ದಲಿತರು ಹೆಚ್ಚಾಗಿ ವಾಸಿಸುತ್ತಿದ್ದ ಬಿಹಾರದ ನವಾಡ ಗ್ರಾಮದಲ್ಲಿ ಬುಧವಾರ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು ಸುಮಾರು 80 ಮನೆ ಸುಟ್ಟು ಭಸ್ಮವಾಗಿದೆ. ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಘಟನೆಯ ನಂತರ ಉಪವಿಭಾಗಾಧಿಕಾರಿ ಅಖಿಲೇಶ್ ಕುಮಾರ್ ಸೇರಿದಂತೆ ಅಧಿಕ ಸಂಖ್ಯೆಯಲ್ಲಿ ಪೊಲೀಸ್ ಪಡೆ ಸ್ಥಳಕ್ಕೆ ತಲುಪಿದೆ. ಇಡೀ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸುಮಾರು 79-80 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಪ್ರಾಥಮಿಕ ವರದಿಗಳು ಸೂಚಿಸಿದ್ದರೂ ನಾವಡ ನಗರ ಎಸ್‌ಡಿಪಿಒ ಮಾತ್ರ ಕೇವಲ 25 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ದಲಿತ ಬಾಲಕನಿಗೆ ಪೊಲೀಸರಿಂದಲೇ ಚಿತ್ರಹಿಂಸೆ; ಬಾಲಕ ಸಾವು
“ಸುಮಾರು 20-25 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿಯಾಗಿಲ್ಲ. ಮೇಲ್ನೋಟಕ್ಕೆ ಇದು ಜಮೀನಿನ ಸಮಸ್ಯೆ ಎಂದು ತೋರುತ್ತದೆ. ಅಧಿಕಾರಿಗಳು ಸ್ಥಳದಲ್ಲಿದ್ದು ಕೆಲವರನ್ನು ಬಂಧಿಸಿದ್ದಾರೆ. ಇಂತಹ ಅಪರಾಧ ಮಾಡಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ಪಾಸ್ವಾನ್, ಮಾಂಝಿ ಸಮುದಾಯದ ಜಮೀನು ವಿವಾದ
ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ದೇದೂರು ಗ್ರಾಮದ ಕೃಷ್ಣನಗರದ ದಲಿತರ ಕೇರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ದುಷ್ಕರ್ಮಿಗಳು ಗುಂಡುಗಳನ್ನೂ ಹಾರಿಸಿದ್ದಾರೆ ಎಂದು ವರದಿಯಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಸಾಗುವಳಿ ಮಾಡದ ಭೂಮಿಗೆ ಸಂಬಂಧಿಸಿದಂತೆ ಪಾಸ್ವಾನ್ ಮತ್ತು ಮಾಂಝಿ ಸಮುದಾಯದ ಜನರ ನಡುವೆ ದೀರ್ಘಕಾಲದಿಂದ ವಿವಾದವಿದೆ. ಎರಡೂ ಸಮುದಾಯದವರಿಗೂ ಸರ್ಕಾರಿ ಪತ್ರ ಸಿಕ್ಕಿದ್ದು, ವಿಷಯ ಸದ್ಯ ನ್ಯಾಯಾಲಯದಲ್ಲಿದೆ.
“ನಾವು 15-20 ವರ್ಷಗಳಿಂದ ಸರಕಾರಿ ಜಮೀನಿನಲ್ಲಿ ವಾಸ ಮಾಡುತ್ತಿದ್ದೇವೆ. ಸಂಜೆ ವೇಳೆಗೆ ನಂದು ಪಾಸ್ವಾನ್ ಮತ್ತು ನೂರಾರು ಮಂದಿ ಸೇರಿ ಗ್ರಾಮಕ್ಕೆ ಏಕಾಏಕಿ ಬೆಂಕಿ ಹಚ್ಚಿದ್ದಾರೆ” ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದರಿಂದಾಗಿ ಈ ಜಮೀನಿನಲ್ಲಿ ವಾಸಿಸುತ್ತಿದ್ದ ಗ್ರಾಮಸ್ಥರೆಲ್ಲರ ಮನೆಗಳು ಸುಟ್ಟು ಭಸ್ಮವಾಗಿವೆ.
ಈ ನಡುವೆ ಘಟನೆಯ ಬಗ್ಗೆ ಮಾಹಿತಿ ಲಭಿಸಿದ ಕೂಡಲೇ ಅಗ್ನಿಶಾಮಕ ದಳವು ಸ್ಥಳಕ್ಕೆ ಧಾವಿಸಿದೆ ಎಂದು ಸದರ್ ಎಸ್‌ಡಿಒ ಅಖಿಲೇಶ್ ಕುಮಾರ್ ತಿಳಿಸಿದ್ದಾರೆ. ಪೊಲೀಸ್ ತನಿಖೆ ನಡೆಯುತ್ತಿದೆ.
VIDEO | Bihar: Dozens of houses were set on fire in Nawada district on Wednesday evening, police said. Preliminary investigation suggested that a land dispute could be the cause behind the incident that happened in Manjhi Tola in Mufassil police station area, they said.#Nawada… pic.twitter.com/HIcHtQJajD
— Press Trust of India (@PTI_News) September 19, 2024
