ಮುಂಬೈನ 80 ವರ್ಷದ ವ್ಯಕ್ತಿಗೆ ನಾಲ್ವರು ಮಹಿಳೆಯರು ಆನ್‌ಲೈನ್ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸುಮಾರು 21 ತಿಂಗಳುಗಳಲ್ಲಿ 734 ಆನ್‌ಲೈನ್ ವಹಿವಾಟುಗಳ ಮೂಲಕ 9 ಕೋಟಿ ರೂಪಾಯಿಯನ್ನು ಎಗರಿಸಲಾಗಿದೆ ಎಂದು ವರದಿಯಾಗಿದೆ.
2023ರ ಏಪ್ರಿಲ್ ತಿಂಗಳಲ್ಲಿ ಈ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಶಾರ್ವಿ ಎಂಬ ಮಹಿಳೆಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ಅದಾದ ಕೆಲವು ದಿನಗಳ ನಂತರ, ವೃದ್ಧನಿಗೆ ಶಾರ್ವಿ ಎಂಬ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿದ್ದು ಅದನ್ನು ಅಕ್ಸೆಪ್ಟ್ ಮಾಡಿದ್ದರು. ಅದಾದ ಬಳಿಕ ಇಬ್ಬರೂ ಚಾಟ್ ಮಾಡಿ, ಫೋನ್ ನಂಬರ್ ಪಡೆದುಕೊಂಡಿದ್ದರು. ವಾಟ್ಸಾಪ್‌ನಲ್ಲಿ ಮೆಸೇಜ್ ಮಾಡಲು ಆರಂಭಿಸಿದ್ದರು.
ಇದನ್ನು ಓದಿದ್ದೀರಾ? ಬೆಳಗಾವಿ : ಸೈಬರ್ ವಂಚನೆ ಮೂವರು ಯುವಕರ ಬಂಧನ
ಶಾರ್ವಿ 80 ವರ್ಷದ ವೃದ್ಧನಿಗೆ ತಾನು ತನ್ನ ಪತಿಯಿಂದ ದೂರವಾಗಿ ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿರುವುದಾಗಿ ಹೇಳಿದ್ದು, ತನ್ನ ಮಕ್ಕಳಿಗೆ ಆರಾಮವಿಲ್ಲ ಎಂದು ಹೇಳಿ ಕ್ರಮೇಣವಾಗಿ ಹಣ ಕೇಳಲು ಆರಂಭಿಸಿದ್ದಾಳೆ. ಅದಾದ ಬಳಿಕ ಕವಿತಾ ಎಂಬ ಮಹಿಳೆ ಕೂಡ ಆ ವ್ಯಕ್ತಿಗೆ ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಲು ಪ್ರಾರಂಭಿಸಿದಳು. ಶಾರ್ವಿಯ ಪರಿಚಯಸ್ಥಳು ಎಂದು ಹೇಳಿಕೊಂಡಳು. ಅಶ್ಲೀಲ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸಿದಳು. ಬಳಿಕ ಹಣ ಕೇಳಲು ಪ್ರಾರಂಭಿಸಿದಳು ಎಂದು ವೃದ್ಧ ದೂರಿನಲ್ಲಿ ತಿಳಿಸಿದ್ದಾರೆ.
ಅದಾದ ಬಳಿಕ 2023ರ ಡಿಸೆಂಬರ್‌ನಲ್ಲಿ ಶಾರ್ವಿಯ ಸಹೋದರಿ ಎಂದು ಹೇಳಿಕೊಂಡ ದಿನಾಜ್ ಎಂಬ ಇನ್ನೊಬ್ಬ ಮಹಿಳೆ ವಾಟ್ಸಾಪ್ ಸಂದೇಶ ಮಾಡಲು ಪ್ರಾರಂಭಿಸಿದ್ದಾಳೆ. ದಿನಾಜ್ ವೃದ್ಧನಿಗೆ ಶಾರ್ವಿ ಮೃತಪಟ್ಟಿದ್ದಾಳೆಂದು ಹೇಳಿ ಆಸ್ಪತ್ರೆಯ ಬಿಲ್ ಪಾವತಿಸುವಂತೆ ಮನವಿ ಮಾಡಿದ್ದಾಳೆ. ಶಾರ್ವಿ ಮತ್ತು ಆ ವ್ಯಕ್ತಿಯ ನಡುವಿನ ವಾಟ್ಸಾಪ್ ಚಾಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಕಳುಹಿಸಿದ ದಿನಾಜ್ ಬ್ಲ್ಯಾಕ್‌ಮೇಲ್ ಮಾಡಿ ಹಣ ದೋಚಿದ್ದಾಳೆ ಎಂದು ಮುಂಬೈನ ಈ ವ್ಯಕ್ತಿ ದೂರು ನೀಡಿದ್ದಾರೆ.
