ಮೂರು ವರ್ಷಗಳ ಹಿಂದೆ ಕೊಲೆಯಾಗಿದ್ದಾರೆ ಎಂದು ನಂಬಲಾಗಿದ್ದ ವ್ಯಕ್ತಿ ಇದೀಗ ಬಿಹಾರದಲ್ಲಿ ಪತ್ತೆಯಾಗಿದ್ದಾರೆ. ಆತನ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಉತ್ತರ ಪ್ರದೇಶದ ವ್ಯಕ್ತಿಯನ್ನು ಇದೀಗ ಬಿಡುಗಡೆ ಮಾಡಲಾಗಿದೆ.
2022ರಲ್ಲಿ, ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲಾ ವ್ಯಾಪ್ತಿಯಲ್ಲಿ ರೈಲಿನಲ್ಲಿ ಪ್ರಯಾಣಿಸುವಾಗ ಮೊಬೈಲ್ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿತ್ತು. ಗಲಾಟೆಯಲ್ಲಿ ಬಿಹಾರದ ನಿವಾಸಿ ಎತಾಬ್ ಎಂಬವರನ್ನು ಅಯೋಧ್ಯೆಯ ಖೇಮಸರೈ ಗ್ರಾಮದ ನರೇಂದ್ರ ದುಬೆ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಪ್ರಕರಣದಲ್ಲಿ ನರೇಂದ್ರ ದುಬೆ ಅವರನ್ನು ಘಟನೆ ಬೆನ್ನಲ್ಲೇ ಬಂಧಿಸಲಾಗಿತ್ತು. ಆತನಿಗೆ ಕೊಲೆ ಆರೋಪದ ಮೇಲೆ ಜೈಲು ಶಿಕ್ಷೆಯನ್ನೂ ವಿಧಿಸಿ, ಜೈಲಿನಲ್ಲಿ ಇರಿಸಲಾಗಿತ್ತು.
ಆದರೆ, ಹತ್ಯೆಯಾಗಿದ್ದಾನೆ ಎಂದು ನಂಬಲಾಗಿದ್ದ ಎತಾಬ್ ಅವರು ಇದೀಗ ಪತ್ತೆಯಾಗಿದ್ದಾರೆ. ಇತ್ತೀಚೆಗೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈ ಬೆನ್ನಲ್ಲೇ, ಶಿಕ್ಷೆಗೆ ಗುರಿಯಾಗಿದ್ದ ದುಬೆ ಅವರ ಕುಟುಂಬವು ಶಹಜಹಾನ್‌ಪುರ ನ್ಯಾಯಾಲಯದ ಮೊರೆ ಹೋಗಿತ್ತು. ಆ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಕರೆಸಿದ ಕೋರ್ಟ್, ಕೊಲೆಯಾಗಿದ್ದಾನೆಂದು ನಂಬಲಾಗಿದ್ದ ವ್ಯಕ್ತಿಈತನೇ ಎಂಬುದನ್ನು ಖಾತ್ರಿ ಪಡಿಸಿಕೊಂಡಿದೆ. ಜೈಲು ಶಿಕ್ಷೆಗೆ ಗುರಿಯಾಗಿದ್ದ ನರೇಂದ್ರ ದುಬೆ ಅವರನ್ನು ಬಿಡುಗಡೆ ಮಾಡಿದೆ.
ಪ್ರಕರಣದ ವಿವರ:
2022ರ ಡಿಸೆಂಬರ್ 16ರಂದು ದೆಹಲಿಯಿಂದ ಅಯೋಧ್ಯೆಗೆ ಯಾಣಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲಿನಲ್ಲಿ ಗಲಾಟೆ ನಡೆದಿತ್ತು. ಶಹಜಹಾನ್‌ಪುರ ಜಿಲ್ಲೆಯ ತಿಲ್ಹಾರ್ ರೈಲು ನಿಲ್ದಾಣದ ಬಳಿ ಚಲಿಸುತ್ತಿದ್ದ ರೈಲಿನಿಂದ ಓರ್ವ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಹೊರಗೆ ತಳ್ಳಿದ್ದಾನೆಂದು ಬರೇಲಿಯಲ್ಲಿ ನಿಯೋಜನೆಗೊಂಡಿದ್ದ ಜಿಆರ್‌ಪಿ ಕಾನ್‌ಸ್ಟೆಬಲ್ ಸತ್ಯವೀರ್ ಸಿಂಗ್ ಅವರಿಗೆ ಮಾಹಿತಿ ದೊರೆತಿತ್ತು.
ಘಟನೆ ಬಗ್ಗೆ ಅಯೋಧ್ಯೆ ನಿವಾಸಿಯಾದ ಅಲೋಕ್ ಎಂಬುವವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾತ್ರವಲ್ಲದೆ, ಗಲಾಟೆಯ ವಿಡಿಯೋವನ್ನೂ ಒದಗಿಸಿದ್ದರು. ಬಳಿಕ, ಮರುದಿನವೇ ಆರೋಪಿ ನರೇಂದ್ರ ದುಬೆ ಅವರನ್ನು ಪೊಲೀಸರು ಬಂಧಿಸಿದ್ದರು. ಜೊತೆಗೆ, ರೈಲ್ವೇ ಹಳಿಗಳ ಬಳಿ ಮೃತದೇಹವೊಂದನ್ನು ತಿಲ್ಹಾರ್ ಪೊಲೀಸರು ವಶಕ್ಕೆ ಪಡೆದಿದ್ದರು.
ಆ ಮೃತದೇಹವು ಎತಾಬ್ ಅವರದ್ದೇ ಎಂದು ಎತಾಬ್ ಅವರ ತಂದೆ ಮತ್ತು ಸಂಬಂಧಿಗಳು ಗುರುತಿಸಿದ್ದರು. ಎತಾಬ್ ಅವರ ಸಂಬಂಧಿಗಳ ದೃಢೀಕರಣ ಮತ್ತು ಇಬ್ಬರು ಸಹ ಪ್ರಯಾಣಿಕರ ಹೇಳಿಕೆಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಿ ದುಬೆ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಇದೀಗ, ಎತಾಬ್ ಜೀವಂತವಾಗಿ ಪತ್ತೆಯಾಗಿದ್ದು, ಆತನ ಕೊಲೆ ಪ್ರಕರಣದಲ್ಲಿ ಜೈಲು ಸೇರಿಸಿದ್ದ ನರೇಂದ್ರ ದುಬೆಯನ್ನು ಬಿಡುಗಡೆ ಮಾಡಲಾಗಿದೆ.
ಆದಾಗ್ಯೂ, ಎತಾಬ್ ಜೀವಂತವಾಗಿ ಪತ್ತೆಯಾಗಿದ್ದಾರೆ. ಆದರೆ, ಅಂದು ರೈಲ್ವೇ ಹಳಿಗಳ ಬಳಿ ಪತ್ತೆಯಾದ ಮೃತದೇಹ ಯಾರದ್ದು ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ.