ಪತಿಯನ್ನು ಕ್ರೂರವಾಗಿ ಹತ್ಯೆಗೈದು, ಆ ಸಾವನ್ನು ಹಾವಿನ ಕಡಿತದ ಸ್ವಾಭಾವಿಕ ಸಾವು ಎಂದು ಬಿಂಬಿಸಲು ಯತ್ನಿಸಿದ್ದ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಕುಖ್ಯಾತ ‘ಸ್ನೇಕ್ ಸ್ಕ್ಯಾಂಡಲ್’ (Snake Scandal) ಪ್ರಕರಣದಲ್ಲಿ ಮೀರತ್ ನ್ಯಾಯಾಲಯವು ಐತಿಹಾಸಿಕ ಹಾಗೂ ಕಠಿಣ ತೀರ್ಪು ಪ್ರಕಟಿಸಿದೆ. ಅಪರಾಧದ ಕ್ರೌರ್ಯವನ್ನು ಪರಿಗಣಿಸಿ ನ್ಯಾಯಾಲಯವು ಇದನ್ನು ‘ಅಪರೂಪದಲ್ಲೇ ಅತ್ಯಂತ ಅಪರೂಪದ ಪ್ರಕರಣ’ ಎಂದು ಕರೆಸಿದ್ದು, ಪತ್ನಿ ರವಿತಾ ಹಾಗೂ ಆಕೆಯ ಪ್ರಿಯಕರ ಅಮರ್ದೀಪ್ಗೆ ಮರಣದಂಡನೆ (ಗಲ್ಲು ಶಿಕ್ಷೆ) ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಯವೀರ್ ಸಿಂಗ್ ನಗರ್ ಅವರು ಈ ತೀರ್ಪು ನೀಡಿದ್ದಾರೆ.
ಏನಿದು ಘಟನೆ?
2025ರ ಏಪ್ರಿಲ್ 12ರಂದು ಮೀರತ್ನ ಅಕ್ಬರ್ಪುರ ಸಾದತ್ ಗ್ರಾಮದಲ್ಲಿ ಅಮಿತ್ ಕಶ್ಯಪ್ ಎಂಬುವವರು ತಮ್ಮ ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾಗಿದ್ದರು. ಅವರ ಶವದ ಕೆಳಭಾಗದಲ್ಲಿ ಜೀವಂತ ಹಾವೊಂದು ಸಿಲುಕಿಕೊಂಡಿತ್ತು ಮತ್ತು ದೇಹದ ಮೇಲೆ ಬರೋಬ್ಬರಿ 10 ಕಡೆ ಹಾವಿನ ಕಡಿತದ ಗುರುತುಗಳಿದ್ದವು. ಪತ್ನಿ ರವಿತಾಳ ಕಣ್ಣೀರಿನ ನಾಟಕ ಮತ್ತು ವಿವರಣೆಯನ್ನು ಕೇಳಿದವರು ಇದು ಹಾವಿನ ವಿಷದಿಂದ ಸಂಭವಿಸಿದ ದುರ್ಮರಣ ಎಂದೇ ನಂಬಿದ್ದರು. ಆದರೆ, ವೈದ್ಯಕೀಯ ಮರಣೋತ್ತರ ಪರೀಕ್ಷೆಯ ವರದಿಯು ಇಡೀ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಿತು. ಅಮಿತ್ ಹಾವಿನ ವಿಷದಿಂದ ಸತ್ತಿಲ್ಲ, ಬದಲಿಗೆ ಅವರ ಮೂಗು ಮತ್ತು ಬಾಯಿಯನ್ನು ಬಲವಾಗಿ ಮುಚ್ಚಿ, ಕುತ್ತಿಗೆ ಹಿಸುಕಿ ಕೊಲೆ ಮಾಡಲಾಗಿದೆ ಎಂಬ ಸತ್ಯ ಬಯಲಾಯಿತು.
ಅಮಿತ್ ಸಾವಿನ ಸುದ್ದಿ ಬಂದಾಗ ಪತ್ನಿ ರವಿತಾಳ ವರ್ತನೆ ಅನುಮಾನಕ್ಕೆ ಕಾರಣವಾಗಿತ್ತು. ಮನೆಯವರು ಮೃತನ ದೇಹಕ್ಕೆ ಮರಣೋತ್ತರ ಪರೀಕ್ಷೆ (Post-mortem) ಮಾಡಿಸಬೇಕು ಎಂದು ಪಟ್ಟುಹಿಡಿದಾಗ, ರವಿತಾ ಅತ್ಯಂತ ಆಕ್ರಮಣಕಾರಿಯಾಗಿ ಅದನ್ನು ವಿರೋಧಿಸಿದ್ದಳು. ಈ ಅತಿಯಾದ ವಿರೋಧವೇ ಪೊಲೀಸರಿಗೆ ಆಕೆಯ ಮೇಲೆ ಮೊದಲ ಕಣ್ಣಿಡಲು ಪ್ರಮುಖ ಕಾರಣವಾಯಿತು.
