಿಸಬೇಕು. ಯುದ್ಧದ ಸಂದರ್ಭದಲ್ಲಿ ಹಬ್ಬುವ ಫೇಕ್ ನ್ಯೂಸ್‌ಗಳು ಮತ್ತು ಫೇಕ್ ಪ್ರೊಪೊಗಾಂಡಗಳ ಮಾದರಿಯನ್ನು ಅರಿತರೆ ನಾವು ಮುಂದಿನ ದಿನಗಳಲ್ಲಿ ಎಚ್ಚರಿಕೆಯನ್ನು ವಹಿಸಲು ಸಾಧ್ಯವಾಗುತ್ತದೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಳಿಕ ಭಾರತೀಯ ವಾಯುಸೇನೆಯ ರಫೇಲ್ ಯುದ್ಧ ವಿಮಾನಗಳನ್ನು ಬಡಿದುರುಳಿಸಲಾಗಿದೆ ಎಂಬ ನಕಲಿ ಸುದ್ದಿಯಿಂದ ಹಿಡಿದು- ನಕಲಿ ಫೋಟೋ ಮತ್ತು ವಿಡಿಯೊಗಳ ಬೃಹತ್ ಜಾಲವೇ ಹಬ್ಬಿತು. ಅವುಗಳನ್ನು ಇಂಚಿಂಚು ಅಕ್ಷರಶಃ ಬಯಲಿಗೆಳೆದ ಒನ್ ಮ್ಯಾನ್ ಆರ್ಮಿ ಎಂದರೆ ಫ್ಯಾಕ್ಟ್ ಚೆಕ್ಕರ್ ಮೊಹಮ್ಮದ್ ಝುಬೇರ್.
ನಿವೃತ್ತ ಭಾರತೀಯ ಸೇನಾ ಅಧಿಕಾರಿ ಎಂಬ ಸೋಗು ಧರಿಸಿ ಎಕ್ಸ್‌ನಲ್ಲಿ ಸಕ್ರಿಯವಾದ ಪಾಕಿಸ್ತಾನಿಗಳು ಮತ್ತು ನಕಲಿ ವಿಡಿಯೊಗಳನ್ನು ಹಬ್ಬಿಸಿದ ಪತ್ರಕರ್ತರ ನಿಜಬಣ್ಣ ಬಯಲು ಮಾಡಿದವರು ಝುಬೇರ್. ಬಳಿಕ ಎಚ್ಚೆತ್ತುಕೊಂಡ ಸರ್ಕಾರಿ ಫ್ಯಾಕ್ಟ್‌ಚೆಕ್ ವಿಭಾಗ ‘ಪಿಐಬಿ’ ಕೂಡ ಸುಳ್ಳು ಸುದ್ದಿಗಳ ಕುರಿತು ನಿಗಾವಹಿಸಿತು.
