ಬಿಹಾರ | ಯುವಜನ, ಮಹಿಳಾ ಮತದಾರರತ್ತ ನಿತೀಶ್; ಆರ್‌ಜೆಡಿ ಯೋಜನೆ ಕಾಪಿ ಪೇಸ್ಟ್!

Date:

Advertisements
ಮಹಿಳೆಯರು ಮತ್ತು ಯುವಜನರನ್ನು ಉದ್ದೇಶಿಸಿರುವ ಈ ಎರಡು ನಿರ್ಧಾರಗಳ ಹಿಂದೆ ರಾಜಕೀಯ ಲೆಕ್ಕಾಚಾರಗಳಿವೆ. ಮೇ ತಿಂಗಳಲ್ಲಿ ನಡೆದ ಚುನಾವಣಾ ಪೂರ್ವ ಸಮೀಕ್ಷೆಯೊಂದು "ಬಿಹಾರದ ಮಹಿಳೆಯರು ಎನ್‌ಡಿಎಗೆ ಮತ ಹಾಕುವ ಸಾಧ್ಯತೆಯಿದೆ, ಹೆಚ್ಚಿನ ಪುರುಷರು ಮಹಾಘಟಬಂಧನ್‌ಗೆ ಒಲವು ತೋರಿದ್ದಾರೆ" ಎಂದಿದೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಹಣಿಯಾಗಿರುವ ಬಿಹಾರದಲ್ಲಿ ಚುನಾವಣಾ ಪೂರ್ವ ಕಸರತ್ತುಗಳು ಬಿರುಸು ಪಡೆದಿವೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರ ಜಾತಿಗಣತಿ ಮಾಡುವುದಾಗಿ ತಿಂಗಳ ಹಿಂದಷ್ಟೇ ಘೋಷಿಸಿದೆ. ಮತ್ತೊಂದೆಡೆ ಕೇಂದ್ರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಆರೋಪಕ್ಕೆ ಚುನಾವಣಾ ಆಯೋಗ ಗುರಿಯಾಗಿದ್ದು, ಮತದಾರರ ಪಟ್ಟಿಯಲ್ಲಿ ಆಮೂಲಾಗ್ರ ಬದಲಾವಣೆ ತರುತ್ತಿದೆ. ಇದೇ ಹೊತ್ತಿನಲ್ಲಿ ಬಿಹಾರದ ಮಹಿಳೆಯರು ಮತ್ತು ಯುವಜನರನ್ನು ಗುರಿಯಾಗಿಟ್ಟುಕೊಂಡು ನಿತೀಶ್ ಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದೆ.

ಕ್ಯಾಬಿನೆಟ್ ನಿರ್ಧಾರಗಳು ಹೊರಬಿದ್ದ ಬೆನ್ನಲ್ಲೇ, ಜೆಡಿಯು- ಬಿಜೆಪಿ ಮಿತ್ರಕೂಟವು ಪ್ರತಿಪಕ್ಷಗಳ ಆಲೋಚನೆಗಳನ್ನು ಕಾಪಿ ಹೊಡೆಯುತ್ತಿರುವ ಆರೋಪಕ್ಕೂ ಗುರಿಯಾಗಿದೆ. ಆರ್‌ಜೆಡಿ ಈ ಹಿಂದೆ ಘೋಷಿಸಿರುವ ಯೋಜನೆಯೊಂದನ್ನು ಯಥಾವತ್ತು ಕಾಪಿ ಹೊಡೆದಿರುವುದು ಕಂಡು ಬಂದಿದೆ. ಆದರೆ ಈಗ ಹೊರಬಿದ್ದಿರುವ ಎರಡು ನಿರ್ಧಾರಗಳು, ಜಾತಿಯೇತರ ಚುನಾವಣಾ ಪ್ರಭಾವಕ್ಕೆ ಸಂಬಂಧಿಸಿರುವುದಂತೂ ಸ್ಪಷ್ಟ.