ಪೊಲೀಸರ ತನಿಖೆ ಮುಂದುವರಿದಂತೆ ಅಮಿತ್ ಕೊಲೆಯ ಕರಾಳ ರಹಸ್ಯಗಳು ಒಂದೊಂದಾಗಿ ಹೊರಬಂದವು. ಪತ್ನಿ ರವಿತಾಳ ಜೊತೆಗಿನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂಬ ಕಾರಣಕ್ಕೆ ಪತಿಯನ್ನು ಮುಗಿಸಲು ಪ್ರಿಯಕರ ಅಮರ್ದೀಪ್ ವಿಕೃತ ಸಂಚು ರೂಪಿಸಿದ್ದನು. ಕೇವಲ 1000 ರೂ. ನೀಡಿ ಹಾವಾಡಿಗನೊಬ್ಬನಿಂದ ಹಾವನ್ನು ಖರೀದಿಸಿ ತಂದಿದ್ದ ಈ ಜೋಡಿ, ಮೊದಲು ಅಮಿತ್ನ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಸಾಯಿಸಿತ್ತು. ನಂತರ ಕೊಲೆಯನ್ನು ಮುಚ್ಚಿಹಾಕಲು ಸತ್ತ ವ್ಯಕ್ತಿಯ ದೇಹದ ಮೇಲೆ ಹಾವನ್ನು ಬಿಟ್ಟು, ಹಾವಿನ ಬಾಲವನ್ನು ಸೊಂಟದ ಕೆಳಗೆ ಒತ್ತಿ ಹಿಡಿದು ಪದೇ ಪದೇ ಕಚ್ಚುವಂತೆ ಮಾಡಿ ಕೃತಕವಾಗಿ ಹಾವಿನ ಕಡಿತದ ಲಕ್ಷಣ ಸೃಷ್ಟಿಸಿತ್ತು.
ಇದನ್ನೂ ಓದಿ: ಇರಾನ್ನಲ್ಲಿ 800 ಮರಣದಂಡನೆ ತಡೆದಿದ್ದೇನೆ: ಟ್ರಂಪ್
ಸುಮಾರು 17 ತಿಂಗಳುಗಳ ಕಾಲ ನಡೆದ ಈ ವಿಚಾರಣೆಯಲ್ಲಿ, ಪೊಲೀಸರು ಸಲ್ಲಿಸಿದ 12 ಬಲವಾದ ಸಾಕ್ಷ್ಯಗಳು ಮತ್ತು ಇಬ್ಬರ ನಡುವೆ ನಡೆದಿದ್ದ 500ಕ್ಕೂ ಹೆಚ್ಚು ಫೋನ್ ಕರೆಗಳ ದಾಖಲೆಗಳು ಆರೋಪಿಗಳ ನೇರ ಪಾತ್ರವನ್ನು ಸಾಬೀತುಪಡಿಸಿದವು. ಪವಿತ್ರವಾದ ವೈವಾಹಿಕ ಜೀವನಕ್ಕೆ ದ್ರೋಹ ಬಗೆದು, ಇಂತಹ ಅಮಾನುಷ ಹಾಗೂ ಯೋಜಿತ ಸಂಚಿನ ಮೂಲಕ ಕೊಲೆ ಮಾಡುವುದು ಸಮಾಜಕ್ಕೆ ಅತ್ಯಂತ ಮಾರಕ ಹಾಗೂ ತಪ್ಪು ಸಂದೇಶ ರವಾನಿಸುತ್ತದೆ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದೆ.
ಮೀರತ್ನಲ್ಲಿ ಕಳೆದ ಮೂರು ದಿನಗಳಲ್ಲಿ ನ್ಯಾಯಾಲಯವು ನೀಡಿರುವ ಎರಡನೇ ಮರಣದಂಡನೆ ತೀರ್ಪು ಇದಾಗಿದೆ. ಇದಕ್ಕೂ ಮುನ್ನ, ಇದೇ ನ್ಯಾಯಾಲಯವು ಸಂಚಲನ ಸೃಷ್ಟಿಸಿದ್ದ ‘ಬ್ಲೂ ಡ್ರಮ್ ಹತ್ಯೆ ಪ್ರಕರಣ’ದಲ್ಲೂ ಪತಿಯನ್ನು ಕೊಲೆ ಮಾಡಿದ್ದ ಪತ್ನಿ ಮುಸ್ಕಾನ್ ಹಾಗೂ ಆಕೆಯ ಪ್ರಿಯಕರನಿಗೆ ಗಲ್ಲು ಶಿಕ್ಷೆ ವಿಧಿಸಿತ್ತು.





