ನನಗೆ ಜೆಇಇ ಪರೀಕ್ಷೆ ಬರೆಯಲು ಆಗುತ್ತಿಲ್ಲ ಎಂದು ಪತ್ರ ಬರೆದಿಟ್ಟು 18 ವರ್ಷದ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.
ನಿಹಾರಿಕಾ ಸೋಲಂಕಿ ಎಂಬ ಯುವತಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜನವರಿ 31ರಂದು ನಿಗದಿಯಾಗಿದ್ದ ಜಂಟಿ ಪ್ರವೇಶ ಪರೀಕ್ಷೆಗೆ (ಜೆಇಇ) ಆಕೆ ಸಿದ್ದತೆ ನಡೆಸುತ್ತಿದ್ದರು. ಆದರೆ, ಪರೀಕ್ಷೆ ಬರೆಯಲು ಆಗುವುದಿಲ್ಲ ಎಂದು ಆಕೆ ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾರೆ ಎಂದು ಕೋಟಾದ ಉಪ ಪೊಲೀಸ್ ವರಿಷ್ಠಾಧಿಕಾರಿ ಧರಂವೀರ್ ಸಿಂಗ್ ಹೇಳಿದ್ದಾರೆ.
“ಮಮ್ಮಿ ಪಪ್ಪಾ, ನಾನು ಜೆಇಇ ಬರೆಯಲು ಸಾಧ್ಯವಿಲ್ಲ. ಆದ್ದರಿಂದ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನಾನು ಸೋತಿದ್ದೇನೆ. ನಾನು ಕೆಟ್ಟ ಮಗಳು. ಕ್ಷಮಿಸಿ ಮಮ್ಮಿ ಪಪ್ಪಾ. ಇದು ಕೊನೆಯ ಆಯ್ಕೆ,” ಎಂದು ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದಾರೆ.
ಆಕೆಯ ತಂದೆ ಬ್ಯಾಂಕ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಮೂವರು ಹೆಣ್ಣು ಮಕ್ಕಳಲ್ಲಿ ನಿಹಾರಿಕಾ ಹಿರಿಯ ಮಗಳು. ಆಕೆ ಸಾವನ್ನಪ್ಪಿದಾಗ ಆಕೆಯ ತಂದೆ ಕೆಲಸಕ್ಕೆ ತೆರಳಿದ್ದರು. ಆಕೆಯ ತಾಯಿ ಮತ್ತು ಸೋದರಿಯರು ಅಜ್ಜಿಯ ಮನೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದಾಗ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಆಕೆಗೆ ಆಕೆಯ ತಾಯಿ ಕರೆ ಮಾಡಿದ್ದಾರೆ. ಆದರೆ, ಆಕೆ ಪ್ರತಿಕ್ರಿಯಿಸಿಲ್ಲ. ಹೀಗಾಗಿ, ಮನೆಗೆ ತೆರಳಿ ನೋಡಿದಾಗ, ಒಳಗಿನಿಂದ ಬಾಗಿಲು ‘ಲಾಕ್’ ಆಗಿತ್ತು. ಕಿಟಕಿಯಿಂದ ನೋಡಿದಾಗ, ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
“ನಿಹಾರಿಕಾ ತನ್ನ ಹೆಚ್ಚಿನ ಸಮಯವನ್ನು – ಪ್ರತಿದಿನ ಸುಮಾರು 8-9 ಗಂಟೆಗಳ ಕಾಲ – ಓದಿನಲ್ಲಿ ಕಳೆಯುತ್ತಿದ್ದಳು. ಅದರಲ್ಲಿ, ಸುಮಾರು ಆರು ಗಂಟೆಗಳ ಆಕೆ ತರಬೇತಿಗೆ ತೆರಳುತ್ತಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕೋಟಾದಲ್ಲಿ ಈ ವರ್ಷ ನಡೆದ ಎರಡನೇ ಆತ್ಮಹತ್ಯೆ ಇದು. ಕಳೆದ ವಾರ ಉತ್ತರ ಪ್ರದೇಶದ ಮೊರಾದಾಬಾದ್ ನಿವಾಸಿಯೊಬ್ಬರು ಕೋಟಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರೂ ಕೂಡ ಜೆಇಇಗೆ ತಯಾರಿ ನಡೆಸುತ್ತಿದ್ದರು. ಕಳೆದ ವರ್ಷ ನಗರದಲ್ಲಿ ಸುಮಾರು 30 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.
ಮೂರು ದಿನಗಳ ಹಿಂದೆಯಷ್ಟೇ ಕೋಟಾ ಜಿಲ್ಲಾಧಿಕಾರಿ ಡಾ.ರವೀಂದ್ರ ಗೋಸ್ವಾಮಿ ಅವರು ‘ಕಾಮ್ಯಾಬ್ ಕೋಟಾ’ ಎಂಬ ಹೊಸ ಯೋಜನೆಗೆ ಚಾಲನೆ ನೀಡಿದ್ದರು. ಆ ಯೋಜನೆ ಅಡಿಯಲ್ಲಿ ಅವರು ಪ್ರತಿ ಶುಕ್ರವಾರ ನಗರದ ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡು ಕೋಚಿಂಗ್ ಪಡೆಯುತ್ತಿರುವ ವಿದ್ಯಾರ್ಥಿಗಳೊಂದಿಗೆ ಭೋಜನ ಮಾಡುವುದರ ಜೊತೆಗೆ, ಜೆಇಇ ಮತ್ತು ನೀಟ್ ಆಕಾಂಕ್ಷಿಗಳು ಎದುರಿಸಬಹುದಾದ ಸಮಸ್ಯೆಗಳ ಕುರಿತು ಚರ್ಚಿಸುವುದು ಅವರ ಯೋಜನೆ ಉದ್ದೇಶವಾಗಿದೆ.