ಕ್ಯಾಬಿನೆಟ್ ಘೋಷಿಸಿರುವ ಮೊದಲ ಪ್ರಮುಖ ನಿರ್ಧಾರ- ಮಹಿಳಾ ಮೀಸಲಾತಿ ಕೋಟಾದಲ್ಲಿ ಬದಲಾವಣೆ. ಈಗಾಗಲೇ ಅಸ್ತಿತ್ವದಲ್ಲಿರುವ ಮಹಿಳಾ ಮೀಸಲಾತಿಯು ಮುಂದಿನ ದಿನಗಳಲ್ಲಿ ಪ್ರಮುಖ ತಿರುವು ಪಡೆದುಕೊಳ್ಳಲಿದೆ. ಬಿಹಾರ ರಾಜ್ಯದಲ್ಲಿ ಹುಟ್ಟಿ ಬೆಳೆದ ಮಹಿಳೆಯರಿಗೆ ಶೇ. 35ರಷ್ಟು ಮೀಸಲಾತಿಯನ್ನು ಸರ್ಕಾರಿ ಉದ್ಯೋಗಗಳಲ್ಲಿ ನೀಡಲಾಗುತ್ತಿದೆ.

Advertisements

ಇದರರ್ಥ ಬಿಹಾರದ ನಿವಾಸಿಗಳಲ್ಲದ ಮಹಿಳೆಯರು ಈ ನಿಗದಿತ ಮೀಸಲಾತಿಯನ್ನು ಪಡೆಯಲು ಅರ್ಹರಾಗುವುದಿಲ್ಲ. ಈ ಹಿಂದೆ, ಶಿಕ್ಷಕರ ದೊಡ್ಡ ಮಟ್ಟದ ನೇಮಕಾತಿಯ ಸಮಯದಲ್ಲಿ ವಾಸಸ್ಥಳ ಮಾನದಂಡಗಳನ್ನು ಅನ್ವಯಿಸದ ಕಾರಣ ಸರ್ಕಾರ ಟೀಕೆಗಳನ್ನು ಎದುರಿಸಿತ್ತು. ಇತ್ತೀಚಿನ ದಿನಮಾನಗಳಲ್ಲಿ ವಾಸಸ್ಥಳ ನೀತಿಯನ್ನು ಬಿಹಾರ ಸರ್ಕಾರ ಅನ್ವಯಿಸುತ್ತಿರುವುದು ಇದೇ ಮೊದಲು.

“ಬಿಹಾರದ ನಿವಾಸಿಯಾದ ಮಹಿಳೆ ಈಗ ಉದ್ಯೋಗಗಳಲ್ಲಿ ಅಸ್ತಿತ್ವದಲ್ಲಿರುವ 35% ಮೀಸಲಾತಿಯನ್ನು ಪಡೆಯಲು ಸಾಧ್ಯವಾಗುತ್ತದೆ” ಎಂದು ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಕ್ಯಾಬಿನೆಟ್) ಎಸ್ ಸಿದ್ಧಾರ್ಥ್ ಅವರು ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ಮಂಗಳವಾರ ತಿಳಿಸಿದರು.

ಇದನ್ನೂ ಓದಿರಿ: ಬಿಹಾರ ಮತದಾರ ಪಟ್ಟಿ ಪರಿಷ್ಕರಣೆ: ಪೌರತ್ವ ಸಾಬೀತಿಗೆ ಜನರ ಪರದಾಟ; ಮತದಾನದ ಹಕ್ಕನ್ನೇ ಕಳೆದುಕೊಳ್ಳುವರೇ 50% ಜನರು?

