ಡಿಜಿಟಲ್‌ ದಿಗ್ಬಂಧನದಲ್ಲಿ ನಾಗೇಶ ಹೆಗಡೆ ದಂಪತಿ (ಭಾಗ-1)

Date:

Advertisements
ಸೈಬರ್‌ ಅಪರಾಧಕ್ಕೆ ಬಲಿಯಾಗಿ ಕೋಟಿಗಟ್ಟಲೆ ಹಣವನ್ನು ಕಳೆದುಕೊಂಡವರ ಕತೆಯನ್ನು ನಾವು ಅಲ್ಲಿ ಇಲ್ಲಿ ಕೇಳಿದ್ದೇವೆ. ಪ್ರಧಾನಿ ಮೋದಿಯವರು ಸ್ವತಃ ಕಳೆದ ಅಕ್ಟೊಬರ್‌ ತಿಂಗಳಿನ ʻಮನ್‌ಕೀ ಬಾತ್‌‘ನಲ್ಲಿ ಇಂಥ ಡಿಜಿಟಲ್‌ ಅರೆಸ್ಟ್‌ ಹಾವಳಿಯ ಬಗ್ಗೆ ದೇಶದ ಪ್ರಜೆಗಳನ್ನು ಎಚ್ಚರಿಸಿದ್ದಾರೆ. ಆದರೂ ಅದಕ್ಕೆ ಬಲಿಯಾಗಿ ಮೂರು ದಿನಗಳ ಕಾಲ ತೀವ್ರ ಸಂಕಟ ಅನುಭವಿಸಿದ ನಮ್ಮಿಬ್ಬರ- ನಾಗೇಶ್ ಹೆಗಡೆ ದಂಪತಿಗಳ- ಕತೆ ಇಲ್ಲಿದೆ. ಕತೆ ತುಸು ಉದ್ದ ಇದೆ. ಮೂರು ಕಂತುಗಳಲ್ಲಿ ಪ್ರಕಟವಾಗಲಿದೆ...

ಅಂದು, 7 ಮೇ 2025 ಬೆಳಗ್ಗೆ 11.30: ಅದೇ ತಾನೆ ನನ್ನ ಅಂಕಣವನ್ನು ಬರೆದು ಮುಗಿಸಿ ಪ್ರೂಫ್‌ ಓದುತ್ತ ಕೂತಿದ್ದೆ. ಫೋನ್‌ ಬಂತು. ‘ನಾಗೇಶ್‌ ಹೆಗಡೆ, ನಿಮ್ಮ ಇನ್ನೊಂದು ನಂಬರಿನಿಂದ ಕಾನೂನುಬಾಹಿರ ಚಟುವಟಿಕೆ ನಡೆಯುತ್ತಿವೆ, ನಿಮ್ಮನ್ನು ಎಚ್ಚರಿಸುತ್ತಿದ್ದೇವೆ’ ಎಂಬ ವಾರ್ನಿಂಗ್‌ ಬಂತು.

ಕೊಂಚ ದಿಗಿಲಾಯಿತು. ಪತ್ನಿ ರೇಖಾಳ ಫೋನ್‌ ಬಿಟ್ಟರೆ ನಮ್ಮ ಬಳಿ ಇನ್ಯಾವ ನಂಬರೂ ಇಲ್ಲ! ಅವಳದ್ದೇನಿದ್ದರೂ ರಿಸೀವಿಂಗ್‌ ಅಷ್ಟೆ. ತಾನಾಗಿ ಯಾರಿಗೂ ಕಾಲ್‌ ಮಾಡುವುದಿಲ್ಲ. ಇವಿಷ್ಟನ್ನು ಆ ವ್ಯಕ್ತಿಗೆ ವಿವರಿಸಿದೆ. ಆತ ಹೇಳಿದ: ”ನೀವು ಏಪ್ರಿಲ್‌ 25ರಂದು ಮುಂಬೈ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಹೊಸ ಸಿಮ್‌ ಖರೀದಿಸಿದ್ದೀರಿ ನಂಬರ್‌ 7738954652.” ಅರೆ! ನಾವು ಬೆಂಗಳೂರು ಬಿಟ್ಟು ಹೋಗಲೇ ಇಲ್ಲ. ‘ನೀವು ಯಾರು?’ ಎಂದು ಕೇಳಿದೆ.

