ಮುಸ್ಲಿಂ ಸಮುದಾಯದ ಯುವಕನೊಬ್ಬ ಹಿಂದೂ ಹುಡುಗಿಯನ್ನು ಪ್ರೀತಿಸಿ ಓಡಿ ಹೋಗಿದ್ದಕ್ಕೆ ಯುವಕನ ತಂದೆ-ತಾಯಿಯನ್ನು ಯುವತಿ ಕುಟುಂಬದವರು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ನಡೆದಿದೆ.
ಶುಕ್ರವಾರ (ಆಗಸ್ಟ್ 19) ನಡೆದ ದಾಳಿಯಲ್ಲಿ ದಂಪತಿಗಳಾದ ಅಬ್ಬಾಸ್ ಮತ್ತು ಅವರ ಪತ್ನಿ ಕಮರುಲ್ ನಿಶಾ ಸ್ಥಳದಲ್ಲೇ ಮೃತಪಟ್ಟಿದ್ದು, ಆರೋಪಿಗಳೆಲ್ಲರೂ ಸ್ಥಳದಿಂದ ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ.
ಕೆಲವು ವರ್ಷಗಳ ಹಿಂದೆ ಅಬ್ಬಾಸ್ ಅವರ ಮಗ ಪಕ್ಕದ ಮನೆಯ ಹಿಂದು ಸಮುದಾಯದ ಹುಡುಗಿಯೊಂದಿಗೆ ಓಡಿಹೋಗಿದ್ದ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಅಬ್ಬಾಸ್ ಅವರ ಪುತ್ರನನ್ನು ಜೈಲಿಗೆ ಕಳುಹಿಸಲಾಗಿತ್ತು ಎಂದು ಸೀತಾಪುರ ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಲಡಾಕ್‌ನಲ್ಲಿ 130 ಕಿಮೀ ಬೈಕ್ ಸವಾರಿ ಮಾಡಿದ ರಾಹುಲ್ ಗಾಂಧಿ; ಈ ವಾರ ಕಾರ್ಗಿಲ್‌ಗೆ ಭೇಟಿ
ಕೆಲವು ದಿನಗಳ ಹಿಂದೆ ಅಬ್ಬಾಸ್ ಅವರ ಮಗ ಜೈಲಿನಿಂದ ಹೊರಬಂದಾಗ, ಕುಟುಂಬದ ಕೆಲವು ಸದಸ್ಯರು ದಂಪತಿ ಮೇಲೆ ದಾಳಿ ನಡೆಸಲು ಯೋಜಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮಸ್ಥರ ಪ್ರಕಾರ ಮೃತ ದಂಪತಿಯ ಪುತ್ರ ಹಾಗೂ ಶೌಕತ್ ರಾಂಪಾಲ್ ಅವರ ಪುತ್ರಿ ರೂಬಿ ನಡುವೆ ಪ್ರೇಮ ಸಂಬಂಧವಿತ್ತು. ಶೌಕತ್ 2020 ರಲ್ಲಿ ರೂಬಿಯನ್ನು ಅಪಹರಿಸಿದ್ದರು. ಆಗ ರೂಬಿ ಅಪ್ರಾಪ್ತ ವಯಸ್ಸಿನವಳಾಗಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ಶೌಕತ್ ನನ್ನು ಜೈಲಿಗೆ ಕಳುಹಿಸಿದ್ದರು. ಇದಾದ ನಂತರ ಮತ್ತೆ ಜೂನ್‌ನಲ್ಲಿ ರೂಬಿಯನ್ನು ಅಪಹರಿಸಿ ಮದುವೆಯಾದರು ಎಂದು ಚಕ್ರೇಶ್ ಮಿಶ್ರಾ ಹೇಳಿದ್ದಾರೆ.
ಈ ಕುರಿತು ತನಿಖೆ ನಡೆಯುತ್ತಿದ್ದು, ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನಿಬ್ಬರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.