ನಿತೀಶ್ ಸರ್ಕಾರವು 2016ರ ಜನವರಿಯಲ್ಲಿ ಮಹಿಳೆಯರಿಗೆ 35% ಮೀಸಲಾತಿಯನ್ನು ಜಾರಿಗೆ ತಂದಿತ್ತು. ಆ ಸಮಯದಲ್ಲಿ ಜೆಡಿಯು ಪಕ್ಷವು, ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆಗೆ ಅಧಿಕಾರದಲ್ಲಿತ್ತು. ಬಿಹಾರದ ನಿವಾಸಿ ಎಂಬ ಅರ್ಹತೆಯನ್ನು ಪಡೆಯಬೇಕಾದರೆ, ಒಬ್ಬ ವ್ಯಕ್ತಿಯು ಕನಿಷ್ಠ ಮೂರು ವರ್ಷಗಳ ಕಾಲ ರಾಜ್ಯದ ನಿವಾಸಿಯಾಗಿರಬೇಕು, ಮನೆ ಅಥವಾ ಭೂಮಿಯನ್ನು ಹೊಂದಿರಬೇಕು ಹಾಗೂ ಮಹಿಳೆಯರ ವಿಷಯಕ್ಕೆ ಬಂದರೆ ರಾಜ್ಯದ ನಿವಾಸಿಯನ್ನು ಮದುವೆಯಾಗಿರಬೇಕು. ಇಲ್ಲೇ ವಾಸವಿರುವವರು ಮತದಾರರ ಗುರುತಿನ ಚೀಟಿಯನ್ನೂ ಹೊಂದಿರಬೇಕು, ಆದರೆ ಅದು ಕಡ್ಡಾಯ ಅವಶ್ಯಕತೆಯಾಗಿರುವುದಿಲ್ಲ. ರಾಜ್ಯದ ಜನಸಂಖ್ಯೆಯಲ್ಲಿ ಶೇ. 1.57% ಕ್ಕಿಂತ ಕಡಿಮೆ ಜನರು ರಾಜ್ಯ ಸರ್ಕಾರಿ ನೌಕರರಾಗಿದ್ದಾರೆ. ಕಳೆದ ತಿಂಗಳ ಹೊತ್ತಿಗೆ, ರಾಜ್ಯದ ಪೊಲೀಸ್ ಇಲಾಖೆಯಲ್ಲಿ 36,000 ಮಹಿಳೆಯರಿದ್ದರು ಮತ್ತು 2007ರಿಂದ 2.5 ಲಕ್ಷಕ್ಕೂ ಹೆಚ್ಚು ಮಹಿಳಾ ಶಿಕ್ಷಕರ ನೇಮಕವಾಗಿದೆ.

ನಿತೀಶ್ ಆಡಳಿತದಲ್ಲಿ ಮಹಿಳಾ ಪರವಾದ ಕೆಲವು ಕ್ರಮಗಳನ್ನು ತೆಗೆದುಕೊಂಡಿರುವುದು ನಿಜ. ಪಂಚಾಯತ್‌ಗಳಲ್ಲಿ ಮಹಿಳೆಯರಿಗೆ 50% ಕೋಟಾ, 10 ಲಕ್ಷಕ್ಕೂ ಹೆಚ್ಚು ಸ್ವ-ಸಹಾಯ ಗುಂಪುಗಳನ್ನು ಹೆಚ್ಚಿಸುವುದು ಹಾಗೂ ಎಲ್ಲ ವಿಭಾಗದಲ್ಲೂ ಮಹಿಳಾ ಪೊಲೀಸ್ ಬೆಟಾಲಿಯನ್‌ಗಳನ್ನು ರಚಿಸುವುದು- ಇವು ಗಮನ ಸೆಳೆಯುವ ಮಹಿಳಾ ಕೇಂದ್ರಿತ ಕೆಲಸಗಳಾಗಿವೆ.

ಈಗ ಕೈಗೊಂಡಿರುವ ನಿರ್ಧಾರ ಏಕಾಏಕಿ ಹೊರಬಿದ್ದಿದ್ದಲ್ಲ. ಇದಕ್ಕಾಗಿ ಸರಣಿ ಪ್ರತಿಭಟನೆಗಳು ನಡೆದಿವೆ. ರಾಜ್ಯ ಸರ್ಕಾರವು 2020ರ ಡಿಸೆಂಬರ್‌ನಲ್ಲಿ ಶಾಲಾ ಶಿಕ್ಷಕರ ನೇಮಕಾತಿಯ ವೇಳೆ ವಾಸಸ್ಥಳ ಕಡ್ಡಾಯ ನಿಯಮವನ್ನು ಚಿಕ್ಕದಾಗಿ ಪರಿಚಯಿಸಿತು. ಆದರೆ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ಜೂನ್ 2023ರಲ್ಲಿ ಆ ನೀತಿಯನ್ನು ಹಿಂತೆಗೆದುಕೊಂಡಿತು. ಯಾವುದೇ ರಾಜ್ಯದ ಅಭ್ಯರ್ಥಿಗಳು ಬೋಧನಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತು.

