ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಹಾಕಿ 5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟ ಆರೋಪದ ಮೇಲೆ ಹಾವೇರಿಯ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಬುಧವಾರ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಮೂಲತಃ ರಾಜಸ್ಥಾನದ ಜಲೋರ್‌ನ ನಿವಾಸಿಯಾದ 35 ವರ್ಷದ ಆರೋಪಿ ಭೀಕಾರಾಂ ಜಲರಾಮ್ ಬಿಷ್ಣೋಯ್ ಹಾವೇರಿಯಲ್ಲಿ ನೆಲೆಸಿದ್ದು ಬುಧವಾರ ವರ್ಲಿ ಪೊಲೀಸ್ ಠಾಣೆಯ ತಂಡ ವಿಚಾರಣೆ ನಡೆಸಿ ಆತನ ಬಂಧನ ಮಾಡಿದೆ.
ಬಿಷ್ಣೋಯ್ ಸೋಮವಾರ ರಾತ್ರಿ ಮುಂಬೈ ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಮ್‌ನ ವಾಟ್ಸಾಪ್ ಸಹಾಯವಾಣಿಗೆ ಬೆದರಿಕೆ ಸಂದೇಶ ಕಳುಹಿಸಿದ್ದ ಆರೋಪವಿದೆ.

ಇದನ್ನು ಓದಿದ್ದೀರಾ? ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಮತ್ತೊಂದು ಕೊಲೆ ಬೆದರಿಕೆ, ಪೊಲೀಸ್ ತನಿಖೆ ಆರಂಭ
“ಸಲ್ಮಾನ್ ಖಾನ್ ಬದುಕಿರಬೇಕಾದರೆ ನಮ್ಮ ದೇವಸ್ಥಾನಕ್ಕೆ ಹೋಗಿ ಕ್ಷಮೆ ಕೇಳಬೇಕು ಅಥವಾ 5 ಕೋಟಿ ರೂಪಾಯಿ ನೀಡಬೇಕು. ಹಾಗೆ ಮಾಡದಿದ್ದರೆ ಆತನನ್ನು ಸಾಯಿಸುತ್ತೇವೆ. ನಮ್ಮ ಗ್ಯಾಂಗ್ ಇನ್ನೂ ಸಕ್ರಿಯವಾಗಿದೆ” ಎಂದು ಬೆದರಿಕೆ ಸಂದೇಶದಲ್ಲಿ ಬರೆಯಲಾಗಿದೆ.
ಸಂದೇಶ ಕಳುಹಿಸಿದವನು ತಾನು ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಎಂದು ಹೇಳಿಕೊಂಡಿದ್ದ. ಆರೋಪಿ ವಿರುದ್ಧ ವರ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ತನಿಖೆಯ ಸಮಯದಲ್ಲಿ, ಆರೋಪಿಯು ಕರ್ನಾಟಕದಲ್ಲಿರುವುದು ಬೆಳಕಿಗೆ ಬಂದಿದೆ. ಆತನ ಬಂಧನಕ್ಕಾಗಿ ವರ್ಲಿ ಪೊಲೀಸರ ತಂಡ ಹಾವೇರಿಗೆ ಬಂದಿದೆ. ಮಂಗಳವಾರ ತಡರಾತ್ರಿ ಬಿಷ್ಣೋಯ್ ಬಂಧನ ಮಾಡಲಾಗಿದ್ದು ವಿಚಾರಣೆಯ ನಂತರ ವರ್ಲಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
