ಮುಂಬೈನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಎಲ್ಲೆಡೆ ನೀರು ತುಂಬಿದೆ, ಸಂಚಾರ ಅಸ್ತವ್ಯಸ್ತವಾಗಿದೆ. ನಿನ್ನೆ(ಆಗಸ್ಟ್ 19) ಸಂಜೆ ಮುಂಬೈನಲ್ಲಿ ಭಾರೀ ಮಳೆಯ ನಡುವೆ ಎರಡು ಮೊನೋ ರೈಲುಗಳು ಕೆಟ್ಟು ನಿಂತಿದ್ದು ನೂರಾರು ಪ್ರಯಾಣಿಕರು ಸಿಲುಕಿಕೊಂಡಿದ್ದರು. ಬಳಿಕ ರೈಲಿನಲ್ಲಿದ್ದ 782 ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ.
ನಿನ್ನೆ ಸಂಜೆ ಸುಮಾರು 6.38ಕ್ಕೆ ಕಿಕ್ಕಿರಿದು ತುಂಬಿದ್ದ ಮೊನೋ ರೈಲು ವಿದ್ಯುತ್ ಸರಬರಾಜು ಸಮಸ್ಯೆಯಿಂದಾಗಿ ಮೈಸೂರು ಕಾಲೋನಿ ಮತ್ತು ಭಕ್ತಿ ಪಾರ್ಕ್ ನಡುವೆ ಸಿಲುಕಿಕೊಂಡಿತು. ಈ ರೈಲಿನಲ್ಲಿ 582 ಪ್ರಯಾಣಿಕರು ಇದ್ದರು ಎಂದು ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (MMRDA) ತಿಳಿಸಿದೆ.
ಇದನ್ನು ಓದಿದ್ದೀರಾ? ಶತಮಾನದ ದಾಖಲೆ ಮಳೆಗೆ ತತ್ತರಿಸಿದ ಮುಂಬೈ; ವಿಮಾನ, ರೈಲು, ಜನಜೀವನ ಅಸ್ತವ್ಯಸ್ತ
ಅದಾದ ಸುಮಾರು ಒಂದು ಗಂಟೆಯ ನಂತರ, 200 ಪ್ರಯಾಣಿಕರನ್ನು ಹೊಂದಿದ್ದ ಮತ್ತೊಂದು ಮೊನೋ ರೈಲು ಆಚಾರ್ಯ ಅತ್ರೆ ಮತ್ತು ವಡಾಲಾ ನಿಲ್ದಾಣದ ನಡುವೆ ಹಠಾತ್ ಸ್ಥಗಿತಗೊಂಡಿದೆ. ರೈಲನ್ನು ಹತ್ತಿರದ ವಡಾಲಾ ನಿಲ್ದಾಣಕ್ಕೆ ಎಳೆದ ಬಳಿಕ ರೈಲನ್ನು ವಡಾಲಾ ನಿಲ್ದಾಣಕ್ಕೆ ಎಳೆದೊಯ್ದು ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು.
ಗಂಟೆಗೆ ಸರಾಸರಿ 65 ಕಿಮೀ ವೇಗದಲ್ಲಿ ಚಲಿಸುವ ಮೊನೋ ರೈಲು ನಿರ್ವಹಿಸುವ ಏಕೈಕ ನಗರ ಮುಂಬೈ. ಪ್ರತಿ ಕೋಚ್ 18 ಆಸನಗಳನ್ನು ಸೇರಿ ಒಟ್ಟು 124 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ.
“ಪ್ರಾಥಮಿಕ ತನಿಖೆಯಲ್ಲಿ, ಜನದಟ್ಟಣೆಯಿಂದಾಗಿ, ಮೊನೋ ರೈಲಿನ ಒಟ್ಟು ತೂಕ ಸುಮಾರು 109 ಮೆಟ್ರಿಕ್ ಟನ್‌ಗಳಿಗೆ ಏರಿದೆ. ಇದು ಅದರ ಮೂಲ ವಿನ್ಯಾಸ ಸಾಮರ್ಥ್ಯವಾದ 104 ಟನ್‌ಗಳನ್ನು ಮೀರಿದೆ ಎಂದು ತಿಳಿದುಬಂದಿದೆ. ಈ ಹೆಚ್ಚುವರಿ ತೂಕವು ಪವರ್ ರೈಲ್ ಮತ್ತು ಪ್ರಸ್ತುತ ಕಲೆಕ್ಟರ್ ನಡುವೆ ಯಾಂತ್ರಿಕ ಸಂಪರ್ಕ ಕಡಿತಕ್ಕೆ ಕಾರಣವಾಯಿತು” ಎಂದು ಮೋನೋರೈಲ್ ಅನ್ನು ನಿರ್ವಹಿಸುವ MMRDA ತಿಳಿಸಿದೆ.
ಇನ್ನು ಸ್ಥಗಿತಗೊಂಡಿದ್ದ ಮೊನೋ ರೈಲಿನಲ್ಲಿ ಅಧಿಕ ಜನರು ಇದ್ದ ಕಾರಣ ರೈಲು ಎಳೆಯುವುದು ಕಷ್ಟವಾಗಿತ್ತು. ಆದ್ದರಿಂದ, ಅಗ್ನಿಶಾಮಕ ದಳ ರಕ್ಷಣಾ ಕಾರ್ಯಾಚರಣೆ ನಡೆಸಬೇಕಾಯಿತು. ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಉಸಿರುಗಟ್ಟಿದ 23 ಪ್ರಯಾಣಿಕರಿಗೆ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಇಬ್ಬರು ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಸಿಯಾನ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