‘ನಾನು ನ್ಯಾಶನಲ್‌ ಸೈಬರ್‌ ಕ್ರೈಮ್‌ ರಿಪೋರ್ಟಿಂಗ್‌ ಪೋರ್ಟಲ್‌ನಿಂದ ಮಾತಾಡುತ್ತಿದ್ದೇನೆ. ನಿಮ್ಮ ವಿವರಣೆ ಏನಿದ್ದರೂ ನನ್ನ ಮೇಲಧಿಕಾರಿಗೆ ಹೇಳಿ, ಕನೆಕ್ಟ್‌ ಮಾಡುತ್ತೇನೆ’ ಎಂದ.

Advertisements

ನಾನು ನನ್ನ ಲ್ಯಾಪ್‌ಟಾಪ್‌ನಲ್ಲಿ ಸದಾ ಸಹಾಯಕ್ಕಿರುವ ‘ಕೋಪೈಲಟ್‌’ ಎಂಬ ಎಐಗೆ ಕೇಳಿದೆ, ಈ ಹೆಸರಿನ ಸಂಸ್ಥೆ ಇದೆಯಾ ಎಂದು. ಹೌದೆಂದು ಉತ್ತರ ಬರುವಷ್ಟರಲ್ಲಿ ಫೋನ್‌ನಲ್ಲಿ ಅತ್ತ ಕಡೆಯಿಂದ ಮಹಿಳಾ ಧ್ವನಿ ಕೇಳಬಂತು. ‘ನಾನು ಜ್ಯೋತಿ ವಿಶ್ವನಾಥನ್‌, ಎನ್‌ಸಿಸಿಆರ್‌ಪಿಯ ಸೀನಿಯರ್‌ ಮ್ಯಾನೇಜರ್‌. ನೀವು ಈ ಸಿಮ್‌ ಖರೀದಿ ಮಾಡಿಲ್ಲವಾ?’ ಕೇಳಿದಳು. ‘ಹಾಗಿದ್ದರೆ ನೀವು ಮುಂಬೈ ವಿಮಾನ ನಿಲ್ದಾಣದ ಸಹಾರ ಪೊಲೀಸ್‌ ಠಾಣೆಯಲ್ಲಿ ದೂರು ಕೊಡುವುದು ಒಳ್ಳೆಯದು. ಅವರು ತನಿಖೆ ಮಾಡುತ್ತಾರೆ’ ಎಂದು ಆ ಮಹಿಳೆ ಸೌಮ್ಯವಾಗಿಯೇ ಹೇಳಿದರು. ನನಗೆ ಅಲ್ಲಿನ ನಂಬರ್‌ ಗೊತ್ತಿಲ್ಲ ಎಂದಾಗ ತಾನೇ ಕನೆಕ್ಟ್‌ ಮಾಡಿಕೊಟ್ಟರು. ಆ ಕಡೆಯಿಂದ ‘ಹಲ್ಲೋ ಎಸ್‌ಐ ಮೋಹನ್‌ ಕುಮಾರ್‌ ಹಿಯರ್- ಹೇಳಿ’ ಎಂಬ ಧ್ವನಿ ಕೇಳಿಬಂತು.

‘ಸೈಬರ್‌ ಅಪರಾಧದ ದೂರು ಕೊಡಬೇಕಿತ್ತು’ ಎಂದು ನಾನು ಆತನಿಗೆ ಹೇಳಿದೆ. ಅವನೂ ನಮ್ರವಾಗಿ, ‘ಚೆಕ್ ಮಾಡಿಸ್ತೇನೆ ತುಸು ಕಾಯಿರಿ, ಕಟ್‌ ಮಾಡಬೇಡಿ’ ಎಂದು ಹೇಳಿ, ಯಾರ್ಯಾರಿಗೋ ಏನೇನೋ ಆರ್ಡರ್‌ ಕೂಗಿ ಹೇಳಿ ಮತ್ತೆ ನನ್ನತ್ತ ತಿರುಗಿ, ‘ನೀವೊಂದು ಅಫೀಶಿಯಲ್ ದೂರು ಕೊಡಬೇಕಾಗುತ್ತದೆ, ಇಲ್ಲಿ ಬೇಡ ಗದ್ದಲ ಜಾಸ್ತಿ ಇದೆ; ಆಚೆ ರೂಮಿನಲ್ಲಿ ವಿಡಿಯೊ ಕಾಲ್‌ನಲ್ಲಿ ಮಾತಾಡೋಣ; ನೀವೂ ನಿಮ್ಮ ಪ್ರತ್ಯೇಕ ರೂಮಿನಲ್ಲಿರಿ- ಯಾರದೂ ಮಧ್ಯಪ್ರವೇಶ ಇರಬಾರದು’ ಎಂದ. ವಿಡಿಯೊ ಕಾಲ್‌ನಲ್ಲಿ ತನ್ನ ಸಮವಸ್ತ್ರ, ಸ್ಟಾರ್‌ ಬ್ಯಾಜ್‌ ತೋರಿಸಿದ. ನಿಮ್ಮ ಮನೆಯವರಿದ್ದರೆ ಅವರನ್ನೂ ಕರೆಯಿರಿ ಅಂದ, ಬಾಗಿಲಿಗೆ ಬೋಲ್ಟ್‌ ಹಾಕಿಕೊಳ್ಳಿ ಎಂದ.

