ನ್ಯೂಯಾರ್ಕ್ ನಗರದ ಮೇಯರ್ ಜೋಹ್ರಾನ್ ಮಮ್ದಾನಿ ಅವರು ನವರಾತ್ರಿ ಆಚರಣೆಯಲ್ಲಿ ಭಾರತೀಯರೊಂದಿಗೆ ಪಾಲ್ಗೊಂಡು ಸಾಂಪ್ರದಾಯಿಕ ಗುಜರಾತಿ ಗರ್ಬಾ ನೃತ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಮಂಗಳವಾರ ನಡೆದ ನವರಾತ್ರಿ ಸಂಭ್ರಮದಲ್ಲಿ ಕಪ್ಪು ಬಣ್ಣದ ಸೂಟ್ ಧರಿಸಿದ್ದ ಮಮ್ದಾನಿ, ಅದರ ಮೇಲೆ ದುಪಟ್ಟಾ ಹೊದ್ದು ಗರ್ಬಾ ನೃತ್ಯದ ಹೆಜ್ಜೆ ಹಾಕಿರುವ ದೃಶ್ಯಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಕಾರ್ಯಕ್ರಮದ ಬಳಿಕ ಅವರು ಸ್ಥಳೀಯ ದೇವಾಲಯವೊಂದಕ್ಕೂ ಭೇಟಿ ನೀಡಿ ಅರ್ಚಕರಿಂದ ಆಶೀರ್ವಾದ ಪಡೆದಿದ್ದಾರೆ. ನವರಾತ್ರಿ ಹಬ್ಬದ ಅಂಗವಾಗಿ ಹಿಂದೂ ಸಮುದಾಯಕ್ಕೆ ಶುಭಾಶಯ ಕೋರಿರುವ ಮಮ್ದಾನಿ, ದಕ್ಷಿಣ ಏಷ್ಯಾದ ವಿವಿಧ ಭಾಗಗಳಲ್ಲಿ ಆಚರಿಸಲಾಗುವ ಹಬ್ಬಗಳ ವೈವಿಧ್ಯತೆಯನ್ನು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
“ಈ ವಾರ ನಮ್ಮ ಹಿಂದೂ ನೆರೆಹೊರೆಯವರು ದುರ್ಗಾದೇವಿಯನ್ನು ಆರಾಧಿಸುವ ನವರಾತ್ರಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಗರ್ಬಾ ನೃತ್ಯ, ಸಿಂಧೂರ ಖೇಲಾ, ಹಿರಿಯರಿಂದ ತಿಲಕ ಸ್ವೀಕಾರ ಹಾಗೂ ಮನೆಗಳಲ್ಲಿ ಗೊಂಬೆಗಳ ಪ್ರದರ್ಶನ ಸೇರಿದಂತೆ ಹಲವು ಸಂಪ್ರದಾಯಗಳ ಮೂಲಕ ಹಬ್ಬವನ್ನು ಸಂಭ್ರಮಿಸುತ್ತಾರೆ. ನಿಮ್ಮ ಕುಟುಂಬ ಈ ಹಬ್ಬವನ್ನು ದುರ್ಗಾಪೂಜೆ, ದಶೈನ್ (ನೇಪಾಳಿ ಸಂಪ್ರದಾಯ), ದಸರಾ ಅಥವಾ ನವರಾತ್ರಿ ಎಂದು ಕರೆಯಲಿ, ಈ ಹಬ್ಬವು ಆತ್ಮಾವಲೋಕನ ಮತ್ತು ಹೊಸ ಚೈತನ್ಯದ ಕಾಲವಾಗಲಿ” ಎಂದು ಹಾರೈಸಿದ್ದಾರೆ.
ಮಮ್ದಾನಿ ಅವರು ಈ ಹಿಂದೆಯೂ ದೀಪಾವಳಿ ಹಾಗೂ ರಕ್ಷಾಬಂಧನ ಸೇರಿದಂತೆ ದಕ್ಷಿಣ ಏಷ್ಯಾದ ಹಲವು ಹಬ್ಬಗಳ ಆಚರಣೆಯಲ್ಲಿ ಸ್ಥಳೀಯರೊಂದಿಗೆ ಪಾಲ್ಗೊಂಡಿದ್ದರು.
ಇದನ್ನೂ ಓದಿ: ‘ಯುದ್ಧದ ಕೃತ್ಯ’: ಮಡುರೊ ಸೆರೆಗೆ ಮಮ್ದಾನಿ ಖಂಡನೆ
ಭಾರತೀಯ ಮೂಲದ ಚಿತ್ರ ನಿರ್ದೇಶಕಿ ಮೀರಾ ನಾಯರ್ ಮತ್ತು ಉಗಾಂಡಾದ ಶಿಕ್ಷಣ ತಜ್ಞ ಮಹಮೂದ್ ಮಮ್ದಾನಿ ಅವರ ಪುತ್ರರಾದ ಜೋಹ್ರಾನ್ ಮಮ್ದಾನಿ, ತಮ್ಮ ಬಾಲ್ಯದಲ್ಲಿ ಹಿಂದೂ ಮತ್ತು ಮುಸ್ಲಿಂ ಸಂಪ್ರದಾಯಗಳ ನಡುವೆ ಬೆಳೆದ ಅನುಭವಗಳು ತಮ್ಮ ಮೌಲ್ಯಗಳ ರೂಪುಗೊಳ್ಳುವಿಕೆಗೆ ಪ್ರಭಾವ ಬೀರಿವೆ ಎಂದು ಈ ಹಿಂದೆ ಹೇಳಿಕೊಂಡಿದ್ದರು.
ವಿವಿಧ ಸಂಸ್ಕೃತಿ ಮತ್ತು ಧಾರ್ಮಿಕ ಸಂಪ್ರದಾಯಗಳಿಗೆ ಗೌರವ ಸೂಚಿಸುವ ಅವರ ಈ ನಡೆ, ನ್ಯೂಯಾರ್ಕ್‌ನ ಬಹುಸಂಸ್ಕೃತಿಯ ಸಮಾಜದಲ್ಲಿ ಹಬ್ಬಗಳ ಮೂಲಕ ಸೌಹಾರ್ದ ಮತ್ತು ಪರಸ್ಪರ ಗೌರವವನ್ನು ಬೆಳೆಸುವ ಪ್ರಯತ್ನವಾಗಿ ಗಮನ ಸೆಳೆದಿದೆ.





