ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಸದ್ಯಕ್ಕೆ ನೋಟಿಸ್ ನೀಡಲು ದೆಹಲಿ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಮತ್ತು ಸೋನಿಯಾ ಇಬ್ಬರಿಗೂ ನೋಟಿಸ್ ನೀಡಬೇಕು ಎಂದು ವಿಶೇಷ ನ್ಯಾಯಾಲಯದ ಮುಂದೆ ಜಾರಿ ನಿರ್ದೇಶನಾಲಯ ಮನವಿ ಮಾಡಿದೆ. ಆದರೆ ಸದ್ಯಕ್ಕೆ ನೋಟಿಸ್ ನೀಡಲಾಗದು ಎಂದು ದೆಹಲಿ ಕೋರ್ಟ್ ಹೇಳಿದೆ.
ಇದನ್ನು ಓದಿದ್ದೀರಾ? ಏನಿದು ನ್ಯಾಷನಲ್ ಹೆರಾಲ್ಡ್ ಪ್ರಕರಣ? ರಾಹುಲ್- ಸೋನಿಯಾ ಗಾಂಧಿ ವಿರುದ್ಧದ ಆರೋಪವೇನು?
ನೋಟಿಸ್ ನೀಡುವುದು ಮುಖ್ಯ ಎಂದು ನ್ಯಾಯಾಲಯಕ್ಕೆ ಅನಿಸುವವರೆಗೂ ಅಂತಹ ಆದೇಶವನ್ನು ನೀಡಲಾಗದು ಎಂದು ನ್ಯಾಯಮೂರ್ತಿ ಹೇಳಿದ್ದಾರೆ.
“ಚಾರ್ಜ್‌ಶೀಟ್‌ನಲ್ಲಿ ಕೆಲವು ಮಾಹಿತಿಗಳಿಲ್ಲ. ಈ ದಾಖಲೆಗಳನ್ನು ಒದಗಿಸುವಂತೆ ನಾವು ಇಡಿಗೆ ತಿಳಿಸಿದ್ದೇವೆ. ಅದಾದ ಬಳಿಕವೇ ಕೋರ್ಟ್ ನೋಟಿಸ್ ನೀಡುತ್ತದೆ” ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ವಿಚಾರಣೆಯನ್ನು ಮೇ 2ಕ್ಕೆ ಮುಂದೂಡಿಕೆ ಮಾಡಿದೆ.
ಏನಿದು ನಾಷ್ಯನಲ್ ಹೆರಾಲ್ಡ್ ಪ್ರಕರಣ?
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಮತ್ತು ಸೋನಿಯಾ, ರಾಹುಲ್ ಗಾಂಧಿಯವರ ತೆರಿಗೆ ಮೌಲ್ಯಮಾಪನ ಕೋರಿ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ 2013ರಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದಾಯ ತೆರಿಗೆ ಇಲಾಖೆಗೆ ಅವಕಾಶ ನೀಡುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ಆಧರಿಸಿ ಇಡಿ ಪ್ರಕರಣವನ್ನು ದಾಖಲಿಸಿಕೊಂಡಿದೆ.
ಈ ಪತ್ರಿಕೆಯನ್ನು ಗಾಂಧೀ ಕುಟುಂಬ ವಂಚನೆಯಿಂದ ಸ್ವಾಧೀನಪಡಿಸಿಕೊಂಡಿದೆ ಮತ್ತು ಹಣ ದುರುಪಯೋಗ ಮಾಡಿದೆ ಎಂಬುದು ಸ್ವಾಮಿ ಅವರ ಆರೋಪ. ಗಾಂಧಿ ಕುಟುಂಬವು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕಾಶಕ ಸಂಸ್ಥೆ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್). ಗಾಂಧೀ ಕುಟುಂಬ ಈ ಸಂಸ್ಥೆಯನ್ನು ಖರೀದಿಸುವ ಮೂಲಕ ಅದರ ಆಸ್ತಿಪಾಸ್ತಿಗಳನ್ನು ತಮ್ಮದಾಗಿಸಿಕೊಂಡಿದೆ. ಶೇಕಡ 86ರಷ್ಟು ಷೇರುಗಳು ಗಾಂಧಿ ಕುಟುಂಬದ ನಿಯಂತ್ರಣದಲ್ಲಿವೆ ಎಂದು ಸ್ವಾಮಿ ದೂರಿದ್ದಾರೆ.
ಇದನ್ನು ಓದಿದ್ದೀರಾ? ನ್ಯಾಷನಲ್ ಹೆರಾಲ್ಡ್ ಆಸ್ತಿ ಜಪ್ತಿ: ಇಡಿ ವಿರುದ್ಧ ಕಪಿಲ್ ಸಿಬಲ್ ಆಕ್ರೋಶ
2015ರ ಡಿಸೆಂಬರ್ 19ರಂದು ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯವು ಸೋನಿಯಾ ಮತ್ತು ರಾಹುಲ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿತು. ಇವರಿಬ್ಬರ ಸಂಸ್ಥೆಯಾದ ವೈಐ ಸುಮಾರು ಎರಡು ಸಾವಿರ ಕೋಟಿ ರೂಪಾಯಿ ಮೌಲ್ಯದ ಸಂಸ್ಥೆಯನ್ನು ಬರೀ 50 ಲಕ್ಷ ರೂಪಾಯಿಗೆ ತನ್ನದಾಗಿಸಿಕೊಂಡಿದೆ ಎಂದು ಆರೋಪಿಸಲಾಗಿದೆ.
ಆದರೆ ನ್ಯಾಷನಲ್ ಹೆರಾಲ್ಡ್ ಅನ್ನು ಪುನರುಜ್ಜೀವನಗೊಳಿಸುವುದು ಮತ್ತು ಅದರ ಪರಂಪರೆಯನ್ನು ರಕ್ಷಿಸುವುದು ನಮ್ಮ ಗುರಿಯಾಗಿತ್ತೇ ಹೊರತು ರಿಯಲ್ ಎಸ್ಟೇಟ್‌ನಿಂದ ಲಾಭ ಗಳಿಸುವುದಲ್ಲ ಎಂಬುದು ಕಾಂಗ್ರೆಸ್‌ನ ವಾದವಾಗಿದೆ.
