ಅಪ್ರಾಪ್ತ ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಲ್ಲದೇ, ಆಕೆಯನ್ನು ‘ಹಾಟ್’ ಎಂದು ಕರೆದ 50 ವರ್ಷದ ವ್ಯಕ್ತಿಯೊಬ್ಬನಿಗೆ ಮುಂಬೈನ ವಿಶೇಷ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆರೋಪಿಯು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಉದ್ದೇಶ ಹೊಂದಿದ್ದ ಎಂದು ನ್ಯಾಯಾಲಯವು ಅಭಿಪ್ರಾಯ ಪಟ್ಟಿದೆ.
ವಿಶೇಷ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶರಾದ ಎಸ್ ಸಿ ಜಾಧವ್ ಅವರು ಡಿಸೆಂಬರ್ 14 ರಂದು ಆರೋಪಿಗಳಿಗೆ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಹಿಂಬಾಲಿಸುವುದು ಮತ್ತು ಕಿರುಕುಳ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ದೋಷಿ ಎಂದು ತೀರ್ಪು ನೀಡಿದ್ದಾರೆ.
ಪ್ರಕರಣವು ಮೇ 24, 2016 ರಂದು ನಡೆದಿದ್ದು, ಆಗ ಸಂತ್ರಸ್ತ ಬಾಲಕಿಗೆ 13 ವರ್ಷ ವಯಸ್ಸಾಗಿತ್ತು.
ಸಾಕ್ಷಿಗಳ ಹೇಳಿಕೆ ಮತ್ತು ಸಂತ್ರಸ್ತೆಯ ಹೇಳಿಕೆಗಳನ್ನು ವಿವರವಾಗಿ ಪರಿಶೀಲಿಸಿದಾಗ, ಮೇ 24, 2016ರಂದು ಬಾಲಕಿ ತನ್ನ ಸ್ನೇಹಿತನೊಂದಿಗೆ ಮಸೀದಿಯ ಬಳಿ ನಿಂತಿದ್ದ ಸಂದರ್ಭದಲ್ಲಿ ಆರೋಪಿಯು ಬಾಲಕಿಯನ್ನು ಅನುಚಿತ ಸ್ಥಳದಲ್ಲಿ ಸ್ಪರ್ಶಿಸಿರುವುದು ಸಾಬೀತಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಆರೋಪಿಯು ಮುಂದುವರೆದು, ‘ನೀನು ತುಂಬಾ ಪ್ರಚೋದನಕಾರಿಯಾಗಿ ಇದ್ದೀಯಾ. ನಿನ್ನ ಕೆನ್ನೆಗೆ ಮುತ್ತು ಕೊಡುವ ಆಸೆಯಾಗುತ್ತಿದೆ’ ಎಂದಿದ್ದೂ ಅಲ್ಲದೇ ಆಕೆಯನ್ನು ತನ್ನೊಂದಿಗೆ ಕರೆದೊಯ್ಯಲು ಬಯಸಿದ್ದಾಗಿಯೂ ಕೋರ್ಟ್ ತಿಳಿಸಿದೆ.
ಆರೋಪಿಯು ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸುವುದು ಮತ್ತು ಅಂತಹ ಪದಗಳನ್ನು ಆಡಿರುವುದರ ಹಿಂದೆ ಇರುವುದು ಲೈಂಗಿಕ ದೌರ್ಜನ್ಯದ ಉದ್ದೇಶವಲ್ಲದೇ ಬೇರೇನಲ್ಲ ಎಂದು ನ್ಯಾಯಾಲಯವು ಅಭಿಪ್ರಾಯ ಪಟ್ಟಿದೆ.
ಆರೋಪಿಗಳು ಬಾಲಕಿಯನ್ನು ಹಿಂಬಾಲಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂಬುದು ಸಾಬೀತಾಗಿದೆ ಎಂದು ನ್ಯಾಯಾಲಯ ಹೇಳಿದೆ.