ನಂತರ ನಮ್ಮಿಬ್ಬರ ವಿವರಗಳನ್ನು ಕೇಳಿದ. ದೂರಿನ ವಿವರಗಳನ್ನು ಮತ್ತೊಮ್ಮೆ ಕೇಳಿದ. ತಿರುಗಿ ತಿರುಗಿ ಅದದೇ ವಿವರಗಳನ್ನು ಕೇಳಿದ. ‘ನಿಮ್ಮ ವಿವರ ಕೊಡಿ’ ಎಂದು ನಾನು ಕೇಳಿದಾಗ ತನ್ನ ಪರಿಚಯವನ್ನು ಮತ್ತೊಮ್ಮೆ ಹೇಳಿ ತನ್ನ ಬ್ಯಾಜ್‌ ಐಡಿಯನ್ನೂ (ಎಮ್‌ಸಿಪಿ 56985) ಬರ್ಕೊಳಿ ಎಂದ.

ಆತನೂ ಅದೇನೋ ಬರೆಯಲು ಬಗ್ಗಿದಾಗ ಆತನ ಚಿತ್ರ ಮಾಯವಾಗಿ ಅಲ್ಲಿ ಮಹಾರಾಷ್ಟ್ರ ಕ್ರೈಮ್‌ ಪೊಲೀಸ್‌ ಮುದ್ರೆ ಮಾತ್ರ ಕಾಣತೊಡಗಿತು. ಇದ್ದಕ್ಕಿದ್ದಂತೆ ಆತ, ‘ಇದೇನೋ ಹೊಸ ಮಾಹಿತಿ ಬಂತು- ನಿಲ್ಲಿ’ ಎಂದು ದೀರ್ಘ ಉಸಿರುಬಿಟ್ಟ. ‘ಇದೇನ್ರೀ ಇದೂ!’ ಎಂದು ಅವನೇ ಅಚ್ಚರಿಪಟ್ಟು, ‘ನಿಮ್ಮ ಹೆಸರು ಇಲ್ಲಿ ಹೇಗೆ ಬಂತು?’ ಎಂದ. ಮುಂದೆ ಆತನೇ, ‘ಕ್ಷಮಿಸಿ ಇದೇನೋ ದೊಡ್ಡ ವ್ಯೂಹದಲ್ಲಿ ನೀವು ಸಿಲುಕಿದಂತೆ ಕಾಣ್ತಾ ಇದೆ’ ಎಂದು ವಿವರ ಕೊಟ್ಟ.

