ದೇಶದ ಆರ್ಥಿಕ ರಾಜಧಾನಿಯಾದ ಮುಂಬೈ ಶತಮಾನದ ದಾಖಲೆಯ ಮಳೆಗೆ ತತ್ತರಿಸಿದೆ. ಕೇವಲ ಒಂದೇ ದಿನದಲ್ಲಿ ಒಂದು ತಿಂಗಳ ಮಳೆ ಸುರಿದಿದ್ದು, ನಗರದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.
ಭಾರತೀಯ ಹವಾಮಾನ ಇಲಾಖೆ ಮಂಗಳವಾರದಂದು ಮುಂಬೈ, ಥಾಣೆ, ಪಾಲ್ಘರ್, ರಾಯಗಡ ಮತ್ತು ರತ್ನಗಿರಿಗಳಿಗೆ ಒಟ್ಟು ಮೂರು ಬಾರಿ ರೆಡ್ ಅಲರ್ಟ್ ಎಚ್ಚರಿಕೆಯನ್ನು ಜಾರಿಗೊಳಿಸಿದೆ. ಒಂದೇ ದಿನದಲ್ಲಿ 300 ಮಿಲಿ ಮೀಟರ್ ದಾಖಲೆ ಮಳೆಯಾಗಿದೆ.
ಮುಂಬೈ, ಥಾಣೆ, ಪಲ್ಘರ್, ರಾಯಗಡ, ರತ್ನಗಿರಿ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಮಂಗಳವಾರ ಮೂರನೇ ಬಾರಿ ರೆಡ್ ಅಲರ್ಟ್ ಘೋಷಿಸಿದ್ದು, ಮುಂದಿನ ಗಂಟೆಗಳಲ್ಲಿ ತೀವ್ರ ಮಳೆ ಜೊತೆಗೆ 40–60 ಕಿಮೀ ವೇಗದ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ. ನಗರದಲ್ಲಿ ಎಲ್ಲಾ ಏಜೆನ್ಸಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಶಾಲೆಗಳು, ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ.
ಭಾರೀ ಮಳೆಯಿಂದಾಗಿ ನಗರದ ಹಲವು ರಸ್ತೆಗಳು, ಅಂಡರ್‌ಪಾಸ್‌ಗಳು ಮತ್ತು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ, ಇದರಿಂದ ಜನರ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಮುಂಬೈನ ಛತ್ರಪತಿ ಶಿವಾಜಿ ಅಂತಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಲಾವೃತದಿಂದಾಗಿ ಸುಮಾರು 400 ವಿಮಾನಗಳ ವೇಳಾಪಟ್ಟಿಯಲ್ಲಿ ವಿಳಂಬವಾಗಿದೆ. ಸ್ಥಳೀಯ ರೈಲು ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ಮತ್ತು ಥಾಣೆ ನಡುವಿನ ಮುಖ್ಯ ಮಾರ್ಗದ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಳೆ ಸಮಸ್ಯೆಯಾಗಿದ್ದು ಯಾಕೆ ಮತ್ತು ಯಾರಿಗೆಲ್ಲ ಅನುಕೂಲ?
ಹಾರ್ಬರ್ ಲೈನ್‌ನಲ್ಲಿ ಕುರ್ಲಾ ಮತ್ತು CSMT ನಡುವಿನ ರೈಲು ಸೇವೆಯೂ ಸ್ಥಗಿತಗೊಂಡಿದೆ. ಚುನಾಭಟ್ಟಿ ನಿಲ್ದಾಣದಲ್ಲಿ ಜಲಾವೃತದಿಂದಾಗಿ ರೈಲು ಸಂಚಾರ ಸಂಪೂರ್ಣವಾಗಿ ನಿಂತಿದೆ. ಥಾಣೆ-ಕರ್ಜತ್, ಖೋಪೋಲಿ ಮತ್ತು ಕಸಾರಾ ನಡುವೆ ಕೇವಲ ಶಟಲ್ ಸೇವೆಗಳು ಕಾರ್ಯನಿರ್ವಹಿಸುತ್ತಿವೆ. ಸೆಂಟ್ರಲ್ ರೈಲ್ವೇಯು CSMT, ಥಾಣೆ, ಕಲ್ಯಾಣ, ಪನ್ವೆಲ್, ವಡಾಲಾ, ಕುರ್ಲಾ, ವಾಶಿ ಮತ್ತು ದಾದರ್‌ನಂತಹ ಪ್ರಮುಖ ನಿಲ್ದಾಣಗಳಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಿದೆ.
8 ಸಾವು, ಮುಂಜಾಗ್ರತೆ ವಹಿಸಲು ರಾಜ್ಯದ ಜನತೆಗೆ ಸಿಎಂ ಸೂಚನೆ
ಮಹಾರಾಷ್ಟ್ರದಲ್ಲಿ ಸುಮಾರು 14 ಲಕ್ಷ ಹೆಕ್ಟೇರ್ ಕೃಷಿ ಭೂಮಿಯು ಜಲಾವೃತಗೊಂಡಿದ್ದು, ಖರೀಫ್ ಬೆಳೆಗಳಿಗೆ ಭಾರೀ ಹಾನಿಯಾಗಿದೆ. ನಾಂದೇಡ್ ಜಿಲ್ಲೆಯಲ್ಲಿ ಮಳೆಯಿಂದಾದ ಅನಾಹುತದಿಂದಾಗಿ 8 ಮಂದಿ ಮೃತಪಟ್ಟಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮುಂಬೈ ಸೇರಿದಂತೆ ಥಾಣೆ, ರಾಯಗಡ, ರತ್ನಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳು ನಿರ್ಣಾಯಕವಾಗಿವೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (NDRF) ಮತ್ತು ಭಾರತೀಯ ಸೇನೆಯ ತಂಡಗಳು ನಂದೇಡ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ನಗರದಲ್ಲಿ ಶಾಲೆ-ಕಾಲೇಜುಗಳು, ಸರ್ಕಾರಿ ಮತ್ತು ಪೌರ ಕಚೇರಿಗಳು ಮುಚ್ಚಲ್ಪಟ್ಟಿವೆ. ಮಿಥಿ ನದಿಯ ನೀರಿನ ಮಟ್ಟವು ಗಂಭೀರ ಮಟ್ಟವನ್ನು ತಲುಪಿದ್ದು, ಅಪಾಯ ಸ್ಥಳದಲ್ಲಿರುವ ಜನರನ್ನು ಸ್ಥಳಾಂತರಿಸಲಾಗಿದೆ.
Powai also severely waterlogged. Avoid unnecessary travel in entire Mumbai ⚠️ #MumbaiRains pic.twitter.com/094sqpUOGb
— Mumbai Rains (@rushikesh_agre_) August 19, 2025
