2006ರಲ್ಲಿ ನಿತಾರಿ ಹತ್ಯಾಕಾಂಡ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್‌ನಿಂದ ಸುರೇಂದ್ರ ಕೋಲಿ ಬಿಡುಗಡೆಯಾಗಿರುವ ಆದೇಶ ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಹಾಗೂ ಕೆ ವಿ ವಿಶ್ವನಾಥನ್ ಅವರ ಪೀಠ ಸುರೇಂದ್ರ ಕೋಲಿ ಬಿಡುಗಡೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಪರಿಗಣಿಸಲು ಒಪ್ಪಿಕೊಂಡಿದೆ.
ಪೀಠವು ಈ ಮೊದಲು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಂತ್ರಸ್ತ ತಂದೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ಒಪ್ಪಿಕೊಂಡಿತ್ತು. ಸಿಬಿಐ ಸಲ್ಲಿಸಿರುವ ಅರ್ಜಿಯನ್ನು ಕೂಡ ಅದೇ ಅರ್ಜಿಯ ಜೊತೆಯಲ್ಲಿ ಪರಿಗಣಿಸುವುದಾಗಿ ಪೀಠ ತಿಳಿಸಿದೆ. ಸುರೇಂದ್ರ ಕೋಲಿ ಅಲಹಾಬಾದ್ ಹೈಕೋರ್ಟ್‌ನಿಂದ ಬಿಡುಗಡೆಯಾಗಿರುವುದನ್ನು ಪ್ರಶ್ನಿಸಿ ಸಂತ್ರಸ್ತೆಯ ತಂದೆಯಾದ ಪಪ್ಪು ಲಾಲ್ ಎಂಬುವವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರಣಿ ಅವಘಡಗಳಿಂದ ಬಯಲಾದ ಮೋದಿಯವರ ‘ಅಭಿವೃದ್ಧಿ ಮತ್ತು ಆಡಳಿತ’
ಪ್ರಮುಖ ಆರೋಪಿಗಳಾದ ಮೊಣಿಂದರ್ ಸಿಂಗ್ ಪಂದೇರ್ ಹಾಗೂ ಸುರೇಂದ್ರ ಕೋಲಿ ಅವರಿಗೆ ವಿಚಾರಣಾ ನ್ಯಾಯಾಲಯ ಮರಣ ದಂಡನೆ ವಿಧಿಸಿದ ಆದೇಶವನ್ನು ಅಲಹಾಬಾದ್ ಹೈಕೋರ್ಟ್ 2023ರ ಅಕ್ಟೋಬರ್‌ನಲ್ಲಿ ರದ್ದುಗೊಳಿಸಿ ಬಿಡುಗಡೆಗೊಳಿಸಿತ್ತು.
ನೋಯ್ಡಾದ ನತಾರಿ ಗ್ರಾಮದಲ್ಲಿ ಇಬ್ಬರು ಆರೋಪಿಗಳು 20ಕ್ಕೂ ಹೆಚ್ಚು ಮಕ್ಕಳನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಪ್ರಕರಣದ ಬಗ್ಗೆ ಸಿಬಿಐ ನ್ಯಾಯಾಲಯ 2017ರಲ್ಲಿ ಇಬ್ಬರಿಗೂ ಮರಣದಂಡನೆ ವಿಧಿಸಿತ್ತು.