NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

Date:

Advertisements

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ ಪ್ರಕರಣಗಳ ವರದಿಯನ್ನು ‘ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೊ'(ಎನ್‌ಸಿಆರ್‌ಬಿ) ಬಿಡುಗಡೆ ಮಾಡಿದೆ. 2022ಕ್ಕಿಂತ 2023ರಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ 8% ಹೆಚ್ಚಾಗಿದೆ ಎಂಬುದನ್ನು ವರದಿ ಬೊಟ್ಟು ಮಾಡಿದೆ. ದೇಶದಲ್ಲಿ ಒಟ್ಟು 62,41,569 ಅಪರಾಧ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕರ್ನಾಟಕದಲ್ಲಿ 3,62,693 ಅಪರಾಧ ಪ್ರಕರಣಗಳು ದಾಖಲಾಗಿವೆ.

ದೇಶದಲ್ಲಿ ಕೊಲೆ, ಆತ್ಮಹತ್ಯೆ, ಮಹಿಳೆಯರ ಮೇಲಿನ ದೌರ್ಜನ್ಯ, ರೈತ ಆತ್ಮಹತ್ಯೆಗಳ ಸಂಖ್ಯೆಯಲ್ಲಿಯೂ ಏರಿಕೆ ಕಂಡುಬಂದಿವೆ. ಅಪರಾಧಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. 2020ರಿಂದ 2023ರ ವೇಳೆಗೆ ಅಪರಾಧಗಳ ಸಂಖ್ಯೆ 11%ರಷ್ಟು ಏರಿಕೆಯಾಗಿದೆ ಎಂಬುದು ಎನ್‌ಸಿಆರ್‌ಬಿ ವರದಿಯಲ್ಲಿ ಕಂಡುಬಂದಿದೆ.

ಕೊಲೆ ಮತ್ತು ಆತ್ಮಹತ್ಯೆ ಪ್ರಕರಣಗಳು:

Advertisements

2023ರಲ್ಲಿ, ದಾಖಲಾದ ಕೊಲೆ ಪ್ರಕರಣಗಳಿಗಿಂತ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ 7 ಪಟ್ಟು ಹೆಚ್ಚಿದೆ. 2023ರಲ್ಲಿ 27,721 ಕೊಲೆ ಪ್ರಕರಣಗಳು ದಾಖಲಾಗಿದ್ದರೆ, ಅದೇ ವರ್ಷ 1,71,418 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಯುವಜನರು–ಅದರಲ್ಲೂ ವಿದ್ಯಾರ್ಥಿಗಳು ಮತ್ತು ಮಹಿಳೆಯರು ಹೆಚ್ಚಾಗಿ ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ. ಆದಾಗ್ಯೂ, 2022ಕ್ಕೆ ಹೋಲಿಸಿದರೆ 2023ರಲ್ಲಿ ಕೊಲೆ ಪ್ರಕರಣಗಳ ಸಂಖ್ಯೆ 2.8% (28,522) ಕಡಿಮೆಯಾಗಿದೆ. ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ 0.3%ರಷ್ಟು (1,71,000) ಹೆಚ್ಚಾಗಿದೆ

ಈ ನಡುವೆ 2023ರಲ್ಲಿ ಅತೀ ಹೆಚ್ಚು ಕೊಲೆ ಮತ್ತು ಆತ್ಮಹತ್ಯೆ ಪ್ರಕರಣಗಳು ಮಹಾರಾಷ್ಟ್ರದಲ್ಲಿ ನಡೆದಿವೆ. ಮಹಾರಾಷ್ಟ್ರದಲ್ಲಿ, 2,056 ಕೊಲೆಗಳು ಮತ್ತು 22,687 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಕೊಲೆ ಪ್ರಕರಣಗಳಲ್ಲಿ ಉತ್ತರ ಪ್ರದೇಶವು ಎರಡನೇ ಸ್ಥಾನದಲ್ಲಿದ್ದು, 1,846 ಕೊಲೆ ಪ್ರಕರಣಗಳು ದಾಖಲಾಗಿವೆ. ಆತ್ಮಹತ್ಯೆ ಪ್ರಕರಣಗಳಲ್ಲಿ ತಮಿಳುನಾಡು ಎರಡನೇ ಸ್ಥಾನದಲ್ಲಿದ್ದು, 19,483 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ 1,322 ಕೊಲೆ ಮತ್ತು 13,330 ಆತ್ಮಹತ್ಯೆ ಹಾಗೂ 3,015 ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ ಎಂದು ವರದಿ ತಿಳಿಸಿದೆ.

