ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತ-ಪಾಕಿಸ್ತಾನ ನಡುವೆ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಈ ವೇಳೆ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಕುರಿತು ಪಾಕಿಸ್ತಾನಕ್ಕೆ ಮಾಹಿತಿ ರವಾನಿಸುತ್ತಿದ್ದ ಆರೋಪದ ಮೇಲೆ ನೌಕಾಪಡೆಯ ಸಿಬ್ಬಂದಿಯೊಬ್ಬರನ್ನು ಬಂಧಿಸಲಾಗಿದೆ.
ನೌಕಾಪಡೆಯ ಬಂಧಿತ ಸಿಬ್ಬಂದಿಯನ್ನು ವಿಶಾಲ್ ಯಾದವ್ ಎಂದು ಹೆಸರಿಸಲಾಗಿದೆ. ಈತ ನೌಕಾಪಡೆಯ ಕೇಂದ್ರ ಕಚೇರಿಯಲ್ಲಿ ಗುಮಾಸ್ತ ಕೆಲಸ ಮಾಡುತ್ತಿದ್ದರು. ಈತನನ್ನು ರಾಜಸ್ಥಾನ ಪೊಲೀಸ್ ಪಡೆಯ ಗುಪ್ತಚರ ವಿಭಾಗ ಬಂಧಿಸಿದೆ.
ಹಲವು ವರ್ಷಗಳಿಂದ ಪಾಕಿಸ್ತಾನದ ಗುಪ್ತಚರ ಏಜೆನ್ಸಿ ‘ಐಎಸ್‌ಐ’ಗೆ ಮಾಹಿತಿ ರವಾನಿಸುತ್ತಿದ್ದರು. ಆಪರೇಷನ್ ಸಿಂಧೂರ ಬಗ್ಗೆಯೂ ಮಾಹಿತಿ ನೀಡಿದ್ದರು ಎಂದು ಆರೋಪಿಸಲಾಗಿದೆ.
ಆರೋಪಿಯ ಮೊಬೈಲ್‌ಅನ್ನು ವಶಕ್ಕೆ ಪಡೆಯಲಾಗಿದ್ದು, ಅದರಲ್ಲಿದ್ದ ಹಲವಾರು ದತ್ತಾಂಶಗಳನ್ನು ವಶಪಡಿಸಿಕೊಳ್ಳಾಗಿದೆ. ಅವುಗಳನ್ನು ವಿಶ್ಲೇಷಿಸಿದಾಗ, ಆತ ನೌಕಾಪಡೆ ಮತ್ತು ಇತರ ರಕ್ಷಣಾ ಘಟಕಗಳಿಗೆ ಸಂಬಂಧಿಸಿದ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದರು. ಅದಕ್ಕೆ ಪ್ರತಿಯಾಗಿ ಹಣ ಪಡೆಯುತ್ತಿದ್ದರು ಎಂಬುದು ದೃಢಪಟ್ಟಿರುವುದಾಗಿ ಗುಪ್ತಚರ ವಿಭಾಗ ತಿಳಿಸಿದೆ.
ಈ ಲೇಖನ ಓದಿದ್ದೀರಾ?: ಇರಾನ್-ಇಸ್ರೇಲ್ ಸಂಘರ್ಷ | ಭಾರತದ ಬಾಸ್ಮತಿ ಬೆಳೆವ ರೈತರು-ರಫ್ತುದಾರರಿಗೆ ಸಂಕಷ್ಟ
“ಪಾಕಿಸ್ತಾನದ ಗುಪ್ತಚರ ಏಜೆನ್ಸಿಗಳು ನಡೆಸುವ ಬೇಹುಗಾರಿಕೆ ಚಟುವಟಿಕೆಗಳ ಮೇಲೆ ರಾಜಸ್ಥಾನ ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗವು ನಿರಂತರ ನಿಗಾ ಇರಿಸಿದೆ. ಈ ವೇಳೆ, ಪಾಕ್ ಏಜೆನ್ಸಿ ಜೊತೆಗೆ ಯಾದವ್ ಸಂಪರ್ಕದಲ್ಲಿರುವುದು ಕಂಡುಬಂದಿತು. ಐಎಸ್‌ಐನ ಏಜೆಂಟ್ ಆಗಿದ್ದ ಪ್ರಿಯಾ ಶರ್ಮಾ ಎಂಬ ಮಹಿಳೆಯೊಂದಿಗೆ ಇಂಟರ್‌ನೆಟ್‌ನಲ್ಲಿ ಯಾದವ್ ಮಾಹಿತಿ ಹಂಚಿಕೊಳ್ಳುತ್ತಿದ್ದರು” ಎಂದು ಹಿರಿಯ ಅಧಿಕಾರಿ ವಿಷ್ಣುಕಾಂತ್ ಗುಪ್ತಾ ಹೇಳಿದ್ದಾರೆ.
“ಕ್ರಿಪ್ಟೊ ಕರೆನ್ಸಿಗಳ ಮೂಲಕ ಯಾದವ್ ಹಣ ಪಡೆಯುತ್ತಿದ್ದರು. ಈ ಜಾಲದಲ್ಲಿ ಇನ್ನೂ ಯಾರು ಶಾಮೀಲಾಗಿದ್ದಾರೆ ಎಂಬ ಕುರಿತು ತನಿಖೆ ನಡೆಯುತ್ತಿದೆ. ಸೋರಿಕೆಯಾಗಿರುವ ಮಾಹಿತಿಗಳ ಬಗ್ಗೆಯೂ ತನಿಖೆ ನಡೆಯಲಿದೆ” ಎಂದು ತಿಳಿಸಿದ್ದಾರೆ.