ರೈತರು ಹಾಗೂ ದುಡಿಯುವ ವರ್ಗದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಘಟನೆಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಐಕ್ಯ ಹೋರಾಟದ ಶಕ್ತಿಯನ್ನು ಕಟ್ಟಬೇಕಿದೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಕರೆ ನೀಡಿದರು.
ಮೈಸೂರಿನ ಬನವಾಸಿ ತೋಟದಲ್ಲಿ ಭಾನುವಾರ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ನಡೆದ ‘ಪದಾಧಿಕಾರಿಗಳಿಗೆ ಒಂದು ದಿನದ ಅಧ್ಯಯನ ಶಿಬಿರ’ದಲ್ಲಿ ‘ಐಕ್ಯ ಹೋರಾಟದ ಅನಿವಾರ್ಯತೆ’ ಕುರಿತು ಅವರು ಮಾತನಾಡಿದರು.
ಇಂದಿನ ಸಮಾಜ, ಸರ್ಕಾರ ಮತ್ತು ಹಲವು ಚಳವಳಿಗಳು ದಾರಿ ತಪ್ಪುತ್ತಿರುವ ಸಂದರ್ಭದಲ್ಲಿ ಜನರ ಸಂಕಷ್ಟಗಳಿಗೆ ದಾರಿ ತೋರಿಸುವ ಶಕ್ತಿ ಸಂಘಟಿತ ಹೋರಾಟಕ್ಕಿದೆ. ಕಾನೂನುಗಳು ನಿರಂತರವಾಗಿ ಬದಲಾಗುತ್ತಿದ್ದರೂ ಜನರ ಸಂಕಷ್ಟಗಳನ್ನು ಕೇಳುವವರು ಮತ್ತು ಸರ್ಕಾರವನ್ನು ಪ್ರಶ್ನಿಸುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಹೋರಾಟದ ಮೂಲಕವೇ ಜನರ ಧ್ವನಿಯನ್ನು ಪ್ರಬಲಗೊಳಿಸಬೇಕಾಗಿದೆ ಎಂದು ಹೇಳಿದರು.
ರೈತ ಚಳವಳಿಗೆ ದೊಡ್ಡ ಕೊಡುಗೆ ನೀಡಿರುವ ರೈತ ಸಂಘ
ಕರ್ನಾಟಕದ ರೈತ ಚಳವಳಿಯು ಹೋರಾಟದ ಇತಿಹಾಸದಲ್ಲಿ ಮಹತ್ವದ ಪಾತ್ರ ವಹಿಸಿದೆ. ರೈತರ ಸಮಸ್ಯೆಗಳನ್ನು ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ತರುವಲ್ಲಿ ರೈತ ಸಂಘಟನೆಗಳ ಪಾತ್ರ ದೊಡ್ಡದು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ರೈತರ ಉಳಿದಿರುವ ಪ್ರಮುಖ ಆಸ್ತಿ ಭೂಮಿಯೇ ಆಗಿದ್ದು, ವಿವಿಧ ಕಾರಣಗಳಿಂದ ರೈತರ ಭೂಮಿ ಕಬಳಿಕೆಗೆ ಒಳಗಾಗುತ್ತಿರುವ ಆತಂಕವಿದೆ ಎಂದು ನೂರ್ ಶ್ರೀಧರ್ ಹೇಳಿದರು.