ಆಪರೇಷನ್ ಸಿಂಧೂರ ನಡೆದ ಬೆನ್ನಲ್ಲೇ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನಿ ಪತ್ರಕರ್ತ ಹಮೀದ್ ಮೀರ್ ನಕಲಿ ಫೋಟೋ ಮತ್ತು ವಿಡಿಯೊಗಳನ್ನು ಎಕ್ಸ್ ಖಾತೆಯಲ್ಲಿ ಹಂಚಿದರು. “ಪಾಕಿಸ್ತಾನದ ವಾಯು ಪಡೆ ಮತ್ತು ಭಾರತೀಯ ವಾಯುಪಡೆಯ ನಡುವಿನ ಕಾದಾಟದಲ್ಲಿ ಭಾರತ ಹಿಮ್ಮೆಟ್ಟಿದೆ. ಪಾಕಿಸ್ತಾನ ವಾಯುಪಡೆಯು ಅಖ್ನೂರ್ ಪ್ರದೇಶದಲ್ಲಿ ಒಂದು ಭಾರತೀಯ ಯುದ್ಧ ವಿಮಾನವನ್ನು, ಬಟಿಂಡಾ ಬಳಿ ಒಂದು ವಿಮಾನವನ್ನು, ಪಲ್ವಾಮಾಕ್ಕೆ ಹೊಂದಿಕೊಂಡಿರುವ ಎಲ್‌ಒಸಿ ಬಳಿ ಒಂದು ಮಾನವರಹಿತ ವೈಮಾನಿಕ ವಾಹನವನ್ನು ಹೊಡೆದುರುಳಿಸಿದೆ” ಎಂದು ಟ್ವೀಟ್ ಮಾಡಿದ್ದ ಹಮೀದ್, ಉರುಳಿ ಬಿದ್ದಿರುವ ವಿಮಾನದ ಫೋಟೋವೊಂದನ್ನೂ ಪೋಸ್ಟ್‌ನಲ್ಲಿ ಶೇರ್ ಮಾಡಿದ್ದರು. ಇದೊಂದು ನಕಲಿ ಸುದ್ದಿ ಎಂದು ಝುಬೇರ್ ಬಯಲಿಗೆಳೆದರು. 2021ರಲ್ಲಿ ಪಂಜಾಬ್‌ನ ಮೋಗಾ ಜಿಲ್ಲೆಯಲ್ಲಿ ಮಿಗ್ -21 ಜೆಟ್ ಅಪಘಾತಕ್ಕೀಡಾಗಿತ್ತು. ಆ ಸಂದರ್ಭದ ಚಿತ್ರವನ್ನು ನಕಲಿ ಪ್ರತಿಪಾದನೆಯೊಂದಿಗೆ ಹಮೀದ್ ಶೇರ್ ಮಾಡಿಕೊಂಡಿದ್ದರು.
ಪಾಕಿಸ್ತಾನದಿಂದ ಕಾರ್ಯ ನಿರ್ವಹಿಸುತ್ತಿದ್ದ ಟ್ವಿಟರ್ ಹ್ಯಾಂಡಲ್‌ಗಳು ನಕಲಿ ಫೋಟೋ ಮತ್ತು ವಿಡಿಯೊಗಳನ್ನು ಹಂಚುತ್ತಿದ್ದರೆ ಇತ್ತ ಝುಬೇರ್, ಅವುಗಳ ಅಸಲಿಯತ್ತನ್ನು ಮತ್ತು ಆ ಪೋಸ್ಟ್‌ಗಳ ಹಿಂದಿರುವ ಹಿಡನ್ ಅಜೆಂಡಾವನ್ನು ಬೇಟೆಯಾಡುತ್ತಾ ಹೋದರು.
ಪಾಕಿಸ್ತಾನಿ ಪರವಾರ ಎಕ್ಸ್ ಖಾತೆಗಳ ಪಟ್ಟಿಯಲ್ಲಿ ತೇಜಸ್ವಿ ಪ್ರಕಾಶ್ (@Tiju0Prakash) ಎಂಬ ಹೆಸರಿನ ಖಾತೆಯು ಒಂದು. ನಿವೃತ್ತ ಸೇನಾಧಿಕಾರಿ ಎಂಬ ಮುಸುಕು ಧರಿಸಿದ ಈ ಹ್ಯಾಂಡಲ್‌ನ ಬಯೋ ವಿವರದಲ್ಲಿ, “ಹೆಮ್ಮೆಯ ಭಾರತೀಯ | ಕಾಂಗ್ರೆಸ್ ನಿಷ್ಠಾವಂತ | ನ್ಯಾಯ, ಸಮಾನತೆ ಮತ್ತು ಪ್ರಗತಿಗಾಗಿ ಹೋರಾಟ ಮಾಡುವುದು | ರಾಹುಲ್ ಅವರ ಏಕೀಕೃತ ಭಾರತ ದೃಷ್ಟಿಕೋನಕ್ಕೆ ಬೆಂಬಲ | ಪ್ರೊಪೊಗಾಂಡ ಬದಲು ಸತ್ಯಕ್ಕೆ ಆದ್ಯತೆ” ಎಂದು ಬರೆದುಕೊಳ್ಳಲಾಗಿತ್ತು. ಆದರೆ ಖಾತೆಯನ್ನು ಪಾಕಿಸ್ತಾನದಿಂದ ನಿರ್ವಹಿಸಲಾಗುತ್ತಿತ್ತು.