ಆತ ನೀಡಿದ ವಿವರಗಳ ಪ್ರಕಾರ, ಬೆಂಗಳೂರಿನ ನಮ್ಮ ಮನೆಯ ಸಮೀಪದ ನಾಗದೇವನಹಳ್ಳಿಯ State Bank of India (SBI) ಶಾಖೆಯ ಮ್ಯಾನೇಜರ್‌ ವಿವೇಕ್‌ ದಾಸ್‌ ಎಂಬಾತ ಮನಿ ಲಾಂಡ್ರಿಂಗ್‌ ಪ್ರಕರಣದಲ್ಲಿ ಸಿಕ್ಕಿ ಬಿದ್ದು ಅರೆಸ್ಟ್‌ ಆಗಿದಾನೆ. ಆತನ ಮನೆಯಿಂದ ಅನೇಕ ಪಾಸ್‌ಬುಕ್‌ ಜಪ್ತಿ ಆಗಿವೆ; ಅದರಲ್ಲಿ ನಿಮ್ಮದೂ ಇದೆ. ಆತನ ಅಪರಾಧದಲ್ಲಿ ನಾಗೇಶ ಹೆಗಡೆ ಶಾಮೀಲಾಗಿರುವ ಸಾಕ್ಷ್ಯಗಳಿವೆ. ಲಾಕಪ್ಪಿನಲ್ಲಿ ಆತನೇ ಬಾಯಿ ಬಿಟ್ಟಿದ್ದಾನೆ. ‘ಮನಿ ಲಾಂಡ್ರಿಂಗ್‌ನಲ್ಲಿ 30% ನಿಮ್ಮದೂ ಇದೆ ಎಂದು ಸ್ಟೇಟ್‌ಮೆಂಟ್‌ ರೆಕಾರ್ಡ್‌ ಆಗಿದೆ’ ಎಂದು ಸಬ್‌ಇನ್‌ಸ್ಪೆಕ್ಟರ್ ಹೇಳಿದ. ಈಗ ಆತನ ಧ್ವನಿ ಗಡುಸಾಗಿತ್ತು.

ನಮ್ಮ ಸಮೀಪದ ನಾಗದೇವನಹಳ್ಳಿಯಲ್ಲಿ SBI branch ಇರುವುದು ನನಗೇ ಗೊತ್ತಿರಲಿಲ್ಲ. ಕ್ವಿಕ್ಕಾಗಿ ಕೋಪೈಲಟ್‌ಗೆ ಕೇಳಿದೆ. ‘ಇದೆ’ ಎಂದು ಉತ್ತರ ನನ್ನ ಲ್ಯಾಪ್‌ಟಾಪ್‌ ಪರದೆಯ ಮೇಲೆ ಬಂತು.

‘ಯಾಕೆ ಸೈಲೆಂಟ್‌ ಆದಿರಿ?’ ಸಹಾರ್‌ ಎಸ್‌ಐ ಆವಾಜ್‌ ಹಾಕಿದ. ನಾನು ಪ್ರತಿಭಟಿಸಿದೆ. ‘ನನ್ನ ಹೆಸರಿನ ಅದೆಷ್ಟೊ ಜನ ಬೆಂಗಳೂರಿನಲ್ಲಿ ಇದ್ದಾರೆ. ಮೇಲಾಗಿ ಆ ಬ್ಯಾಂಕಿನಲ್ಲಿ ನನ್ನ ಖಾತೆಯೇ ಇಲ್ಲ’ ಎಂದು ಮಾತನ್ನು ಪೂರೈಸುವ ಮೊದಲೇ ಮೋಕು (ಮೋಹನ್‌ ಕುಮಾರ್‌, ಎಸ್‌ಐ) ಕೂಗಿದ. ‘ನಮ್ಮನ್ನೇನು ಈಡಿಯಟ್ಸ್‌ ಅಂದುಕೊಂಡಿರಾ! ಎಲ್ಲ ವಿಚಾರಿಸಿದ್ದೇವೆ. ನಿಮ್ಮ ಆಧಾರ್‌ ನಂಬರ್‌, ಫೋಟೊ ಐಡಿ, ವಿಳಾಸ ಎಲ್ಲ ಈ ಪಾಸ್‌ಬುಕ್‌ನಲ್ಲಿ ಇವೆ. ಏನಂತ ತಿಳಿದಿದೀರಿ? ನೌ ಯು ಆರ್‌ ಎ ಸೀರಿಯಸ್‌ ಸಸ್ಪೆಕ್ಟ್‌’ ಎಂದು ಇನ್ನೂ ಗರಮ್‌ ಆದ.

ಈ ಲೇಖನ ಓದಿದ್ದೀರಾ?: ಬಹುಶಃ ದೊರೆಯ ’56 ಇಂಚು’ ಇದ್ದಕ್ಕಿದ್ದಂತೆ ಕುಗ್ಗಿಹೋಯಿತೇನೋ !

ಆ ವೇಳೆಗೆ ಗಂಟೆ ಒಂದಾಗಿತ್ತು; ನನಗೆ ಹಸಿವೆ ಆಗ್ತಾ ಇತ್ತು. ಕೋಪ ಬರ್ತಾ ಇತ್ತು. ನಾನೂ ದನಿ ಏರಿಸಿ, ‘ನನಗೇ ಗೊತ್ತಿಲ್ಲದೆ, ನನ್ನ ಖಾತೆ ಹೇಗಿರಲು ಸಾಧ್ಯ? ಈ ಬ್ಯಾಂಕ್‌ನಿಂದ ನನಗೆ ಎಂದೂ ಯಾವ ಸೂಚನೆಯೂ ಬಂದಿಲ್ಲ… ಬೇಕಾದ್ರೆ ಚೆಕ್‌ ಮಾಡಿ…’ ಎಂದು ಹೇಳಲು ಹೊರಟರೆ ಪಕ್ಕದಲ್ಲಿ ಕೂತಿದ್ದ ರೇಖಾ ನನ್ನ ಕೈ ಒತ್ತಿ ಬಾಯಿ ಮುಚ್ಚಿರಲು ಸಿಗ್ನಲ್‌ ಕೊಟ್ಟಳು.

ಮೋಕು ಜೋರಾಗಿ ಕೂಗುತ್ತಲೇ ಹೋದ. ‘ಈ ಕೇಸಿನಲ್ಲಿ ಬ್ಯಾಂಕ್‌ ಅಧಿಕಾರಿಗಳೂ ಸ್ಥಳೀಯ ಪೊಲೀಸರೂ ಶಾಮೀಲಾಗಿದಾರೆ. ಎಲ್ಲ ವಿವರಗಳನ್ನೂ ಕೊಡೋಕೆ ಆಗೋದಿಲ್ಲ. ಹದಿನೇಳು ಅಪರಾಧಿಗಳ ತನಿಖೆಯನ್ನು ಅರ್ಜೆಂಟಾಗಿ, ಟಾಪ್‌ ಸೀಕ್ರೆಟ್‌ ಆಗಿ ನಿರ್ವಹಿಸಲು ನಮಗೆ ಆರ್ಡರ್‌ ಬಂದಿದೆ’ ಎಂದು ಸರಕಾರೀ ರಹಸ್ಯ ಆಜ್ಞೆಯೊಂದನ್ನು ಸ್ಕ್ರೀನ್‌ ಮೇಲೆ ಮಿಂಚಿಸಿದ. ‘ಮನಿ ಲಾಂಡ್ರಿಂಗ್‌ ಎಂಥಾ ಗಂಭೀರ ಅಪರಾಧ ಗೊತ್ತಿಲ್ಲೇನ್ರೀ- ಪತ್ರಕರ್ತರು ನೀವು’ ಎಂದು ಕೂಗಿದ. ‘ನಿಮ್ಮ ಪತ್ನಿ ರೇಖಾಳ ಮೊಬೈಲ್‌ ಚೆಕ್ ಮಾಡಿ’ ಎಂದ.

image 53

ನೋಡಿ ನಾನು ದಂಗಾದೆ. ಕೆಂಪು ಮುದ್ರೆಯ ‘ಇಡಿ’ ಲಾಂಛನದೊಂದಿಗೆ ಅಪರಾಧಿಗಳ ಪಟ್ಟಿಯಲ್ಲಿ ವಿವೇಕ್‌ ದತ್ತಾ ಮತ್ತು ಇತರ ಅನೇಕರ ಜೊತೆ ನನ್ನ ಹೆಸರೂ ಇತ್ತು. ‘ನಿಮ್ಮನ್ನ ಪ್ರಾಸಿಕ್ಟೂಟರ್‌ ಬಳಿ ಒಯ್ಯುತ್ತೇನೆ; ನೀವೇ ಮಾತಾಡಿ’ ಎಂದ. ಮುಂದಿನ ಹತ್ತು ನಿಮಿಷ ವಿಡಿಯೊ ಬಂದ್‌ ಆಗುತ್ತದೆಂದೂ ಧ್ವನಿ ಮಾತ್ರ ಕೇಳುತ್ತದೆಂದೂ ಸ್ಥಾನ ಬಿಟ್ಟು ಕದಲಕೂಡದೆಂದೂ ಆಜ್ಞೆ ಮಾಡಿದ. ಪ್ರಾಸಿಕ್ಯೂಟರ್‌ ತುಂಬ ಬ್ಯೂಸಿ ಇರ್ತಾರೆಂದೂ ಸಂಕ್ಷಿಪ್ತ ನನ್ನ ಹೇಳಿಕೆ ಮುಗಿಸಬೇಕೆಂದೂ ಸೂಚನೆ ಕೊಟ್ಟ. ಟಕ್‌ ಟಕ್‌ ಬೂಟಿನ ಸದ್ದು; ಸೆಲ್ಯೂಟ್‌…