ಕಾರ್ಪೊರೇಟ್ ವಲಯಕ್ಕೆ ಸರ್ಕಾರಗಳು ಹಲವು ರೀತಿಯಲ್ಲಿ ನೆರವು ನೀಡುತ್ತಿವೆ. ದೊಡ್ಡ ಬಂಡವಾಳಶಾಹಿಗಳ ಸಾಲ ಮನ್ನಾ ಮಾಡುವ ವ್ಯವಸ್ಥೆಯಲ್ಲಿ ರೈತರ ಸಾಲ ಮನ್ನಾ ಏಕೆ ಸಾಧ್ಯವಾಗುವುದಿಲ್ಲ ಎಂಬ ಪ್ರಶ್ನೆಯನ್ನು ರೈತ ಚಳವಳಿ ನಿರಂತರವಾಗಿ ಎತ್ತಬೇಕಾಗಿದೆ. ರೈತರು ಬೇಕಿಲ್ಲ, ಅವರ ಭೂಮಿ ಮತ್ತು ಮತ ಮಾತ್ರ ಬೇಕು ಎನ್ನುವ ರೀತಿಯ ರಾಜಕೀಯ-ಆರ್ಥಿಕ ವ್ಯವಸ್ಥೆಯನ್ನು ಪ್ರಶ್ನಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ದೇವನಹಳ್ಳಿ ಹೋರಾಟ ನೀಡಿದ ಪಾಠ
ದೇವನಹಳ್ಳಿ ಭೂಸ್ವಾಧೀನದಂತಹ ಹೋರಾಟಗಳು ಒಗ್ಗಟ್ಟಿನ ಶಕ್ತಿ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಉದಾಹರಣೆ. ಅಂತಿಮ ಅಧಿಸೂಚನೆ ಹೊರಬಂದ ನಂತರವೂ ಜನರ ಒಗ್ಗಟ್ಟಿನ ಹೋರಾಟವು ಸರ್ಕಾರದ ಮೇಲೆ ಒತ್ತಡ ಸೃಷ್ಟಿಸಿತು. ನ್ಯಾಯಾಲಯದ ಕಾನೂನು ಪ್ರಕ್ರಿಯೆಗೂ ಮೀರಿದ ಜನಶಕ್ತಿಯ ಒತ್ತಡವನ್ನು ಪ್ರಜಾಸತ್ತಾತ್ಮಕ ಹೋರಾಟಗಳು ನಿರ್ಮಿಸಬಲ್ಲವು ಎಂದು ಅವರು ಹೇಳಿದರು.
“ಹೋರಾಟ ಸಂಕೇತಿಕವಾಗಿರಬಾರದು; ಅದು ತಾರ್ಕಿಕ ಅಂತ್ಯ ಕಾಣುವವರೆಗೆ ಸಾಗಬೇಕು. ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆ ಮುಗಿಬಂದರೂ ಎದುರಿಸುವಷ್ಟು ಗಟ್ಟಿಯಾದ ಸಂಘಟನಾ ಶಕ್ತಿ ಹೋರಾಟಕ್ಕಿರಬೇಕು. ಗೆಲುವಿಗೆ ಮುಖ್ಯ ಕಾರಣ ಒಗ್ಗಟ್ಟು ಮತ್ತು ಗಟ್ಟಿ ತೀರ್ಮಾನ.”
ದೇವನಹಳ್ಳಿ ಹೋರಾಟ ಒಂದು ಪ್ರದೇಶಕ್ಕೆ ಸೀಮಿತವಾಗದೆ ರಾಜ್ಯದ ಜನರ ಹೋರಾಟವಾಗಿ ರೂಪುಗೊಂಡಿದ್ದು ಅದರ ಪ್ರಮುಖ ಶಕ್ತಿ ಎಂದು ಅವರು ವಿವರಿಸಿದರು. ಜನಮಾನಸವನ್ನು ಹಿಡಿದಿಟ್ಟುಕೊಂಡು, ಜನರ ಬೆಂಬಲವನ್ನು ಗಳಿಸಿ ಗೆಲ್ಲುವ ಹೋರಾಟಗಳನ್ನು ರೂಪಿಸುವ ಅಗತ್ಯವಿದೆ ಎಂದರು.