ವಾಸಸ್ಥಳ ಆಧಾರದ ಮೀಸಲಾತಿಯ ಬೇಡಿಕೆಯು ಬಿಹಾರದ ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳಿಂದ ಹುಟ್ಟಿಕೊಂಡಿದೆ. ಈ ಮಾರ್ಚ್‌ನಲ್ಲಿ ನೀತಿ ಆಯೋಗವು ಬಿಹಾರಕ್ಕೆ ಸಂಬಂಧಿಸಿದಂತೆ ಪ್ರಕಟಿಸಿದ ಆರ್ಥಿಕ ವರದಿಯ ಪ್ರಕಾರ, ರಾಜ್ಯದ ಅರ್ಥವ್ಯವಸ್ಥೆಯು ಪ್ರಧಾನವಾಗಿ ಕೃಷಿ ಆಧಾರಿತವಾಗಿದೆ. 2022-23 ರ ಹೊತ್ತಿಗೆ ಶೇ. 49.6ರಷ್ಟು ಜನರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ಪಾದನಾ ಉದ್ಯೋಗಗಳ ಪೈಕಿ ಕೇವಲ 5.7% ಜನರು ಮಾತ್ರ ಉದ್ಯೋಗ ಪಡೆದಿದ್ದರು. ಉಳಿದ ಸೇವೆ ಮತ್ತು ನಿರ್ಮಾಣ ಕ್ಷೇತ್ರದ ಉದ್ಯೋಗಗಳಲ್ಲಿ ಕ್ರಮವಾಗಿ ಶೇ. 26 ಮತ್ತು ಶೇ. 18.4 ಮಂದಿ ಇದ್ದಾರೆ.

ಮಹಿಳಾ ಕೋಟಾದ ಹೊಸ ನಿಯಮವು ಈಗಾಗಲೇ ಉದ್ಯೋಗದಲ್ಲಿರುವ ಹೊರ ರಾಜ್ಯದ ಮಹಿಳೆಯರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕ್ಯಾಬಿನೆಟ್ ಹೇಳಿದೆ. “ಅವರು ಯಾವುದೇ ಬದಲಾವಣೆಯಿಲ್ಲದೆ ತಮ್ಮ ಹುದ್ದೆಗಳಲ್ಲಿ ಮುಂದುವರಿಯುತ್ತಾರೆ” ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್ ಸಿದ್ಧಾರ್ಥ್ ತಿಳಿಸಿದ್ದಾರೆ.

ಮತ್ತೊಂದು ಮಹತ್ವದ ನಿರ್ಧಾರ- ಯುವ ಜನ ಆಯೋಗ ರಚನೆ

ಯುವಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುವ ಉದ್ದೇಶದೊಂದಿಗೆ ಬಿಹಾರ ಯುವಜನ ಆಯೋಗದ ರಚನೆಯನ್ನು ಸಚಿವ ಸಂಪುಟ ಘೋಷಿಸಿದೆ. ಇದರಲ್ಲಿ ಅಧ್ಯಕ್ಷರು, ಇಬ್ಬರು ಉಪಾಧ್ಯಕ್ಷರು ಮತ್ತು ಏಳು ಮಂದಿ ಸದಸ್ಯರು ಇರುತ್ತಾರೆ. ಗರಿಷ್ಠ 45 ವರ್ಷ ವಯಸ್ಸಿನ ಮಿತಿಯವರು ಆಯೋಗದಲ್ಲಿ ಕೆಲಸ ಮಾಡುತ್ತಾರೆ.

