‘ಆಪರೇಷನ್ ಸಿಂಧೂರ್’ ಕುರಿತ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಹರಿಯಾಣದ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ ವಿರುದ್ಧದ ಒಂದು ಎಫ್ಐಆರ್‌ನಲ್ಲಿ ಮುಕ್ತಾಯ ವರದಿಯನ್ನು ಸಲ್ಲಿಸಲಾಗಿದೆ. ಅವರ ವಿರುದ್ಧದ ಮತ್ತೊಂದು ಎಫ್ಐಆರ್‌ನಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ಹರಿಯಾಣ ಪೊಲೀಸರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
ಈ ಬೆಳವಣಿಗೆಯನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಮುಕ್ತಾಯ ವರದಿಯನ್ನು ದಾಖಲಿಸಿದ ಎಫ್ಐಆರ್ ಅನ್ನು ರದ್ದುಗೊಳಿಸಿದೆ. ಇನ್ನೊಂದು ಎಫ್ಐಆರ್‌ಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಅದನ್ನು ಪರಿಗಣಿಸದಂತೆ ಮಧ್ಯಂತರ ಆದೇಶವನ್ನು ಹೊರಡಿಸಿದೆ.
‘ಆಪರೇಷನ್ ಸಿಂಧೂರ್’ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಹರಿಯಾಣದ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ ವಿರುದ್ಧದ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಸ್ಥಗಿತಗೊಳಿಸಿದೆ.
ಇದನ್ನು ಓದಿದ್ದೀರಾ? ಅಲೆಮಾರಿ ಸಮುದಾಯಗಳಿಗೆ ಅನ್ಯಾಯ – ಜಾತಿಗಣತಿಯ ಮೇಲೂ ಕರಿನೆರಳು: ರಾಹುಲ್ ಗಾಂಧಿ ಗಮನಿಸುವರೇ?
ಹರಿಯಾಣ ಪೊಲೀಸರ ಪರವಾಗಿ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಹಾಜರಾಗಿದ್ದರು.
ಮೇ 18ರಂದು “ಆಪರೇಷನ್ ಸಿಂಧೂರ್” ಕುರಿತ ಸಾಮಾಜಿಕ ಮಾಧ್ಯಮ ಪೋಸ್ಟ್ ಪ್ರಕಟಿಸಿದ ಹಿನ್ನೆಲೆಯಲ್ಲಿ ಅಲಿ ಖಾನ್ ಅವರನ್ನು ಬಂಧಿಸಲಾಗಿತ್ತು. ಏಪ್ರಿಲ್ 22ರ ಪಹಲ್ಗಾಂ ದಾಳಿಗೆ ಪ್ರತಿಯಾಗಿ ಆರಂಭಿಸಲಾದ ಈ ಕಾರ್ಯಾಚರಣೆಗೆ ಸೇನೆಯ ಕರ್ನಲ್ ಸೋಫಿಯಾ ಖುರೇಶಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರನ್ನು ಪತ್ರಿಕಾಗೋಷ್ಠಿಗೆ ಆಯ್ಕೆ ಮಾಡಿದ ಸರ್ಕಾರದ ನಿರ್ಧಾರವನ್ನು ಅವರು ಪ್ರಶ್ನಿಸಿದ್ದರು.
ಬಂಧನದ ಮೂರೇ ದಿನಗಳ ನಂತರ ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಲೇಖನ, ಆನ್‌ಲೈನ್ ಪೋಸ್ಟ್ ಅಥವಾ ಭಾಷಣ ಮಾಡಬಾರದು, ಪಹಲ್ಗಾಂ ದಾಳಿ ಅಥವಾ ಆಪರೇಷನ್ ಸಿಂಧೂರ್ ಕುರಿತು ಪ್ರತಿಕ್ರಿಯಿಸಬಾರದು ಮತ್ತು ಪಾಸ್‌ಪೋರ್ಟ್ ಹಸ್ತಾಂತರಿಸಬೇಕು ಎಂಬ ಷರತ್ತುಗಳನ್ನು ವಿಧಿಸಿತ್ತು.