ದೇಶೀಯ ಲಘು ಯುದ್ಧ ವಿಮಾನ (ಎಲ್‌ಸಿಎ) ‘ತೇಜಸ್ ಫೈಟರ್ ಜೆಟ್’ ಹಾರಿಸಲು ಅನುಮತಿ ಪಡೆದುಕೊಂಡ ದೇಶದ ಮೊದಲ ಮಹಿಳಾ ಫೈಟರ್ ಪೈಲಟ್ ಎಂಬ ಖ್ಯಾತಿಗೆ ಸ್ಕ್ವಾಡ್ರನ್ ಲೀಡರ್ ಮೋಹನಾ ಸಿಂಗ್ ಪಾತ್ರರಾಗಿದ್ದಾರೆ. 8 ವರ್ಷಗಳಿಂದ ವಾಯುಪಡೆಯಲ್ಲಿ ಕೆಲಸ ಮಾಡುತ್ತಿದ್ದ ಮೋಹನಾ ಅವರು ಯುದ್ಧ ವಿಮಾನ ಹಾರಿಸಲು ಅವಕಾಶ ಪಡೆದುಕೊಂಡಿದ್ದಾರೆ.
ಅವರ ಸಾಧನೆಯು ಭಾರತೀಯ ಸೇನೆಯಲ್ಲಿ ಲಿಂಗ ಸಮಾನತೆ ಮತ್ತು ಸಬಲೀಕರಣದ ಹೆಜ್ಜೆಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತಿದೆ.
ವಾಯುಪಡೆಯು ಇತ್ತೀಚೆಗೆ ಜೋಧ್‌ಪುರದಲ್ಲಿ ಆಯೋಜಿಸಿದ್ದ ‘ತರಂಗ್ ಶಕ್ತಿ’ ತಾಲೀಮಿನಲ್ಲಿ ಮೂವರು ಮಹಿಳಾ ಪೈಲಟ್‌ಗಳಾದ ಮೋಹನಾ ಸಿಂಗ್, ಅವ್ನಿ ಚತುರ್ವೇದಿ ಮತ್ತು ಭಾವನಾ ಕಾಂತ್ ಭಾಗವಹಿಸಿದ್ದರು. ಇನ್ನು ಮುಂದೆ, ಈ ಮೂವರು Su-30MKi ಮತ್ತು LCA ತೇಜಸ್ ಯುದ್ಧ ವಿಮಾನವನ್ನು ಹಾರಿಸಲಿದ್ದಾರೆ. ಮೋಹನಾ ಅವರು LCA ತೇಜಸ್‌ನ ಪೈಲಟ್ ಆಗಿರಲಿದ್ದಾರೆ.
ಭಾರತೀಯ ವಾಯುಪಡೆಯಲ್ಲಿ ಪ್ರಸ್ತುತ ಸುಮಾರು 20 ಮಹಿಳಾ ಫೈಟರ್ ಪೈಲಟ್‌ಗಳಿದ್ದಾರೆ. ಅದಾಗ್ಯೂ, ಯುದ್ಧ ವಿಮಾನವನ್ನು ಹಾರಿಸಲು ಎಲ್ಲರಿಗೂ ಇನ್ನೂ ಅವಕಾಶ ದೊರೆತಿಲ್ಲ. ಸದ್ಯ, ಮೂವರು ಮಹಿಳಯರು ಮಾತ್ರವೇ ಯುದ್ಧ ವಿಮಾನ ಹಾರಿಸಲು ಅವಕಾಶ ಪಡೆದುಕೊಂಡಿದ್ದಾರೆ.
ರಾಜಸ್ಥಾನದ ಜುಂಜುನು ಮೂಲದ ಮೋಹನಾ ಸಿಂಗ್ ಜಿತರ್ವಾಲ್ ಅವರ ತಂದೆ ಪ್ರತಾಪ್ ಸಿಂಗ್ ಜಿತರ್ವಾಲ್ ಕೂಡ ಭಾರತೀಯ ವಾಯುಪಡೆಯಲ್ಲಿ ಮಾಸ್ಟರ್ ವಾರಂಟ್ ಅಧಿಕಾರಿಯಾಗಿದ್ದರು ಎಂಬುದು ಗಮನಾರ್ಹ.