ರೈತ ಆತ್ಮಹತ್ಯೆ: ಗಂಭೀರ ವಿಚಾರವೆಂದರೆ, 2023ರಲ್ಲಿ ದೇಶಾದ್ಯಂತ ಒಟ್ಟು 10,700 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತ ಆತ್ಮಹತ್ಯೆ ಪ್ರಕರಣಗಳಲ್ಲಿ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದ್ದರೆ, ಕರ್ನಾಟಕ 2ನೇ ಸ್ಥಾನದಲ್ಲಿದೆ. 2023ರಲ್ಲಿ, ಕರ್ನಾಟಕದಲ್ಲಿ 2,423 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿದ್ಯಾರ್ಥಿಗಳ ಆತ್ಮಹತ್ಯೆ: 2023ರಲ್ಲಿ ಭಾರತದಲ್ಲಿ ಒಟ್ಟು 13,892 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಹೇಳಿದೆ. 2022ಕ್ಕೆ (13,044) ಹೋಲಿಸಿದರೆ, 6.5% ಹೆಚ್ಚಳವಾಗಿದೆ. 2013ರಿಂದ 2023ರವರೆಗಿನ 10 ವರ್ಷಗಳಲ್ಲಿ ದೇಶದಲ್ಲಿ ಬರೋಬ್ಬರಿ 1,17,849 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುವ ಮೂಲಕ ತಮ್ಮ ಜೀವನವನ್ನು ಅಂತ್ಯಗೊಳಿಸಿಕೊಂಡಿದ್ದಾರೆ.

ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು:

ಭಾರತದಲ್ಲಿ 2023ರಲ್ಲಿ ದಾಖಲಾದ ದಲಿತರ ಮೇಲಿನ ದೌರ್ಜನ್ಯ (ಎಸ್‌ಸಿ/ಎಸ್‌ಟಿ ದೌರ್ಜನ್ಯ) ಪ್ರಕರಣಗಳ ಸಂಖ್ಯೆ 70,749 ಎಂದು ವರದಿ ಹೇಳಿದೆ. 2022ರಲ್ಲಿ ದಾಖಲಾಗಿದ್ದ 67,646 ಪ್ರಕರಣಗಳಿಗೆ ಹೋಲಿಸಿದರೆ, 4.6%ರಷ್ಟು ಹೆಚ್ಚಾಗಿದೆ.

ಒಟ್ಟು 70,749 ಪ್ರಕರಣಗಳಲ್ಲಿ ಎಸ್‌ಸಿ ವಿರುದ್ಧದ ದೌರ್ಜನ್ಯ 57,789 ಮತ್ತು ಎಸ್‌ಟಿ ವಿರುದ್ಧದ ದೌರ್ಜನ್ಯದ 12,960 ಪ್ರಕರಣಗಳು ದಾಖಲಾಗಿವೆ. ದಲಿತರ ವಿರುದ್ಧದ ಅತೀ ಹೆಚ್ಚು ದೌರ್ಜನ್ಯ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ದಾಖಲಾಗಿವೆ. ಅಲ್ಲಿ 15,130 ಪ್ರಕರಣಗಳು ದಾಖಲಾಗಿವೆ. ಇನ್ನು,ಕರ್ನಾಟಕದಲ್ಲಿ ಒಟ್ಟು 2,357 ದಲಿತ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಎಸ್‌ಸಿ ವಿರುದ್ಧದ ದೌರ್ಜನ್ಯಕ್ಕೆ ಸಂಬಂಧಿಸಿದ 1,923 ಮತ್ತು ಎಸ್‌ಟಿ ವಿರುದ್ಧದ ದೌರ್ಜನ್ಯಕ್ಕೆ ಸಂಬಂಧಿಸಿದ 434 ಪ್ರಕರಣಗಳಿವೆ.

