- ಮಾಂಜ್ರಿಯಲ್ಲಿನ ಬಿಸ್ಲೇರಿ ಬಾಟಲ್ ವಾಟರ್ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಮೋನಿಕಾ
- ‘ನನ್ನ ಓದಿಗೆ ನನ್ನ ಮಗನೇ ನನಗೆ ಸ್ಪೂರ್ತಿ, ಆತನೇ ನನ್ನ ಶಿಕ್ಷಕ’ ಎಂದು ಹೆಮ್ಮೆ ಪಟ್ಟ ಮೋನಿಕಾ
ಸಾಧನೆ ಮಾಡಲು ಛಲ ಮತ್ತು ಗುರಿಯೊಂದಿದ್ದರೆ ಸಾಕು ಎಂಬುದನ್ನು 43 ವರ್ಷದ ಮಹಿಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಸಾಗಿ ಸಾಬೀತು ಪಡಿಸಿದ್ದಾರೆ. ಇವರ ಮಗ ಕೂಡ 10ನೇ ತರಗತಿಯಲ್ಲಿ ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿದ್ದು, ಅಮ್ಮ-ಮಗ ಇಬ್ಬರೂ ಒಟ್ಟಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಪಾಸಾಗಿದ್ದಾರೆ. ಅವರ ಮನೆಯಲ್ಲೀಗ ಸಂತಸ ಮನೆ ಮಾಡಿದೆ.
ಇತ್ತೀಚೆಗೆ ಮಹಾರಾಷ್ಟ್ರ ಮಾಧ್ಯಮಿಕ ಶಿಕ್ಷಣ ಮಂಡಳಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟ ಮಾಡಿದೆ. ತಾಯಿ ಮಗ ಇಬ್ಬರು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿದ್ದಾರೆ. ಅಮ್ಮ ಮೋನಿಕಾ (43) 51.8% ಅಂಕ ಗಳಿಸಿದ್ದರೇ, ಮಗ ಮಂಥನ್ ತೆಲಂ (15) 64% ಅಂಕ ಗಳಿಸಿದ್ದಾರೆ.
ಕಸ ಆಯುವ ಕೆಲಸ ಮಾಡುವ ಜತೆಗೆ ಪಾಸಾದ ಮಹಿಳೆ
ಮೋನಿಕಾ ಅವರ ಗಂಡ ಕಳೆದ 14 ವರ್ಷಗಳ ಹಿಂದೆ ಮಗನ ಜತೆಗೆ ಅವರನ್ನು ತೊರೆದಿದ್ದರು. ಈ ವೇಳೆ, ಮೋನಿಕಾ ಅವರು ಅವರ ತಾಯಿ ಹಾಗೂ ಸಹೋದರಿಯ ಜತೆಗೆ ವಾಸವಾಗಿದ್ದರು.
ಹೀಗಾಗಿ, ಮನೆಯನ್ನು ನಡೆಸುವ ಜವಾಬ್ದಾರಿ ಜತೆಗೆ ಮಗನ ವಿದ್ಯಾಭ್ಯಾಸದ ಹೊಣೆ ಮೋನಿಕಾ ಅವರ ತಲೆಯ ಮೇಲೆ ಇತ್ತು. ದುಡಿಮೆಗಾಗಿ ಮೋನಿಕಾ ಅವರು ಬೆಳಗ್ಗೆಯ ಸಮಯದಲ್ಲಿ ತ್ಯಾಜ್ಯ ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು. ಸಂಜೆ ಸಮಯದಲ್ಲಿ ಮನೆಗೆಲಸಗಳಿಗೆ ಹೋಗುತ್ತಿದ್ದರು. ಜತೆಗೆ ಮಾಂಜ್ರಿಯಲ್ಲಿನ ಬಿಸ್ಲೇರಿ ಬಾಟಲ್ ವಾಟರ್ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರು.
ಇಷ್ಟೆಲ್ಲ ನೋವುಗಳ ಮಧ್ಯೆ ಮೋನಿಕಾ ಅವರು ನಾನಾ ಉದ್ಯೋಗಗಳಿಗೆ ಅಗತ್ಯವಾಗಿ ಬೇಕಾದ ಕನಿಷ್ಠ ವಿದ್ಯಾರ್ಹತೆ 10ನೇ ತರಗತಿ ಎಂಬುದನ್ನು ಅರಿತಿದ್ದ ಅವರು 10ನೇ ಕ್ಲಾಸ್ ಪಾಸ್ ಮಾಡಲು ತೀರ್ಮಾನಿಸಿದ್ದರು. ಅದರಂತೆಯೇ ಮಗನ ಪುಸ್ತಕಗಳನ್ನೇ ಅಭ್ಯಾಸ ಮಾಡಿ, ಮಗನೊಂದಿಗೆ ಪರೀಕ್ಷೆ ಬರೆದು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಾದಕ ವ್ಯಸನ ಮುಕ್ತಿ ಕೇಂದ್ರದ ಮುಖ್ಯಸ್ಥನಿಂದಲೇ ಡ್ರಗ್ಸ್ ಮಾರಾಟ!
ಮೋನಿಕಾ ಮಗ ಮಂಥನ ಕೂಡ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದು, ವೈದ್ಯನಾಗುವ ಕನಸು ಕಟ್ಟಿದ್ದಾರೆ. ಮೋನಿಕಾ ಅವರು ಭವಿಷ್ಯದಲ್ಲಿ ನರ್ಸ್ ಆಗುವ ಕನಸು ಹೊಂದಿದ್ದು, 12 ನೇ ತರಗತಿ ಪರೀಕ್ಷೆಗಳಿಗೆ ತಯಾರಿ ಮಾಡುತ್ತಿದ್ದಾರೆ. ನನ್ನ ಓದಿಗೆ ನನ್ನ ಮಗನೇ ಸ್ಪೂರ್ತಿ, ಆತನೇ ನನ್ನ ಶಿಕ್ಷಕ ಎಂದು ಮೋನಿಕಾ ಹೆಮ್ಮೆಯಿಂದ ಹೇಳಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಕಸ ಆಯುವವರ ಮಕ್ಕಳಿಗಾಗಿ ಕಾಗದ ಕಚ್ ಪತ್ರಾ ಕಷ್ಟಕಾರಿ ಪಂಚಾಯತ್ (ಕೆಕೆಪಿಕೆಪಿ) ಸಹಯೋಗದೊಂದಿಗೆ ಮಹಾರಾಷ್ಟ್ರ ರಾಜ್ಯ ಪ್ರೌಢ ಮತ್ತು ಉನ್ನತ ಪ್ರೌಢ ಶಿಕ್ಷಣ ಮಂಡಳಿ (ಎಂಎಸ್‌ಬಿಎಸ್‌ಎಚ್‌ಎಸ್‌ಇ) ನಡೆಸಿದ ಪರೀಕ್ಷೆಯಲ್ಲಿ ತಾಯಿ-ಮಗ ಉತ್ತಮ ಅಂಕಗಳನ್ನು ಗಳಿಸಿದ್ದಾರೆ.