ಮುರ್ಶಿದಾಬಾದ್ ಗಲಭೆಯು ಪೂರ್ವಯೋಜಿತ, ಈ ಬಗ್ಗೆ ಗೋದಿ ಮೀಡಿಯಾಗಳು ಸುಳ್ಳು ಮಾಹಿತಿಯನ್ನು ಹರಡುತ್ತಿವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಮಾಮ್‌ಗಳೊಂದಿಗಿನ ತನ್ನ ಸಭೆಯಲ್ಲಿ ಹೇಳಿದ್ದಾರೆ. ಜೊತೆಗೆ ಈ ಸಂದರ್ಭದಲ್ಲೇ ಈ ಗಲಭೆಯಲ್ಲಿ ಟಿಎಂಸಿ ಕೈವಾಡವಿದೆ ಎಂಬ ಬಿಜೆಪಿ ಆರೋಪಕ್ಕೂ ಪ್ರತಿಕ್ರಿಯಿಸಿದ್ದಾರೆ.
“ಮುರ್ಶಿದಾಬಾದ್ ಗಲಭೆಯು ಪೂರ್ವಯೋಜಿತವಾಗಿದೆ. ವಿಪಕ್ಷಗಳು ಹೇಳುವಂತೆ ಈ ವಕ್ಫ್ ಗಲಭೆಯಲ್ಲಿ ಟಿಎಂಸಿ ಕೈವಾಡವಿದ್ದಿದ್ದರೆ ನಮ್ಮ ನಾಯಕರ ಮನೆಗಳನ್ನು ಧ್ವಂಸ ಮಾಡುತ್ತಿರಲಿಲ್ಲ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಹಾಗೆಯೇ ವಕ್ಫ್ ವಿರುದ್ಧ ಟಿಎಂಸಿ ನಿಲುವು ಸ್ಪಷ್ಟವಾಗಿದೆ. ವಕ್ಫ್ ವಿರುದ್ಧ ನಮ್ಮ ಹೋರಾಟ ಮುಂದುವರೆಯುತ್ತದೆ. ನಾವು ಈ ವಿವಾದಾತ್ಮಕ ಕಾನೂನನ್ನು ರಾಜ್ಯದಲ್ಲಿ ಜಾರಿ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನು ಓದಿದ್ದೀರಾ? ವಕ್ಫ್ ಮಸೂದೆ | ಮುರ್ಶಿದಾಬಾದ್ ಕೋಮುಗಲಭೆ: ಊರು ಬಿಡುವುದೊಂದೇ ಜನರಿಗೆ ಕಂಡ ದಾರಿ
“ಈ ಗಲಭೆಯಲ್ಲಿ ಬಾಂಗ್ಲಾದೇಶ ಭಾಗಿಯಾಗಿದೆ ಎಂದು ಗೃಹ ಸಚಿವಾಲಯ ಹೇಳಿರುವುದಾಗಿ ಉಲ್ಲೇಖಿಸಿದ ಸುದ್ದಿಯೊಂದನ್ನು ನಾನು ನೋಡಿದೆ. ಇದು ನಿಜವಾಗಿದ್ದರೆ, ಕೇಂದ್ರ ಸರ್ಕಾರ ಇದಕ್ಕೆ ಕಾರಣವಾಗಿದೆ. ಗಡಿಯನ್ನು ಬಿಎಸ್‌ಎಫ್ ನೋಡಿಕೊಳ್ಳುತ್ತದೆ, ರಾಜ್ಯ ಸರ್ಕಾರವಲ್ಲ. ಬಿಜೆಪಿಯ ಜನರು ಹೊರಗಿನಿಂದ ಬಂದು, ಗಲಾಟೆ ಮಾಡಿ ಓಡಿಹೋಗಲು ನೀವು ಯಾಕೆ ಅವಕಾಶ ಮಾಡಿಕೊಟ್ಟಿದ್ದೀರಿ” ಎಂದು ಪ್ರಶ್ನಿಸಿದರು.
ಇನ್ನು ಕೇಂದ್ರ ಸರ್ಕಾರ ಮತ್ತು ಗೋದಿ ಮೀಡಿಯಾಗಳನ್ನು ಗುರಿಯಾಗಿಸಿಕೊಂಡ ಮಮತಾ ಬ್ಯಾನರ್ಜಿ, “ಗೋದಿ ಮೀಡಿಯಾಗಳು ತಪ್ಪು ಮಾಹಿತಿಯನ್ನು ಹರಡುತ್ತಿದೆ. ಬಂಗಾಳವನ್ನು ಅನ್ಯಾಯವಾಗಿ ಗುರಿಯಾಗಿಸಿಕೊಂಡಿದೆ” ಎಂದು ಆರೋಪಿಸಿದರು.
“ಕೇಂದ್ರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಿದೆ. ಆದರೆ ಕೆಲವು ಗೋದಿ ಮೀಡಿಯಾಗಳು ಬಂಗಾಳದ ವಿರುದ್ಧ ಮತ್ತು ನನ್ನ ವಿರುದ್ಧ ಮಾತ್ರ ಮಾತನಾಡುತ್ತಿದೆ. ತಪ್ಪು ಮಾಹಿತಿ ಹರಡುವ ಬದಲು ನೇರವಾಗಿ ನನ್ನೊಂದಿಗೆ ಮಾತನಾಡಿ” ಎಂದು ಸವಾಲು ಹಾಕಿದರು.
#WATCH | Kolkata: West Bengal CM Mamata Banerjee says "They (Centre) should answer how many youths have got jobs? The prices of medicines, petrol, and diesel have been increased, but some 'godi media' only speak against Bengal. If you have to say something, come and say it in… pic.twitter.com/XLLzYRlYqG
— ANI (@ANI) April 16, 2025
“ಬಿಜೆಪಿ ಬೆಂಬಲಿತ ಕೆಲವು ಮಾಧ್ಯಮ ಸಂಸ್ಥೆಗಳು ರಾಜ್ಯವನ್ನು ಕೆಣಕಲು ನಕಲಿ ವಿಡಿಯೋಗಳನ್ನು ಪ್ರಸಾರ ಮಾಡಿವೆ. ನಾವು ಅವರನ್ನು ಬಂಧಿಸಿದ್ದೇವೆ. ಕೆಲವು ಕರ್ನಾಟಕದ್ದು, ಕೆಲವು ಉತ್ತರ ಪ್ರದೇಶ, ಬಿಹಾರ ಅಥವಾ ರಾಜಸ್ಥಾನದ ವಿಡಿಯೋಗಳಾಗಿವೆ. ಬಂಗಾಳದ ಹೆಸರು ಹಾಳು ಮಾಡಲು ಈ ರೀತಿ ದುಷ್ಕೃತ್ಯ ಎಸಗಲಾಗಿದೆ” ಎಂದು ಹೇಳಿದರು.
ಇನ್ನೊಂದೆಡೆ ಮುರ್ಶಿದಾಬಾದ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಸರ್ಕಾರವು ಹಿಂದೂ ಸಮುದಾಯದ ಮೇಲೆ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದೆ. ಈ ಸಂಬಂಧ ಹಲವು ನಕಲಿ ವಿಡಿಯೋಗಳನ್ನು ಹರಿಬಿಟ್ಟಿದೆ.