ದಲಿತರ ಮೇಲಿನ ದೌರ್ಜನ್ಯದಿಂದ ದಲಿತರ ಹತ್ಯೆಗಳು ಕೂಡ ಹೆಚ್ಚಾಗಿ ಉತ್ತರ ಪ್ರದೇಶದಲ್ಲಿಯೇ ಘಟಿಸಿವೆ. ಉತ್ತರ ಪ್ರದೇಶದಲ್ಲಿ 250ಕ್ಕೂ ಹೆಚ್ಚು ಸಾವುಗಳು ಸಂಭವಿಸಿದ್ದರೆ, ಕರ್ನಾಟಕದಲ್ಲಿ 50ಕ್ಕೂ ಹೆಚ್ಚು ಸಾವುಗಳ ವರದಿಯಾಗಿವೆ.

ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು:

ಗಮನಾರ್ಹವಾಗಿ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. 2023ರಲ್ಲಿ ದೇಶಾದ್ಯಂತ ಒಟ್ಟು 6,07,705 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ, 4,45,256 ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಾಗಿವೆ. ಈ ಪೈಕಿ, 1,33,676 ಗಂಡ-ಆತನ ಕುಟುಂಬದಿಂದ ದೌರ್ಜನ್ಯ, 31,516 ಅತ್ಯಾಚಾರ, 20,446 ಲೈಂಗಿಕ ಕಿರುಕುಳ ಪ್ರಕರಣಗಳು ಸೇರಿವೆ.

ಅಂತೆಯೇ, ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 1,62,449 ಪ್ರಕರಣಗಳು ದಾಖಲಾಗಿವೆ. ಈ ಪೈಕಿ, ಪೋಕ್ಸೋ ಕಾಯ್ದೆ ಅಡಿ 1,53,147 ಪ್ರಕರಣಗಳು ದಾಖಲಾಗಿವೆ. ಅಪಹರಣ, ಕೊಲೆಗೆ ಸಂಬಂಧಿದಂತೆ 9,302 ಪ್ರಕರಣಗಳು ದಾಖಲಾಗಿವೆ.

ಕರ್ನಾಟಕದಲ್ಲಿ 2023ರಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ, ಒಟ್ಟು 69,555 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 51,422 ಪ್ರಕರಣಗಳು ದಾಖಲಾಗಿವೆ. ಈ ಸಂಖ್ಯೆಯೂ 2022ಕ್ಕೆ (45,000) ಹೋಲಿಸಿದರೆ 14.16%ರಷ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ, ಕರ್ನಾಟಕದಲ್ಲಿ ಮಕ್ಕಳ ವಿರುದ್ಧದ ದೌರ್ಜನ್ಯಕ್ಕೆ ಸಂಬಂಧಿಸಿದ 18,133 ಪ್ರಕರಣಗಳು ದಾಖಲಾಗಿವೆ. 2022ಕ್ಕೆ (16,227) ಹೋಲಿಸಿದರೆ, ಪ್ರಕರಣಗಳ ಸಂಖ್ಯೆ 11.78%ರಷ್ಟು ಏರಿಕೆಯಾಗಿದೆ.

ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಬೆಂಗಳೂರು ಮೊದಲ 3 ನಗರಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಬೆಂಗಳೂರಿನಲ್ಲಿಯೇ 1,013 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲಿಯೇ ಮಹಿಳೆಯರ ಮೇಲೆ ಹೆಚ್ಚು ದೌರ್ಜನ್ಯಗಳು ದಾಖಲಾದ ನಗರ ಎಂಬ ಕುಖ್ಯಾತಿಗೆ ಗುರಿಯಾಗಿದೆ. ಅಂತೆಯೇ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿಯೂ ಬೆಂಗಳೂರು 3ನೇ ಸ್ಥಾನದಲ್ಲಿದ್ದು, 1,982 ಪ್ರಕರಣಗಳು ದಾಖಲಾಗಿವೆ.

