ಪುಣೆಯ ಕಂಪನಿಯೊಂದರಲ್ಲಿ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಆಗಿ ಕೆಲಸ ಮಾಡುತ್ತಿದ್ದ ಯುವತಿ ಸಾವಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಹೆಚ್‌ಆರ್‌ಸಿ) ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಿಂದ ವಿವರವಾದ ಪ್ರತಿಕ್ರಿಯೆ ನೀಡುವಂತೆ ಕೋರಿದೆ.
ಅರ್ನ್ಸ್ಟ್ ಅಂಡ್ ಯಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷ ವಯಸ್ಸಿನ ಉದ್ಯೋಗಿ ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ ಕಳೆದ ಜುಲೈ 26ರಂದು ಸಾವನ್ನಪ್ಪಿದ್ದರು. ಸಾವಿನ ಬಳಿಕ ಕೆಲಸದ ಒತ್ತಡದಿಂದ ನಮ್ಮ ಮಗಳು ದುರಂತ ಸಾವಿಗೀಡಾಗಿದ್ದಾಳೆಂದು ತಾಯಿ ಗಂಭೀರ ಆರೋಪ ಮಾಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಾನವ ಹಕ್ಕುಗಳ ಆಯೋಗವು ಪ್ರಸ್ತುತ ನಡೆಯುತ್ತಿರುವ ತನಿಖೆಯನ್ನು ಒಳಗೊಂಡಂತೆ ಪ್ರಕರಣದ ಸಮಗ್ರ ವರದಿ ನೀಡುವಂತೆ ಕೋರಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಕಾರ್ಮಿಕ ಸಚಿವಾಲಯವು ಈ ವಿಷಯವನ್ನು ಪರಿಶೀಲಿಸುತ್ತಿದೆ ಎಂದು ಹೇಳಿದ್ದಾರೆ.
ಎನ್‌ಎಚ್‌ಆರ್‌ಸಿ ಪ್ರಕಾರ, ಪೆರಾಯಿಲ್ ಅವರ ಸಾವು ಕಳವಳಕಾರಿಯಾಗಿದೆ. ಕಾರ್ಪೋರೇಟ್ ಕೆಲಸದ ಸಂಸ್ಕೃತಿಯು ಮಾನಸಿಕ ಮತ್ತು ದೈಹಿಕವಾಗು ಉಂಟು ಮಾಡುವ ಹಾನಿಯ ಬಗ್ಗೆ ಆತಂಕಕಾರಿ ಭಾವನೆ ಮೂಡಿಸುತ್ತದೆ. ಇಂತಹ ಬೆಳವಣಿಗೆಗಳಿಂದ ನಿದ್ರಾಹೀನತೆ ಸೇರಿದಂತೆ ಕಾಯಿಲೆಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಅಲ್ಲದೇ ಕಾರ್ಪೋರೇಟ್ ಸಂಸ್ಥೆಗಳು ಅಸಾಧ್ಯ ಗುರಿಗಳತ್ತ ನಿರಂತರ ಅನ್ವೇಷಣೆಯೇ ಇದಕ್ಕೆ ಕಾರಣವಾಗಿದ್ದು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಗಳಿಗೆ ಕಾರಣವಾಗಿದೆ ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಡಿನೋಟಿಫಿಕೇಷನ್ ಹಗರಣ: ಲೋಕಾಯುಕ್ತ ತನಿಖೆ ತೆವಳುತ್ತಿರುವುದೇಕೆ?
ಈ ಘಟನೆ ಬೆನ್ನಲ್ಲೇ ಮಾನವ ಹಕ್ಕುಗಳ ಆಯೋಗವು, ಕಾರ್ಪೋರೇಟ್ ಸಂಸ್ಥೆಗಳಲ್ಲಿ ಕಾರ್ಯಸ್ಥಳದ ಸುರಕ್ಷತೆ ಕಾಯ್ದುಕೊಳ್ಳುವ ವಿಶೇಷ ತಂಡವೊಂದನ್ನ ರಚಿಸಿದೆ. ಇದು ಕಾರ್ಮಿಕ ಶಾಸನಗಳು ಹಾಗೂ ನಿಬಂಧನೆಗಳನ್ನು ಪರಿಶೀಲಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಶಿಫಾರಸು ಮಾಡಲಿದೆ. ಖಾಸಗಿ ವಲಯದ ಉದ್ಯೋಗಿಗಳಿಗೆ ಕೆಲಸ ಸಮಯ, ಸುರಕ್ಷತಾ ಕ್ರಮಗಳ ಕುರಿತು ವಿಶೇಷ ಮಾನದಂಡಗಳನ್ನು ರೂಪಿಸಲು ಶಿಫಾರಸು ಮಾಡಲಿದೆ ಎಂದು ಎನ್‌ಹೆಚ್‌ಆರ್‌ಸಿ ಹೇಳಿದೆ.
ಕಂಪನಿಯೊಂದರಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ಸಾವು ಭಾರಿ ಆಕ್ರೋಶ ಕಾರಣವಾಗಿದೆ. ಕೆಲಸದ ಒತ್ತಡದಿಂದ ಮಗಳು ದುರಂತ ಸಾವಿಗೀಡಾಗಿದ್ದಾಳೆಂದು ತಾಯಿ ಗಂಭೀರ ಆರೋಪ ಮಾಡಿದ್ದರು. 26 ವರ್ಷದ ಅನ್ನಾ ಸೆಬಾಸ್ಟಿಯನ್ ಪೆರಾಯಿಲ್, ಕೆಲಸಕ್ಕೆ ಸೇರಿದ 4 ತಿಂಗಳಲ್ಲೇ ಸಾವನ್ನಪ್ಪಿದ್ದರು. ನನ್ನ ಮಗಳಿಗೆ ಕೆಲಸದ ಒತ್ತಡ ಹೆಚ್ಚಿತ್ತು. ಹೀಗಾಗಿ ಆಕೆ ಮೃತಪಟ್ಟಿದ್ದಾಳೆಂದು ಆಕೆಯ ತಾಯಿ ಆರೋಪಿಸಿದ್ದರು. ಮಗಳ ಸಾವಿನ ಬಗ್ಗೆ ಕಂಪನಿಗೆ ಮೃತ ಯುವತಿ ತಾಯಿ ಬರೆದಿರುವ ಪತ್ರ ಮನಕಲಕುವಂತಿತ್ತು. ಅನ್ನಾ ಸೆಬಾಸ್ಟಿಯನ್ ಸಾವಿನ ವಿಚಾರವನ್ನು ಕೇಂದ್ರ ಕಾರ್ಮಿಕ ಸಚಿವಾಲಯ ಗಂಭೀರವಾಗಿ ಪರಿಗಣಿಸಿ ಸಾವಿನ ಕುರಿತ ದೂರನ್ನು ಕೈಗೆತ್ತಿಕೊಂಡಿದ್ದು, ಸೂಕ್ತ ತನಿಖೆ ನಡೆಸುವುದಾಗಿ ತಿಳಿಸಿದೆ.
