ಸುಮಾರು 18 ತಿಂಗಳ ಹಿಂದೆ ಕೊಲೆಗೀಡಾಗಿದ್ದರು ಎನ್ನಲಾಗಿದ್ ಮಹಿಳೆಯೊಬ್ಬರು ಇದೀಗ ಜೀವಂತವಾಗಿ ವಾಪಸ್ ಬಂದಿದ್ದಾರೆ. ಅವರನ್ನು ಕಂಡು ಕುಟುಂಬಸ್ಥರು ನಿಬ್ಬೆರಗಾಗಿದ್ದಾರೆ. ಆಕೆಯ ಕೊಲೆ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿ, ಜೈಲುಗಟ್ಟಿದ್ದ ಪೊಲೀಸರೂ ಅಚ್ಚರಿಕೊಂಡಿದ್ದಾರೆ. ಘಟನೆ ಮಧ್ಯಪ್ರದೇಶದ ಮಂದ್ಸೌರ್ ಜಿಲ್ಲೆಯಲ್ಲಿ ನಡೆದಿದೆ.
ಮಹಿಳೆ ಕೊಲೆಯಾಗಿದ್ದಾರೆಂದು ಆಕೆಯ ಕುಟುಂಬಸ್ಥರು ಮೃತದೇಹವೊಂದರ ಅಂತ್ಯಕ್ರಿಯೆಯನ್ನೂ ಮಾಡಿದ್ದರು. ಈಗ, ಅಂತ್ಯಕ್ರಿಯೆ ನಡೆಸಿದ ಮೃತದೇಹ ಯಾರದ್ದು ಎಂಬ ಪ್ರಶ್ನೆಯೂ ಎದುರಾಗಿದೆ. ಪೊಲೀಸರಿಗೆ ಹೊಸ ತಲೆನೋವು ಶುರುವಾಗಿದೆ.
2023ರ ಸೆಪ್ಟೆಂಬರ್‌ನಲ್ಲಿ ಮಂದ್ಸೌರ್ ಜಿಲ್ಲೆಯ ಗಾಂಧಿ ಸಾಗರ ಪ್ರದೇಶದ ಮಹಿಳೆ ಲಲಿತಾ ಬಾಯಿ ಅವರು ನಾಪತ್ತೆಯಾಗಿದ್ದರು. ಆಕೆಯ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಅದಾದ ಕೆಲ ದಿನಗಳ ನಂತರ, ಝುಬುವಾ ಜಿಲ್ಲೆಯಲ್ಲಿ ಹಾದುಹೋಗಿರುವ ಮುಂಬೈ-ದೆಹಲಿ ಹೆದ್ದಾರಿಯ ಬಳಿ ಮಹಿಳೆಯ ತಲೆಯನ್ನು ಜಜ್ಜಿದ್ದ ಸ್ಥಿತಿಯಲ್ಲಿ ಕೊಳೆತ ಮೃತದೇಹ ಪತ್ತೆಯಾಗಿತ್ತು.
ಪೊಲೀಸರು ಮೃತದೇಹದ ಗುರುತು ಪತ್ತೆಗೆ ಯತ್ನಿಸುತ್ತಿದ್ದಾಗ, ಕಾಣೆಯಾಗಿದ್ದ ಮಹಿಳೆಯ ಕುಟುಂಬಸ್ಥರು ಮೃತ ಮಹಿಳೆಯ ಪಾದದ ಸುತ್ತಲಿನ ಹಚ್ಚೆಗಳನ್ನು ಗಮನಿಸಿ, ಲಲಿತಾ ಬಾಯಿಯದ್ದೇ ಮೃತದೇಹವೆಂದು ಗುರುತಿಸಿದ್ದರು. ಮೃತದೇಹವನ್ನು ತಮ್ಮೂರಿಗೆ ತಂದು ಅಂತ್ಯಕ್ರಿಯೆ ನಡೆಸಿದ್ದರು. ಅಲ್ಲದೆ, ಆಕೆ ತನ್ನ ಪ್ರಿಯಕರ ಶಾರೂಖ್ ಜೊತೆ ಊರುತೊರೆದು ಹೋಗಿದ್ದಳು ಎಂದು ಕುಟುಂಬಸ್ಥರು ಆರೋಪಿಸಿದ್ದರು. ಹೀಗಾಗಿ, ಆಕೆಯನ್ನು ಕೊಲೆ ಮಾಡಿದ್ದಾರೆಂದು ಆರೋಪಿಸಿ ಶಾರೂಖ್ ಮತ್ತು ಆತನ ಸಹಚರರನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
“ಆರೋಪಿಗಳು ಅಪರಾಧ ಮಾಡಿದ್ದಾರೆ ಎಂಬುದನ್ನು ಸಾಬೀತು ಮಾಡಲು ಹಲವಾರು ಪುರಾವೆಗಳಿವೆ. ಅವರ ವಿರುದ್ಧ ಜಾರ್ಜ್‌ಶೀಟ್ ಸಲ್ಲಿಸಲಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ” ಎಂದು ಪೊಲೀಸರು ಹೇಳಿದ್ದರು.
ಆದರೆ, ಇದೀಗ, ಹತ್ಯೆಯಾಗಿದ್ದಾರೆ ಎಂದು ಭಾವಿಸಲಾಗಿದ್ದ ಮಹಿಳೆ ಮರಳಿ ಬಂದಿದ್ದಾರೆ.
ತಮ್ಮ ಮಗಳು ಮರಳಿ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಆಕೆಯ ತಂದೆ, “ನಮ್ಮ ಮಗಳು ಕಾಣೆಯಾಗಿದ್ದಳು. ಪೊಲೀಸರು ಆಕೆ ಸಾವನ್ನಪ್ಪಿದ್ದಾಳೆಂದು ಮೃತದೇಹ ತೋರಿಸಿದ್ದರು. ಮೃತದೇಹದ ಮುಖ ಜಜ್ಜಿದ್ದರಿಂದ ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗಿರಲಿಲ್ಲ. ಆಕೆಯೇ ಮೃತಪಟ್ಟಿದ್ದಾಳೆಂದು ಭಾವಿಸಲಾಗಿತ್ತು. ಈಗ, ನಮ್ಮ ಮಗಳು ಜೀವಂತವಾಗಿ ಬಂದಿದ್ದಾಳೆ. ಇದನ್ನು ನಾವು ಊಹೆಯನ್ನೇ ಮಾಡಿರಲಿಲ್ಲ” ಎಂದು ಹೇಳಿದ್ದಾರೆ.
ಮಹಿಳೆಯ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಾಲ್ವರ ಕುರಿತು ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಝಬುವಾ ಎಸ್‌ಪಿ ಪದ್ಮವಿಲೋಚನ್ ಶುಕ್ಲಾ ಹೇಳಿದ್ದಾರೆ.