ಪ್ರಾಸಿಕ್ಯೂಟರ್‌ ಈ ಎಸ್‌ಐಗೇ ದಬಾಯಿಸುತ್ತಿದ್ದ. ‘ಯಾಕ್ರೀ ಮೋಹನ್‌ ಕುಮಾರ್‌, ಎಷ್ಟೂಂತ ಈ ಆನ್‌ಲೈನ್‌ ಕೇಸ್‌ ತರ್ತಾ ಇದೀರಿ; ಕರೆಸ್ರೀ ಅವರನ್ನ ಇಲ್ಲಿಗೇ!’ ಎಂದು ಕೂಗಿದ. ಎಸ್‌ಐ ನಮ್ಮ ಪರವಾಗಿ ಸಣ್ಣ ದನಿಯಲ್ಲಿ, ‘ವಯಸ್ಸಾದವರು ಸರ್‌, ಪೇಶಂಟಂತೆ. ಇವರದ್ದೊಂದು ದೂರನ್ನು ತುಸು ಕೇಳಿ ಬಿಡಿ; ಆಮೇಲೆ ಬರ್ತೀನಿ ಸರ್‌’ ಎಂದು ಪೊಲೀಸ್‌ ಅಧಿಕಾರಿ ಹೊರಟು ಹೋದ ಬೂಟಿನ ಸದ್ದು.

ಈಗ ಪ್ರಾಸಿಕ್ಯೂಟರ್‌ ಮಹಾಶಯ ನನ್ನನ್ನು ಉದ್ದೇಶಿಸಿ ‘ಹಾಂ ಹೇಳಿ. ಕ್ವಿಕ್‌’ ಎಂದು ಗಂಭೀರ ಧ್ವನಿಯಲ್ಲಿ ಹೇಳಿದ.

ನಾನು ಸಂಕ್ಷಿಪ್ತದಲ್ಲಿ ನನ್ನ ಪ್ರವರ ಹೇಳಿದೆ. ಐಐಟಿ, ಜೆಎನ್‌ಯು, ನೈನಿತಾಲ್‌, ಬೆಂಗಳೂರು ಡೆಕ್ಕನ್‌ ಹೆರಾಲ್ಡ್‌ ಪ್ರಜಾವಾಣಿಯ ರಿಟೈರ್ಡ್‌ ಪತ್ರಕರ್ತ ಎಂದೆಲ್ಲ ಒಂದು ವಾಕ್ಯದಲ್ಲಿ ಹೇಳಿ, ‘ನಾನು ಈ ದೇಶದ ಲಾ ಅಬೈಡಿಂಗ್‌ ನಾಗರಿಕ. ಕಾಯಿದೆ ಬಾಹಿರ ಕೆಲಸ ಮಾಡಿಲ್ಲ. ಆದರೂ ನನ್ನ ಮೇಲೆ ಆಪಾದನೆ ಬಂದಿದೆ. ಅರೆಸ್ಟ್‌ ಕೂಡ ಆಗುವ ಸಂಭವ ಇದೆಯಂತೆ. ಈ ದೇಶದ ಎಲ್ಲ ಆಪಾದಿತ ನಾಗರಿಕನಿಗೂ ಒಬ್ಬ ವಕೀಲನ ನೇಮಕ ಮಾಡಿಕೊಳ್ಳುವ ಹಕ್ಕು ಇದೆ. ನನಗೆ ಆ ಫೆಸಿಲಿಟಿ ಸಿಗುವವರೆಗೆ…’

ಇಷ್ಟು ಹೇಳುತ್ತಲೇ ಅತ್ತ ಕಡೆಯಿಂದ ‘ಸ್ಟಾಪ್‌ ಇಟ್‌…’ ಎಂಬ ಕೂಗು ಕೇಳಿಸಿತು. ರಪ್‌ ಎಂದು ಫೈಲ್‌ ಬಿಸಾಕಿದ ಸದ್ದು, ಕರೆಗಂಟೆಯ ಸದ್ದು. ‘ಕಾನ್‌ಸ್ಟೆಬಲ್‌ ಶಿಂಧೆ! ಲೇ ಜಾವ್‌. ಏ ಫೈಲ್‌ ಎಸ್‌ ಐ ಕೊ ದೇದೋ. ಲೆಟ್ ದೆಮ್‌ ಕಮ್‌ ಟು ಮುಂಬೈ’ ಎಂದು ಪ್ರಾಸಿಕ್ಟೂಟರ್‌ ಕೂಗಿದ್ದು ಕೇಳಿತು.

