ಬಿಹಾರ ಮೈತ್ರಿಕೂಟ ‘ಮಹಾಘಟಬಂಧನ’ದಲ್ಲಿ ಯಾವುದೇ ಗೊಂದಲವಿಲ್ಲ. ತೇಜಸ್ವಿ ಯಾದವ್ ಬಿಹಾರ ಮುಖ್ಯಮಂತ್ರಿ ಹುದ್ದೆಯ ಅಭ್ಯರ್ಥಿ. ಮುಂದಿನ ಚುನಾವಣೆಯಲ್ಲಿ ಮೈತ್ರಿಕೂಟ ಬಹುಮತ ಪಡೆದರೆ ಆರ್‌ಜೆಡಿಯ ತೇಜಸ್ವಿ ಯಾದವ್ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಶುಕ್ರವಾರ ಹೇಳಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ಆರ್‌ಜೆಡಿ ದೊಡ್ಡ ಪಕ್ಷ, ಹೆಚ್ಚಿನ ಶಾಸಕರನ್ನು ಹೊಂದಿದೆ. ಅದು ‘ಮಹಾಘಟಬಂಧನ’ಕ್ಕೆ ನಾಯಕತ್ವವನ್ನು ಒದಗಿಸುತ್ತದೆ. ಅವರಿಗೆ ವಿರೋಧ ಪಕ್ಷದ ನಾಯಕನ ಹುದ್ದೆ ಇದೆ ಎಂಬುದು ನಿಜ. ಸ್ವಾಭಾವಿಕವಾಗಿ, ಅದು ಅವರ ಜವಾಬ್ದಾರಿ” ಎಂದರು.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ 6ನೇಹಂತ: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ
“ಬಿಹಾರದಲ್ಲಿ ಕಳೆದ ವಿಧಾನಸಭಾ ಚುನಾವಣೆಗಳಿಗಿಂತ ಈ ಬಾರಿ ಬದಲಾವಣೆಯ ಗಾಳಿ ಹೆಚ್ಚಾಗಿದೆ. ಬಿಜೆಪಿ ಆಪರೇಷನ್ ಸಿಂಧೂರವನ್ನು ಚುನಾವಣಾ ವಿಚಾರವಾಗಿ ಬಳಸುತ್ತಿಲ್ಲ. ಯಾಕೆಂದರೆ ಈಗಾಗಲೇ ಜನರಿಗೆ ಇದು ದೇಶದ ಗೌರವದ ವಿಚಾರವೆಂದು ತಿಳಿದಿದೆ. ಯಾವುದೇ ಪಕ್ಷವು ಈ ವಿಚಾರವನ್ನು ರಾಜಕೀಯಗೊಳಿಸಬಾರದು” ಎಂದು ಹೇಳಿದರು.
ಕಾಂಗ್ರೆಸ್ ಚುನಾವಣೆಯಲ್ಲಿ ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಕನ್ಹಯ್ಯಾ, “ಮೈತ್ರಿಕೂಟದ ಎಲ್ಲಾ ಪಕ್ಷಗಳೂ 243 ಸ್ಥಾನಗಳಲ್ಲಿಯೂ ಒಟ್ಟಾಗಿ ಸ್ಪರ್ಧಿಸಲಿದೆ. ಆರ್‌ಜೆಡಿ, ಕಾಂಗ್ರೆಸ್, ಎಡ ಪಕ್ಷಗಳು ಮತ್ತು ಸಹಾನಿ ಜಿ ಅವರ ಪಕ್ಷವು ಒಟ್ಟಾಗಿ 243 ಸ್ಥಾನಗಳಲ್ಲಿ ಸ್ಪರ್ಧಿಸುತ್ತವೆ. ಯಾರಿಗೆ ದೊಡ್ಡ ಜವಾಬ್ದಾರಿ ಇದೆಯೋ ಅವರು ಜವಾಬ್ದಾರಿ ನಿರ್ವಹಿಸುತ್ತಾರೆ. ಯಾರಿಗೆ ಹೆಚ್ಚು ಜವಾಬ್ದಾರಿ ಇಲ್ಲವೋ ಏನೆಲ್ಲ ನಿರ್ವಹಿಸಬೇಕೋ ಅದನ್ನು ನಿರ್ವಹಿಸುತ್ತಾರೆ” ಎಂದು ತಿಳಿಸಿದರು.