ಅಪಹರಣ ಪ್ರಕರಣಗಳು:

ಭಾರತದಲ್ಲಿ 1,13,564 ಅಪಹರಣ ಪ್ರಕರಣಗಳು ದಾಖಲಾಗಿವೆ ಎಂದು ಎನ್‌ಸಿಆರ್‌ಬಿ ವರದಿ ಹೇಳಿದೆ. 2022ರಲ್ಲಿ ದಾಖಲಾಗಿದ್ದ 1,07,588 ಪ್ರಕರಣಗಳಿಗೆ ಹೋಲಿಸಿದರೆ, 5.6%ರಷ್ಟು ಹೆಚ್ಚಾಗಿದೆ. ಒಟ್ಟು ಅಪಹರಣ ಪ್ರಕರಣಗಳಲ್ಲಿ 79,884 ಮಕ್ಕಳ ಅಪಹರಣ ಮತ್ತು 88,605 ಮಹಿಳೆಯರ ಅಪಹರಣ ಪ್ರಕರಣಗಳಿವೆ.

ಅತೀ ಹೆಚ್ಚು ಅಪಹರಣಗಳು ಉತ್ತರ ಪ್ರದೇಶದಲ್ಲಿ ನಡೆದಿವೆ. ಆ ರಾಜ್ಯದಲ್ಲಿ 15,000 ಪ್ರಕರಣಗಳ ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿ ಬಿಹಾರ ಮತ್ತು ಮಹಾರಾಷ್ಟ್ರ ಇವೆ.

ಈ ಲೇಖನ ಓದಿದ್ದೀರಾ?: ಸಿದ್ದರಾಮಯ್ಯ ಗ್ಯಾರಂಟಿ ಕಾಪಿ: ಬಿಹಾರದ ಮಹಿಳೆಯರ ಮೂಗಿಗೆ ತುಪ್ಪ ಸವರಿದ ಮೋದಿ!

ಕರ್ನಾಟಕದಲ್ಲಿ 3,462 ಅಪಹರಣ ಪ್ರಕರಣಗಳು ದಾಖಲಾಗಿದ್ದು, 2022ರಲ್ಲಿ ದಾಖಲಾಗಿದ್ದ 3,147 ಪ್ರಕರಣಗಳಿಗಿಂತ 10%ರಷ್ಟು ಹೆಚ್ಚಾಗಿದೆ. ಒಟ್ಟು ಅಪಹರಣ ಪ್ರಕರಣಗಳಲ್ಲಿ 2,456 ಮಕ್ಕಳ ಅಪಹರಣ ಮತ್ತು 2,089 ಮಹಿಳೆಯರ ಅಪಹರಣ ಪ್ರಕರಣಗಳಿವೆ.

ಈ ಪೈಕಿ, ಬೆಂಗಳೂರಿನಲ್ಲಿಯೇ 1,158 ಪ್ರಕರಣಗಳು ದಾಖಲಾಗಿದ್ದು, ಅತೀ ಹೆಚ್ಚು ಅಪಹರಣ ಪ್ರಕರಣಗಳು ದಾಖಲಾದ ನಗರಗಳಲ್ಲಿ ಬೆಂಗಳೂರು 3ನೇ ಸ್ಥಾನದಲ್ಲಿದೆ. ದೆಹಲಿಯಲ್ಲಿ 5,681 ಪ್ರಕರಣಗಳು ದಾಖಲಾಗಿದ್ದು ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಮುಂಬೈ ಇದ್ದು, ಅಲ್ಲಿ 1789 ಪ್ರಕರಣಗಳು ದಾಖಲಾಗಿವೆ.

ಅಪಘಾತ ಪ್ರಕರಣಗಳು:

ರಸ್ತೆ ಅಪಘಾತ: ಎನ್‌ಸಿಆರ್‌ಬಿ ವರದಿಯ ಪ್ರಕಾರ, ಭಾರತದಲ್ಲಿ 2023ರಲ್ಲಿ ಒಟ್ಟು 4,64,029 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿವೆ. 2022ಕ್ಕೆ ಹೋಲಿಸಿದರೆ, 17,261 ಅಂದರೆ, 3.9%ರಷ್ಟು ಪ್ರಕರಣಗಳು ಹೆಚ್ಚಾಗಿವೆ. 2022ರಲ್ಲಿ 4,46,768 ಪ್ರಕರಣಗಳು ದಾಖಲಾಗಿದ್ದವು. 2023ರಲ್ಲಿ, ರಸ್ತೆ ಅಪಘಾತಗಳಿಗೆ ಬರೋಬ್ಬರಿ 1,73,826 ಮಂದಿ ಬಲಿಯಾಗಿದ್ದಾರೆ. ಮೃತರಲ್ಲಿ 45.8% ಮಂದಿ ದ್ವಿಚಕ್ರ ವಾಹನ ಸವಾರರೇ ಆಗಿದ್ದಾರೆ.