ದೆಹಲಿ ರೈತ ಹೋರಾಟ: ಒಗ್ಗಟ್ಟಿನ ಮಾದರಿ
ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಡೆದ ದೆಹಲಿ ರೈತ ಹೋರಾಟವನ್ನು ಉಲ್ಲೇಖಿಸಿದ ನೂರ್ ಶ್ರೀಧರ್, ಕೋವಿಡ್ ಸಂಕಷ್ಟದ ನಡುವೆಯೂ ರೈತರು ನಡೆಸಿದ ದೀರ್ಘ ಹೋರಾಟವು ಐಕ್ಯತೆಯ ಮಹತ್ವವನ್ನು ತೋರಿಸಿತು ಎಂದರು.
ವಿಶೇಷವಾಗಿ ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳ ರೈತ ಸಂಘಟನೆಗಳು ಒಗ್ಗೂಡಿ ತೆಗೆದುಕೊಂಡ ದೃಢ ನಿರ್ಧಾರ ಹೋರಾಟಕ್ಕೆ ನಿರ್ಣಾಯಕ ಶಕ್ತಿ ನೀಡಿತು. ‘ದೆಹಲಿಗೆ ತಲುಪಿದ ಮೇಲೆ ಗೆಲ್ಲದೆ ಹಿಂದಿರುಗುವುದಿಲ್ಲ’ ಎಂಬ ಗಟ್ಟಿತನವೇ ಹೋರಾಟದ ತೀವ್ರತೆಯನ್ನು ಹೆಚ್ಚಿಸಿತು. ಆರಂಭಿಕ ಲೆಕ್ಕಾಚಾರಗಳನ್ನು ಮೀರಿ ಸಾವಿರಾರು, ಲಕ್ಷಾಂತರ ಜನರು ಹೋರಾಟದೊಂದಿಗೆ ಸೇರಿಕೊಂಡಾಗ ಅದು ಇತಿಹಾಸ ತಡೆಯಲಾಗದ ಚಳವಳಿಯಾಗಿ ರೂಪುಗೊಂಡಿತು ಎಂದು ಹೇಳಿದರು.
ರೈತರ ಹೋರಾಟ ದೇಶದ ಗಡಿಗಳನ್ನು ಮೀರಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಲು ಮಾಧ್ಯಮಗಳ ಬಳಕೆ ಹಾಗೂ ವಿವಿಧ ವರ್ಗಗಳ ಜನರ ಒಳಗೊಳ್ಳುವಿಕೆಯೂ ಪ್ರಮುಖ ಕಾರಣವಾಗಿತ್ತು. ಹೋರಾಟದ ವಿಚಾರವನ್ನು ಜನರಿಗೆ ತಲುಪಿಸುವಲ್ಲಿ ಮಾಧ್ಯಮಗಳು ನಿರ್ವಹಿಸುವ ಪಾತ್ರ ಅತ್ಯಂತ ಮಹತ್ವದ್ದು ಎಂದು ಅವರು ಹೇಳಿದರು.
ಹೋರಾಟಕ್ಕೆ ಒಳಗೊಳ್ಳುವಿಕೆಯೇ ಬಲ
ಒಂದು ಸಂಘಟನೆ ಮಾತ್ರ ಹೋರಾಡುವುದರಿಂದ ದೊಡ್ಡ ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ. ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು, ಪ್ರಗತಿಪರ ಸಂಘಟನೆಗಳು ಹಾಗೂ ಜನಪರ ಶಕ್ತಿಗಳನ್ನು ಸಾಧ್ಯವಾದಷ್ಟು ಒಳಗೊಳ್ಳುವ ಮೂಲಕ ಹೋರಾಟದ ವ್ಯಾಪ್ತಿಯನ್ನು ವಿಸ್ತರಿಸಬೇಕಿದೆ ಎಂದು ನೂರ್ ಶ್ರೀಧರ್ ಹೇಳಿದರು.