ಇದನ್ನೂ ಓದಿರಿ: ಸಂವಿಧಾನದ ಪೀಠಿಕೆ ಮತ್ತು ಮೂಲಭೂತ ರಚನೆಯ ಹಿನ್ನೆಲೆಯಲ್ಲಿ ಒಂದು ಚರ್ಚೆ

ಯುವಜನರ ಸ್ಥಿತಿಯನ್ನು ಸುಧಾರಿಸಲು ಸರ್ಕಾರಕ್ಕೆ ಸಲಹೆಗಳನ್ನು ನೀಡುವ ಕೆಲಸ ಆಯೋಗದ್ದಾಗಿದೆ. ಯುವಕರಿಗೆ ಉತ್ತಮ ಶಿಕ್ಷಣ ಮತ್ತು ಉದ್ಯೋಗವನ್ನು ಖಾತ್ರಿಪಡಿಸುವುದು ಮತ್ತು ಯುವಜನರು ಸ್ವಾವಲಂಬಿ, ಕೌಶಲ್ಯಪೂರ್ಣ, ಉದ್ಯೋಗ-ಆಧಾರಿತರಾಗಲು ಸಹಾಯ ಮಾಡುವುದಕ್ಕಾಗಿ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವ ಕೆಲಸವನ್ನು ಆಯೋಗ ಮಾಡುತ್ತದೆ. ರಾಜ್ಯದ ಖಾಸಗಿ ವಲಯದಲ್ಲಿ ಯುವಜನರಿಗೆ ಉದ್ಯೋಗ ದೊರಕಿಸುವುದು, ವಿದ್ಯಾರ್ಥಿಗಳು ಮತ್ತು ಬಿಹಾರದ ಹೊರಗೆ ಕೆಲಸ ಮಾಡುವವರ ಹಿತಾಸಕ್ತಿಗಳನ್ನು ರಕ್ಷಿಸುವುದು ಹಾಗೂ ವ್ಯಸನ ಮುಕ್ತಿಗಾಗಿ ಕಾರ್ಯಕ್ರಮಗಳನ್ನು ನಡೆಸುವುದು- ಈ ಆಯೋಗದ ಉದ್ದೇಶವಾಗಿರುತ್ತದೆ.

ಮಹಿಳೆಯರು ಮತ್ತು ಯುವಜನರನ್ನು ಉದ್ದೇಶಿಸಿರುವ ಈ ಎರಡು ನಿರ್ಧಾರಗಳ ಹಿಂದೆ ರಾಜಕೀಯ ಲೆಕ್ಕಾಚಾರಗಳಿವೆ. ಮೇ ತಿಂಗಳಲ್ಲಿ ನಡೆದ ಚುನಾವಣಾ ಪೂರ್ವ ಸಮೀಕ್ಷೆಯೊಂದು “ಬಿಹಾರದ ಮಹಿಳೆಯರು ಎನ್‌ಡಿಎಗೆ ಮತ ಹಾಕುವ ಸಾಧ್ಯತೆಯಿದೆ, ಹೆಚ್ಚಿನ ಪುರುಷರು ಮಹಾಘಟಬಂಧನ್‌ಗೆ ಒಲವು ತೋರಿದ್ದಾರೆ” ಎಂದಿದೆ.

ಇಂಕ್‌ಇನ್‌ಸೈಟ್ ಬಿಡುಗಡೆ ಮಾಡಿರುವ ಅಭಿಪ್ರಾಯವು ಯುವಜನರ ಮನಸ್ಥಿತಿಯನ್ನು ಹೇಳುತ್ತದೆ. ‘ಮುಂದಿನ ಮುಖ್ಯಮಂತ್ರಿ ಯಾರಾಗಲೆಂದು ಬಯಸುತ್ತೀರಿ?’ ಎಂದು ಮಹಿಳೆಯರನ್ನು ಪ್ರಶ್ನಿಸಿದಾಗ ಹೆಚ್ಚಿನ ಮಹಿಳೆಯರು ಜೆಡಿಯು ನಾಯಕ ನಿತೀಶ್ ಕುಮಾರ್ ಅವರನ್ನೇ ಆಯ್ಕೆ ಮಾಡಿದ್ದಾರೆ. ಮತ್ತೊಂದೆಡೆ ಯುವಜನರ ನಡುವೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಜನಪ್ರಿಯತೆ ಪಡೆದಿದ್ದಾರೆ.