ಅಪಘಾತ ಪ್ರಕರಣಗಳಲ್ಲಿ ಉತ್ತರ ಪ್ರದೇಶವು ಅಗ್ರ ಸ್ಥಾನದಲ್ಲಿದ್ದು, ಅಲ್ಲಿ, 37,764 ಅಪಘಾತ ಪ್ರಕರಣಗಳು ದಾಖಲಾಗಿವೆ. ಅಲ್ಲಿ, ಒಟ್ಟು 23,947 ಮಂದಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ 12,322 ಮಂದಿ ಅಪಘಾತಕ್ಕೆ ಬಲಿಯಾಗಿದ್ದಾರೆ. ಬೆಂಗಳೂರು ನಗರದಲ್ಲಿ 915 ಸಾವುಗಳು ಸಂಭವಿಸಿದ್ದು, ದೆಹಲಿ (1,457) ನಂತರ ಹೆಚ್ಚು ಅಪಘಾತ ಸಾವುಗಳ ಸಂಭವಿಸಿದ 2ನೇ ನಗರ ಎಂಬ ಕುಖ್ಯಾತಿಯನ್ನು ಬೆಂಗಳೂರು ಪಡೆದುಕೊಂಡಿದೆ.

ರೈಲ್ವೇ ಅಪಘಾತ: ಭಾರತದಲ್ಲಿ ಒಟ್ಟು 24,678 ರೈಲ್ವೇ ಅಪಘಾತ ಪ್ರಕರಣಗಳು ದಾಖಲಾಗಿವೆ. 2022ರಲ್ಲಿ ದಾಖಲಾಗಿದ್ದ 23,139 ಪ್ರಕರಣಗಳಿಗೆ ಹೋಲಿಸಿದರೆ, 6.7%ರಷ್ಟು ಹೆಚ್ಚಾಗಿದೆ. ಈ ಪೈಕಿ, ಮಹಾರಾಷ್ಟ್ರ (5,559) ಮತ್ತು ಉತ್ತರ ಪ್ರದೇಶ (3,212) ಅಗ್ರ ಸ್ಥಾನದಲ್ಲಿವೆ. ದೇಶದಲ್ಲಿ ಒಟ್ಟು 21,803 ಮಂದಿ ರೈಲ್ವೇ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ 3,445, ಉತ್ತರ ಪ್ರದೇಶದಲ್ಲಿ 3,149 ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ 2023ರಲ್ಲಿ ಒಟ್ಟು 852 ರೈಲ್ವೇ ಅಪಘಾತ ಪ್ರಕರಣಗಳು ದಾಖಲಾಗಿವೆ. 792 ಸಾವುಗಳು ಸಂಭವಿಸಿವೆ ಎಂದು ವರದಿ ಹೇಳಿದೆ.

ಸೈಬರ್ ಅಪರಾಧ ಪ್ರಕರಣಗಳು:

2023ರಲ್ಲಿ ಭಾರತದಲ್ಲಿ ಒಟ್ಟು 86,420 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಎನ್‌ಸಿಆರ್‌ಬಿ ವರದಿ ವಿವರಿಸಿದೆ. ಈ ಪ್ರಕರಣಗಳು 2022ರಲ್ಲಿ ದಾಖಲಾಗಿದ್ದ 65,893 ಪ್ರಕರಣಗಳಿಗೆ ಹೋಲಿಸಿದರೆ, 31.2%ರಷ್ಟು ಹೆಚ್ಚಾಗಿವೆ. ಈ ಒಟ್ಟು ಪ್ರಕರಣಗಳಲ್ಲಿ ವಂಚನೆ (59,526), ಲೈಂಗಿಕ ಶೋಷಣೆ (4,199) ಹಾಗೂ ದಸ್ತಾವೇಜು (3,326) ಪ್ರಕರಣಗಳೇ ಹೆಚ್ಚು.

