ಸತತ 24 ವರ್ಷಗಳಿಂದ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ್ದ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಇದೀಗ ತಮ್ಮ ಸ್ಥಾನದಿಂದ ಕೆಳಗಿಳಿಯುತ್ತಿದ್ದಾರೆ. ಜನತಾದಳದಿಂದ ಪ್ರತ್ಯೇಕಗೊಂಡ ನವೀನ್ ಪಟ್ನಾಯಕ್ 1997ರಲ್ಲಿ ತಮ್ಮದೆ ಸ್ವಂತ ಪಕ್ಷ ಬಿಜು ಜನತಾದಳ ಪಕ್ಷ(ಬಿಜೆಡಿ) ಸ್ಥಾಪಿಸಿದ್ದರು.
2000ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 147 ಸದಸ್ಯಬಲದಲ್ಲಿ ಅಮೋಘ 80 ಸ್ಥಾನ ಗೆಲ್ಲುವುದರೊಂದಿಗೆ ಕಾಂಗ್ರೆಸ್‌ಅನ್ನು ಮಣಿಸಿ ಮೊದಲ ಬಾರಿಗೆ ಮುಖ್ಯಮಂತ್ರಿ ಗದ್ದುಗೆ ಏರಿದ್ದರು. ಜನತಾದಳದಲ್ಲಿದ್ದ ನವೀನ್ ಅವರ ತಂದೆ ಬಿಜು ಪಟ್ನಾಯಕ್ 1990 ರಿಂದ 1995ರವರೆಗೆ ಮುಖ್ಯಮಂತ್ರಿಯಾಗಿದ್ದರು. ಅವರ ಸ್ಮರಣಾರ್ಥವಾಗಿಯೇ ನವೀನ್ ಪಟ್ನಾಯಕ್ ತಂದೆಯ ಹೆಸರಿನಲ್ಲಿ ಪಕ್ಷ ಸ್ಥಾಪಿಸಿದ್ದರು.
ಅನಂತರದ ಐದು ಚುನಾವಣೆಗಳಲ್ಲಿ ಸತತವಾಗಿ ಗೆಲುವು ಸಾಧಿಸಿ ಮುಖ್ಯಮಂತ್ರಿಯಾಗಿದ್ದರು. ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಅನಾರೋಗ್ಯದ ಕಾರಣದಿಂದ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ. ಸರ್ಕಾರದ ಎಲ್ಲ ನಿಯಂತ್ರಣವನ್ನು ಮಾಜಿ ಐಪಿಎಸ್ ಅಧಿಕಾರಿ ವಿಕೆ ಪಾಂಡ್ಯಯನ್ ಅವರು ನಿಯಂತ್ರಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಈ ಸುದ್ದಿ ಓದಿದ್ದೀರಾ? ಇಂಡಿಯಾ ಒಕ್ಕೂಟದ ಬಹುಮತ ಸಂಖ್ಯೆಗೆ ತೊಡಕಾದ ಕರ್ನಾಟಕ, ದೆಹಲಿ
ಇವೆಲ್ಲದರ ಲಾಭವನ್ನು ಪಡೆದ ಬಿಜೆಪಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ 77 ವರ್ಷದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ವಿರುದ್ಧ ಹಲವು ಆರೋಪಗಳನ್ನು ಮಾಡಿತ್ತು. ಒಡಿಶಾದ ಎಲ್ಲ ಅಧಿಕಾರಗಳನ್ನು ತಮಿಳುನಾಡಿನಿಂದ ಬಂದಿರುವ ಅಧಿಕಾರಿ ವಿ ಕೆ ಪಾಂಡ್ಯಯನ್ ನಿರ್ವಹಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಪ್ರಚಾರದ ಸಂದರ್ಭದಲ್ಲಿ ಆರೋಪಿಸುತ್ತಿದ್ದರು.
ಒಂದು ವೇಳೆ ಬಿಜೆಡಿ ಗೆದ್ದರೆ ಮುಂದಿನ ಮುಖ್ಯಮಂತ್ರಿಯಾಗಿ ವಿ ಕೆ ಪಾಂಡ್ಯಯನ್ ಅಧಿಕಾರ ಸ್ವೀಕರಿಸುತ್ತಾರೆ ಎನ್ನುವ ವದಂತಿ ರಾಜ್ಯದೆಲ್ಲಡೆ ಹರಡಿತ್ತು. ಇವೆಲ್ಲ ಆರೋಪಗಳನ್ನು ಬಿಜು ಜನತಾದಳ ನಿರಾಕರಿಸಿ ಕಮಲ ಪಕ್ಷದ ವಿರುದ್ಧ ಪ್ರತ್ಯಸ್ತ್ರ ಪ್ರಯೋಗಿಸಿದರೂ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.
147 ಸದಸ್ಯಬಲದ ವಿಧಾನಸಭೆ ಚುನಾವಣೆಯಲ್ಲಿ ಇತ್ತೀಚಿನ ಟ್ರೆಂಡ್‌ಗಳ ಮಾಹಿತಿಯಂತೆ ಬಿಜೆಪಿ 82 ಸ್ಥಾನಗಳಲ್ಲಿ ಮುಂದಿದ್ದರೆ, ಬಿಜೆಪಿ 48 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಕಾಂಗ್ರೆಸ್ 14 ಹಾಗೂ ಇತರರು 3 ಸ್ಥಾನಗಳಲ್ಲಿ ಮುಂದಿದ್ದಾರೆ. ಒಡಿಶಾದ ರಾಜಕೀಯ ಇತಿಹಾಸದಲ್ಲಿಯೇ ಬಿಜೆಪಿ ಇದೇ ಮೊದಲ ಬಾರಿಗೆ ಅಧಿಕಾರಕ್ಕೇರುತ್ತಿದೆ.
21 ಸ್ಥಾನಗಳ ಲೋಕಸಭೆ ಚುನಾವಣೆಯಲ್ಲಿಯೂ ಬಿಜೆಪಿ 19 ರಲ್ಲಿ ಮುಂದಿದ್ದರೆ, ಬಿಜೆಪಿ ಹಾಗೂ ಕಾಂಗ್ರೆಸ್ ತಲಾ ಒಂದು ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.