ಪತ್ರಕರ್ತ ಹಮೀದ್ ಮೀರ್ ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳಲು ಈ ಟ್ವಿಟರ್ ಖಾತೆಯನ್ನು ಉಲ್ಲೇಖಿಸುತ್ತಿದ್ದರು. “ಪಾಕ್‌ನ ಹಿರಿಯ ಪತ್ರಕರ್ತ ಹಮೀರ್ ಮೀರ್ @Tiju0Prakash ಹ್ಯಾಂಡಲ್‌ನ ಟ್ವೀಟ್‌ಗಳನ್ನು ಅನುಮೋದಿಸುತ್ತಿದ್ದಾರೆ. ಈ ಮೊದಲು @Tiju0Prakash ಖಾತೆಯು @tiju786 (ಕಾಂಗ್ರೆಸ್ ಬೆಂಬಲಿಗನಂತೆ ಸೋಗು ಹಾಕಿರುವ) ಹೆಸರಿನದ್ದಾಗಿತ್ತು” ಎಂದಿದ್ದರು ಝುಬೇರ್.
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಟ್ವೀಟ್ ಮಾಡಿ @Tiju0Prakash ಖಾತೆಯ ಪೋಸ್ಟ್ ವಿರುದ್ಧ ಹರಿಹಾಯ್ದರು. “ಕಾಂಗ್ರೆಸ್ ಪಾಕಿಸ್ತಾನದ ಕೈಗೊಂಬೆಯೇ? ಆಪರೇಷನ್ ಸಿಂಧೂರ್ ಕಾಂಗ್ರೆಸ್‌ನ ತಂದೂರ್ ಆಗಿ ಪರಿಣಮಿಸುತ್ತದೆ” ಎಂದು ಬರೆದುಕೊಂಡರು. ಇಷ್ಟಾದ ಮೇಲೆ ತೇಜಸ್ವಿ ಪ್ರಕಾಶ್ ಎಂಬ ಖಾತೆಯಲ್ಲಿ ಶೇರ್ ಮಾಡಲಾಗಿದ್ದ ನಕಲಿ ಪೋಸ್ಟ್ (ಅಂದರೆ ಜಮ್ಮುವಿನ ಅಖ್ನೂರ್ ಬಳಿ ಪತನಗೊಂಡ ಭಾರತೀಯ ಜೆಟ್ ಎಂಬುದನ್ನು) ಡಿಲೀಟ್ ಮಾಡಲಾಯಿತು.
ಇದೇ ತೇಜಸ್ವಿ ಪ್ರಕಾಶ್ ಖಾತೆಯ ಪೋಸ್ಟ್ ಅನ್ನು ಸರ್ಕಾರದ ಪರ ಇರುವ ಪತ್ರಕರ್ತ, ಸಾರ್ವಜನಿಕ ದೂರದರ್ಶನ ಡಿಡಿ ನ್ಯೂಸ್‌ನೊಂದಿಗೆ ಇರುವ ಅಶೋಕ್ ಶ್ರೀವಾಸ್ತವ್ ಅವರು ನಂಬಿಬಿಟ್ಟರು. ಅದೇ ನೆಪದಲ್ಲಿ ಕಾಂಗ್ರೆಸ್ ಮೇಲೆ ಟೀಕಾಪ್ರಹಾರ ಮಾಡಿದರು. “ಕಾಂಗ್ರೆಸ್ ಬೆಂಬಲಿಗರು ಪಾಕಿಸ್ತಾನ ಪರ ಪ್ರೊಪೊಗಾಂಡ ಮಾಡುತ್ತಿದ್ದಾರೆ” ಎಂದು ಪೋಸ್ಟ್ ಮಾಡಿ ಡಿಲೀಟ್ ಮಾಡಿದರು. ತೇಜಸ್ವಿ ಪ್ರಕಾಶ್ ಖಾತೆಯಿಂದ ಪ್ರಸಾರವಾದ ಟ್ವೀಟ್ ಹೀಗಿತ್ತು: “ನಮ್ಮ ಜವಾನರಿಗಾಗಿ ಪ್ರಾರ್ಥಿಸುತ್ತಲೇ ಇರಿ. ಇದು ಒಳ್ಳೆಯ ಸುದ್ದಿ ಅಲ್ಲ. ಭಾರತೀಯ ಬ್ರಿಗೇಡ್ ಕೇಂದ್ರ ಕಚೇರಿಯನ್ನು ಪಾಕಿಸ್ತಾನ ಹೊಡೆದುರುಳಿಸಿದೆ”. ಇಂತಹದ್ದನ್ನು ಅಶೋಕ್ ನಂಬಿದ್ದರು. @Tiju0Prakash ಹ್ಯಾಂಡಲ್ ಪಾಕಿಸ್ತಾನದಿಂದ ನಿರ್ವಹಿಸುತ್ತಿದೆ ಎಂದು ಝುಬೇರ್ ಎಚ್ಚರಿಸಿದರೂ ಕೇಳದ ಅಶೋಕ್, “ಆ ಖಾತೆ ಭಾರತದ್ದು ಮತ್ತು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತದೆ” ಎಂದು ವಾದಿಸುತ್ತಾ ಹೋದರು.
ಟೆಲಿವಿಷನ್ ನ್ಯೂಸ್ ಚಾನೆಲ್‌ನ ಮಾಜಿ ಪತ್ರಕರ್ತೆ ರಿಚಾ ಅನಿರುದ್ಧ ಅವರು @Tiju0Prakash ಖಾತೆಯಲ್ಲಿನ ಪೋಸ್ಟ್‌ಗಳನ್ನು ನಂಬಿ ರಾಹುಲ್ ಗಾಂಧಿಯವರನ್ನು ಪ್ರಶ್ನಿಸಿದರು. ಆದರೆ ಸತ್ಯ ಅರಿವಾದ ಮೇಲೆ, ಹಿಂದಿನ ಟ್ವೀಟ್ ಡಿಲೀಟ್ ಮಾಡಿರುವುದಾಗಿ ಪೋಸ್ಟ್ ಮಾಡಿದರು.
ಆಲ್ಟ್ ನ್ಯೂಸ್‌ನ ಸಹಸಂಸ್ಥಾಪಕ ಝುಬೇರ್ ಬಲಪಂಥೀಯರಿಂದ ಈ ಹಿಂದೆ ಹಲವಾರು ಸಲ ನಿಂದನಾತ್ಮಕ ಟ್ರೋಲ್‌ಗೆ ಒಳಗಾದವರು. ಆದರೆ ಸತ್ಯವನ್ನು ಹೇಳುವಲ್ಲಿ ಯಾವತ್ತೂ ಹಿಂಜರಿದವರಲ್ಲ. ಭಾರತೀಯ ಸೇನಾ ಸಿಬ್ಬಂದಿಯಂತೆ ನಟಿಸುವ ಹಲವಾರು ಪಾಕಿಸ್ತಾನ ಪರ ಎಕ್ಸ್ ಖಾತೆಗಳನ್ನು ಪತ್ತೆ ಹಚ್ಚಿ, ಅವುಗಳ ನಿರ್ಬಂಧಕ್ಕೆ ಕಾರಣವಾಗಿದ್ದಾರೆ. “ಎಚ್ಚರಿಕೆ! ಇವು ಭಾರತೀಯ ಸೇನಾ ಸಿಬ್ಬಂದಿಯಂತೆ ನಟಿಸುವ ಪಾಕಿಸ್ತಾನಿ ಪ್ರೊಪಗಾಂಡ ಖಾತೆಗಳಾಗಿವೆ. ಅವರ ಟ್ವೀಟ್‌ಗಳನ್ನು ಅನುಮೋದಿಸಬೇಡಿ” ಎಂದು ಝಬೇರ್ ಮನವಿ ಮಾಡಿದ್ದಾರೆ.
