ಬಾವಿಗೆ ಬಿದ್ದಿದ್ದ ಮರಿ ಆನೆಯನ್ನು ಅದರ ತಾಯಿ ರಕ್ಷಿಸಿರುವ ಘಟನೆ ಕೇರಳ ಎರ್ನಾಕುಲಂ ಜಿಲ್ಲೆಯ ಅರಣ್ಯ ಪ್ರದೇಶದ ಪಕ್ಕದ ಹಳ್ಳಿಯೊಂದರಲ್ಲಿ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಲಯತ್ತೂರಿನ ಇಲ್ಲಿತ್ತೋಡ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬರ ಖಾಸಗಿ ಆಸ್ತಿಯಲ್ಲಿರುವ ಬಾವಿಗೆ ಮರಿ ಆನೆ ಅಚಾನಕ್ಕಾಗಿ ಬಿದ್ದಿತ್ತು. ಅದನ್ನು ತಾಯಿ ಆನೆಯು ಬಾವಿಯಿಂದ ಹೊರತಂದಿದೆ. ಬಳಿಕ, ತಮ್ಮೊಂದಿಗಿದ್ದ ಆನೆಗಳನ್ನು ಹಿಂಡನ್ನು ಸೇರಿಕೊಂಡಿವೆ ಎಂದು ವರದಿಯಾಗಿದೆ.
ಬುಧವಾರ ಬೆಳಗ್ಗೆ ಆನೆ ಮರಿ ಬಾವಿಗೆ ಬಿದ್ದಿತ್ತು. ಸ್ಥಳೀಯ ನಿವಾಸಿಗಳು, ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದಾಗ ತಾಯಿ ಆನೆಯು ತನ್ನ ಮರಿಯನ್ನು ಬಾವಿಯಿಂದ ಮೇಲಕ್ಕೆತ್ತಿತು. ಮರಿಯನ್ನು ರಕ್ಷಿಸಲಾಗಿದ್ದು, ಆನೆಗಳ ಹಿಂಡು ಕಾಡಿಗೆ ಮರಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏತನ್ಮಧ್ಯೆ, ಈ ಪ್ರದೇಶದಲ್ಲಿ ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸುವಲ್ಲಿ ಅರಣ್ಯಾಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ.
ಆನೆಗಳ ಹಾವಳಿ ತೀವ್ರವಾಗಿದ್ದು, ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.