ಈ ಲೇಖನ ಓದಿದ್ದೀರಾ?: ಪಾಕಿಸ್ತಾನಿ ಫೇಕ್‌ ಅಕೌಂಟ್‌ಗಳ ಬಣ್ಣ ಬಯಲು ಮಾಡಿದ ‘ಮೊಹಮ್ಮದ್ ಝುಬೇರ್’

ಮುಂದೆ ಹತ್ತು ನಿಮಿಷ ಮೌನ. ನಮ್ಮ ಜಂಘಾಬಲ ಉಡುಗಿತ್ತು. ಮುಂಬೈಗೆ ಹೋಗಬೇಕಾ, ಉಟ್ಟ ಬಟ್ಟೆಯಲ್ಲಿ? ‘ಪೊಲೀಸ್‌ ಬರ್ತಾರಾ? ಎಷ್ಟು ದಿನ ಅಲ್ಲಿ ಇರಬೇಕೊ?’ ರೇಖಾ ತೀರ ಕ್ಷೀಣ ಸ್ವರದಿಂದ ಕೇಳಿದಳು.

‘ಲೋಕಲ್‌ ಪೊಲೀಸರು ಬರಲಿಕ್ಕಿಲ್ಲ. ನಮ್ಮ ಪೊಲೀಸರಿಗೂ ಗೊತ್ತಾಗದಂಥ ಸೀಕ್ರೆಟ್‌ ಆಪರೇಶನ್‌ ಇದಂತೆ. ಮುಂಬೈಯಿಂದಲೇ ಪೊಲೀಸ್‌ ಬರಬೇಕು ಅಂದ್ರೆ ಟೈಮ್‌ ಬೇಕು. ನೀನು ತುಸು ನೀರು ತಗೊಂಬಾ, ತಿನ್ನೋಕೆ ಏನಾದರೂ ಇದ್ರೂ ತಾ’ ಎಂದು ಹೇಳಿದೆ. ನಮ್ಮ ಮಾತುಕತೆ ತಗ್ಗಿದ ದನಿಯಲ್ಲಿತ್ತು. ಆದರೆ ಎಂದಿನಂತೆ ಹಿಂದಿಯಲ್ಲಿತ್ತು.

ಆ ಕಡೆಯಿಂದ ಎಸ್‌ಐ ಮೋಕು ಧ್ವನಿ ಕೇಳಿತು. ‘ಎಂಥಾ ಎಡವಟ್ಟು ಮಾಡಿಕೊಂಡ್ರಿ ನಾಗೇಶ್‌ ಹೆಗಡೆ! ಕರೀರಿ ನಿಮ್ಮ ವೈಫನ್ನ. ಬ್ಲಂಡರ್‌ ಬ್ಲಂಡರ್‌. ನೀವು ಅನುಕಂಪದ ಸಹಾಯ ಕೇಳ್ಲಿ ಅಂತ ಪ್ರಾಸಿಕ್ಯೂಟರ್‌ ಬಳಿ ಕಳಿಸಿದ್ರೆ ನಿಮ್ಮ ಮೈಮೇಲೆ ನೀವೇ ಬಂಡೆ ಎಳ್ಕೊಂಡ್ರಿ. ಮುಂಬೈಗೇ ಕರೆಸಿ ಅಂತ ಅವರು ಆರ್ಡರ್‌ ಮಾಡಿದಾರೆ. ನೋಡಿ ಆರ್ಡರ್‌ ಕಾಪಿ ಇಲ್ಲಿದೆ!’ ಎಂದು ಮತ್ತೊಂದು ಆಜ್ಞಾ ಪತ್ರವನ್ನು ಮುಂದೊಡ್ಡಿದ. ಅದರಲ್ಲಿ ಕ್ಲಿಯರ್‌ ಆಗಿ ನನ್ನ ಹೆಸರು ಮುದ್ರಿತವಾಗಿತ್ತು. ಮುಂಬೈಗೆ ನಾನು ಹೋಗಬೇಕು.