ಇನ್ನು ಆ ವ್ಯಕ್ತಿ ತನ್ನ ಹಣವನ್ನು ಹಿಂತಿರುಗಿಸುವಂತೆ ಕೇಳಿದಾಗ, ದಿನಾಜ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ಅದಾದ ಸ್ವಲ್ಪ ದಿನದಲ್ಲೇ ಜಾಸ್ಮಿನ್ ಎಂಬ ಮಹಿಳೆ ವಾಟ್ಸಾಪ್ ಮೆಸೇಜ್ ಮಾಡಲು ಪ್ರಾರಂಭಿಸಿದ್ದಾಳೆ. ದಿನಾಜ್‌ನ ಸ್ನೇಹಿತೆ ಎಂದು ಹೇಳಿಕೊಂಡು ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ವೃದ್ಧಿ ಕೂಡಾ ಹಣ ಕಳುಹಿಸಿದ್ದಾರೆ.
2023ರ ಏಪ್ರಿಲ್ ತಿಂಗಳಿನಿಂದ 2025ರ ಜನವರಿವರೆಗೆ ವೃದ್ಧ 734 ವಹಿವಾಟುಗಳಲ್ಲಿ 8.7 ಕೋಟಿ ರೂ.ಗಳನ್ನು ಅಂದರೆ ಬರೋಬ್ಬರಿ ಸರಿಸುಮಾರು ಒಂಬತ್ತು ಕೋಟಿ ರೂಪಾಯಿ ಹಣವನ್ನು ಈ ನಾಲ್ವರು ಮಹಿಳೆಯರಿಗೆ ಪಾವತಿಸಿದ್ದಾನೆ. ತನ್ನ ಉಳಿತಾಯವೆಲ್ಲವೂ ಖಾಲಿಯಾದ ಬಳಿಕ ಈ ವೃದ್ಧ ತಮ್ಮ ಸೊಸೆಯಿಂದ ಎರಡು ಲಕ್ಷ ರೂಪಾಯಿ ಸಾಲ ಪಡೆದು ಆ ಮಹಿಳೆಯರಿಗೆ ನೀಡಿದ್ದಾನೆ.
ಆದರೂ ಮಹಿಳೆಯರು ನಿರಂತರ ಬ್ಲ್ಯಾಕ್‌ಮೇಲ್ ಮಾಡಿ ಹಣ ಕೇಳುತ್ತಿದ್ದ ಕಾರಣ ವೃದ್ಧ ಮಗನಿಂದ 5 ಲಕ್ಷ ರೂಪಾಯಿಗಳನ್ನು ಕೇಳಿದ್ದು ಮಗನಿಗೆ ಅನುಮಾನ ಉಂಟಾಗಿದೆ. ಇಷ್ಟರಲ್ಲಿ ಸೈಬರ್ ವಂಚನೆಯಲ್ಲಿ ಸಿಕ್ಕಿಬಿದ್ದಿರುವುದು ವೃದ್ಧನ ಗಮನಕ್ಕೆ ಬಂದಿದ್ದು ಆಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವಂಚನೆ ಬಗ್ಗೆ ಜುಲೈ 22ರಂದು ಸೈಬರ್ ಕ್ರೈಮ್ ಕಚೇರಿಯಲ್ಲಿ ದೂರು ದಾಖಲಾಗಿದೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದು, ನಾಲ್ವರು ಮಹಿಳೆಯರಂತೆ ಓರ್ವ ಮಹಿಳೆಯೇ ಅಥವಾ ಓರ್ವ ವ್ಯಕ್ತಿ ಬೇರೆ ಬೇರೆ ಸಂಖ್ಯೆಯಲ್ಲಿ ಮೆಸೇಜ್ ಮಾಡಿ ವೃದ್ಧನಿಗೆ ವಂಚಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
