ಮೂರು ದಿನಗಳ ನವಜಾತ ಹೆಣ್ಣು ಮಗುವನ್ನು ಬುಟ್ಟಿಯಲ್ಲಿ ಬಿಟ್ಟು ಹೋಗಿರುವ ಘಟನೆ ಮಹಾರಾಷ್ಟ್ರದ ನವಿ ಮುಂಬೈನಲ್ಲಿ ನಡೆದಿದೆ. ಬುಟ್ಟಿಯಲ್ಲಿ ಮಗುವಿನ ಪೋಷಕರು ಪತ್ರವನ್ನೂ ಬರೆದಿಟ್ಟಿದ್ದಾರೆ. ಆರ್ಥಿಕ ಸ್ಥಿತಿ ಕೆಟ್ಟದಾಗಿರುವ ಕಾರಣ ಮಗುವನ್ನು ಬೆಳೆಸಲು ಸಾಧ್ಯವಾಗದು, ನಮ್ಮನ್ನು ಕ್ಷಮಿಸಿ ಎಂದು ಪತ್ರದಲ್ಲಿ ಬರೆಯಲಾಗಿದೆ.
ನವಿ ಮುಂಬೈನ ಪನ್ವೆಲ್ ಪ್ರದೇಶದ ಟಕ್ಕಾ ಕಾಲೋನಿಯ ರಸ್ತೆಬದಿಯಲ್ಲಿ ನೀಲಿ ಬಣ್ಣದ ಬುಟ್ಟಿಯಲ್ಲಿ ಮಗು ಇರುವುದನ್ನು ಸ್ಥಳೀಯ ನಿವಾಸಿಯೊಬ್ಬರು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಮಗುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಮಧ್ಯಪ್ರದೇಶ | ಆಸ್ಪತ್ರೆ ಸುತ್ತ ತಿರುಗುತ್ತಿದ್ದ ನಾಯಿ ಬಾಯಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ
ಬುಟ್ಟಿಯಲ್ಲಿ ಇಂಗ್ಲಿಷ್‌ನಲ್ಲಿ ಬರೆದ ಪತ್ರ ಕಂಡುಬಂದಿದೆ. ಪತ್ರದಲ್ಲಿ ಮಗುವಿನ ಪೋಷಕರು “ಆರ್ಥಿಕ ಸ್ಥಿತಿ ಸರಿಯಾಗಿಲ್ಲ, ಇದರಿಂದಾಗಿ ಮಗುವನ್ನು ಬೆಳೆಸಲು ಸಾಧ್ಯವಾಗುವುದಿಲ್ಲ, ಬೇರೆ ದಾರಿಯಿರಲಿಲ್ಲ ಕ್ಷಮಿಸಿ” ಎಂದು ಬರೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರು ಮಗುವನ್ನು ಮಕ್ಕಳ ವೈದ್ಯರ ಬಳಿಗೆ ಕರೆದೊಯ್ದಿದ್ದು, ಮಗು ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಪೊಲೀಸರು ಮಗುವಿನ ಪೋಷಕರನ್ನು ಹುಡುಕುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಸದ್ಯ ಪನ್ವೇಲ್ ಪಟ್ಟಣ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