ನನಗೆ ಅಚ್ಚರಿ. ಅದೆಂಥ ಮಿಂಚಿನ ಕಾರ್ಯಾಚರಣೆ! ನನ್ನ ಹೆಸರಿನಲ್ಲಿ ಹತ್ತೇ ನಿಮಿಷದಲ್ಲಿ ಮುದ್ರಿತ ಆದೇಶ ರೆಡಿ! ರೇಖಾ ಅದೇನೋ ಪ್ಲೇಟ್‌ನಲ್ಲಿ ಒಂದಿಷ್ಟು ಫ್ರಿಜ್ಜನ್ನ -ಚಟ್ನಿ, ಲೋಟ ನೀರು ತಂದಾಗ ನಾನು ಬಹುತೇಕ ಕುಸಿದಿದ್ದೆ. ಯಾರು ನನ್ನನ್ನು ಯಾಕಾಗಿ ಇದರಲ್ಲಿ ಸಿಕ್ಕಿಸಿದ್ದು ಎಂದು ಯೋಚಿಸುತ್ತಿದ್ದೆ. ಯಾವ ಲಾಯರ್‌ ನನ್ನ ನೆರವಿಗೆ ಬರಬಹುದು, ಅದೂ ಮುಂಬೈಯಲ್ಲಿ?

ಅತ್ತ ಮೋಕು ಗುರ್‌ ಎನ್ನುತ್ತಿದ್ದ. ‘ಅಲ್ರೀ ಎಂಥ ಪತ್ರಕರ್ತರು ನೀವು? ಹೆಲ್ಪ್‌ ಆಗ್ಲೀ ಅಂತ ಪ್ರಾಸಿಕ್ಯೂಟರ್‌ ಬಳಿ ಕಳಿಸಿದ್ರೆ ಅವರೆದುರೇ ಲೀಗಲ್‌ ಮ್ಯಾಟರ್‌ ಎತ್ತುತ್ತೀರಲ್ರೀ! ಯೂ ಆರ್‌ ಎ ಸಸ್ಪೆಕ್ಟ್‌. ಮುಂಬೈಗೆ ಕರೆಸಿ ನಿಮ್ಮನ್ನ ಡಿಟೆಂಶನ್‌ ಸೆಂಟರ್‌ನಲ್ಲಿ ಇಡಬೇಕು. ಅದು ಒಂದು ವಾರನೂ ಆಗಬಹುದು, 18 ತಿಂಗಳೂ ಆಗಬಹುದು. ಅಲ್ಲಿ ಕೊಲೆಗಡುಕರು, ಸ್ಮಗ್ಲರ್ಸ್‌, ಡ್ರಗ್‌ ಮಾಫಿಯಾ ಎಲ್ಲ ಇರ್ತಾರೆ ನಿಮ್ಮ ಜೊತೆಗೆ. ಯಾವ ಲಾಯರ್ರೂ ಸಹಾಯಕ್ಕೆ ಬರೋದಿಲ್ಲ. ನಿಮ್ಮ ಎಲ್ಲ ಅಕೌಂಟ್‌ಗಳೂ ಫ್ರೀಜ್‌ ಆಗುತ್ತವೆ..’

ನಾನು ಬೆವರತೊಡಗಿದ್ದೆ. ಹಿಂದೆ ಕೀನ್ಯಾದಿಂದ ಬರುವಾಗ ನನ್ನನ್ನು ಹೀಗೇ ದಸ್ತಗಿರಿ ಮಾಡಿ ಡ್ರಗ್‌ ಡೀಲರ್ಸ್‌ ಜೊತೆ, ನಿಗ್ರೊ ಸೈಂಧವರ ಜೊತೆ ಕ್ವಾರಂಟೈನ್‌ಗೆ ನೂಕಿದ್ದರು. ನನ್ನ ‘ಗಗನಸಖಿಯರ ಸೆರಗು ಹಿಡಿದು’ ಕೃತಿಯ ಕೊನೆಯ ಅಧ್ಯಾಯ ಅದೇ ಆಗಿತ್ತು.

[ಭಾಗ-2ರಲ್ಲಿ ಮುಂದುವರೆದಿದೆ…]

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

Download Eedina App Android / iOS

X