ಸೈಬರ್ ಅಪರಾಧ ಪ್ರಕರಣಗಳಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 21,889 ಪ್ರಕರಣಗಳು ದಾಖಲಾಗಿವೆ. 2022ಕ್ಕೆ ಹೋಲಿಸಿದರೆ ಬರೋಬ್ಬರಿ 74%ರಷ್ಟು ಪ್ರಕರಣಗಳು ಹೆಚ್ಚಾಗಿವೆ. 2022ರಲ್ಲಿ ಕರ್ನಾಟಕದಲ್ಲಿ 12,556 ಪ್ರಕರಣಗಳು ದಾಖಲಾಗಿದ್ದವು.

ಗಮನಾರ್ಹವಾಗಿ, ಬೆಂಗಳೂರು ನಗರದಲ್ಲಿಯೇ, 17,631 ಪ್ರಕರಣಗಳು ದಾಖಲಾಗಿದ್ದು, ಭಾರತದ ಇತರ ನಗರಗಳಿಗೆ ಹೋಲಿಸಿದರೆ, ಬೆಂಗಳೂರಿನಲ್ಲಿಯೇ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ.

2023ರಲ್ಲಿ ದಾಖಲಾದ ಒಟ್ಟು ಸೈಬರ್ ಅಪರಾಧ ಪ್ರಕರಣಗಳಲ್ಲಿ ಕರ್ನಾಟಕ ನಂತರ, 2ನೇ ಸ್ಥಾನದಲ್ಲಿ ತೆಲಂಗಾಣ (18,236) ಮತ್ತು 2ನೇ ಸ್ಥಾನದಲ್ಲಿ ಉತ್ತರ ಪ್ರದೇಶ (10,794) ಇವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾಶ್ಮೀರದ ಹಳ್ಳಿಗಳಲ್ಲಿ ಮುಟ್ಟು ಈಗಲೂ ಗುಟ್ಟು: ಐದು ದಿನದ ರೋಗ ಅಂತ ಕರೀತಾರೆ!

"ಕಾಲ ಎಷ್ಟು ಬದಲಾದರೂ ಜಮ್ಮು ಮತ್ತು ಕಾಶ್ಮೀರದ ಹಲವು ಹಳ್ಳಿಗಳಲ್ಲಿ ಇಂದಿಗೂ...

ಕರೂರ್ ದುರಂತ: 41 ಜನರ ಸಾವಿನ ನಂತರ ಟಿವಿಕೆ ರ‍್ಯಾಲಿ ತಾತ್ಕಾಲಿಕ ಸ್ಥಗಿತ

ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ನಾಯಕ ವಿಜಯ್ ಅವರು ಬುಧವಾರ ತಮ್ಮ...

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಶೇ. 3 ರಷ್ಟು ತುಟ್ಟಿಭತ್ಯೆ ಹೆಚ್ಚಳ; ಸಚಿವ ಸಂಪುಟ ಅನುಮೋದನೆ

ಕೇಂದ್ರ ಸಂಪುಟ ಬುಧವಾರ ನಡೆದ ಸಭೆಯಲ್ಲಿ ಕೇಂದ್ರ ಸರ್ಕಾರದ ಉದ್ಯೋಗಿಗಳು ಮತ್ತು...

ಭಾರತದ ಅಗ್ರ ಕೋಟ್ಯಾಧಿಪತಿಗಳಲ್ಲಿ ಮಹಿಳೆಗೆ ಸ್ಥಾನ; ಅತೀ ಶ್ರೀಮಂತ ಮಹಿಳೆ ರೋಶ್ನಿ ಮಲ್ಹೋತ್ರಾ!

ಭಾರತದ ಬಿಲಿಯನೇರ್‌ಗಳ ಇತಿಹಾಸದಲ್ಲಿ ಐತಿಹಾಸಿಕ ಬೆಳವಣಿಗೆಯೊಂದು ನಡೆದಿದೆ. ಇದೇ ಮೊದಲ ಬಾರಿಗೆ...

Download Eedina App Android / iOS

X