ಸಮುದ್ರ ಮಟ್ಟದ ಏರಿಕೆಯಿಂದಾಗಿ ಮುಂಬೈ ಈ ಶತಮಾನದ ಅಂತ್ಯದ ವೇಳೆಗೆ ಶಾಶ್ವತವಾಗಿ ಮುಳುಗಡೆಯಾಗುವ ಅಪಾಯವನ್ನು ಎದುರಿಸುತ್ತಿದೆ. ಈ ಗಂಭೀರ ಆತಂಕದ ಹಿನ್ನೆಲೆಯಲ್ಲಿ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ನಗರದ ಸಮುದ್ರ ಮಟ್ಟದ ಏರಿಕೆಯ ಅಪಾಯದ ಕುರಿತು ಹೊಸ ಮೌಲ್ಯಮಾಪನವನ್ನು ಪ್ರಾರಂಭಿಸಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ನಡೆಯುತ್ತಿರುವ ಎರಡನೇ ಅತಿದೊಡ್ಡ ಸಮೀಕ್ಷೆ ಇದಾಗಿದೆ.
ಪ್ರಸ್ತುತ ನಡೆಯುತ್ತಿರುವ ಈ ಮೌಲ್ಯಮಾಪನವು ಮುಂಬೈನ 149-ಕಿಲೋಮೀಟರ್ ಉದ್ದದ ಕರಾವಳಿ ತೀರದ ಸೂಕ್ಷ್ಮ ಪ್ರದೇಶಗಳನ್ನು ನಕ್ಷೆ ಮಾಡಲಿದೆ. ಕರಾವಳಿ ಪ್ರದೇಶದ ಅಭಿವೃದ್ಧಿ, ಭೂ ಬಳಕೆಯ ಬದಲಾವಣೆಗಳು ಮತ್ತು ಹವಾಮಾನ ವೈಪರೀತ್ಯಗಳು ನಗರದ ಭೌಗೋಳಿಕ ಅಪಾಯವನ್ನು ಹೇಗೆ ಹೆಚ್ಚಿಸಿವೆ ಎಂಬುದನ್ನು ಇದು ಅಧ್ಯಯನ ಮಾಡಲಿದ್ದು, ಮುಂದಿನ ವರ್ಷ ವರದಿ ಬಿಡುಗಡೆಯಾಗಲಿದೆ. ಈ ಮೂಲಕ ಅಪಾಯದಲ್ಲಿರುವ ಜನವಸತಿ ಪ್ರದೇಶಗಳನ್ನು ಗುರುತಿಸಲಾಗುತ್ತದೆ.
2022ರ ‘ಮುಂಬೈ ಹವಾಮಾನ ಕ್ರಿಯಾ ಯೋಜನೆ’ (MCAP) ವರದಿಯು, 2050ರ ವೇಳೆಗೆ ಮುಂಬೈನ ದ್ವೀಪ ನಗರದ ಶೇಕಡಾ 80ರಷ್ಟು ಭಾಗ ಮುಳುಗಡೆಯಾಗಬಹುದು ಎಂದು ಎಚ್ಚರಿಸಿತ್ತು. ಇತ್ತೀಚಿನ ವಿಶ್ವಸಂಸ್ಥೆಯ ವರದಿಯೂ ಸಹ 2024ರಲ್ಲಿ ಜಾಗತಿಕ ಸಮುದ್ರ ಮಟ್ಟ ದಾಖಲೆಯ 5.9 ಎಂಎಂ (mm) ನಷ್ಟು ಏರಿಕೆಯಾಗಿದೆ ಹಾಗೂ 2100ರ ವೇಳೆಗೆ ಕನಿಷ್ಠ 0.5 ಮೀಟರ್‌ಗಳಷ್ಟು ಹೆಚ್ಚಾಗಲಿದೆ ಎಂಬ ಮುನ್ಸೂಚನೆ ನೀಡಿದ್ದು, ಇದು ಆತಂಕವನ್ನು ಇಮ್ಮಡಿಗೊಳಿಸಿದೆ.