ಪ್ರತಿ ಆಂದೋಲನದಲ್ಲೂ ಚೈತನ್ಯ, ಸಂಘಟನಾ ಶಕ್ತಿ ಮತ್ತು ಗೆಲ್ಲುವ ಛಲ ಕಾಣಬೇಕು. ರೈತ ಶಕ್ತಿಯು ಅಧಮ್ಯವಾದದ್ದು. ಸರ್ಕಾರವೇ ಜನರ ಮುಂದೆ ಮಂಡಿಯೂರಿ ಮಾತುಕತೆಗೆ ಬರುವಂತಹ ಪರಿಸ್ಥಿತಿಯನ್ನು ಸೃಷ್ಟಿಸುವ ಸಾಮರ್ಥ್ಯ ರೈತ ಹೋರಾಟಕ್ಕಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಪ್ರಸ್ತುತ ರಾಜಕೀಯ ವ್ಯವಸ್ಥೆಗಳಿಗೆ ಪರ್ಯಾಯವಾಗಿ ಜನಪರ ಹೋರಾಟದ ಮೂರನೇ ಶಕ್ತಿಯನ್ನು ರೂಪಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ ಅವರು, ಅಂತಹ ಶಕ್ತಿಯನ್ನು ರೂಪಿಸುವ ಸಾಮರ್ಥ್ಯ ಸಮಾಜದಲ್ಲಿದೆ. ಆದರೆ ಅದಕ್ಕೆ ಸಂಘಟನೆಗಳ ಇಚ್ಛಾಶಕ್ತಿ, ಪರಸ್ಪರ ಒಳಗೊಳ್ಳುವಿಕೆ ಮತ್ತು ದೊಡ್ಡ ಹೋರಾಟದ ಮೂಲಕ ಒಂದಾಗುವ ದೃಢಸಂಕಲ್ಪ ಅಗತ್ಯ ಎಂದು ಹೇಳಿದರು.
ಈ ವಿಶೇಷ ವೀಡಿಯೊ ವೀಕ್ಷಿಸಿ : https://www.youtube.com/watch?v=b9DxzsqEiYo&t=75s
“ರಾಜ್ಯದಲ್ಲಿ ಪರ್ಯಾಯ ಹೋರಾಟದ ಶಕ್ತಿಯನ್ನು, ಮೂರನೇ ಶಕ್ತಿಯನ್ನು ರೂಪಿಸುವ ಸಾಮರ್ಥ್ಯ ನಮ್ಮಲ್ಲಿದೆ. ಆ ಶಕ್ತಿಗೆ ಇಚ್ಛಾಶಕ್ತಿ ಮೂಡಿಸಿಕೊಂಡು, ದೊಡ್ಡ ಹೋರಾಟದ ಮೂಲಕ ಒಂದಾಗಬೇಕು. ರೈತರ ಶಕ್ತಿ ಅಧಮ್ಯ ಶಕ್ತಿ; ಅದನ್ನು ಒಗ್ಗಟ್ಟಾಗಿ ಕಟ್ಟಿದರೆ ವ್ಯವಸ್ಥೆಯನ್ನೇ ಪ್ರಶ್ನಿಸುವ ಸಾಮರ್ಥ್ಯ ಹೊಂದಿದೆ” ಎಂದು ನೂರ್ ಶ್ರೀಧರ್ ಹೇಳಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? 43.81 ಲಕ್ಷ ನೋಟಿಸ್: 7.31 ಲಕ್ಷ ಮಾತ್ರ ವಿತರಣೆ; ‘SIR’ ಪ್ರಕ್ರಿಯೆಯ ವೇಗಕ್ಕೆ ಸವಾಲು
ಶಿಬಿರದಲ್ಲಿ ರೈತ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಹಂತಗಳ ಮುಖಂಡರು ಭಾಗವಹಿಸಿ, ರೈತ ಚಳವಳಿಯ ಮುಂದಿನ ದಿಕ್ಕು, ಸಂಘಟನಾ ಬಲವರ್ಧನೆ ಮತ್ತು ಐಕ್ಯ ಹೋರಾಟದ ಅಗತ್ಯತೆ ಕುರಿತು ಚರ್ಚಿಸಿದರು.





