ಇತ್ತೀಚಿಗೆ ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ವ್ಯಕ್ತಿಯೊಬ್ಬರ ಪ್ರಾಣ ಉಳಿಸಿದ್ದು, ಸ್ವತಃ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಉತ್ತರಾಖಂಡ್‌ನ ನೈನಿತಾಲ್‌ನ ಕಣಿವೆ ರಸ್ತೆಯಲ್ಲಿ ಮೊಹಮ್ಮದ್ ಶಮಿ ಚಲಿಸುತ್ತಿದ್ದ ಕಾರಿನ ಮುಂದೆಯೆ ಮತ್ತೊಂದು ಕಾರು ಅಪಘಾತಕ್ಕೀಡಾಗಿದೆ. ತಕ್ಷಣವೇ ಎಚ್ಚೆತ್ತ ಶಮಿ, ಗಾಯಾಳುವಿನ ಜೀವ ಉಳಿಸಿದ್ದಾರೆ. ಶಮಿ ಅಪಘಾತದ ಸಂಪೂರ್ಣ ವಿವರ ಮತ್ತು ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ದೃಶ್ಯದಲ್ಲಿ ಕಾರು ಪಲ್ಟಿಯಾಗಿ ಬಿದ್ದಿರುವುದು ಮತ್ತು ಶಮಿ ಸಂತ್ರಸ್ತನಿಗೆ ಸಹಾಯ ಮಾಡುವುದನ್ನು ಕಾಣಬಹುದು.
ಈ ಬಗ್ಗೆ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ಅವರು, “ಅವನು ತುಂಬಾ ಅದೃಷ್ಟಶಾಲಿ, ದೇವರು ಆತನಿಗೆ ಮರುಜನ್ಮ ನೀಡಿದ್ದಾನೆ. ಆತನ ಕಾರು ನೈನಿತಾಲ್ ಬಳಿಯ ಕಣಿವೆ ರಸ್ತೆಯಿಂದ ನನ್ನ ಕಾರಿನ ಮುಂದೆ ಬಿದ್ದು ಪಲ್ಟಿಯಾಯಿತು. ನಾವು ಅವರನ್ನು ಸುರಕ್ಷಿತವಾಗಿ ಹೊರಗೆ ಕರೆದೊಯ್ದೆವು” ಎಂದು ಶಮಿ ಬರೆದುಕೊಂಡಿದ್ದಾರೆ.
ಶಮಿ 2023 ರ ಏಕದಿನ ವಿಶ್ವಕಪ್‌ನಲ್ಲಿ ಅತ್ಯಂತ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಆಗಿದ್ದಾರೆ. ಕೇವಲ ಏಳು ಪಂದ್ಯಗಳಲ್ಲಿ 24 ವಿಕೆಟ್‌ಗಳನ್ನು ಪಡೆದಿದ್ದಾರೆ. ಸೆಮಿಫೈನಲ್‌ನಲ್ಲಿ 7 ವಿಕೆಟ್ ಗಳಿಸುವುದರ ಜೊತೆಗೆ ಎರಡು ಪಂದ್ಯಗಳಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶಮಿ ತಾವು ಆಡಿದ ಪಂದ್ಯಾವಳಿಯುದ್ದಕ್ಕೂ ತಮ್ಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ವಿಶ್ವಕಪ್‌ನಲ್ಲಿ ಮೂರು ಬಾರಿ 5 ಅಥವಾ 5ಕ್ಕಿಂತ ಹೆಚ್ಚು ವಿಕೆಟ್ ಪಡೆದ ಟೀಂ ಇಂಡಿಯಾದ ಮೊದಲ ಬೌಲರ್ ಎನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಟ್ಯಾಕ್ಸಿ ಚಾಲಕನ ಸಲಹೆಗೆ ಕೃತಜ್ಞತೆ ಸಲ್ಲಿಸಿದ ಕ್ರಿಕೆಟಿಗ ಜಾಂಟಿ ರೋಡ್ಸ್
ನವೆಂಬರ್ 19 ರ ಭಾನುವಾರದಂದು ನಡೆದ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ 6 ವಿಕೆಟ್ ಗೆಲುವು ಸಾಧಿಸಿವುದರೊಂದಿಗೆ 6 ಬಾರಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಶಮಿ ಈ ಪಂದ್ಯದಲ್ಲಿಯೂ ಪ್ರಮುಖ ಒಂದು ವಿಕೆಟ್ ಗಳಿಸಿದರಾದರೂ ಆಸೀಸ್ ಉತ್ತಮ ಬ್ಯಾಟಿಂಗ್‌ನಿಂದ ಭಾರತಕ್ಕೆ ವಿಶ್ವಕಪ್ ಕೈತಪ್ಪಿತು.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರ ಅರ್ಧಶತಕಗಳ ನೆರವಿನಿಂದ 240 ರನ್‌ಗಳನ್ನು ಕಲೆ ಹಾಕಿತು. ಆದಾಗ್ಯೂ, ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅದ್ಭುತ ಶತಕ ಬಾರಿಸಿ ಆಸೀಸ್‌ಗೆ ಸುಲಭ ಜಯದಲ್ಲಿ ಪ್ರಮುಖ ರೂವಾರಿಯಾದರು.