ಕಳೆದ ಐದು ವರ್ಷಗಳಲ್ಲಿ ಮುಂಬೈನ ಕರಾವಳಿಯಲ್ಲಿ ಬೃಹತ್ ಬದಲಾವಣೆಗಳಾಗಿವೆ. ‘ಕೋಸ್ಟಲ್ ರೋಡ್’ ನಿರ್ಮಾಣದಿಂದಾಗಿ 100 ಹೆಕ್ಟೇರ್‌ಗೂ ಹೆಚ್ಚು ಅರೇಬಿಯನ್ ಸಮುದ್ರ ಪ್ರದೇಶವನ್ನು ಮರುಪಡೆಯಲಾಗಿದೆ ಮತ್ತು ಪೂರ್ವದಲ್ಲಿ ಉಪ್ಪಿನ ಗದ್ದೆಗಳನ್ನು (salt pan lands) ಅಭಿವೃದ್ಧಿಗಾಗಿ ಗುರ್ತಿಸಲಾಗಿದೆ. ಇದರ ಜೊತೆಗೆ, ಅನಿಯಮಿತ ಭಾರಿ ಮಳೆ ಹಾಗೂ ಸಮುದ್ರದ ಬೃಹತ್ ಅಲೆಗಳು ಏಕಕಾಲದಲ್ಲಿ ಅಪ್ಪಳಿಸುತ್ತಿರುವುದರಿಂದ ಮುಂಬೈ ನಗರಕ್ಕೆ ಮತ್ತು ಜನಸಾಮಾನ್ಯರಿಗೆ ಪ್ರವಾಹದ ಭೀತಿ ಇನ್ನಷ್ಟು ಹೆಚ್ಚಾಗಿದೆ.
ಐಐಟಿಎಂ (IITM) ಸಂಸ್ಥೆಯ ಹವಾಮಾನ ವಿಜ್ಞಾನಿ ರಾಕ್ಸಿ ಮ್ಯಾಥ್ಯೂ ಕೋಲ್ ಅವರ ಪ್ರಕಾರ, ಮುಂಬೈನ ಭೌಗೋಳಿಕ ರಚನೆಯೇ ನಗರವನ್ನು ದುರ್ಬಲಗೊಳಿಸಿದೆ. ಪ್ರವಾಹ ಮತ್ತು ಬಲವಾದ ಗಾಳಿಯಿಂದ ರಕ್ಷಿಸುವಲ್ಲಿ ಮ್ಯಾಂಗ್ರೋವ್ ಕಾಡುಗಳು ಮತ್ತು ಕರಾವಳಿ ಜೌಗು ಪ್ರದೇಶಗಳು ‘ನಗರದ ಶ್ವಾಸಕೋಶ’ಗಳಂತೆ ಕಾರ್ಯನಿರ್ವಹಿಸುತ್ತವೆ. ಈ ಪ್ರದೇಶಗಳನ್ನು ಸಂರಕ್ಷಿಸುವುದು ಸಮುದ್ರ ಮಟ್ಟದ ಏರಿಕೆಯ ವಿರುದ್ಧ ಹೋರಾಡಲು ಮತ್ತು ಜೈವಿಕ ವೈವಿಧ್ಯತೆಯನ್ನು ಕಾಪಾಡಲು ಅತ್ಯಂತ ನಿರ್ಣಾಯಕವಾಗಿದೆ.
ಎಂಸಿಎಪಿ (MCAP) ವರದಿಯು 2008 ರಿಂದ 2021ರ ನಡುವೆ ಮ್ಯಾಂಗ್ರೋವ್ ಹೊದಿಕೆಯಲ್ಲಿ ಆದ ಬದಲಾವಣೆಗಳನ್ನು ದಾಖಲಿಸಿದೆ. ಮಣ್ಣಿನ ಸವೆತ ಮತ್ತು ಹೂಳು ತುಂಬುವಿಕೆಯಿಂದಾಗಿ ಸುಮಾರು 325 ಹೆಕ್ಟೇರ್ ದಟ್ಟವಾದ ಮ್ಯಾಂಗ್ರೋವ್ ಪ್ರದೇಶವು ಕರಗಿ ವಿರಳವಾಗಿದೆ ಅಥವಾ ಮಡ್‌ಫ್ಲಾಟ್ (mudflats) ಆಗಿ ಮಾರ್ಪಟ್ಟಿದೆ. ಆದರೂ, ಇದೇ ಅವಧಿಯಲ್ಲಿ ನಗರದ ಸುಮಾರು 305 ಹೆಕ್ಟೇರ್ ಪ್ರದೇಶದಾದ್ಯಂತ ಮ್ಯಾಂಗ್ರೋವ್ ಸಾಂದ್ರತೆಯು ಹೆಚ್ಚಾಗಿದೆ ಎಂಬುದು ಗಮನಾರ್ಹ ಅಂಶವಾಗಿದೆ.