ಇಷ್ಟೇ ಅಲ್ಲದೆ ಭಾರತೀಯ ಪತ್ರಕರ್ತರು ಮತ್ತು ಇತರೆ ಕೆಲವು ಎಕ್ಸ್ ಖಾತೆದಾರರು ಹಂಚುತ್ತಿದ್ದ ಸುಳ್ಳುಗಳತ್ತಲೂ ಜುಬೇರ್ ಬೊಟ್ಟು ಮಾಡಿದರು.
‘ನ್ಯೂಸ್ 18’ ಪತ್ರಕರ್ತೆ ರುಬಿಕಾ ಲಿಯಾಕತ್ ಅವರು ಕ್ಷಿಪಣಿ ದಾಳಿಗೆ ಒಳಗಾದ ಪ್ರದೇಶದ ವಿಡಿಯೊವೊಂದನ್ನು ಹಂಚಿಕೊಂಡು, “ಭಾರತೀಯ ಸೇನೆಯು ಒಂಬತ್ತು ಭಯೋತ್ಪಾದಕ ಸ್ಥಳಗಳಲ್ಲಿ ದ್ವಂಸ ಮಾಡಿದೆ” ಎಂದು ಬರೆದುಕೊಂಡರು. ಆದರೆ ಈ ವಿಡಿಯೊ ಗಾಜಾಕ್ಕೆ ಸಂಬಂಧಿಸಿದ್ದು ಎಂದು ಝುಬೇರ್ ತಿಳಿಸಿದರು. ರುಬಿಕಾ ಟ್ವೀಟ್ ಡಿಲೀಟ್ ಮಾಡಿಕೊಂಡಿದ್ದಾರೆ.
ತೆಲಂಗಾಣದ ಬಿಜೆಪಿ ಎಂಎಲ್‌ಎ ರಾಜಾ ಸಿಂಗ್ ಖಾತೆಯ ವಿಡಂಬನಾ ಹ್ಯಾಂಡಲ್ ಎಂದು ಗುರುತಿಸಬಹುದಾದರ ‘ಟೈಗರ್ ರಾಜ ಸಟೈರ್’ ಹ್ಯಾಂಡಲ್‌ನಲ್ಲಿ ಭೀಕರ ವಿಡಿಯೊವನ್ನು ಹಂಚಿಕೊಳ್ಳಲಾಗಿತ್ತು. “ಯಾರಾದರೂ ಪುರಾವೆ ಕೇಳಿದರೆ, ಅವರಿಗೆ ಇದನ್ನು ತೋರಿಸಿ…” ಎಂದು ಪೋಸ್ಟ್‌ನಲ್ಲಿ ಬರೆದುಕೊಳ್ಳಲಾಗಿತ್ತು. ಈ ವಿಡಿಯೊ ಸಂಬಂಧ ಪ್ರತಿಕ್ರಿಯಿಸಿದ ಝುಬೇರ್, “ಇದು ಇಸ್ರೇಲ್ ವಿಡಿಯೊ ಆಗಿದ್ದು, ಪಾಕಿಸ್ತಾನದಲ್ಲ” ಎಂದು ಸ್ಪಷ್ಟಪಡಿಸಿದರು.
ವಾಯುಪಡೆಯಿಂದ ಟಾರ್ಗೆಟ್ ಮಾಡಲಾದ ವಿಡಿಯೊವೆಂದು ಮನೀಶ್ ಕಶ್ಯಪ್ ಸನ್ ಆಫ್ ಬಿಹಾರ ಎಂಬ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. “ಇದು ಆರತಿಯಲ್ಲ, ಬೆಂಕಿ” ಎಂದು ಬಣ್ಣಿಸಲಾಗಿತ್ತು. ಆದರೆ ಇದೊಂದು ಕಂಪ್ಯೂಟರ್ ಜನರೇಟೆಡ್ ಸಿಮ್ಯುಲೇಷನ್ ವಿಡಿಯೊ ಎಂದು ಝುಬೇರ್ ಸತ್ಯ ಹೊರಗೆಳೆದರು.