ಯುವಜನ ಆಯೋಗದ ಕುರಿತು ಟ್ವೀಟ್ ಮಾಡಿರುವ ಸಿಎಂ ನಿತೀಶ್ ಕುಮಾರ್, “ಈ ನಿರ್ಧಾರ ನನಗೆ ಸಂತೋಷ ತಂದಿದೆ. ರಾಜ್ಯದ ಯುವಕರಿಗೆ ಉದ್ಯೋಗಾವಕಾಶಗಳು ಮತ್ತು ತರಬೇತಿಯನ್ನು ಒದಗಿಸುವ ಉದ್ದೇಶದಿಂದ ಆಯೋಗವನ್ನು ರಚಿಸಲಾಗಿದೆ” ಎಂದಿದ್ದಾರೆ.

ಇದನ್ನೂ ಓದಿರಿ: ‘ಸಿಗಂದೂರು ಚೌಡೇಶ್ವರಿ ಸೇತುವೆ’ ಹೆಸರಿಗೆ ಸ್ಥಳೀಯರ ಭಾರೀ ವಿರೋಧ; ಸಂಸದ ರಾಘವೇಂದ್ರ ತರಾತುರಿ ಮಾಡಿದ್ದೇಕೆ?

ನಕಲು ಮಾಡುವ ಸರ್ಕಾರ: ತೇಜಸ್ವಿ ಯಾದವ್

ಜೂನ್ 26, 2025 ರಂದು ನಡೆದ ಛತ್ರ ಯುವ ಸಂವಾದದ ಸಮಯದಲ್ಲಿ, ಆರ್‌ಜೆಡಿ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು, “ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಯುವಜನ ಆಯೋಗವನ್ನು ರಚಿಸಲಾಗುವುದು” ಎಂದು ಭರವಸೆ ನೀಡಿದ್ದರು.

ಈಗ  ಸರ್ಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಅವರು, “ನಾವು ಮುಂದಿದ್ದೇವೆ, 20 ವರ್ಷ ಹಿಂದೆ ಉಳಿದಿರುವ ನೀರಸ ಮತ್ತು ನಿಷ್ಪ್ರಯೋಜಕ ಸರ್ಕಾರ ನಮ್ಮ ಹಿಂದೆ ಬರುತ್ತಿದೆ. ನಾವು ಯಾವುದೇ ಭರವಸೆ ನೀಡಿದರೂ ಅದನ್ನು ಎನ್‌ಡಿಎ ಸರ್ಕಾರ ತಕ್ಷಣವೇ ನಕಲು ಮಾಡಿಬಿಡುತ್ತದೆ. ಏಕೆಂದರೆ ದಣಿದ ಜನರಿಗಾಗಿ ತಮ್ಮದೇ ಆದ ದೃಷ್ಟಿಕೋನ, ಮಾರ್ಗಸೂಚಿ ಮತ್ತು ನೀಲನಕ್ಷೆ ಅವರ ಬಳಿ ಇಲ್ಲ. ನಾವು ನೀಡಿದ ಹಲವು ಭರವಸೆಗಳಲ್ಲಿ ಯುವಜನ ಆಯೋಗವೂ ಒಂದಾಗಿತ್ತು. ಕಾಪಿ ಪೇಸ್ಟ್ ಮಾಡುವ ಎನ್‌ಡಿಎ ಸರ್ಕಾರ ಅದನ್ನೂ ನಕಲು ಮಾಡಿದೆ” ಎಂದು ಕುಟುಕಿದ್ದಾರೆ.

ಒಟ್ಟಾರೆಯಾಗಿ ಯುವಜನ ಮತ್ತು ಮಹಿಳೆಯರನ್ನು ಉದ್ದೇಶಿಸಿ ನಡೆಯುತ್ತಿರುವ ಕಸರತ್ತುಗಳು ಚುನಾವಣಾ ಕಣದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿವೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X