ಕ್ಷಿಪಣಿ ದಾಳಿಯ ನಂತರ ಜನರ ಗುಂಪು ರಕ್ಷಣೆಗಾಗಿ ಓಡಿ ಹೋಗುತ್ತಿರುವ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡು ಸರ್ಕಾರವನ್ನು ಶ್ಲಾಘಿಸಿದ ಬಿಜೆಪಿ ಮುಖಂಡ ಜನಾರ್ದನ ಮಿಶ್ರಾ, “ಈ ಬಾರಿ, ನಾವು ಅವರನ್ನು ಅವರ ಮನೆಗಳಲ್ಲಿಯೇ ಹೊಡೆದಿದ್ದೇವೆ” ಎಂದು ಬರೆದುಕೊಂಡರು. ಆದರೆ ಈ ವಿಡಿಯೊ ಗಾಝಾಕ್ಕೆ ಸಂಬಂಧಿಸಿದ್ದು ಎಂದು ಜುಬೇರ್ ಸತ್ಯಶೋಧನೆ ಮಾಡಿದರು.
ಝುಬೇರ್ ಅವರ ಮೇಲೆ ಬಿಜೆಪಿ ಸರ್ಕಾರ ಏನೆಲ್ಲ ದಾಳಿಗಳನ್ನು ಮಾಡಿದೆ ಎಂಬುದು ಗೊತ್ತೇ ಇದೆ. ಫ್ಯಾಕ್ಟ್ ಚೆಕ್ ಕಾರಣಕ್ಕೆ ಅವರನ್ನು ನಿರಂತರವಾಗಿ ಒಂದಲ್ಲ ಒಂದು ಕಾರಣಕ್ಕೆ ಬಿಜೆಪಿ ಆಡಳಿತರೂಢ ರಾಜ್ಯಗಳಲ್ಲಿ ಝುಬೇರ್ ವಿರುದ್ಧ ಕೇಸ್‌ಗಳನ್ನು ಹಾಕಲಾಗಿದೆ. ಇದನ್ನು ನೆನಪಿಸಿರುವ ಟ್ವಿಟರ್ ಬಳಕೆದಾರರು, “ಜುಬೇರ್ ಅವರೇ ಸತ್ಯ ಶೋಧನೆಯನ್ನು ಪರಿಗಣಿಸಿ, ನಿಮ್ಮ ವಿರುದ್ಧದ ಎಲ್ಲ ಪ್ರಕರಣಗಳನ್ನು ಸರ್ಕಾರ ಹಿಂಪಡೆಯುತ್ತದೆಯೇ” ಎಂದು ಕೇಳಿದ್ದಾರೆ. ಅದಕ್ಕೆ ಝುಬೇರ್, “ಇದು ಸಂಭವಿಸುವುದಿಲ್ಲ. ಪ್ರಕರಣಗಳು ಇನ್ನೂ 10 ವರ್ಷಗಳವರೆಗೆ ಮುಂದುವರಿಯುತ್ತವೆ” ಎಂದು ತಮಾಷೆಯಾಗಿ ಹೇಳಿದ್ದಾರೆ. ಉತ್ತರ ಪ್ರದೇಶ ಸೇರಿದಂತೆ ಇತರ ರಾಜ್ಯಗಳಲ್ಲಿ ಝುಬೇರ್ ವಿರುದ್ಧ ಪ್ರಕರಣಗಳು ದಾಖಲಾಗಿರುವುದು ಮತ್ತು ಬೇಕಂತೆ ಈ ವ್ಯವಸ್ಥೆ ಝುಬೇರ್ ಅವರಿಗೆ ಕಿರುಕುಳ ಕೊಟ್ಟಿರುವುದು ಕಣ್ಣಮುಂದೆಯೇ ಇದೆ.
ಮಾಹಿತಿ ಕೃಪೆ: ನ್ಯೂಸ್ ಲಾಂಡ್ರಿ